ಗ್ರಾಮ ಪಂ. ಚು.ಯಲ್ಲಿ ಗೆದ್ದವರನ್ನು ನಮ್ಮ ಪಕ್ಷದವರು ಎಂದರೆ ಬೀಳುತ್ತೆ ಕೇಸ್‌: ಚು. ಆಯೋಗದ ಎಚ್ಚರಿಕೆ

ಪಕ್ಷ ರಹಿತವಾಗಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ಪಕ್ಷಗಳು ಇದು ನಮ್ಮ ಗೆಲುವು, ನಾವು ಬೆಂಬಲಿಸಿದ ಅಭ್ಯರ್ಥಿಗಳ ಗೆಲುವು ಎಂದು ಕ್ಲೈಮ್‌ ಮಾಡಿಕೊಳ್ಳುತ್ತಿವೆ. ಈ ರೀತಿ ಪಕ್ಷ ರಹಿತ ಗ್ರಾಮ ಪಂ. ಚುನಾವಣೆಯಲ್ಲಿ ಪಕ್ಷ ರಾಜಕಾರಣ ಮಾಡಲು ಮುಂದಾಗಿರುವವರಿಗೆ ಬಿಸಿ ಮುಟ್ಟಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.

ತಮ್ಮ ಬಲಾಬಲ ಪ್ರದರ್ಶನಕ್ಕೆ ಗ್ರಾಪಂ ಚುನಾವಣೆಯನ್ನೇ ವೇದಿಕೆಯನ್ನಾಗಿ ಮಾಡಿಕೊಂಡ ರಾಜಕೀಯ ಪಕ್ಷಗಳು, ತಮ್ಮ ಪಕ್ಷ ಬೆಂಬಲಿತರು ಇಂತಿಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಪೈಪೋಟಿಗೆ ಬಿದ್ದಂತೆ ಹೇಳಿಕೆ ಕೊಡುತ್ತಲೇ ಇದ್ದಾರೆ. ಈ ಹೇಳಿಕೆ ಚುನಾವಣಾ ಆಯೋಗದ ಕೆಂಗಣ್ಣಿಗೆ ಕಾರಣವಾಗಿದೆ. ಹಾಗಾಗಿ ಸುಮೋಟೊ ಅಸ್ತ್ರ ಪ್ರಯೋಗಿಸಲಿದೆ.

ಚುನಾವಣೆ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬೆಂಬಲಿತ ಶೇ.60 ಮಂದಿ ಗೆದ್ದಿದ್ದಾರೆ ಎಂದಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಬೆಂಬಲಿತರು ಶೇ.65 ಮಂದಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್ ಈ ಚುನಾವಣೆಯಲ್ಲಿ ಮುಂದಿದೆ ಎಂದಿದ್ದರು. ಜೆಡಿಎಸ್ ಕೂಡ ತಮ್ಮ ಪಕ್ಷ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಸಾಧನೆ ಮಾಡಿದೆ ಎಂದು ಬೆನ್ನುತಟ್ಟಿಕೊಂಡಿತ್ತು.

ಇದನ್ನೂ ಓದಿ: BJPಯ ಮೇಲೆ RSS ಪಾತ್ರ ದುರ್ಬಲಗೊಂಡಿದೆಯೇ? ಪಕ್ಷದ ಪ್ರಮುಖ ಬದಲಾವಣೆಯಲ್ಲಿ ಸಂಘಕ್ಕಿಲ್ಲ ಪಾತ್ರ!

ಗ್ರಾಪಂ ಚುನಾವಣೆಯಲ್ಲಿ ರಾಜಕೀಯ ಬೆರೆಸುವುದು ಗ್ರಾಮ ಸ್ವರಾಜ್ ಕಾಯ್ದೆಗೆ ವಿರುದ್ಧವಾಗಿದೆ. ಪಕ್ಷ ರಹಿತವಾಗಿ ಚುನಾವಣೆ ನಡೆಸಿ ಗ್ರಾಮಗಳ ಸಾಮರಸ್ಯ ಕಾಯ್ದುಕೊಳ್ಳುವುದಕ್ಕೆ ರಾಜಕೀಯ ಪಕ್ಷಗಳ ನೇತಾರರ ನಿಲುವುಗಳು ವ್ಯತಿರಿಕ್ತವಾಗಿವೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಬಂದರೆ ಸೂಕ್ತ ಕಾನೂನು ಕ್ರಮ ಜರುಗಿಸಲು ಆಯೋಗ ಮುಂದಾಗಿದೆ. ಅಲ್ಲದೆ, ಸುಮೋಟೊ ನೋಟಿಸ್ ನೀಡಿ ವಿಚಾರಣೆ ನಡೆಸುವ ಆಲೋಚನೆಯನ್ನು ಆಯೋಗ ಮಾಡುತ್ತಿದೆ. ಗ್ರಾಪಂ ಚುನಾವಣೆ ಸೋಲಿಂದ ಕಂಗೆಟ್ಟವ ರಾತ್ರೋರಾತ್ರಿ ರಸ್ತೆಯನ್ನೇ ಬಂದ್​ ಮಾಡಿದ!

ಚುನಾವಣಾ ಆಯೋಗಕ್ಕೆ ದೂರು:

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ರಾಜಕೀಯ ಪ್ರಭಾವ, ರಾಜಕೀಯ ಪಕ್ಷಗಳ ಸಮಾವೇಶ, ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಘೋಷಣೆಗಳು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿವೆ ಎಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಬಿಜೆಪಿಯ ಗ್ರಾಮ ಸ್ವರಾಜ್ ರ್ಯಾಲಿ, ಕಾಂಗ್ರೆಸ್ ಪ್ರಜಾಪ್ರತಿನಿಧಿ ಸಮಿತಿಯಂತಹ ಕಾರ್ಯಕ್ರಮಗಳನ್ನು ನಡೆಸಿದ್ದು, ಗ್ರಾಮೀಣಾಭಿವೃದ್ಧಿ ಸಚಿವರು ನರೇಗಾ ಕೂಲಿ 100 ರಿಂದ 150 ದಿನಕ್ಕೆ ಹೆಚ್ಚಿಸುವ ಭರವಸೆ, ಪ್ರತಿ ಗ್ರಾಮ ಪಂಚಾಯಿತಿಗೆ ವರ್ಷಕ್ಕೆ 1.50 ಕೋಟಿ ರೂ. ನೇರ ಅನುದಾನ ಬಿಡುಗಡೆ ಮಾಡುವ ಡಿಸಿಎಂ ಭರವಸೆಗಳ ವಿರುದ್ಧವೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಧ್ವನಿ ಎತ್ತಿ, ಆಯೋಗಕ್ಕೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದೆ.


ಇದನ್ನೂ ಓದಿ: ಹರಿಯಾಣದಲ್ಲಿ BJP ಸೋಲಲು ರಜಾ ದಿನಗಳೇ ಕಾರಣ: ಬಿಜೆಪಿ ನಾಯಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights