ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಯುವಕನ ಶವ ಪತ್ತೆ : ಮೇಲ್ಜಾತಿ ಕೈದಿಗಳ ಮೇಲೆ ಕಿರುಕುಳದ ಆರೋಪ!
ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಯುವಕನ ದೇಹ ಪತ್ತೆಯಾಗಿದ್ದು ಕುಟುಂಬ ಜಾತಿ ಕಿರುಕುಳದ ಆರೋಪ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ನಡೆದಿದೆ.
16 ವರ್ಷದ ದಲಿತ ಬಾಲಕನ ಶವ ಬಾತ್ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕ ಸಾವಿಗೂ ಮುನ್ನ ಆತನನ್ನು ಬಾಲಾಪರಾಧಿ ಮನೆಯ ಮೇಲ್ಜಾತಿಯ ಕೈದಿಗಳು ಕ್ರೂರವಾಗಿ ಥಳಿಸಿದ್ದಾರೆ ಎಂದು ಆತನ ಕುಟುಂಬ ಆರೋಪಿಸಿದೆ.
ಸಾವನ್ನಪ್ಪಿದ ಯುವಕನನ್ನು ಮೇಲ್ಜಾತಿಯ ಹುಡುಗಿಯನ್ನು ಅಪಹರಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಾಲಾಪರಾಧಿಯಾಗಿದ್ದರಿಂದ ಈತನ್ನು ಜುಲೈ 30 ರಂದು ಜುವೆನೈಲ್ ಹೋಂನಲ್ಲಿ (ಬಾಲಾಪರಾಧಿಗಳ ಮನೆ) ಮೇಲ್ಜಾತಿಯ ಕೈದಿಗಳೊಂದಿಗೆ ಇರಿಸಲಾಗಿತ್ತು. ಆದರಿಲ್ಲಿ ಮೇಲ್ಜಾತಿಯ ಕೈದಿಗಳು ಯುವಕನನ್ನು ಕ್ರೂರವಾಗಿ ಹಿಂಸಿಸಿ ಕೊಂದಿದ್ದಾರೆ ಎಂದು ಕುಟುಂಬವು ಆರೋಪಿಸಿದೆ.
“ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ನನ್ನ ಮಗ ನೇಣು ಬಿಗಿದುಕೊಂಡಿದ್ದಾನೆ ಎಂದು ನನಗೆ ಕರೆ ಬಂತು. ಆದರೆ ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲ್ಲಲ್ಪಟ್ಟಿದ್ದಾನೆ” ಎಂದು ಬಾಲಕನ ತಂದೆ ಪೋಲಿಸ್ ದೂರಿನಲ್ಲಿ ತಿಳಿಸಿದ್ದಾರೆ.
ಬಾಲಕನ ತಂದೆ, “ನಾನು ಅವನನ್ನು ಎರಡು ದಿನಗಳ ಮುಂಚೆ ಭೇಟಿಯಾಗಿದ್ದೆ. ಅವನು ತುಂಬಾ ನೋವಿನಿಂದ ಬಳಲುತ್ತಿದ್ದ. ಜೊತೆಗೆ ಅಳುತ್ತಾ ತನ್ನನ್ನು ಹೊರಗೆ ಕರೆದುಕೊಂಡು ಹೋಗುವಂತೆ ಕೇಳಿದ್ದನು. ಮೇಲ್ಜಾತಿಯ ಕೈದಿಗಳು ಬಾಲಾಪರಾಧೀ ಸಿಬ್ಬಂದಿಯೊಂದಿಗೆ ಶಾಮೀಲಾಗಿ ತನ್ನ ಮಗನನ್ನು ಕ್ರೂರವಾಗಿ ಥಳಿಸುತ್ತಿದ್ದರು. ಹೀಗಾಗಿ ನನ್ನ ಮಗನ ಪಕ್ಕೆಲುಬು ಮುರಿದಿದೆ. ಅವನಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಅವನ ಸೊಂಟದ ಮೂಳೆ ಕೂಡ ಗಾಯಗೊಂಡಿದೆ’ ಎಂದು ಯುವಕನ ತಂದೆ ಹೇಳಿದ್ದನು.
ಆಗ ನಾನು ಅವನಿಗೆ ‘ನಾನು ಏನು ಮಾಡಲಿ? ನಾನು ನಿನ್ನನ್ನು ಹೊರಗೆ ತರಲು ತುಂಬಾ ಪ್ರಯತ್ನಿಸುತ್ತಿದ್ದೇನೆ’ ಎಂದು ಹೇಳಿದೆ. ಅಷ್ಟರಲ್ಲಾಗಲೇ ಅವನು ಸತ್ತಿದ್ದಾನೆ ಎಂದು ತಂದೆ ತಮ್ಮ ನೋವು ತೋಡಿಕೊಂಡಿದ್ದಾರೆ. ಮೇಲ್ಜಾತಿಯ ಕೈದಿಗಳು ಆತನ ಮೇಲೆ ಜಾತಿ ನಿಂದನೆಯನ್ನು ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ಹುಡುಗಿಯ ಪೋಷಕರ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿಯೂ ಮಗನಿಗೆ ಭೇಟಿ ನೀಡಿದಾಗಲೆಲ್ಲಾ ಆತನಿಗೆ ಸಹಾಯ ಮಾಡುವಂತೆ ಬಾಲಕ ವಿನಂತಿಸಿದ್ದ ಎಂದು ಆತನ ತಂದೆ ಹೇಳಿದರು. ನಾನು ಮಗನ ಮೇಲೆ ಹಲ್ಲೆಯ ಬಗ್ಗೆ ದೂರು ನೀಡಲು ಪ್ರಯತ್ನಿಸಿದಾಗಲೆಲ್ಲಾ ಹುಡುಗನನ್ನು ಹೆಚ್ಚು ಥಳಿಸಲಾಗುತ್ತಿತ್ತು. ಹೀಗಾಗಿ ಆಗಸ್ಟ್ ಮಧ್ಯದಲ್ಲಿ ಹುಡುಗ ಮತ್ತು ಇತರ ನಾಲ್ವರೊಂದಿಗೆ ಬಾಲಾಪರಾಧಿ ಮನೆಯಿಂದ ಓಡಿಹೋಗಲು ಪ್ರಯತ್ನಿಸಿದನು. ಇದಕ್ಕೆ ಕಾರಣ ಆತನನ್ನು ನಿರಂತರವಾಗಿ ಹಿಂಸಿಸಲಾಗುತ್ತಿತ್ತು ಎಂದು ಅವರ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಮಗನಿಗೆ ನ್ಯಾಯ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ತಂದೆ ಲಿಖಿತ ಅರ್ಜಿಯನ್ನು ಸಲ್ಲಿಸಿದ್ದಾರೆ. ತಂದೆಯ ಪೊಲೀಸ್ ದೂರಿನ ಆಧಾರದ ಮೇಲೆ ಎಂಟು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಐದು ಕೈದಿಗಳು, ಹುಡುಗಿಯ ಪೋಷಕರು ಮತ್ತು ಆಕೆಯ ಚಿಕ್ಕಪ್ಪನ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪರೀಕ್ಷಾ ಅಧಿಕಾರಿ ನಾಗೇಂದರ್ ಪಾಲ್ ಸಿಂಗ್ ಪ್ರಕಾರ, ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

