ನಾನೇ ಪೂರ್ಣಾವಧಿ ಮುಖ್ಯಸ್ಥೆ: ಜಿ-23 ನಾಯಕರಿಗೆ ಸೋನಿಯಾ ಗಾಂಧಿ ಖಡಕ್ ಉತ್ತರ!
ಕಾಂಗ್ರೆಸ್ ನಾಯಕತ್ವದ ವಿಚಾರ ಆಗಾಗ್ಗೆ ಮುನ್ನಲೆಗೆ ಬರುತ್ತಲೇ ಇದೆ. ಇದೀಗ 2022ರಲ್ಲಿ ಪ್ರಮುಖ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮತ್ತೆ ಕಾಂಗ್ರೆಸ್ ಅಧ್ಯಕ್ಷರ ವಿಚಾರ ಚರ್ಚೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆದಿದ್ದು, “ನಾನೇ ಪೂರ್ಣಾವಧಿ ಅಧ್ಯಕ್ಷೆ” ಎಂದು ಸಭೆಯಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆ ಬಳಿಕ ರಾಹುಲ್ ಗಾಂಧಿ ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸೋನಿಯಾ ಗಾಂಧಿಯವರು ಮಧ್ಯಂತರ ಅಧ್ಯಕ್ಷರಾಗಿ ಮುಂದುವರಿದ್ದರು. ಪೂರ್ಣಾವಧಿ ಅಧ್ಯಕ್ಷರ ಆಯ್ಕೆಗೆ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿಯವರು, ಕಾಂಗ್ರೆಸ್ನ ಪೂರ್ಣಾವಧಿ ಅಧ್ಯಕ್ಷರಾಗಿ ಮುಂದುವರಿಯುವುದಾಗಿ ತಿಳಿಸಿದರು.
“ಪಕ್ಷದ ಪುನರುಜ್ಜೀವನವು ಏಕತೆ, ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಮೇಲೆ ಅವಲಂಬಿತವಾಗಿದೆ” ಎಂದು ಸೋನಿಯಾ ಗಾಂಧಿ ಎಚ್ಚರಿಸಿದರು.
“ಇಡೀ ಸಂಘಟನೆಯು ಕಾಂಗ್ರೆಸ್ ಪಕ್ಷದ ಪುನರುಜ್ಜೀವನವನ್ನು ಬಯಸುತ್ತದೆ” ಎಂದು ಸೋನಿಯಾ ಗಾಂಧಿ ಹೇಳಿದರು. “ನಾನು ಯಾವಾಗಲೂ ಪ್ರಾಮಾಣಿಕತೆಯನ್ನು ಮೆಚ್ಚುತ್ತೇನೆ. ಮಾಧ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ. ಆದ್ದರಿಂದ, ನಾವೆಲ್ಲರೂ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಯನ್ನು ಮಾಡೋಣ. ಆದರೆ ಈ ಕೊಠಡಿಯ ನಾಲ್ಕು ಗೋಡೆಗಳ ಹೊರಗೆ ಸಂವಹನ ಮಾಡಬೇಕಾಗಿದದ್ದು, ಕಾರ್ಯಕಾರಿ ಸಮಿತಿಯ ಸಾಮೂಹಿಕ ನಿರ್ಧಾರವಾಗಿರಲಿದೆ” ಎಂದಿದ್ದಾರೆ.
ಜಿ-23 ಎಂದೇ ಖ್ಯಾತವಾಗಿರುವ 23 ನಾಯಕರನ್ನು ಸೋನಿಯಾ ಗಾಂಧಿ ಉಲ್ಲೇಖಿಸಿದರು. ಈ ನಾಯಕರು ಪಕ್ಷದ ಸಂಘಟನೆಯ ಸಂಪೂರ್ಣ ಪರಿಷ್ಕರಣೆಗೆ ಒತ್ತಾಯಿಸಿ ಕಳೆದ ವರ್ಷ ಆಗಸ್ಟ್ನಲ್ಲಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಪಕ್ಷಕ್ಕೆ ಸಕ್ರಿಯ ಅಧ್ಯಕ್ಷರ ಅಗತ್ಯವಿದೆ ಎಂದು ಜಿ -23 ನಾಯಕರು ಪದೇ ಪದೇ ಹೇಳಿದ್ದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಘಡದ ಮುಖ್ಯಮಂತ್ರಿ ಭೂಪೇಶ್ ಭಾಗೇಲ್, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಚನ್ನಿ, ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮ ಹಾಜರಿದ್ದರು.
ಇದನ್ನೂ ಓದಿ: ಪೂಜೆಗೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಕಾರು; ನಾಲ್ವರು ಸಾವು; 20 ಜನರ ಸ್ಥಿತಿ ಗಂಭೀರ

