ಯೋಗ ದಿನ 88 ಲಕ್ಷ ಡೋಸ್‌, ಮಂಗಳವಾರ 54 ಲಕ್ಷ -ಭಾನುವಾರ 69 ಸಾವಿರ; ಇದು ಮೋದಿ ಸರ್ಕಾರ ಬೂಟಾಟಿಕೆ?

ಯೋಗ ದಿನದ ಭಾಗವಾಗಿ ಭಾರತದಲ್ಲಿ ಜೂನ್‌ 21ರಿಂದ ಲಸಿಕೆ ಅಭಿಯಾನವನ್ನು ತೀವ್ರಗತಿಯಲ್ಲಿ ಮಾಡಲಾಗುವುದು. ಕೊರೊನಾ ವಿರುದ್ದ ಹೋರಾಟಕ್ಕೆ ಈ ಮೂಲಕ ವ್ಯಾಕ್ಸಿನೇಷನ್‌ ಪ್ರಕ್ರಿಯೆ ವ್ಯಾಪಕವಾಗಿ ನಡೆಯಲಿದೆ ಎಂದು ಒಕ್ಕೂಟ ಸರ್ಕಾರ ಹೇಳಿತ್ತು. ಆದರೆ, ಸರ್ಕಾರ ತೀವ್ರಗತಿಯ ಪ್ರಕ್ರಿಯೆ ಒಂದೇ ದಿನಕ್ಕಷ್ಟೇ ಸೀಮಿತವಾಗಿದ್ದು ವಿಪರ್ಯಾಸ. ಸೋಮವಾರ ಒಂದೇ ದಿನ ದೇಶಾದ್ಯಂತ 88 ಲಕ್ಷ ಜನರಿಗೆ ವ್ಯಾಕ್ಸಿನ್‌ ನೀಡಲಾಗಿತ್ತು. ಆದರೆ, ಅದು ಮಂಗಳವಾರ 54.22 ಲಕ್ಷಕ್ಕೆ ಕುಸಿದಿದೆ. ಮತ್ತೊಂದು ಸಂಗತಿ ಎಂದರೆ, ಜೂನ್‌ 20ರ ಭಾನುವಾರ ಕೇವಲ 69,000 ಜನರಿಗಷ್ಟೇ ವ್ಯಾಕ್ಸಿನ್‌ ನೀಡಲಾಗಿತ್ತು. ಅಂದರೆ, ಸೋಮವಾರದ ವ್ಯಾಕ್ಸಿನ್‌ ಅಭಿಯಾನಕ್ಕಾಗಿ ಭಾನುವಾರ ಮತ್ತು ಅದರ ಹಿಂದಿನ ದಿನಗಳಲ್ಲಿ ವ್ಯಾಕ್ಸಿನ್‌ ನೀಡುವುದನ್ನೇ ಕಡಿಮೆ ಮಾಡಲಾಗಿತ್ತೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಮಂಗಳವಾರ ದೇಶದಲ್ಲಿ ಕೇವಲ 54.22 ಲಕ್ಷ ಡೋಸ್‌ಗಳಷ್ಟು ಮಾತ್ರ ವ್ಯಾಕ್ಸೀನ್‌ಗಳನ್ನು ನೀಡಲಾಗಿರುವುದು ವ್ಯಾಕ್ಸಿನೇಶನ್ ಪ್ರಕ್ರಿಯೆಯನ್ನು ದೀರ್ಘಾವಧಿಯವರೆಗೆ ಕಾಯ್ದುಕೊಂಡು ಹೋಗುವುದು ಸಾಧ್ಯವೇ ಎಂಬ ಅನುಮಾನ ಹುಟ್ಟತೊಡಗಿದೆ. ನಮ್ಮ ಲಸಿಕೆ ಅಭಿಯಾನ ಅರಂಭಿಕ ಶೂರತ್ವ ಮಾತ್ರವೇ ಅಥವಾ ನಿಯಮಿತವಾಗಿ ದೊಡ್ಡ ಮಟ್ಟದಲ್ಲಿ ವ್ಯಾಕ್ಸೀನ್‌ಗಳನ್ನು ನಿಡುವಷ್ಟು ಉತ್ಪಾದನೆ ದೇಶದಲ್ಲಿ ಇದೆಯೆ ಎಂಬ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ.

ಜೊತೆಗೆ ಜೂನ್ 21 ರ ಸೋಮವಾರದ ಅತಿ ಹೆಚ್ಚು ಮ್ಯಾಜಿಕ್ ನಂಬರ್‌ಗಳನ್ನು ತಲುಪಲು ರಾಜ್ಯ ಸರ್ಕಾರಗಳು ಈ ಹಿಂದಿನ ಅನೇಕ ದಿನಗಳ ಕಾಲ ವ್ಯಾಕ್ಸಿನ್‌ಗಳನ್ನು ಜನರಿಗೆ ನೀಡದೇ ದಾಸ್ತಾನು ಮಾಡಿದ್ದವು ಎಂಬ ಆರೋಪಗಳು ಕೂಡ ಕೇಳಿಬಂದಿದೆ. ಸೋಮವಾರ ಅತಿಹೆಚ್ಚು ವ್ಯಾಕ್ಸಿನ್‌ಗಳನ್ನು ನೀಡಲಾದ ಮೊದಲ 10 ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ರಾಜ್ಯಗಳೇ ಇವೆ. ಜೂನ್ 21 ರಂದು ಅತಿಹೆಚ್ಚು ವ್ಯಾಕ್ಸಿನ್‌ಗಳನ್ನು ನೀಡಿದ್ದ ಮಧ್ಯಪ್ರದೇಶದಲ್ಲಿ ಮಂಗಳವಾರದ ಹೊತ್ತಿಗೆ ಲಸಿಕೆ ಅಭಿಯಾನ ಸೋಮವಾರದ ಅರ್ಧದಷ್ಟಕ್ಕೆ ಬಂದಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಸೇನಾ ಮತ್ತು ಕಾಂಗ್ರೆಸ್ ನಡುವಿನ ಬಿರುಕು ಏನನ್ನು ಸೂಚಿಸುತ್ತಿದೆ?

2021ರ ಅಂತ್ಯಕ್ಕೆ ದೇಶದಲ್ಲಿ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ವ್ಯಾಕ್ಸಿನ್‌ಗಳನ್ನು ನೀಡುವ ಗುರಿಯನ್ನು ಕೆಂದ್ರ ಸರ್ಕಾರ ಇಟ್ಟುಕೊಂಡಿದೆ. ಮತ್ತು ಅದೇ ಗುರಿಯನ್ನು ಸಾಧಿಸಲಿಕ್ಕೆ ರಾಜ್ಯಗಳ ಮೇಲೆಯೂ ಒತ್ತಡ ಹಾಕುತ್ತಿದೆ. ಕೇಂದ್ರ ಸರ್ಕಾರದ ವ್ಯಾಕ್ಸಿನೇಶನ್ ಗುರಿಯನ್ನು ತಲುಪಲು ದಿನ ನಿತ್ಯ ನಿಯಮಿತವಾಗಿ 97 ಲಕ್ಷ ಡೋಸ್ ವ್ಯಾಕ್ಸೀನ್‌ಗಳನ್ನು ನೀಡಬೇಕು. ಸಧ್ಯ ದೇಶದಲ್ಲಿ ಲಭ್ಯವಿರುವ ವ್ಯಾಕ್ಸಿನ್‌ ಪೂರೈಕೆಯನ್ನು ಗಮನಿಸಿದರೆ ವರ್ಷಾಂತ್ಯದ ಹೊತ್ತಿಗೆ ದೇಶದ ಎಲ್ಲರಿಗೂ ವ್ಯಾಕ್ಸೀನ್‌ ನೀಡುವ ಕೇಂದ್ರ ಸರ್ಕಾರದ ಗುರಿ ಸಾಧಿಸುವುದು ಅನುಮಾನವಾಗಿ ಕಾಣುತ್ತಿದೆ.

ದೇಶದಲ್ಲಿ ದಿನನಿತ್ಯ ಅಗತ್ಯವಿರುವ ವ್ಯಾಕ್ಸಿನ್‌ಗಳನ್ನು ಪೂರೈಸುವ ಸಾಮರ್ಥ್ಯ ತನಗಿದೆ ಎಂದು ಕೇಂದ್ರ ಸರ್ಕಾರ ಪದೇ ಪದೇ ಹೇಳುತ್ತಲೇ ಬರುತ್ತಿದೆ. ಕೇಂದ್ರ ಸರ್ಕಾರ ದಿನಕ್ಕೆ 1 ಕೋಟಿ ವ್ಯಾಕ್ಸಿನ್‌ಗಳನ್ನು ನೀಡುವ ಗುರಿಯನ್ನು ಹೊಂದಿದೆ. ಸರ್ಕಾರಕ್ಕೆ ದಿನಕ್ಕೆ 1.25 ಕೋಟಿ ವ್ಯಾಕ್ಸಿನ್‌ಗಳನ್ನು ದಾಸ್ತಾನು ಮಾಡಿ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನ್ಯಾಷನಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಶನ್ (NTAGI) ಅಧ್ಯಕ್ಷ ಡಾ. ಎನ್‌.ಕೆ. ಅರೋರಾ ಹೇಳುತ್ತಾರೆ. ಆದರೆ ಇದುವರೆಗೆ ಡಾ. ಅರೋರಾ ಅವರ ಮಾತನ್ನು ಸಾಬೀತು ಪಡಿಸುವ ಅಂಕಿ ಅಂಶಗಳು ಎಲ್ಲೂ ಲಭ್ಯವಾಗಿಲ್ಲ.

ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ನಾವು ಮುಂದಿನ 15 ದಿನಗಳ ವ್ಯಾಕ್ಸಿನ್‌ ಬೇಡಿಕೆಯನ್ನು ಮುಂಚಿತವಾಗಿ ನೀಡುವಂತೆ ರಾಜ್ಯಗಳಿಗೆ ಕೇಳಿದ್ದೇವೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸುತ್ತಾರೆ.

ಮಂಗಳವಾರದ ರಾಜ್ಯವಾರು ವ್ಯಾಕ್ಸಿನೇಶನ್ ಅಂಕಿ ಅಂಶವನ್ನು ನೋಡಿದರೆ ಅತ್ಯಂತ ಕಳವಳಕಾರಿಯಾಗಿದೆ. ಜೂನ್ 21 ರ ಸೋಮವಾರ ದೇಶದಲ್ಲಿ ಅತಿಹೆಚ್ಚು ಎಂದರೆ 17 ಲಕ್ಷ ವ್ಯಾಕ್ಸಿನ್‌ಗಳನ್ನು ನೀಡಿದ್ದ ಮಧ್ಯಪ್ರದೇಶದಲ್ಲಿ ಮಂಗಳವಾರ ಕೇವಲ 4,563 ಗಳಷ್ಟು ವ್ಯಾಕ್ಸಿನ್‌ ಡೋಸ್‌ಗಳನ್ನು ಮಾತ್ರ ನೀಡಲಾಗಿದೆ. ಹಾಗೇ ಸೋಮವಾರ ತೆರೆಯಲಾಗಿದ್ದ ಬಹುತೇಕ ವ್ಯಾಕ್ಸೀನೇಷನ್ ಸೆಂಟರ್ ಗಳನ್ನು ಮುಚ್ಚಲಾಗಿದೆ. ಹಾಗೇ ಹಿಂದೆ ಮಧ್ಯ ಪ್ರದೇಶದಲ್ಲಿ ನಿತ್ಯ 5000 ಕ್ಕಿಂತ ಕಡಿಮೆ ವ್ಯಾಕ್ಸೀನ್‌ಗಳನ್ನು ನೀಡಿದ ಉದಾಹರಣೆಗಳಿಲ್ಲ. ಆದರೆ ಜೂನ್ 20ರ ಭಾನುವಾರ ಮಾತ್ರ ಮಧ್ಯ ಪ್ರದೇಶದಲ್ಲಿ ಕೇವಲ 692 ಡೋಸ್ ವ್ಯಾಕ್ಸೀನ್‌ಗಳನ್ನು ನೀಡಲಾಗಿತ್ತು. ಮಧ್ಯ ಪ್ರದೇಶದ ಇದುವರೆಗಿನ ಅತಿಹೆಚ್ಚು ವ್ಯಾಕ್ಸೀನ್‌ಗಳನ್ನು ನೀಡಿದ ದಾಖಲೆ 5 ಲಕ್ಷ ಡೊಸ್‌ಗಳಾಗಿತ್ತು. ಅದು ಜೂನ್ 14 ರಂದು. ವ್ಯಾಕ್ಸೀನೇಶನ್ ಪ್ರಕ್ರಿಯೆಯಲ್ಲಿನ ನಾಟಕೀಯ ಏರಿಕೆ-ಇಳಿಕೆಗಳು ಮಧ್ಯಪ್ರದೇಶ ಸರ್ಕಾರದತ್ತ ಬೊಟ್ಟು ಮಾಡುವಂತೆ ಮಾಡಿವೆ. ರಾಜ್ಯ ಸರ್ಕಾರ ದಿನನಿತ್ಯ ವ್ಯಾಕ್ಸಿನ್‌ಗಳನ್ನು ನೀಡದೇ ಸಂಗ್ರಹಿಸಿಟ್ಟು ಜೂನ್ 21 ರಂದು ಅತಿ ಹೆಚ್ಚು ವ್ಯಾಕ್ಸೀನ್ ವಿತರಿಸುವ ನಾಟಕವಾಡಿದೆ ಎಂದು ಅನೇಕ ನಾಯಕರು ಟೀಕೆ ಮಾಡಿದ್ದಾರೆ.

ಕರ್ನಾಟಕದಲ್ಲಿಯೂ ಮಂಗಳವಾರದ ಹೊತ್ತಿಗೆ ವ್ಯಾಕ್ಸಿನೇಶನ್‌ ನಂಬರ್‌ಗಳು ಗಣನೀಯವಾಗಿ ಇಳಿಮುಖವಾಗಿದೆ. ಸೋಮವಾರ 11 ಲಕ್ಷ ಡೋಸ್‌ಗಳಷ್ಟು ವ್ಯಾಕ್ಸೀನ್ ನೀಡಲಾಗಿದ್ದರೆ ಮಂಗಳವಾರ ಜೂನ್ 22 ರಂದು ಈ ಸಂಖ್ಯೆ 3.8 ಲಕ್ಷಕ್ಕೆ ಬಂದು ತಲುಪಿದೆ. ಮಧ್ಯ ಪ್ರದೇಶ, ಕರ್ನಾಟಕ, ಹರಿಯಾಣಗಳಲ್ಲಿ ಮಂಗಳವಾರ ನಾಟಕೀಯ ರೀತಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ವ್ಯಾಕ್ಸೀನ್‌ಗಳನ್ನು ನೀಡಲಾಗಿದೆ. ಇದು ದೇಶದ ವ್ಯಾಕ್ಸೀನೇಶನ್ ಅಂಕಿ ಅಂಶದ ಕುಸಿತಕ್ಕೂ ಕಾರಣವಾಗಿದೆ.

ಉತ್ತರ ಪ್ರದೇಶ ರಾಜ್ಯವೊಂದರಲ್ಲಿ ಮಾತ್ರ ಸೋಮವಾರಕ್ಕಿಂತ ಮಂಗಳವಾರ ಹೆಚ್ಚು ವ್ಯಾಕ್ಸೀನ್ ಡೋಸ್‌ಗಳನ್ನು ನೀಡಲಾಗಿದೆ. ಸೋಮವಾರ ಸುಮಾರು 7ಲಕ್ಷ ವ್ಯಾಕ್ಸಿನ್‌ಗಳನ್ನು ನೀಡಲಾಗಿದ್ದರೆ ಮಂಗಳವಾರ 8 ಲಕ್ಷ ವ್ಯಾಕ್ಸಿನ್‌ ಡೋಸ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ: 2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?

ವ್ಯಾಕ್ಸಿನೇಶನ್ ಪ್ರಕ್ರಿಯೆಯಲ್ಲಿ ಮಂಗಳವಾರದ ದಿಢೀರ್ ಇಳಿಕೆಯ ಕುರಿತು ವಿವಿಧ ರಾಜಕೀಯ ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದು ಕೇಂದ್ರ ಸರ್ಕಾರ ವ್ಯಾಕ್ಸಿನೇಶನ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯಿಲ್ಲ ಎಂದು ಆರೋಪಿಸಿದ್ದಾರೆ. ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಸಚಿವ ಪಿ. ಚಿದಂಬರಂ ಪ್ರತಿಕ್ರಿಯಿಸಿ, “ಸೋಮವಾರದ ವ್ಯಾಕ್ಸಿನೇಶನ್ ದಾಖಲೆಯ ಹಿಂದಿನ ಸತ್ಯ ಮಂಗಳವಾರ ಬಹಿರಂಗಗೊಂಡಿದೆ. ಭಾನುವಾರ ವ್ಯಾಕ್ಸಿನೇಶನ್ ನಿಲ್ಲಿಸಿ, ಸೋಮವಾರ ವಿಶ್ವದಾಖಲೆ ಮಾಡಿ, ಮತ್ತೆ ಮಂಗಳವಾರ ಹಿಂದಿನ ಸ್ಥಿತಿಗೆ ತಲುಪುವುದು. ಇದೇ ಕೇಂದ್ರ ಸರ್ಕಾರದ ವ್ಯಾಕ್ಸೀನ್ ನೀತಿ” ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಮಂಗಳವಾರದದ ವ್ಯಾಕ್ಸಿನೇಶನ್ ನಂಬರ್‌ಗಳ ಇಳಿಕೆ ಕುರಿತು ತೀವ್ರವಾಗಿ ಪ್ರತಿಕ್ರಿಯಿಸಿದ್ದು ಲಸಿಕೆ ಅಭಿಯಾನವನ್ನು ಪ್ರಚಾರ ಆಂದೋಲನವಾಗಿ ನಡೆಸುವುದನ್ನು ಬಿಟ್ಟು ದೇಶದಲ್ಲಿ ನಿತ್ಯ ಕನಿಷ್ಠ 80 ಲಕ್ಷ ವ್ಯಾಕ್ಸಿನ್‌ಗಳನ್ನು ನಿಯಮಿತವಾಗಿ ನೀಡುವಂತೆ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ವ್ಯಾಕ್ಸಿನ್‌ ನೀತಿಯಲ್ಲಿನ ಪಾರದರ್ಶಕತೆಯ ಕೊರತೆ, ಅಸಮರ್ಪಕ ಯೋಜನೆ, ಪೂರೈಕೆಯಲ್ಲಿನ ವ್ಯತ್ಯಗಳ ಕಾರಣದಿಂದ 2021 ಅಂತ್ಯಕ್ಕೆ ದೇಶದ ಜನರನ್ನು ವ್ಯಾಕ್ಸಿನೇಟ್ ಮಾಡುವ ಕೇಂದ್ರ ಸರ್ಕಾರದ ಗುರಿಯ ಸಾಧನೆ ಮಂಕಾಗತೊಡಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ವರ್ಷಾಂತ್ಯಕ್ಕೆ ದೇಶದ ಎಲ್ಲಾ ಜನರಿಗೆ ಲಸಿಕೆ ಕೊಡುವ ನಿಜವಾದ ಪ್ರಯತ್ನಗಳನ್ನು ಮಾಡುತ್ತಿರುವುದೇ ಆದರೆ ದಿನನಿತ್ಯದ ವ್ಯಾಕ್ಸಿನೇಶನ್ ಪ್ರಕ್ರಿಯೆಯಲ್ಲಿ ನಿತ್ಯ ಇಷ್ಟು ಏರಿಳಿಕೆಗಳು ಹೇಗೆ ಸಾಧ್ಯ ಎಂಬ ಪ್ರಶ್ನೆ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿಯೇ ಹೊಸದಾದ ಡೆಲ್ಟಾ ಪ್ಲಸ್‌ ರೂಪಾಂತರಿ ವೈರಸ್‌ ಕಾಣಿಸಿಕೊಂಡು ದೇಶದಲ್ಲಿ ಆತಂಕವನ್ನು ಹುಟ್ಟಿಸಿದೆ. ಈಗ ಸಧ್ಯ ಕೊರೋನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶದ ಮುಂದಿರುವ ಏಕೈಕ ಅಸ್ತ್ರ ವ್ಯಾಕ್ಸಿನೇಶನ್. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ವ್ಯಾಕ್ಸಿನೇಶನ್ ಪ್ರಯತ್ನವನ್ನು ಕೈಗೊಂಡರೆ ಮಾತ್ರ ದೇಶ ಕೊರೋನಾ ವಿರುದ್ಧ ಹೋರಾಡಲು ಸಾಧ್ಯ.

– ರಾಜೇಶ್ ಹೆಬ್ಬಾರ್

ಇದನ್ನೂ ಓದಿ: ಮಲ್ಯ, ಚೋಕ್ಸಿ, ನೀರವ್ ಮೋದಿಯಿಂದ ವಶಪಡಿಸಿಕೊಂಡ 9,371 ಕೋಟಿ ರೂ. ಆಸ್ತಿ ಬ್ಯಾಂಕುಗಳಿಗೆ ವರ್ಗ: ಇಡಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights