ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಬದಲಿಸುವುದು ಬಿಜೆಪಿ ಹೈಕಮಾಂಡ್‌ಗೆ ಸುಲಭವಲ್ಲ; ಹಲವು ಕಾರಣಗಳಿವೆ!

ರಾಜ್ಯದಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕಾವು ಇನ್ನೂ ಆರಿಲ್ಲ. ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ, ಬಿಜೆಪಿ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ, ಅವರ ದೆಹಲಿ ಭೇಟಿಯ ನಂತರವೂ ಮಹತ್ತರವಾದ ಬೆಳವಣಿಗೆ ಏನೂ ಘಟಿಸಿಲ್ಲ.

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಗಳಷ್ಟೇ ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಸುಲಭದ ಸಂಗತಿಯಲ್ಲ ಎಂದು ಹೈಕಮಾಂಡ್‌ ಭಾವಿಸಿದಂತಿದೆ. ಅಲ್ಲದೆ, ಬಿಎಸ್‌ವೈ ಅವರನ್ನು ಬದಲಾಯಿಸುವ ಬಗ್ಗೆ ಹೈಕಮಾಂಡ್‌ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ಅಲ್ಲದೆ, ನಾಯಕತ್ವ ಬದಲಾವಣೆಯ ಬಗ್ಗೆ ಹೇಳಿಕೆ ನೀಡುವವರನ್ನೂ ನಿಯಂತ್ರಿಸುವ ಪ್ರಯತ್ನವನ್ನೂ ಮಾಡಿಲ್ಲ. ಇದು ಹೈಕಮಾಂಡ್‌ ನಡೆ ಏನಿದೆ ಎಂಬ ಅನುಮಾನವನ್ನು ರಾಜ್ಯ ಬಿಜೆಪಿ ಮತ್ತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಆದರೂ, ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆಯ ಬಗೆಗೆ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೂ ರಾಜಕ್ಕೆ ಪರ್ಯಾಯ ನಾಯಕರನ್ನು ಗುರುತಿಸುವ ಕೆಲಸವೂ ಆಗಿಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡ್‌ ಮುಂದಿನ ಚುನಾವಣೆ ಹಾಗೂ ಹೆಚ್ಚಿನ ಬಿಜೆಪಿ ಶಾಸಕರು ಬಿಎಸ್‌ವೈ ಪರವಿರುವುದನ್ನು ಗಮನದಲ್ಲಿಟ್ಟುಕೊಂಡು ಬುದ್ದಿವಂತಿಕೆಯ ಹೆಜ್ಜೆ ಇಡಲು ಮುಂದಾಗಿದೆ ಎಂದೆನಿಸುತ್ತಿವೆ.

ಇದನ್ನೂ ಓದಿ: ಮುಂದಿನ 2 ವರ್ಷ ರಾಜ್ಯಕ್ಕೆ ನಾನೇ ಮುಖ್ಯಮಂತ್ರಿ: ಬಿಎಸ್‌ ಯಡಿಯೂರಪ್ಪ

ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ವಿದೇಯವಾಗಿ ನಡೆದುಕೊಳ್ಳುವ ಸಾಧ್ಯತೆಗಳಿವೆ. ಅದರೂ, ಅವರ ಬೆಂಬಲಿಗರು ಬಿಎಸ್‌ವೈ ಅವರನ್ನು ಬದಲಿಸುವ ವಿಚಾರದಲ್ಲಿ ಆಕ್ರೋಶಗೊಳ್ಳುವುದು ಖಚಿತವೆಂದು ಹೇಳಲಾಗುತ್ತಿದೆ. ಹಲವು ಮೂಲ ಬಿಜೆಪಿ ಶಾಸಕರು ಹಾಗೂ ವಲಸೆ ಬಂದ ಎಲ್ಲಾ ಬಿಜೆಪಿ ಶಾಸಕರು ಬಿಎಸ್‌ವೈ ಪರವಾಗಿಯೇ ಇದ್ದಾರೆ. ಹೀಗಿರುವಾಗ ಸಿಎಂ ಬದಲಾವಣೆ ಸುಲಭವಲ್ಲ.

ಅಲ್ಲದೆ, ಲಿಂಗಾಯತ ಸಮುದಾಯ ಮುನ್ನೆಲೆ ನಾಯಕರಾಗಿರುವ ಬಿಎಸ್‌ವೈ ಅವರ ಮುಂದಾಳತ್ವವಿಲ್ಲದೆ ಮುಂದಿನ ಚುನಾವಣೆಯನ್ನು ಗೆಲ್ಲುತ್ತೇವೆ ಎಂಬ ಭರವಸೆಯೂ ಬಿಜೆಪಿಗಿಲ್ಲ. ಹೀಗಾಗಿ ಬಿಜೆಪಿಗೆ ಬಹುಸಂಖ್ಯೆಯ ಓಟ್‌ ಬ್ಯಾಂಕ್‌ ಆಗಿರುವ ಲಿಂಗಾಯತರ ಮತವನ್ನು ಹಿಡಿದಿಟ್ಟುಕೊಳ್ಳಲು ಬಿಎಸ್‌ವೈ ಅವರು ಬಿಜೆಪಿಗೆ ಅನಿವಾರ್ಯವಾಗಿದ್ದಾರೆ.

ಹಾಗಾಗಿ, ಅವರನ್ನು ಮನವೊಲಿಸಿ ನಾಜೂಕಾಗಿ ಸಿಎಂ ಸ್ಥಾನದಿಂದ ಇಳಿಸಲು ಬಿಜೆಪಿ ಹೈಕಮಾಂಡ್‌ ಯೋಚಿಸಿರಬಹುದು. ಇದಕ್ಕಾಗಿ ಅವರನ್ನು ಬಂಗಾಳ ಅಥವಾ ಆಂಧ್ರದ ರಾಜ್ಯಪಾಲರನ್ನಾಗಿ ನೇಮಿಸಿ, ಅವರ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಕ್ಕೆ ಉಪಮುಖ್ಯಮಂತ್ರಿಯಾಗಿ ನೇಮಿಸುವ ಆಫರ್‌ ಅನ್ನೂ ಬಿಎಸ್‌ವೈಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಆದರೆ, ಅದಾವುದೂ ಬಿಎಸ್‌ವೈ ಅವರ ದೆಹಲಿ ಭೇಟಿಯ ಸಂದರ್ಭದಲ್ಲಿ ನಡೆದಿಲ್ಲ. ಹೀಗಾಗಿ ಮುಂದಿನ ಚುನಾವಣೆವರೆಗೂ ಯಡಿಯೂರಪ್ಪರನ್ನು ಸಿಎಂ ಹುದ್ದೆಯಲ್ಲಿ ಮುಂದುವರೆಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಪ್ರಜೆಗಳ ದುರಾದೃಷ್ಟ: ಪೂರ್ಣಪುಟದ ಜಾಹೀರಾತಿನಲ್ಲಿ ಆದಿತ್ಯನಾಥ್‌ ಮತ್ತು ಯಡಿಯೂರಪ್ಪ ತಮ್ಮ ಬಗ್ಗೆ ತಾವೇ ಹೆಮ್ಮೆ ಪಡುತ್ತಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights