ಬಂಗಾಳ to ಕೇರಳ: ಪ್ರಭಾವ ಕಳೆದುಕೊಂಡ ಕಾಂಗ್ರೆಸ್‌; ಮತಗಳಿಕೆಯಲ್ಲಿ ಭಾರೀ ಕುಸಿತ!

ಪಂಚರಾಜ್ಯಗಳ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಈಗಾಗಲೇ ಬಂಗಾಳದಲ್ಲಿ ಟಿಎಂಸಿ 206 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದು, ಮೂರನೇ ಬಾರಿಗೆ ಸಿಎಂ ಆಗಲು ಸಿದ್ದರಾಗಿದ್ದಾರೆ. ಆದರೆ, ಬಂಗಾಳದಲ್ಲಿ  ಕಾಂಗ್ರೆಸ್‌ ಸಂಪೂರ್ಣ ನೆಲಕಚ್ಚಿದೆ.

ಚುನಾವಣೆ ಎದುರಿಸಿದ ಅಸ್ಸಾಂ, ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಹೀಗೆ ಒಟ್ಟು 822 ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ. ಈ ಒಟ್ಟೂ ಸ್ಥಾನಗಳಲ್ಲಿ ಕಾಂಗ್ರೆಸ್‌ 67 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, ಈ ಪೈಕಿ 04 ಸ್ಥಾನಗಳನ್ನು ಗೆದ್ದಿದೆ. ಆದರೆ, ಈ ಐದು ರಾಜ್ಯಗಳಿಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಒಟ್ಟು 115 ಸ್ಥಾನಗಳನ್ನು ಗೆದ್ದಿತ್ತು. ಒಂದು ವೇಳೆ ಈ 67 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಗೆದ್ದರೂ ಕೂಡ, ಕಳೆದ ಚುನಾವಣೆಗೆ ಹೋಲಿಸಿದರೆ, ಈ ಬಾರಿ 48 ಸ್ಥಾನಗಳನ್ನು ಕಳೆದುಕೊಳ್ಳಲಿದೆ.

ಪಶ್ಚಿಮ ಬಂಗಾಳದಲ್ಲಿ 2016ರ ಚುನಾವಣೆಯಲ್ಲಿ 44 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಒಂದೂ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸಿಲ್ಲ. ಈ ಮೂಲಕ ಬಂಗಾಳದಲ್ಲಿ ಕಾಂಗ್ರೆಸ್‌ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿದೆ.

ಪುದುಚೇರಿಯಲ್ಲಿ ಕಳೆದ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದ್ದ ಕಾಂಗ್ರೆಸ್‌, ಇದೀಗ 02 ಸ್ಥಾನಗಳಿಗೆ ಕುಸಿದಿದೆ. ಪುದುಚೇರಿಯಲ್ಲಿ ಪ್ರಭಲ ಪಕ್ಷವಾಗಿದ್ದ ಕಾಂಗ್ರೆಸ್‌ ತನ್ನದೇ ಆಡಳಿತವಿದ್ದ ಸಂದರ್ಭದಲ್ಲಿಯೂ ತನ್ನ ವರ್ಚಸ್ಸನ್ನು ಗಟ್ಟಿ ಮಾಡಿಕೊಳ್ಳುವುದಿರಲಿ, ಉಳಿಸಿಕೊಳ್ಳುವುದರಲ್ಲಿಯೂ ವಿಫಲವಾಗಿದೆ.

ಇದನ್ನೂ ಓದಿ: ಮಸ್ಕಿಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು: 26 ಸಾವಿರ ಮತಗಳ ಅಂತರದಲ್ಲಿ ಸೋಲುಂಡ BJP!

ಅಸ್ಸಾಂನಲ್ಲಿ ವಿರೋಧ ಪಕ್ಷವಾಗಿ ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಈ ಬಾರಿಯೂ ವಿರೋಧ ಪಕ್ಷವಾಗಿಯೇ ಉಳಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ 26 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಹೆಚ್ಚುವರಿಯಾಗಿ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕೇರಳದಲ್ಲಿ ಕಳೆದ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿಯ ಚುನಾವಣೆಯಲ್ಲಿ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಪ್ರತಿನಿಧಿಸುತ್ತಿರುವ ಹಿನ್ನೆಲೆಯಲ್ಲಿ ತನ್ನ ಸ್ಥಾನಗಳನ್ನು ಒಂದು ಮಟ್ಟಿಗೆ ಉಳಿಸಿಕೊಂಡಿದೆಯಾದರೂ, ಹೆಚ್ಚು ಪ್ರಭಾವವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

ಇನ್ನುಳಿದಂತೆ, ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಪ್ರದರ್ಶನ ದ್ವಿಗುಣಗೊಂಡಿದೆ. ಕಳೆದ ಚುನಾವಣೆಯಲ್ಲಿ 41 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 08 ಕ್ಷೇತ್ರಗಳನ್ನು ಮಾತ್ರ ಗೆದ್ದಿದ್ದ ಕಾಂಗ್ರೆಸ್‌, ಈ ಬಾರಿಯ ಚುನಾವಣೆಯಲ್ಲಿ 23 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ, ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್‌, ಸದ್ಯ 16 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ,.

ಇದನ್ನೂ ಓದಿ: ಬಸವ ಕಲ್ಯಾಣದಲ್ಲಿ BJP ಅಭ್ಯರ್ಥಿ ಶರಣು ಸಲಗರ ಗೆಲುವು: ಕಾಂಗ್ರೆಸ್‌ಗೆ ಭಾರೀ ನಿರಾಶೆ!

ಇನ್ನು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭಾರೀ ಮುನ್ನಡೆ ಸಾಧಿಸಿದ್ದರೆ, ಅಸ್ಸಾಂನಲ್ಲಿ ಆಡಳಿತರೂಢ ಬಿಜೆಪಿ ಹಾಗೂ ಕೇರಳದಲ್ಲಿ ಎಲ್‌ಡಿಎಫ್‌ ಪಕ್ಷಗಳು ಗೆಲ್ಲುವ ಹಂತದಲ್ಲಿವೆ. ಈ ಮೂರು ರಾಜ್ಯಗಳಲ್ಲಿಯೂ ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷಗಳೇ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ. 

ತಮಿಳುನಾಡಿನಲ್ಲಿ ವಿಪಕ್ಷದಲ್ಲಿದ್ದ ಡಿಎಂಕೆ, ಆಡಳಿತ ಪಕ್ಷ ಎಐಎಡಿಎಂಕೆಯನ್ನು ಕೆಳಗಿಳಿಸಲು ಸಜ್ಜಾಗಿದೆ. ಡಿಎಂಕೆ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿಯು ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ. ಇನ್ನು ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್‌ ತನ್ನ ವರ್ಚಸ್ಸು ಕಳೆದುಕೊಂಡಿದ್ದು, ಎಐಎನ್‌ಆರ್‌ಸಿ ನೇತೃತ್ವದಲ್ಲಿ ಎನ್‌ಡಿಎ ಅಧಿಕಾರದ ಗದ್ದುಗೆ ಏರಲಿದೆ.

ಇದನ್ನೂ ಓದಿ: ನಂದಿಗ್ರಾಮದಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟ ಮಮತಾ ಬ್ಯಾನರ್ಜಿಗೆ ಸಿಕ್ತು ಜಯ..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights