ರೈತರ ಪ್ರತಿಭಟನೆ : ಜ.4ರ ಮಾತುಕತೆ ವಿಫಲವಾದರೆ ಮಾಲ್,ಪೆಟ್ರೋಲ್ ಬಂಕ್ ಬಂದ್ ಎಚ್ಚರಿಕೆ..!
ಹೊಸ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣ ಮತ್ತು ಪಂಚಾಬ್ ರೈತರು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆಗೆ ತೊಡಗಿ ಎರಡನೇ ತಿಂಗಳು ಕಾಲಿಟ್ಟಿದೆ. ಆದರೂ ಕೇಂದ್ರ ಸರ್ಕಾರ ರೈತರ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನವರಿ 4ಕ್ಕೆ ಮತ್ತೆ ಮಾತುಕತೆಗೆ ಆಹ್ವಾನಿಸಿದ್ದು, ಒಂದು ವೇಳೆ ಜನವರಿ ನಾಲ್ಕಕ್ಕೆ ರೈತರ ಬೇಡಿಕೆಗಳಿಗೆ ಕೇಂದ್ರ ಸಮ್ಮತಿ ನೀಡದೇ ಹೋದರೆ ಮಾಲ್ ಹಾಗೂ ಪೆಟ್ರೋಲ್ ಬಂಕ್ ಬಂದ್ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.
ಹೌದು… ರೈತರು ಕೊರೊಯುವ ಚಳಿಯಲ್ಲಿ ಮನೆ ತೊರೆದು ತಿಂಗಳಾಗಿದೆ. ಹಲವಾರು ರೈತರು ಪ್ರತಿಭಟನೆಯಲ್ಲೇ ಜೀವ ಕಳೆದುಕೊಂಡಿದ್ದಾರೆ. ಹಲವಾರು ಸುತ್ತಿನ ಮಾತುಕತೆಯಾಗಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಇದೇ ಜನವರಿ 4ರಂದು ನಡೆಯುವ ಮಾತುಕತೆಯಲ್ಲಿ ಕೇಂದ್ರ ತಮ್ಮ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸದೇ ಹೋದರೆ ಬಂದ್ ಗೆ ದಿನಾಂಕ್ ಘೋಷಣೆ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.
ಸಿಂಗು ಗಡಿ ಪ್ರತಿಭಟನಾ ಸ್ಥಳದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ‘ಜನವರಿ 4 ರ ಸರ್ಕಾರದ ಸಭೆಯು ಅಸ್ತವ್ಯಸ್ತತೆಯನ್ನು ಕೊನೆಗೊಳಿಸಲು ವಿಫಲವಾದರೆ, ಹರಿಯಾಣದ ಎಲ್ಲಾ ಮಾಲ್‌ಗಳು, ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ದಿನಾಂಕಗಳನ್ನು ನಾವು ಪ್ರಕಟಿಸುತ್ತೇವೆ’ ಎಂದು ರೈತ ಮುಖಂಡ ವಿಕಾಸ್ ಹೇಳಿದರು. ಇದೇ ವೇಳೆ ಮಾತನಾಡಿದ ಸ್ವರಾಜ್ ಭಾರತದ ಮುಖಂಡ ಯೋಗೇಂದ್ರ ಯಾದವ್ ಅವರು, ಹರಿಯಾಣ-ರಾಜಸ್ಥಾನ ಗಡಿಯಲ್ಲಿರುವ ಶಹಜಹಾನ್‌ಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿಯತ್ತ ಸಾಗಲಿದ್ದಾರೆ ಎಂದು ಹೇಳಿದ್ದಾರೆ.
ಮುಂದಿನ ಸುತ್ತಿನ ಮಾತುಕತೆಯಲ್ಲಿ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳದಿದ್ದರೆ ಜನವರಿ 6 ರಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸಲಾಗುವುದು ಎಂದು ಮತ್ತೊಬ್ಬ ನಾಯಕ ಯುಧುವೀರ್ ಸಿಂಗ್ ಹೇಳಿದ್ದಾರೆ.

