ಅಮಾಯಕರನ್ನು ಹಿಂಸಿಸುವ ಬಿಜೆಪಿ ನಾಯಕರನ್ನು ವಜಾಗೊಳಿಸಬೇಕು: ದಿಗ್ವಿಜಯ್ ಸಿಂಗ್
ಅಮಾಯಕ ಮುಸ್ಲಿಮರಿಗೆ ಹಿಂಸೆ ನೀಡಿರುವ ಬಿಜೆಪಿ ನಾಯಕರನ್ನು ಅವರ ಹುದ್ದೆಗಳಿಂದ ತೆಗೆದುಹಾಕಬೇಕು. ಪ್ರಕ್ರಿಯೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ಆರಂಭಿಸಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ‘ಹಿಂದೂಸ್ತಾನ ಫಸ್ಟ್, ಹಿಂದೂಸ್ತಾನಿ ಬೆಸ್ಟ್’ ಕಾರ್ಯಕ್ರಮದಲ್ಲಿ ‘ಎಲ್ಲ ಭಾರತೀಯರ ಡಿಎನ್ಎ ಒಂದೇ, ಹೋಹತ್ಯೆ ಮಾಡುವುದು ಪಾಪದ ಕೆಲಸ. ಆದರೆ, ಕೆಲವು ಅಮಾಯಕ ಮೇಲೆ ಗೋಹತ್ಯೆಯ ಸುಳ್ಳು ಪ್ರಕರಣಗಳನ್ನೂ ದಾಖಲಿಸಲಾಗಿದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದರು. ಈಗ ಭಾಗವತ್ ಅವರು ತಮ್ಮ ಹೇಳಿಕೆಗೆ ಬದ್ಧರಾಗಿ, ಅಮಾಯಕ ಮುಸ್ಲಿಮರಿಗೆ ಹಿಂಸೆ ನೀಡಿರುವ ಬಿಜೆಪಿ ನಾಯಕರನ್ನು ಅವರ ಹುದ್ದೆಗಳಿಂದ ಕೆಳಗಿಳಿಸಲು ಬಿಜೆಪಿ ನಾಯಕರಿಗೆ ನಿರ್ದೇಶನ ನೀಡಬೇಕು ಎಂದು ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಆದರೆ, ಭಾಗವತ್ ಅವರು ಬಿಜೆಪಿಗೆ ಈ ರೀತಿಯ ನಿರ್ದೇಶನವನ್ನು ನೀಡುವುದಿಲ್ಲ. ಅವರಿಗೂ, ಅವರ ಮಾತಿಗೂ ಮತ್ತು ಕೃತಿಗೂ ಬಹಳ ಅಂರತವಿದೆ ಎಂದು ಅವರು ಟೀಕಿಸಿದ್ದಾರೆ.
‘ಮೋಹನ್ ಭಾಗವತ್ ಜೀ, ನಿಮ್ಮ ಅನುಯಾಯಿಗಳಿಗೆ, ನಿಮ್ಮಲ್ಲಿರುವ ಚಿಂತನೆಗಳನ್ನು (ಮುಸ್ಲಿಂ ಅಮಾಯಕರಿಗೆ ಹಿಂಸಿಸುವುದನ್ನು ನಿಲ್ಲಿಸಬೇಕು) ಪಾಲಿಸುವಂತೆ ಕಡ್ಡಾಯಗೊಳಿಸಿದರೆ ನಾನು ನಿಮ್ಮ ಅನುಯಾಯಿಯಾಗುತ್ತೇನೆ ಮತ್ತು ಅಭಿಮಾನಿಯಾಗುತ್ತೇನೆ’ ಎಂದು ಹೇಳಿದ್ದಾರೆ.
‘ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಆರ್ಎಸ್ಎಸ್ ದ್ವೇಷವನ್ನು ಬಿತ್ತಿದೆ. ದ್ವೇಷದ ಬೀಜವನ್ನು ಈಗ ತೆಗೆದುಹಾಕುವುದು ಸುಲಭವಲ್ಲ’ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

