‘ಸಚಿವರೇ, ಯಡಿಯೂರಪ್ಪನವರೇ ನೀವು ಮಾತ್ರ ಯುಗಾದಿ ಮಾಡಬೇಕಾ? ಸಾರಿಗೆ ನೌಕರರು ಏನ್ ಮಾಡ್ಬೇಕು?’
‘ಸಚಿವರೇ, ಯಡಿಯೂರಪ್ಪನವರೇ ನೀವು ಮಾತ್ರ ಯುಗಾದಿ ಮಾಡಬೇಕಾ? ಸಾರಿಗೆ ನೌಕರರು ಏನ್ ಮಾಡ್ಬೇಕು?’ ಎಂದು ರಾಜ್ಯ ಸಾರಿಗೆ ನಿಗಮ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಧ್ವನಿ ಎತ್ತಿದ್ದಾರೆ.
ಹೌದು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ” ಸರ್ಕಾರ ಆರನೇ ವೇತನ ಆಯೋಗ ಮಾಡಲ್ಲ ಎಂದು ಹೇಳಿ ತಪ್ಪು ಮಾಡುತ್ತಿದೆ. ಸರ್ಕಾರ ಕೊಟ್ಟ ಮಾತು ತಪ್ಪಿದೆ. ಸಿಎಂ, ಸಚಿವರು ಇದುವರೆಗೆ ಮಾತುಕತೆಗೆ ಕರೆದಿಲ್ಲ. ಮಾರ್ಚ್ 17 ರಂದು ನೋಟಿಸ್ ಕೊಟ್ಟು ಮಾತುಕತೆಗೆ ಕಾಲಾವಕಾಶ ನೀಡಿದ್ದೇವೆ. ಮಾತುಕತೆ ಪರಸ್ಪರ ವಿಫಲವಾದಾಗ, ಚಳುವಳಿಗಳು ಘೋಷಣೆ ಮಾಡಿದ್ದೇವೆ. ಕಾರ್ಮಿಕ ಆಯುಕ್ತರು ಮುಷ್ಕರ ಊರ್ಜಿತ ಅಲ್ಲ ಎಂದು ಹೇಳ್ತಾಯಿದ್ದಾರೆ. ಏಪ್ರಿಲ್ 7 ರಂದು ಸತ್ಯಾಗ್ರಹ ಆರಂಭವಾಗಬೇಕಿತ್ತು. ಆದ್ರೆ ಏಪ್ರಿಲ್ 6 ಮಧ್ಯಾಹ್ನ ಆರಂಭವಾಗಿದೆ ಎಂಬ ಕಾರಣ ಕೊಡ್ತಾರೆ. ಆದರೆ ನಾವು ಅಧಿಕೃತವಾಗಿ ಏ. 7ರಂದು ಬೆಳಗ್ಗೆಯಿಂದ ಮುಷ್ಕರ ಆರಂಭಿಸಿದ್ದೇವೆ. ಉಪ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಆದರೆ 1.30 ಲಕ್ಷ ಸಿಬ್ಬಂದಿ ನ್ಯಾಯ ಕೇಳುತ್ತಿಲ್ಲ ” ಎಂದು ಕಿಡಿ ಕಾರಿದರು.
” ಪ್ರತಿ ತಾಲೂಕು, ಜಿಲ್ಲಾಧಿಕಾರಿ ಕಚೇರಿ ಮುಂದೆ ನೌಕರರ ಪತ್ನಿ, ಮಕ್ಕಳು ಸತ್ಯಾಗ್ರಹದಲ್ಲಿ ಭಾಗಿಯಾಗ್ತಾರೆ. ತಟ್ಟೆ, ಲೋಟ, ಜಾಗಟೆ ಬಾರಿಸುತ್ತ ಸತ್ಯಾಗ್ರಹ ಮಾಡುತ್ತಾರೆ. ಸಾರಿಗೆ ಸಚಿವರೇ ನೀವು ಮಾತ್ರ ಉಗಾದಿ ಹಬ್ಬ ಮಾಡಬೇಕೇ? ಸಾರಿಗೆ ನೌಕರರು ವೇತನವೂ ಸಿಗದೇ ಹಾಗೆ ಇರಬೇಕೇ?ಸವದಿ ಸಾಹೆಬ್ರೇ ನೀವು ಮಾತ್ರ ಹಬ್ಬದ ದಿನ ಹೋಳಿಗೆ, ತುಪ್ಪ ತಿನ್ನಬೇಕೇ ಸಾರಿಗೆ ನೌಕರರ ಕುಟುಂಬ ವೇತನ ಸಿಗದೇ ಏನು ಮಾಡಬೇಕು?” ಎಂದು ಸರ್ಕಾರಕ್ಕೆ ಕೋಡಿಹಳ್ಳಿ ಪ್ರಶ್ನೆ ಹಾಕಿದ್ದಾರೆ.
ಸಿಎಂ ಯಡಿಯೂರಪ್ಪ ಅವರೇ ಈ ಮುಷ್ಕರಕ್ಕೆ ನೀವೇ ಜವಾಬ್ದಾರಿ. ಸಾರಿಗೆ ನೌಕರರನ್ನ ಎದುರು ಹಾಕಿಕೊಂಡವ್ರು ಉಳಿದಿಲ್ಲ. ಎಸ್ಮಾ ಜಾರಿ ಮಾಡ್ತಾರಾ..? ಮಾಡ್ಲಿ ನೋಡೋಣ.. ಎಂದು ಸವಾಲು ಹಾಕಿದ್ದಾರೆ. ಸಾರಿಗೆ ನೌಕರರೇ ಹೆದರಬೇಡಿ ಎಂದು ಸಾರಿಗೆ ನೌಕರರಿಗೆ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರು ರೊಚ್ವಿಗೆದ್ದಿದ್ದಾರೆ. ಸಾರಿಗೆ ನೌಕರರ ಹೋರಾಟ ನ್ಯಾಯ ಬದ್ದವಾಗಿದೆ. ದುಡಿಯುವ ವರ್ಗ, ಸಾರಿಗೆ ನೌಕರರನ್ನ ಕರೆದು ಮಾತುಕತೆ ನಡೆಸಿ. ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದ ಸರ್ಕಾರಗಳು ಇವರೆಗೆ ಯಾವುದು ಉಳಿದಿಲ್ಲ. ಮಠ, ಉಪ ಚುನಾವಣೆಗಳಿಗೆ ಸಾವಿರಾರು ಕೋಟಿ ಕೊಡೊಕೆ ಆಗುತ್ತೆ. ಆದ್ರೆ ನೌಕರರ ಕ್ಷೇಮಾಭಿವೃದ್ಧಿ ಬಗ್ಗೆ ಯಾಕೆ ಗಮನ ಹರಿಸ್ತಿಲ್ಲ. ಬಿಎಂಟಿಸಿ, ಕೆ ಎಸ್ ಆರ್ ಸಿ ಯನ್ನ ಖಾಸಗಿಕರಣ ಮಾಡಲು ಸರ್ಕಾರ ಹೊರಟಿದೆ. ಜಿದ್ದಾಜಿದ್ದಿ ಆಗೋದು ಬೇಡ. ಮುಕ್ತವಾಗಿ ಮಾತುಕತೆ ಆಗಲಿ ಎಂದರು.
ಕೋವಿಡ್ ಇರುವಾಗ ಪ್ರಧಾನಿಗಳೇ ತಟ್ಟೆ, ಲೋಟ ಹಿಡ್ಕೊಂಡು ಜಾಗಟೆ ಬಾರಿಸಿದ್ರು. ಅವಾಗ ಕೋವಿಡ್ ಇತ್ತಲ್ಲ.. ನಾವು ಮಾಡಿದ್ರೆ ಅದು ಹೇಗೆ ತಪ್ಪಾಗುತ್ತೆ. ರಾಜಕೀಯ ಭಾಷಣ, ರ್ಯಾಲಿ ಯಲ್ಲಿ ಸಾಕಷ್ಟು ಜನ ಇರ್ತಾರಲ್ಲ. ಅದು ಕೊರೋನಾ ರೂಲ್ಸ್ ಬ್ರೇಕ್ ಅಲ್ವಾ ಸಿಎಂ ಸಾಹೇಬ್ರೇ.. ನೀವು ಹೋದಲ್ಲೆಲ್ಲ ನೂರಾರು ಜನ ಬರ್ತಾರೆ. ಇದು ತಪ್ಪಲ್ಲವೇ..? ನಾಳೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ತಾಲೂಕು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಳುವಳಿ ಆಗಲಿದೆ ಎಚ್ಚರಿಕೆ ಕೊಟ್ಟಿದ್ದಾರೆ.
ಸಾರಿಗೆ ಮುಷ್ಕರ ಶುರುವಾಗಿ 5ನೇದಿನಕ್ಕೆ ಕಾಲಿಟ್ಟರೂ ಸರ್ಕಾರ ಮಾತ್ರ ನೌಕರರ ಮನವೊಲಿಸುವಲ್ಲಿ ವಿಫಲವಾಗಿದೆ. ಜೊತೆಗೆ ಸಾರಿಗೆ ನೌಕರರ ಮುಷ್ಕರಕ್ಕೆ ಕಾಂಗ್ರೆಸ್ , ಜೆಡಿಎಸ್ , ಟ್ರೇಡ್ ಯೂನಿಯನ್ ಗಳ ಸಂಘಟನೆ, ಬಹುಜನ ಸಮಾಜ ಪಾರ್ಟಿಯಿಂದ ಬೆಂಬಲ ಸಿಕ್ಕಿದೆ. ಸರ್ಕಾರ ನೌಕರರೊಂದಿಗೆ ಮಾತುಕತೆಗಿಳಿಯದೇ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಮತ್ತಷ್ಟು ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ.

