ವಿಡಿಯೋ ನೋಡಿ: ತಬ್ಲಿಘಿಗಳ ವಿರುದ್ದ ಸುಳ್ಳು ಪ್ರಸಾರ ಮಾಡಿದ್ದಕ್ಕೆ ಕ್ಷಮೆ ಕೇಳಿದ ನ್ಯೂಸ್‌ 18 ಕನ್ನಡ!

ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ ಕಾಣಿಸಿಕೊಂಡ ಸಂದರ್ಭದಲ್ಲಿ, ಕೊರೊನಾ ಹರಡಲು ತಬ್ಲಿಘಿ ಜಮಾಅತ್ ಕಾರಣ ಎಂದು ಮುಸ್ಲಿಮರ ವಿರುದ್ದ ದ್ವೇಷದ ಸುದ್ದಿ ಪ್ರಸಾರ ಮಾಡಿದ್ದ ‘ನ್ಯೂಸ್ 18 ಕನ್ನಡ’ ಚಾನೆಲ್‌‌‌ ಬುಧವಾರ ರಾತ್ರಿ ಕ್ಷಮೆ ಕೇಳಿದೆ.

ಸುವರ್ಣ ನ್ಯುಸ್‌, ನ್ಯೂಸ್‌ 18 ಕನ್ನಡ ಮತ್ತು ಟೈಮ್ಸ್‌ ನೌ ಚಾನೆಲ್‌ಗಳು ತಬ್ಲಿಘಿಗಳ ವಿರುದ್ದ ಅಪಪ್ರಾಚಾರ ಮಾಡಿದ್ದನ್ನು ಖಂಡಿಸಿ ಬೆಂಗಳೂರು ಮೂಲದ ತಂಡವು ‘ಹೇಟ್‌ ಸ್ಪೀಚ್‌ ಬೇಡ’ ಎಂಬ ಅಭಿಯಾನ ನಡೆಸಿತ್ತು. ಇದರ ಭಾಗವಾಗಿ, NBSA ಗೆ ದೂರುಗಳನ್ನು ಸಲ್ಲಿಸಿ, ಏಪ್ರಿಲ್ 1, 2020 ರಂದು ತಬ್ಲಿಘಿ ಜಮಾಅತ್‌ ಬಗ್ಗೆ ‘ನ್ಯೂಸ್‌ 18 ಕನ್ನಡ’ ಪ್ರಸಾರ ಮಾಡಿದ ಎರಡು ಕಾರ್ಯಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ದೂರಿನ ವಿಚಾರಣೆ ನಡೆಸಿದ್ದ NBSA, ವಿವಾದಾತ್ಮಕ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕೆ ನ್ಯೂಸ್‌ 18 ಕನ್ನಡಕ್ಕೆ 1 ಲಕ್ಷ ದಂಡ ವಿಧಿಸಿತ್ತು. ಅಲ್ಲದೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಎಂದು ಚಾನೆಲ್‌ಗೆ ನಿರ್ದೇಶನ ನೀಡಿತ್ತು. ಜೊತೆಗೆ ಎಲ್ಲಾ ವೆಬ್ ಪೋರ್ಟಲ್‌ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಆದೇಶಿಸಿತ್ತು.

ಈ ಹಿನ್ನಲೆಯಲ್ಲಿ ಬುಧವಾರ ರಾತ್ರಿ ನ್ಯೂಸ್‌18 ಕನ್ನಡ ಕಳೆದ ವರ್ಷ ನಡೆಸಿದ ಎರಡು ಕಾರ್ಯಕ್ರಮಗಳಿಗೆ ಕ್ಷಮೆಯಾಚಿಸಿದೆ.

ಅದು ತನ್ನ ವಿಷಾದ ಸಂದೇಶದಲ್ಲಿ, “ನ್ಯೂಸ್‌18 ಕನ್ನಡವು 1-4-2020 ರಂದು ಪ್ರಸಾರ ಮಾಡಿದ ‘ದೇಶಕ್ಕೆ ಕೊರೊನಾ ವೈರಸ್ ಹಬ್ಬಿಸಿದ ದೆಹಲಿ ನಿಝಾಮುದ್ದೀನ್ ಹೇಗಿದೆ ಗೊತ್ತಾ?’ ಮತ್ತು ‘ಕರ್ನಾಟಕದಿಂದ ದೆಹಲಿಯ ಜಮಾಅತ್‌ ಸಭೆಗೆ ಹೋದವರ ಸಂಖ್ಯೆ ಎಷ್ಟು?’ ಎಂಬ ಎರಡು ವರದಿಗಳನ್ನು ಪ್ರಸಾರ ಮಾಡಿದ್ದು, ನೀತಿ ಸಂಹಿತೆ ಹಾಗೂ ಪ್ರಸಾರ ಮತ್ತು ಗುಣಮಟ್ಟದ ಪ್ರಕಾರ ಪ್ರಸಾರ ಮಾಧ್ಯಮ ಪಾಲಿಸಬೇಕಾದ ನಿಷ್ಪಕ್ಷತೆ, ವಸ್ತುನಿಷ್ಠತೆ ಹಾಗೂ ತಟಸ್ಥತೆ ಕಾಪಾಡಿಕೊಳ್ಳುವುದರಲ್ಲಿ ನಾವು ನಿಯಮ ಉಲ್ಲಂಘಿಸಿದ್ದು, ಈ ಕಾರ್ಯಕ್ರಮ ಪ್ರಸಾರವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ” ಎಂದು ಹೇಳಿದೆ.

ಇದನ್ನೂ ಓದಿ: ಯೋಗ ದಿನ 88 ಲಕ್ಷ ಡೋಸ್‌, ಮಂಗಳವಾರ 54 ಲಕ್ಷ -ಭಾನುವಾರ 69 ಸಾವಿರ; ಇದು ಮೋದಿ ಸರ್ಕಾರ ಬೂಟಾಟಿಕೆ?

“ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯದ ಕುರಿತಾದ ವರದಿಗಾರಿಕೆಯಲ್ಲಿ ಪ್ರಸಾರ ಮಾಧ್ಯಮ ಪಾಲಿಸಬೇಕಾದ ನಿರ್ದಿಷ್ಟ ಮಾರ್ಗಸೂಚಿ ಅನುಸರಿಸುವುದರಲ್ಲೂ ನಿಯಮ ಉಲ್ಲಂಘನೆಯಾಗಿದೆ. ಯಾವುದೆ ಸಮುದಾಯವನ್ನು ಕೀಳುಮಟ್ಟದಲ್ಲಿ ಅಥವಾ ಸಮುದಾಯದಲ್ಲಿ ದ್ವೇಷ ಭಾವನೆಗಳನ್ನು ಹೆಚ್ಚಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಸ್ಪಷ್ಟ ಪಡಿಸುತ್ತೇವೆ. ಈ ವಿಷಯವನ್ನು ಭಾವೋದ್ರಕಗೊಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಬ್ರಾಡ್‌ಕಾಸ್ಟಿಂಗ್‌ ಮಾನದಂಡಗಳನ್ನು ಸುಧಾರಿಸುವ ಪ್ರಯತ್ನದಲ್ಲಿ NBSA ಜಾರಿಗೊಳಿಸಿದ ಕೋಡ್‌ ಆಫ್‌ ಎಥಿಕ್ಸ್‌‌ ಮತ್ತು ಬ್ರಾಡ್‌ ಕಾಸ್ಟಿಂಗ್‌‌ ಸ್ಟಾಂಡರ್ಡ್ಸ್ ಮತ್ತು ಗೈಡ್ ಲೈನ್‌ಗಳಿಗೆ ನಾವು ಬದ್ದರಾಗಿರುತ್ತೇವೆ” ಎಂದು ಚಾನೆಲ್‌ ಕ್ಷಮೆಯಾಚಿಸಿದೆ.

ನ್ಯೂಸ್ 18 ಕನ್ನಡ ಕ್ಷಮೆಯ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ‘ಹೇಟ್‌ ಸ್ಪೀಚ್‌ ಬೇಡ ಅಭಿಯಾನ’ವು, “ನ್ಯೂಸ್ 18 ಕನ್ನಡ NBSA ನಿರ್ದೇಶನದಂತೆ ತನ್ನ ಕ್ಷಮೆಯಾಚನೆಯನ್ನು ಪ್ರಸಾರ ಮಾಡಿದೆ. ಇದು ನಮಗೆ ಬಹಳ ಸ್ವಾಗತಾರ್ಹ ಸುದ್ದಿ. ನಾವು ಮಾಧ್ಯಮವನ್ನು ಜವಾಬ್ದಾರಿಯುತವಾಗಿ ಹಿಡಿದಿಟ್ಟುಕೊಳ್ಳಬಹುದು ಎಂದು ಈ ಮೂಲಕ ತಿಳಿಯುತ್ತದೆ. ದ್ವೇಷದ ಮಾತು ಮತ್ತು ದ್ವೇಷದ ಮಾಧ್ಯಮಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಹಿಮ್ಮೆಟ್ಟಿಸಬಹುದು” ಎಂದು ಹೇಳಿದೆ.

ಜೊತೆಗೆ ದ್ವೇಷ ಕಾರುವ ಚಾನೆಲ್‌ಗಳ ವಿರುದ್ದ ಹೋರಾಟ ನಡೆಸಿ ಜಯಗಳಿಸಿದ್ದಕ್ಕೆ ‘ಹೇಟ್‌ ಸ್ಪೀಚ್ ಬೇಡ’ ಅಭಿಯಾನ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

NBSA ನ್ಯೂಸ್‌ 18 ಕನ್ನಡ ಮಾತ್ರವಲ್ಲದೆ ಕನ್ನಡದ ಮತ್ತೊಂದು ಚಾನೆಲ್‌ ‘ಸುವರ್ಣ ನ್ಯೂಸ್‌’ಗೆ ಕೂಡಾ ತಬ್ಲೀಘಿಗಳ ವಿರುದ್ದ ಕಾರ್ಯಕ್ರಮ ಮಾಡಿದ್ದಕ್ಕೆ 50 ಸಾವಿರ ದಂಡವನ್ನು ಹಾಕಿತ್ತು. ಜೊತೆಗೆ ಆದೇಶದಲ್ಲಿ, “ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಸಂಪೂರ್ಣ ಆಪಾದನೆಯನ್ನು ತಬ್ಲಿಘಿ ಜಮಾಅತ್‌ ಮೇಲೆ ಹಾಕಲಾಗಿದ್ದು, ಅದನ್ನು ನಿರ್ದಿಷ್ಟ ಸಮುದಾಯದ ವಿರುದ್ದ ತಿರುಗಿಸಲಾಗಿದೆ. ಜೊತೆಗೆ ಕಾರ್ಯಕ್ರಮಗಳ ಶೀರ್ಷಿಕೆಗಳು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಕಪಟತೆಯನ್ನು ಹೊಂದಿವೆ” ಎಂದು ಹೇಳಿತ್ತು.

“ಈ ಕಾರ್ಯಕ್ರಮಗಳಲ್ಲಿ ಖಂಡಿತವಾಗಿಯೂ ಸಮತೋಲನ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆಯ ಕೊರತೆಯಿದೆ. ಅಲ್ಲದೆ ಈ ಕಾರ್ಯಕ್ರಮಗಳು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಬಹಿರಂಗವಾಗಿ ಪೂರ್ವಾಗ್ರಹ ಪೀಡಿತವಾಗಿದ್ದವು” ಎಂದು ಸುವರ್ಣ ನ್ಯೂಸ್‌ಗೆ ಹೇಳಿತ್ತು.

ಜೊತೆಗೆ ಆಕ್ಷೇಪಾರ್ಹ‌ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿದೆ.

ಇದನ್ನೂ ಓದಿ: ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಹಣ 20,700 ಕೋಟಿಗೆ ಏರಿಕೆ; 13 ವರ್ಷಗಳಲ್ಲಿಯೇ ಅಧಿಕ ಮೊತ್ತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights