‘ಸಿಡಿ ಕೇಸ್ ನಲ್ಲಿ ರಮೇಶ್ ಸಂತ್ರಸ್ತ’ – ಸಿಡಿ ಯುವತಿ ವಿರುದ್ಧ ಕಿಡಿ ಕಾರಿದ ಜಾರಕಿಹೊಳಿ ಪರ ವಕೀಲ!
‘ಸಿಡಿ ಕೇಸ್ ನಲ್ಲಿ ರಮೇಶ್ ಸಂತ್ರಸ್ತ’ ಎಂದು ಸಿಡಿ ಯುವತಿ ವಿರುದ್ಧ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಕಿಡಿ ಕಾರಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್, ” ಆರಂಭದಿಂದಲೂ ಎಸ್ಐಟಿ, ಪೊಲೀಸ್ ವಿಚಾರಣೆ ಬಗ್ಗೆ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಎಸ್ಐಟಿ ಧಿಕ್ಕು ತಪ್ಪಿಸಲು ಸಿಡಿ ಟೀಮ್ ಯತ್ನ ಮಾಡುತ್ತಿದೆ. ಸಿಡಿ ಕೇಸ್ ನಲ್ಲಿ ಸಂಘಟಿತ ಅಪರಾಧ ಎಸಗಿ ಸುಳ್ಳು ದೂರು ನೀಡಿದ್ದಾರೆ. ಹೀಗಾಗಿ ಸಿಡಿ ಕೇಸ್ ನಲ್ಲಿ ರಮೇಶ್ ಸಂತ್ರಸ್ತ” ಎಂದು ಸಿಡಿ ಯುವತಿ ವಿರುದ್ಧ ಶ್ಯಾಮ್ ಕೆಂಡಕಾರಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಇಂದು ಎಸ್ಐಟಿ ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗಬೇಕಿದೆ. ಆದರೆ ಅನಾರೋಗ್ಯದ ಕಾರಣ ಒಡ್ಡಿ ರಮೇಶ್ ಜಾರಕಿಹೊಳಿ ಈಗಾಗಲೇ ವಿಚಾರಣೆಗೆ ಹಾಜರಾಗಿಲ್ಲ. ಇಂದೂ ಕೂಡ ಹಾಜರಾಗುವುದಿಲ್ಲ ಎನ್ನಲಾಗುತ್ತಿದೆ. ಆದರೆ ಕಳೆದ 4 ದಿನಗಳಿಂದ ಸಿಡಿ ಸಂತ್ರಸ್ತೆ ಎಸ್ಐಟಿ ವಿಚಾರಣೆಗೆ ಹಾಜರಾಗುತ್ತಿದ್ದಾಳೆ. ಇಂದು ಕೂಡ ಯುವತಿ ವಿಚಾರಣೆಗೆ ಹಾಜರಾಗಲಿದ್ದಾಳೆ. ಯುವತಿ ಆರೋಪದಂತೆ ಅತ್ಯಾಚಾರದ ಬಗ್ಗೆ ರಮೆಶ್ ಜಾರಕಿಹೊಳಿ ವಿಚಾರಣೆ ನಡೆದಿಲ್ಲ. ಹೀಗಾಗಿ ಕೂಡಲೇ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಿವೆ.

