ಪಾಲಿಕೆ ಫಲಿತಾಂಶ : ಕೊರೊನಾ ನಿಯಮ ಉಲ್ಲಂಘಿಸಿದ ಜನ – ಕಣ್ಮುಚ್ಚಿ ಕುಳಿತ ಪೊಲೀಸರು ಮತ್ತು ಮಾಧ್ಯಮ!
ಮೂರು ನಗರಗಳ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬೆಳಗಾವಿಯಲ್ಲಿ ಪಕ್ಷೇತರರು ಮತ್ತು ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಕರ್ತರ ಸಂಭ್ರಮಾಚರಣೆ ಮಗಿಲು ಮುಟ್ಟಿದೆ. ಕೊರೊನಾ ನಿಯಮಗಳನ್ನು ಮರೆತು ಬಣ್ಣದೋಕುಳಿ ಆಡಿ ಸಂಭ್ರಮಿಸುತ್ತಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಹೋದಲ್ಲಿ ಬಂದಲ್ಲಿ, ಹೀಗೆ ಮನೆಯಿಂದ ಹೊರ ಬಂದ್ರೆ ಸಾಕು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇದನ್ನು ನಾವು ಹೇಳ್ತಾಯಿಲ್ಲ. ಇದು ಸರ್ಕಾರದ ನಿಯಮ. ಇದೇ ಸರ್ಕಾರ ಜನ ಗುಂಪುಗೂಡಿ ಸಂಭ್ರಮಿಸುವುದನ್ನ ನೋಡಿಕೊಂಡು ಕುಳಿತಿದೆ.
ಕೊರೊನಾ ನಿಯಮ ಪಾಲಿಸದೇ ಇದ್ದಲ್ಲಿ ಜನಸಾಮಾನ್ಯರು ನಿಂತ ಜಾಗದಲ್ಲೇ ಕಡ್ಡಾಯವಾಗಿ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಆದ್ರೆ ಇಂದು 3 ನಗರಗಳ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದಿಂದಾಗಿ ಗೆಲುವು ಸಾಧಿಸಿದ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಒಂದೆಡೆ ಸೇರಿ ಮಾಸ್ಕ್ ಇಲ್ಲದೇ ಸಂಭ್ರಮಿಸುತ್ತಿರುವುದನ್ನ ಕೇಳುವವರು ಯಾರೂ ಇಲ್ಲ.
ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು 58 ಕ್ಷೇತ್ರಗಳ ಪೈಕಿ 30 ವಾರ್ಡುಗಳಲ್ಲಿ ಬಿಜೆಪಿ, 7 ವಾರ್ಡುಗಳಲ್ಲಿ ಕಾಂಗ್ರೆಸ್ ಹಾಗೂ 18 ವಾರ್ಡುಗಳಲ್ಲಿ ಪಕ್ಷೇತರರು ಮುನ್ನಡೆ ಸಾಧಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಒಟ್ಟು 82 ವಾರ್ಡ್ ಗಳ ಪೈಕಿ 21ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್, ಒಂದರಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ಕಲಬುರಗಿಯ 5 ವಾರ್ಡ್ ಗಳಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಈ ಪೈಕಿ 3ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಮತ್ತು 1ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಹೀಗೆ ಗೆಲುವಿನ ಹಾದಿಯಲ್ಲಿರುವ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಬಣ್ಣದೋಕುಳಿಯನ್ನೇ ಆಡುತ್ತಿದ್ದಾರೆ. ಮಾಸ್ಕ್ ಇಲ್ಲದೇ ಪರಸ್ಪರ ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸುತ್ತಿದ್ದಾರೆ. ಪೊಲೀಸರು ಇಂಥಹ ಗುಂಪುಗಳ ನಡುವೆಯೇ ಇದ್ದರೂ ಪ್ರಶ್ನೆ ಮಾಡದೇ ಇರುವುದು, ಕಾರ್ಯಕರ್ತರ ಗುಂಪನ್ನ ಚದುರಿಸದೇ ಇರುವುದು ಪೊಲೀಸರ ನಿರ್ಲಕ್ಷ್ಯತೆಯನ್ನು ಎತ್ತಿ ತೋರಿಸುತ್ತಿದೆ. ಜನಸಾಮಾನ್ಯರಿಗೆ ಒಂದು ನ್ಯಾಯ ಉಳ್ಳವರಿಗೇ ಒಂದು ನ್ಯಾಯಾನಾ ಎನ್ನುವ ಪ್ರಶ್ನೆ ಪದೇ ಪದೇ ಮುನ್ನಲೆಗೆ ಬರುತ್ತಿದೆ.
ಈ ವಿಜಯಾತ್ರೆಯನ್ನು ನೋಡಿಕೊಂಡು ಕಣ್ಣುಮುಚ್ಚಿಕೊಂಡು ಕುಳಿತಿರುವ ಅಧಿಕಾರಿಗಳು ಇದನ್ನು ತಡೆಯುವಂತ ಕೆಲಸ ಮಾಡುತ್ತಿಲ್ಲ. ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸದೇ ಇದ್ದರೆ ಮಾತ್ರ ಕೊರೊನಾ ಬರುತ್ತಾ..? ಅಥವಾ ನೈಟ್ ಕರ್ಫ್ಯೂ ಮಾಡಿ 9 ಗಂಟೆಗೆ ಅಂಗಡಿ ಮುಗ್ಗಟ್ಟುಗಳನ್ನು ಕ್ಲೋಸ್ ಮಾಡಿದ್ರೆ ಮಾತ್ರ ಕೊರೊನಾ ಹೋಗುತ್ತಾ..? ದಿನಬೆಳಗಾದರೆ ಉಸಿರಾಡಲು ಕಷ್ಟವಾದರೂ ಮೂಗು ಮುಚ್ಚಿಕೊಂಡು ಎಷ್ಟೋ ಜನ ಕೊರೊನಾ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸುತ್ತಿದ್ದಾರೆ. ಆದ್ರೆ ಹೀಗೆ ಕಣ್ಣೆದುರು ಸಂಭ್ರಮಿಸುವ ಜನರನ್ನು ಯಾಕೆ ಯಾರೂ ಪ್ರಶ್ನೆ ಮಾಡೋದಿಲ್ಲ? ಇದು ಪೊಲೀಸರ ಅಸಹಾಯಕತೆಯೋ..? ಅಥವಾ ಉಳ್ಳವರು ಏನನ್ನಾದರೂ ಮಾಡಬಹುದು ಎನ್ನುವ ಮೊಂಡುತನವೋ..?
ಇವತ್ತು ಪಾಲಿಕೆ ಫಲಿತಾಂಶವಿದೆ. ಜನ ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆನ್ನುವ ವಿಚಾರ ಪೊಲೀಸರಿಗೆ ಗೊತ್ತಿರೋದಿಲ್ವಾ..? ಗಣೇಶ ಹಬ್ಬಕ್ಕೆ ಜನ ಸೇರ್ತಾರೆ ಎನ್ನುವ ಮಾಹಿತಿ ಗೊತ್ತಿರುವ ಜನ ಪ್ರತಿನಿಧಿಗಳಿಗೆ ಪಾಲಿಕೆ ಫಲಿತಾಂಶದಂದು ಜನ ಸೇರ್ತಾರೆ ಎನ್ನುವ ಮಾಹಿತಿ ಇಲ್ವಾ..? ಹಬ್ಬದ ಆಚರಣೆಗೆ ನೂರೆಂಟು ನಿಯಮಗಳನ್ನು ಪಾಲಿಸಬೇಕು. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುವವರಿಗೆ ಕೊರೊನಾ ನಿಯಮ ಅನ್ವಯವಾಗುವುದಿಲ್ಲ. ಜನರ ಸಂಭ್ರಮವನ್ನೇ ಸಂಭ್ರಮಿಸಿ ತೋರಿಸುವ ಮಾಧ್ಯಮಗಳು ಸ್ಥಳೀಯ ಅಧಿಕಾರಿಗಳಿಗೋ, ಪೊಲೀಸರನ್ನು ಸಂಪರ್ಕಿಸಿ ಯಾಕಿಂಥ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ ತಡೆಯುವಂತ ಪ್ರಯತ್ನ ಮಾಡುವುದಿಲ್ಲವೋ ಆ ದೇವರೇ ಬಲ್ಲ.
ಪಾಲಿಕೆ ಫಲಿತಾಂಶದ ಬಗ್ಗೆ ಜನನಾಯಕರಿಗೆ ಕರೆ ಮಾಡಿ ಅಭಿಪ್ರಾಯ ಕೇಳುವ ಬದಲು ಕೊರೊನಾ ನಿಯಮ ನೀವ್ಯಾಕೆ ಪಾಲಿಸ್ತಾಯಿಲ್ಲ…? ಅದನ್ನು ಈ ಕೂಡಲೆ ತಡೆಯಬೇಕು ಎನ್ನುವ ಏರು ಧ್ವನಿ ಯಾಕೆ ಮಾದ್ಯಮಗಳಿಗಿಲ್ಲವೋ ಗೊತ್ತಿಲ್ಲ. ಪ್ರತಿಯೊಬ್ಬ ಜನನಾಯಕರಿಗೆ ಕರೆ ಮಾಡಿ ಸುಖಾಸುಮ್ಮನೆ ಮಾತನಾಡುವುದಕ್ಕಿಂತ ಸ್ಥಳೀಯ ಪೊಲೀಸರಿಗೋ, ಜಿಲ್ಲಾಧಿಕಾರಿಗಳಿಗೋ ಕರೆ ಮಾಡಿ ಜನರ ಗುಂಪು ಚದರಿಸುವಂತ ಕಾರ್ಯ ಆಗಿದ್ದಂತೂ ಕಾಣಲೇ ಇಲ್ಲ.
ಚುನಾವಣೆ ಫಲಿತಾಂಶ, ಆಡಳಿತಾರೂಢ ಪಕ್ಷದ ಸಭೆ ಸಮಾರಂಭಗಳು ಅಂತ ಬಂಗಾದ ಕೊರೊನಾ ನಿಯಮಗಳು ಉಲ್ಲಂಘನೆಯಾದರೂ ಸರ್ಕಾರವಾಗಲೀ, ಮಾಧ್ಯಮಗಳಾಲೀ, ಪೊಲೀಸರಾಗಲೀ ಪ್ರಶ್ನೆ ಮಾಡದೇ ಇರುವುದು, ಕ್ರಮ ಕೈಗೊಳ್ಳದೇ ಇರುವುದು ಜಾಣ-ಕುರುಡುತನವಲ್ಲದೆ ಮತ್ತೇನೂ ಅಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
– Sunita Bhandari

