18-44 ವರ್ಷ ವಯೋಮಾನದವರಿಗೆ ನಾಳೆಯಿಂದಲೇ ಕೊರೊನಾ ಲಸಿಕೆ..!

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಆತಂಕದಲ್ಲಿರುವ 18-44 ವರ್ಷ ವಯೋಮಾನದವರಿಗೆ ನಾಳೆಯಿಂದಲೇ ಕೊರೊನಾ ಲಸಿಕೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ, ನಾಳೆಯಿಂದಲೇ 18-44 ವರ್ಷ ವಯೋಮಾನದವರಿಗೆ ಲಸಿಕೆ ನೀಡಲಾಗುವುದು. ನಿಮ್ಮ ಸರದಿ ಬರುವವರೆಗೂ ತಾಳ್ಮೆಯಿಂದಿರಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನ ಕೆ.ಸಿ.ಜನರಲ್, ಸರ್ ಸಿ.ವಿ.ರಾಮನ್ ಜನರಲ್,ಜಯನಗರ ಜನರಲ್, ಇಎಸ್ಐ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 18-44 ವರ್ಷ ವಯೋಮಾನದವರಿಗೆ ಕೋವಿಡ್-19 ಲಸಿಕೆ ವಿತರಿಸಲಾಗುವುದು ಎಂದಿದ್ದಾರೆ. ಜೊತೆಗೆ ಇತರ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ.

ಈಗಾಗಲೇ ಲಸಿಕೆ ಪಡೆಯಲು ಯುವ ಸಮೂಹ ನೊಂದಣಿ ಮಾಡಿಕೊಂಡಿದೆ. ನೊಂದಣಿಯಂತೆ ಸರದಿ ಪ್ರಕಾರವಾಗಿ ಲಸಿಕೆ ನೀಡಲಾಗುತ್ತದೆ. ನೊಂದಣಿ ಇಲ್ಲದೇ ನೇರವಾಗಿ ಲಸಿಕೆ ಪಡೆಯುವ ಹಾಗಿಲ್ಲ ಎಂದು ಸಚಿವ ತಿಳಿಸಿದ್ದಾರೆ.

18-44 ವರ್ಷವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮೇ 1 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಂಕೇತಿಕ ಚಾಲನೆ ನೀಡಿದ್ದರು. ರಾಜ್ಯದಲ್ಲಿ 3.26 ಕೋಟಿ ಜನ ಈ ವಯೋಮಾನದವರಿದ್ದಾರೆ. ಎಲ್ಲರಿಗೂ ಸೇರಿ ಒಟ್ಟು 6.52 ಕೋಟಿ ಡೋಸ್ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ 2 ಕೋಟಿ ಕೋವಿಶೀಲ್ಡ್ ಡೋಸ್ ಹಾಗೂ 1 ಕೋಟಿ ಕೋವ್ಯಾಕ್ಸಿನ್ ಡೋಸ್ ಪೂರೈಕೆಗೆ ಬೇಡಿಕೆ ಇಡಲಾಗಿದೆ. ಸೀರಂ ಸಂಸ್ಥೆಯಿಂದ ಈವರೆಗೆ 6.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲಾಗಿದೆ. ಇನ್ನಷ್ಟು ಲಸಿಕೆ ಮೇ 2 ಅಥವಾ ಮೂರನೇ ವಾರ ಸಿಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಕೋವಿಶೀಲ್ಡ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ರಾಜ್ಯಕ್ಕೆ ತಲುಪಿದ್ದು, ಈವರೆಗೂ ಒಟ್ಟು 6.5 ಲಕ್ಷ ಡೋಸ್ ಪೂರೈಕೆಯಾಗಿದೆ. ಕೇಂದ್ರ ಸರ್ಕಾರ ಈವರೆಗೂ 99,58,190 ಕೋವಿಶೀಲ್ಡ್, 10,91,280 ಕೋವ್ಯಾಕ್ಸಿನ್ ಸೇರಿ  ಒಟ್ಟು 1,10,49,470 ಡೋಸ್ ಲಸಿಕೆಗಳನ್ನು ರಾಜ್ಯಕ್ಕೆ ಪೂರೈಕೆ ಮಾಡಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights