ಸಿಎಂ ಬದಲಾವಣೆ ಖಚಿತ?; ಕೆ.ಎಸ್.ಈಶ್ವರಪ್ಪಗೆ ಮುಖ್ಯಮಂತ್ರಿ ಪಟ್ಟ?

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಕಾವು ಪಡೆದುಕೊಂಡಿದೆ. ಸ್ವತಃ ಯಡಿಯೂರಪ್ಪನವರೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಗುರುವಾರ ಸುಳಿವು ನೀಡಿದ್ದಾರೆ. ಜುಲೈ 26ರಂದು ಅಥವಾ ನಂತರದ ದಿನಗಳಲ್ಲಿ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬಹುದು ಎಂದು ಹೇಳಲಾಗಿದೆ. ಈ ಮಧ್ಯೆ, ಮುಂದಿನ ಸಿಎಂ ಯಾರು ಎಂಬುದು ಚರ್ಚೆಗೆ ಗ್ರಾಸವಾಗಿದ್ದು, ಈಶ್ವರಪ್ಪ ಅವರಿಗೆ ಸಿಎಂ ಪಟ್ಟ ಸಿಗಬಹುದಾ ಎಂಬ ಮಾತುಗಳು ಕೇಳಿಬರುತ್ತಿವೆ.

ದೆಹಲಿಯಲ್ಲಿ ಬಿಜೆಪಿಯ ಹಲವು ನಾಯಕರನ್ನು ಯಡಿಯೂರಪ್ಪ ಭೇಟಿ ಮಾಡಿ ಬಂದಿದ್ದಾರೆ. ಬಳಿಕ ಸಿಎಂ ಬದಲಾವಣೆ ಇಲ್ಲ ಎಂದು ಅವರು ಹೇಳಿದ್ದರೂ, ಆಗಸ್ಟ್‌ 15ರ ಒಳಗೆ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೀಗ ಅದು ಖಚಿತವೆಂದು ಹೇಳಲಾಗುತ್ತಿದ್ದು, ಬಿಜೆಪಿ ಹೈಕಮಾಂಡ್ ಯಾರಿಗೆ ಮುಖ್ಯಮಂತ್ರಿ ಪಟ್ಟ ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಇತ್ತ, ತುಸು ಅಚ್ಚರಿ ಎನಿಸಿದರೂ ಬಿಜೆಪಿ ವರಿಷ್ಠರು ಈ ಬಾರಿ ರಾಜ್ಯದಲ್ಲಿ ಪ್ರಮುಖ ಬದಲಾವಣೆಗೆ ಕೈ ಹಾಕುವ ಯೋಚನೆಯಲ್ಲಿದ್ದಾರೆ. ಕುರುಬ ಸಮುದಾಯದ ಪ್ರಬಲ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪಗೆ ಮುಖ್ಯಮಂತ್ರಿ ಪಟ್ಟಕಟ್ಟಲು ದೆಹಲಿ ಹೈಕಮಾಂಡ್‌ನ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಲೆಕ್ಕಾಚಾರ ಪಕ್ಷದ ವರಿಷ್ಠರದ್ದಾಗಿದೆ.

ಇದನ್ನೂ ಓದಿ: ಅಸ್ಸಾಂ, ಉತ್ತರಾಖಂಡದ ನಂತರ ಕರ್ನಾಟಕ; 30 ದಿನಗಳಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆ!

ಕೆ.ಎಸ್.ಈಶ್ವರಪ್ಪ ಪಕ್ಷದ ಹಿರಿಯ ನಾಯಕರು, ಅನುಭವಿ ರಾಜಕಾರಣಿ, ಸಂಘ ಪರಿವಾರದ ಪಕ್ಕಾ ಕಟ್ಟಾಳು. ಪಕ್ಷದ ಶಿಸ್ತಿನ ಸಿಪಾಯಿ. ಅಲ್ಲದೆ ಈಗಾಗಲೇ ಉಪಮುಖ್ಯಮಂತ್ರಿಯಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನೆಡಿಸಿರುವ, ಸಂಘಟಿಸಿರುವ ಸಾಕಷ್ಟು ಅನುಭವ ಅವರಿಗಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ, ಕುರುಬರಿಗೆ ಮೀಸಲಾತಿ ವಿಚಾರದಲ್ಲಿ ಕೆ.ಎಸ್.ಈಶ್ವರಪ್ಪ ತಮ್ಮ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಕುರುಬ ಸಮುದಾಯದ ಸಾಕಷ್ಟು ಸ್ವಾಮೀಜಿಗಳು ಈಶ್ವರಪ್ಪ ಬೆನ್ನಿಗೆ ನಿಂತಿದ್ದಾರೆ. ಮಾತ್ರವಲ್ಲದೆ. ಅದೇ ಸಮುದಾಯ ಪ್ರಬಲ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹಿಂದಿಕ್ಕಲು ಇವರನ್ನು ಮತ್ತಷ್ಟು ಮುಂದೆ ತರುವ ಪ್ರಯತ್ನವನ್ನೂ ಬಿಜೆಪಿ ಹೈಕಮಾಂಡ್‌ ಈ ತಂತ್ರ ಬಳಸಬಹುದು ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಅವರನ್ನು ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿದರೇ ಮುಂದೆ ಪಕ್ಷಕ್ಕೂ ಅನುಕೂಲವಾಗಲಿದೆ ಅನ್ನುವ ಪ್ಲಾನ್ ನಲ್ಲಿ ಪಕ್ಷದ ಹೈಕಮಾಂಡ್ ಇದೆ.

ಪಕ್ಷಕ್ಕೇನು ಲಾಭ..?

ಕುರುಬ ಸಮುದಾಯದ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ರೆ ಬಿಜೆಪಿಗೆ ಸಾಕಷ್ಟು ರೀತಿಯ ಲಾಭಗಳಿವೆ. ಒಂದು ವೇಳೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದೇಯಾದಲ್ಲಿ ಆಗ ಲಿಂಗಾಯತ ಮತದಾರರು ಬಿಜೆಪಿ ಮೇಲೆ ಮುನಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದು ಮುಂದಿನ ಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ನಷ್ಟವನ್ನು ತುಂಬಿಕೊಳ್ಳಬೇಕಾದರೇ ನೂರಕ್ಕೆ ನೂರಷ್ಟು ಮತ್ತೊಂದು ಪ್ರಬಲ ಸಮುದಾಯ ಬಿಜೆಪಿ ಪರ ನಿಲ್ಲಬೇಕಾಗುತ್ತದೆ. ಅದು ಕುರುಬ ಸಮುದಾಯವೇ ಆದರೇ ಬಿಜೆಪಿಗೆ ಅನುಕೂಲಕರ. ಯಾಕೆಂದ್ರೆ ಈಶ್ವರಪ್ಪ ಸಿಎಂ ಆದ್ರೆ ಕುರುಬ ಮತದಾರರು ಬಿಜೆಪಿ ಮೇಲೆ ಒಲವು ಹೆಚ್ಚಿಸಿಕೊಳ್ಳುತ್ತಾರೆ. ಜೊತೆಗೆ ಕಾಂಗ್ರೆಸ್ ಗೆ ಟಕ್ಕರ್ ಕೊಡಬಹುದು..!

ಸಿದ್ದರಾಮಯ್ಯಗೆ ಟಕ್ಕರ್..!

ಸಿದ್ದರಾಮಯ್ಯ ಕುರುಬ ಸಮುದಾಯದ ಪ್ರಬಲ ನಾಯಕ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ತಮ್ಮ ಸಮುದಾಯವನ್ನೇ ಕಡೆಗಣಿಸಿದ್ರೂ ಅನ್ನೋ ಆರೋಪ ಅವರ ಮೇಲಿದೆ. ಜೊತೆಗೆ ಕುರುಬರಿಗೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಸ್ಪಷ್ಟ ನಿಲುವನ್ನು ಪ್ರಕಟಿಸದೇ ಇರೋದು ಕುರುಬ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನ ಹೀಗೆ ಇರುವಾಗಲೇ ಕುರುಬ ಸಮುದಾಯದ ಮತ್ತೊಬ್ಬ ನಾಯಕರಾದ ಕೆ.ಎಸ್.ಈಶ್ವರಪ್ಪಗೆ ಅಧಿಕಾರ ಕೊಟ್ಟರೇ ಆಗ ಇಡೀ ಕುರುಬ ಸಮುದಾಯ ಬಿಜೆಪಿ ಪರ ನಿಲ್ಲಲಿದೆ. ಹಾಗೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ತಿರುಗೇಟು ನೀಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ಇದನ್ನೂ ಓದಿ: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಬದಲಿಸುವುದು ಬಿಜೆಪಿ ಹೈಕಮಾಂಡ್‌ಗೆ ಸುಲಭವಲ್ಲ; ಹಲವು ಕಾರಣಗಳಿವೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights