ಉತ್ತರ ಪ್ರದೇಶದಲ್ಲೂ ಒಂದು ವಾರ ಕೋವಿಡ್ -19 ಲಾಕ್ಡೌನ್ ವಿಸ್ತರಣೆ!
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ತಡೆಗೆ ಉತ್ತರ ಪ್ರದೇಶ ಸರ್ಕಾರ ಕರ್ಫ್ಯೂ ಅವಧಿಯನ್ನು ಮೇ 17 ಕ್ಕೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಎರಡನೇ ಕೊರೋನವೈರಸ್ ಅಲೆಯಿಂದ ದೇಶವನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ರಾಜ್ಯ ಸರ್ಕಾರ ಮೇ 10 ರವರೆಗೆ ಕರ್ಫ್ಯೂ ಘೋಷಿಸಿತ್ತು. ಸದ್ಯ ಅದನ್ನು ಮೇ 17 ವರೆಗೆ ವಿಸ್ತರಣೆ ಮಾಡಲಾಗಿದ್ದು ಮೇ 17 (ಸೋಮವಾರ) ಬೆಳಿಗ್ಗೆ 7 ಗಂಟೆಗೆ ಲಾಕ್ಡೌನ್ ಕೊನೆಗೊಳ್ಳಲಿದೆ. ಯುಪಿ ಸರ್ಕಾರದ ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳು ಈಗ ಮುಚ್ಚಲ್ಪಡುತ್ತವೆ.
ಶನಿವಾರ, 298 ಜನರು ಉತ್ತರಪ್ರದೇಶದಲ್ಲಿ ಕೋವಿಡ್ -19 ಗೆ ಬಲಿಯಾಗಿದ್ದು ರಾಜ್ಯ 26,847 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 14,80,315 ಕ್ಕೆ ತಲುಪಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಹೊಸ ಸಾವುಗಳು ಕಾನ್ಪುರ್ (23), ಹಾನ್ಸಿ (18) ಸೇರಿದಂತೆ ಲಕ್ನೋ (38) ನಿಂದ ವರದಿಯಾಗಿವೆ. ಇಲ್ಲಿಯವರೆಗೆ, ಮಾರಕ ವೈರಸ್ ಗೆ ಉತ್ತರ ಪ್ರದೇಶದಲ್ಲಿ 15,170 ಜನ ಬಲಿಯಾಗಿದ್ದಾರೆ.

