ಯುಪಿ ಚುನಾವಣೆ: ಅತ್ಯಾಚಾರಿ ಸೆಂಗಾರ್ ಪತ್ನಿಗೆ ನೀಡಿದ್ದ ಟಿಕೆಟ್ ಹಿಂಪಡೆದ ಬಿಜೆಪಿ!
ಉತ್ತರ ಪ್ರದೇಶದಲ್ಲಿ ಪಂಚಾಯತ್ ಚುನಾವಣೆಗಳು ನಡೆಯುತ್ತಿವೆ. ಉನ್ನಾವೋ ಜಿಲ್ಲಾಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಮಾಜಿ ಶಾಸಕ ಮತ್ತು ಉನ್ನಾವ್ ಅತ್ಯಾಚಾರ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಇದಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ಸಂಗೀತಾ ಸೆಂಗಾರ್ ಅವರಿಗೆ ನೀಡಿದ್ದ ಟಿಕೆಟ್‌ಅನ್ನು ಭಾನುವಾರ ಹಿಂಪಡೆದುಕೊಂಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಮೂರು ಹೊಸ ಹೆಸರುಗಳನ್ನು ಸೂಚಿಸುವಂತೆ ಪಕ್ಷದ ಉನ್ನಾವೊ ಜಿಲ್ಲಾಧ್ಯಕ್ಷರಿಗೆ ತಿಳಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
2018 ರ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಅಪರಾಧಿ ಎಂದು ಘೋಷಿಸಲಾಗಿದ್ದು, ಆತನಿಗೆ ಕೋರ್ಟ್ 10 ವರ್ಷಗಳ ಕಾಲ ಜೈಲು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರಿಯೊಬ್ಬನ ಪತ್ನಿಗೆ ಟಿಕೆಟ್ ನೀಡಿರುವುದಕ್ಕೆ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಆತನ ಪತ್ನಿ ಸಂಗೀತ ಸೆಂಗಾರ್ ಅವರ ಟಿಕೆಟ್‌ಅನ್ನು ರದ್ದುಪಡಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ನಡೆಯುತ್ತಿರುವ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ವಿಜಯಶಾಲಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇದನ್ನೂ ಓದಿ: ತಮಿಳುನಾಡು ಕಾಂಗ್ರೆಸ್ ಅಭ್ಯರ್ಥಿ ಕೊರೊನಾದಿಂದ ಸಾವು; ಗೆದ್ದರೆ ಉಪ-ಚುನಾವಣೆ!