‘ನಮ್ಮ ಅಮ್ಮ ಮಾಡೋ ಬಿಸಿ ಬಿಸಿ ಜೋಳದ ರೊಟ್ಟಿ ನನಗೆ ತುಂಬಾ ಇಷ್ಟ’ – ಸಿಎಂ!

ಸದಾ ಕೆಲಸದಲ್ಲಿ ನಿರತರಾಗಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಂಚ ಬಿಡುವಿನಲ್ಲಿ ಮಕ್ಕಳೊಂದಿಗೆ ಮಗುವಾಗಿರುವುದು ಕಾರ್ಯಕ್ರಮವೊಂದರಲ್ಲಿ ಕಂಡುಬಂದಿದೆ.

ಜೀ ಕನ್ನಡದ 15ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಿಎಂ ಮಕ್ಕಳು ಕೇಳುವ ಮುದ್ದುಮುದ್ದಾದ ಪ್ರಶ್ನೆಗಳಿಗೆ ಲವಲವಿಕೆಯಿಂದ ಉತ್ತರ ಕೊಟ್ಟಿದ್ದಾರೆ. ಬೊಮ್ಮಾಯಿ ಅವರ ಉತ್ತರಕ್ಕೆ ಕಾರ್ಯಕ್ರಮದಲ್ಲಿ ನೆರೆದವರೆಲ್ಲಾ ನಗಾಡಿದ್ದಾರೆ.

ಅಂಕಲ್​ ನಿಮ್ಮ ಅಮ್ಮ ಮಾಡುವ ಯಾವ ಅಡುಗೆ ನಿಮಗೆ ಹೆಚ್ಚು ಇಷ್ಟ? ಬಾಲಕಿಯೊಬ್ಬಳು ಕೇಳಿದ್ದಕ್ಕೆ ಸಿಎಂ, ‘ನಮ್ಮ ತಾಯಿ ಬಿಸಿಬಿಸಿ ಜೋಳದ ರೊಟ್ಟಿ ಮಾಡುತ್ತಿದ್ದರು. ಅದು ನನಗೆ ಬಹಳ ಇಷ್ಟ. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿಕೊಂಡು ತಿನ್ನಲು ಶುರುಮಾಡಿದರೆ ಲೆಕ್ಕವೇ ಇರುವುದಿಲ್ಲ. ಆದರೆ ಈಗ ನಮ್ಮ ತಾಯಿ ಇಲ್ಲ. ಈಗ ಯಾರೇ ಬಿಸಿ ರೊಟ್ಟಿ ಮಾಡಿದರೂ ನಮ್ಮ ತಾಯಿಯೇ ಮಾಡಿದ್ದಾರೆ ಎಂದುಕೊಂಡು ತಿನ್ನುತ್ತೇನೆ’ ಎಂದರು.

ಅಂಕಲ್​ ನೀವು ಯಾವಾಗಲೂ ಬ್ಯುಸಿ ಇರ್ತೀರಿ ಅಲ್ವಾ? ಮಕ್ಕಳಿಗೆ ಆನ್​ಲೈನ್​ ಕ್ಲಾಸ್​ ಹೇಳಿಕೊಡುತ್ತೀರಾ? ಎಂದು ಮತ್ತಬ್ಬರ ಪ್ರಶ್ನೆಗೆ ಸಿಎಂ, ‘ನೋಡು ಮರಿ, ನನಗೆ ಮೊಮ್ಮಗಳು ಇಲ್ಲ. ಆದರೆ ನೀವೆಲ್ಲರೂ ನನ್ನ ಮೊಮ್ಮಕ್ಕಳಿದ್ದಂತೆ. ಹಾಗಾಗಿ ನೀವು ಆನ್​ಲೈನ್​ಗೆ ಬಂದಾಗ ನಾನು ನಿಮಗೆ ಸಿಗುತ್ತೇನೆ. ನಿಮ್ಮನ್ನೆಲ್ಲ ನೋಡಿದ ಮೇಲೆ ನನಗೂ ಮೊಮ್ಮಕ್ಕಳು ಬೇಕು ಅನಿಸ್ತಾ ಇದೆ. ಇದನ್ನು ನನ್ನ ಮಗನಿಗೆ ಮನವರಿಕೆ ಮಾಡಿಸುತ್ತೇನೆ’ ಎಂದಿದ್ದಕ್ಕೆ ಕಾರ್ಯಕ್ರಮದಲ್ಲಿ ನೆರೆದವರೆಲ್ಲಾ ಬಿದ್ದು ನಗಾಡಿದ್ದಾರೆ.

ನಿಮ್ಮ ಫೇವರಿಟ್​ ಹೀರೋಯಿನ್​ ಯಾರು? ಎನ್ನುವ ಪ್ರಶ್ನೆಗೆ ಸಿಎಂ, ಇದು ಬಹಳ ಕಷ್ಟದ ಪ್ರಶ್ನೆ. ಯಾಕೆಂದರೆ ಬಹಳ ಜನ ಇದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗುತ್ತದೆ. ನನ್ನ ಆಲ್​ಟೈಮ್​ ಫೇವರಿಟ್​ ಹೀರೋಯಿನ್​ ಮಧುಬಾಲ. ಕನ್ನಡದಲ್ಲಿ ಹೇಳುವುದಾದರೆ, ನಮ್ಮ ಕಾಲದ ಟಾಪ್​ 3 ಹೀರೋಯಿನ್​ಗಳಾದ ಕಲ್ಪನಾ, ಜಯಂತಿ ಮತ್ತು ಭಾರತಿ ನನ್ನ ಫೇವರಿಟ್​. ಡಾ. ರಾಜ್​ಕುಮಾರ್​ ಅವರು ನನ್ನ ಆಲ್​ಟೈಮ್ ಫೇವರಿಟ್​ ಹೀರೋ ಎಂದಿದ್ದಾರೆ.

ನೀವು ಯಾವಾಗಲೂ ಮೆಲುಕು ಹಾಕುವ ನಿಮ್ಮ ಫೇವರಿಟ್​ ಹಾಡು ಯಾವುದು? ‘ಹುಟ್ಟಿದರೇ ಕನ್ನಡ ನಾಡಲ್​ ಹುಟ್ಟಬೇಕು..’ ಇದು ನನ್ನ ಫೇವರಿಟ್​. ಇನ್ನೊಂದು ಹೇಳಬೇಕೆಂದರೆ, ‘ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ..’ ಈ ಸಾಂಗ್​ ಕೂಡ ನನ್ನ ಫೇವರಿಟ್​ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights