ಉಪಚುನಾವಣೆ: ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆಲುಗು ಗಾಯಕಿ ಮಂಗ್ಲಿ!
ರಾಜ್ಯದಲ್ಲಿ ಉಪಚುನಾವಣೆಗಳಿಗೆ ಮೂರು ಕ್ಷೆತ್ರಗಳು ಸಜ್ಜಾಗಿದ್ದು, ಅಖಾಡದಲ್ಲಿ ಅಭ್ಯರ್ಥಿಗಳು ಭಾರೀ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಅವರು ಬರಲಿದ್ದಾರೆ ಎಂದು ಬಿಜೆಪಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ.
ಚುನಾವಣೆ-ಉಪಚುನಾವಣೆಗಳಿಗೆ ಹಲವಾರು ಸ್ಟಾರ್‌ಗಳನ್ನು ಪ್ರಚಾರಕ್ಕಾಗಿ ಕರೆಸುವ ಬಿಜೆಪಿ, ಈ ಬಾರಿ ಮಂಗ್ಲಿ ಅವರನ್ನು ತನ್ನ ಪ್ರಚಾರಕ್ಕೆ ಕರೆಸಿಕೊಳ್ಳುತ್ತಿದೆ. ಯುಗಾದಿ ಹಬ್ಬದ ದಿನವಾದ ಏಪ್ರಿಲ್ 13 ರಂದು ಮಂಗ್ಲಿ ಅವರು ಮಸ್ಕಿಯ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಅವರ ಪರವಾಗಿ ಮಸ್ಕಿಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗ್ಲಿ ಅವರು ಇತ್ತೀಚೆಗೆ ಬಿಡುಗಡೆಯಾದ ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಹಾಡೊಂದನ್ನು ಹಾಡಿದ್ದರು. ತೆಲುಗಿನಲ್ಲಿ ಸಿನಿಮಾ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರು ಹಾಡಿದ ‘ಕಣ್ಣೇ ಅದಿರಿಂದಿ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿತ್ತು. ಇದರಿಂದಾಗಿ ಕನ್ನಡಿಗರಿಗೆ ಮಂಗ್ಲಿ ಪರಿಚಿತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗ್ಲಿ ಅವರನ್ನು ಪ್ರಚಾರಕ್ಕೆ ಕರೆಸಿಕೊಂಡರೆ, ಈಗಷ್ಟೇ ಅವರಿಗೆ ಅಭಿಮಾನಿಗಳಾಗಿರುವವರು ತಮಗೆ ಮತ ಹಾಕುತ್ತಾರೆ ಎಂಬ ಉದ್ದೇಶದಿಂದ ಬಿಜೆಪಿ ಅವರನ್ನು ಬಳಸಿಕೊಳ್ಳುತ್ತಿದೆ.
ಏಪ್ರಿಲ್ 17ರಂದು ಮಸ್ಕಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಯುಪಿ ಚುನಾವಣೆ: ಅತ್ಯಾಚಾರಿ ಸೆಂಗಾರ್ ಪತ್ನಿಗೆ ನೀಡಿದ್ದ ಟಿಕೆಟ್ ಹಿಂಪಡೆದ ಬಿಜೆಪಿ!

