MSP ಕಾಯಿದೆಯಾಗದೆ- ವಿದ್ಯುತ್ ಮಸೂದೆ ರದ್ದಾಗದೇ ರೈತ ವಿಜಯ ಅಪೂರ್ಣ!

ಭಾರತದ ರೈತರ ಅದರಲ್ಲೂ ಪಂಜಾಬಿನ ಸಿಖ್ ರೈತಾಪಿಯ ಹಾಗೂ ಉತ್ತರ ಭಾರತದ ರೈತಾಪಿಯ ಧೀರೋದಾತ್ತ ಹೋರಾಟಕ್ಕೆ  ಮಣಿದು ಮೂರು ರೈತ ವಿರೋಧಿ-ದೇಶ ವಿರೋಧಿ-ಕಾರ್ಪೊರೇಟ್ ಪರ ನೀತಿಗಳನ್ನು ಮೋದಿ ಸರ್ಕಾರ ವಾಪಸ್ ತೆಗೆದುಕೊಂಡು ದೊಡ್ಡ ರಾಜಕೀಯ ಮುಖಭಂಗ ಅನುಭವಿಸುತ್ತಿದೆ.

 ಹೀಗಾಗಿಯೇ ಮೋದಿ ಸರ್ಕಾರ ಮಸೂದೆ ವಾಪಸಾತಿಯ ಬಗ್ಗೆ ಯಾವುದೇ ಚರ್ಚೆ ಗೈ ಅವಕಾಶ ಕೊಡದ ಹೇಡಿತನವನ್ನು ಪ್ರದರ್ಶಿಸಿದೆ. ಮೋದಿಯ ಭಟ್ಟಂಗಿ ಪಡೆಗಳು ಕಾಯಿದೆಯ ವಾಪಸಾತಿಗೆ ಇಲ್ಲದ ದೇಶ ಭದ್ರತೆಯ ಕಾರಣಗಳನ್ನು ಮುಂದೊಡ್ಡಿ ಮೋದಿಯನ್ನು ಮುತ್ಸದ್ಧಿಯನ್ನಾಗಿಯೂ ಗೆದ್ದ ರೈತರನ್ನು ದೇಶದ್ರೋಹಿಗಳನ್ನಾಗಿಯೂ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮೋದಿ ಸರ್ಕಾರ ಮಂಡಿಸಿರುವ ಕಾಯಿದೆ ವಾಪಸಾತಿ ಮಸೂದೆಯಲ್ಲೂ ಇದೇ ದುರಹಂಕಾರವನ್ನು ಮೋದಿ ಸರ್ಕಾರ ಪ್ರದರ್ಶಿಸಿದೆ. ರೈತ ವಿಜಯಕ್ಕೆ ನೈತಿಕ ಹಿರಿಮೆಯನ್ನು ನಿರಾಕರಿಸುತ್ತಾ, ತಾನು ಮಾಡಿದ ಕಾರ್ಪೊರೇಟ್ ಪಾತಕಕ್ಕೆ ವಿಫಲ ದೇಶರಕ್ಷಣೆಯ ಮುಖವಾಡ ತೊಟ್ಟು ರಾಜಕೀಯ ಗೆಲುವನ್ನಾಗಿಸುವ ಕುತಂತ್ರವನ್ನು ಮಾಡುತ್ತಿದೆ.

ಈ ಮೂರೂ ಮಸೊದೆಗಳ ಜೊತೆಜೊತೆಗೆ ರೈತ ಹೋರಾಟವು ಮುಂದಿಟ್ಟ ಇನ್ನೆರೆಡು ಪ್ರಮುಖ ಆಗ್ರಹಳಾದ MSP ಕಾಯಿದೆಕರಣ ಮತ್ತು ವಿದ್ಯುತ್ ಮಸೂದೆ ವಾಪಸಾತಿ ವಿಷಯದ ಬಗ್ಗೆಯೂ ಮೋದಿ ಸರ್ಕಾರ ಮತ್ತವರ ಲಾಲಿ ಮಾಧ್ಯಮಗಳು ರೈತರನ್ನು ವಿಲನ್ ಮಾಡಹೊರಟಿವೆ. ಮೂರು ಕಾಯಿದೆಗಳನ್ನು ಸರ್ಕಾರ ವಾಪಸ್ ತೆಗೆದುಕೊಳ್ಳುತ್ತಿರುವುದರಿಂದ ರೈತರು ಮನೆಗೆ ಹೋಗಬೇಕೇ ವಿನಾ ಇನ್ಯಾವುದೇ ಬೇಡಿಕೆಗಳನ್ನು  ಮುಂದಿಡಬಾರದೆಂಬ ರೈತ ವಿರೋಧಿ ಪ್ರಚಾರವನ್ನು ಮಾಧ್ಯಮಗಳು ಮಾಡುತ್ತಿದ್ದರೆ, ಮೋದಿ ಸರ್ಕಾರ MSP ಯನ್ನು ಪಾರದರ್ಶಕಗೊಳಿಸುವ ಬಗ್ಗೆ ಒಂದು ಸಮಿತಿ ರಚಿಸಿಸುವ ತಂತ್ರ ಮಾಡಿ ರೈತರನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ. ಮತ್ತೊಂದು ಕಡೆ 2020ರ ಡಿಸೆಂಬರ್ ನಲ್ಲಿ ರೈತ ನಾಯಕರೊಂದಿಗೆ ನಡೆದ ಮಾತುಕತೆಯಲ್ಲಿ ವಿದ್ಯುತ್ ಮಸೂದೆಯನ್ನು ವಾಪಸ್ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದರೂ ಅಧಿವೇಶನದಲ್ಲಿ ಅದನ್ನು ಮಂಡಿಸಲು ಮುಂದಾಗಿದೆ.

ಆದ್ದರಿಂದಲೇ ರೈತ ಚಳವಳಿಗೆ ನಾಯಕತ್ವ ನೀಡುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಬುದ್ಧ ನಾಯಕತ್ವ, MSP ಕಾಯಿದೆಯಾಗುವ ಆಗ್ರಹದ ಬಗ್ಗೆ  ಪ್ರಧಾನಿ ಸಂಸತ್ತಿನಲ್ಲಿ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿ ಸ್ಪಷ್ಟವಾದ ಘೋಷಣೆ ಮಾಡಬೇಕೆಂದು ಆಗ್ರಹಿಸಿದೆ. ಹಾಗೆಯೇ ವಿದ್ಯುತ್ ಮಸೂದೆ ವಾಪಸ್ ತೆಗೆದುಕೊಳ್ಳದೇ, ಹಾಗೂ ಲಕೀಂಪುರ್ ಖೆರಿಯಲ್ಲಿ ರೈತರ ಕೊಲೆಗಳಿಗೆ ನೇರ ಕಾರಣನಾದ ಕೇಂದ್ರ ಮಂತ್ರಿ ಅಜಯ್ ಮಿಶ್ರಾನ ರಾಜೀನಾಮೆ, ರೈತರ ಮೇಲಿನ ಕೇಸುಗಳ ವಾಪಾಸಾತಿ ಇನ್ನಿತರ ನಾಲ್ಕು ಬೇಡಿಕೆಗಳ ಬಗ್ಗೆ ಸರ್ಕಾರವು ಖಚಿತವಾದ ಮತ್ತು ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳದೆ ಹೋರಾಟವನ್ನು ಹಿಂತೆಗೆದುಕೊಳ್ಳುವುದಿಲ್ಲ, ಮತ್ತು ಗಡಿಗಳಿಂದ ಹಿಂತಿರುಗುವುದಿಲ್ಲ ಎಂದು ಘೋಷಿಸಿದೆ. ಮತ್ತು ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಡಿಸೆಂಬರ್ 4 ರ ಗಡುವನ್ನು ವಿಧಿಸಿದೆ.

ಆದರೆ MSP ಕಾಯಿದೆಕರಣ ಮತ್ತು ವಿದ್ಯುತ್ ಮಸೂದೆಯ ವಾಪಸಾತಿ ಆಗ್ರಹಗಳು ಹೇಗೆ ಈ ದೇಶದ ರೈತರ ಮಾತ್ರವಲ್ಲ ಇಡೀ ದೇಶದ ಗ್ರಾಮೀಣ ಹಾಗೂ ನಗರದ ಎಲ್ಲಾ ಬಡ ಮತ್ತು ಮಧ್ಯಮ ವರ್ಗದ ಹಿತಾಸಕ್ತಿಯ ಪರವಾಗಿದೆ ಎಂಬುದಾಗಲೀ, ಅದಕ್ಕೆ ತದ್ವಿರುದ್ಧವಾಗಿ MSP ರದ್ದು ಮತ್ತು ಹೊಸ ವಿದ್ಯುತ್ ಮಸೂದೆಗಳ ಜಾರಿ ಹೇಗೆ ಕಾರ್ಪೊರೇಟ್ ಹಿತಾಸಕ್ತಿಯ ಪರವಾಗಿದ್ದು ದೇಶದ್ರೋಹಿಯಾಗಿದೆಯೆಂಬುದಾಗಲೀ ಹೆಚ್ಚಿನ ಜನರಿಗೆ ತಿಳಿದಿಲ್ಲ.

*MSP – ಶಾಸನವಾಗದೆ ಕನಿಷ್ಟ ಬೆಂಬಲ ಬೆಲೆ ಕವಚವಾಗುವುದಿಲ್ಲ!*

ರೈತರ ಅಸಹಾಯಕತೆಯನ್ನು ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ದುರುಪಯೋಗಪಡಿಸಕೊಳ್ಳಬಾರದೆಂಬ ಉದ್ದೇಶದಿಂದಲೇ ಸರ್ಕಾರ 1965ರಲ್ಲಿ ಒಂದು ಸರ್ಕಾರೀ ಆದೇಶದ ಮೂಲಕ MSP ವ್ಯವಸ್ಥೆಯನ್ನು ಜಾರಿಗೆ ಮಾಡಿತು.

ಆಗ ಭಾರತ ದೊಡ್ಡ ಆಹಾರದ ಕೊರತೆಯನ್ನು ಎದುರಿಸುತ್ತಿದ್ದರಿಂದ ಭಾರತದ ಸರ್ಕಾರ ಹಸಿರು ಕ್ರಾಂತಿಯೆಂಬ ಬಂಡವಾಳಶಾಹಿ ಕೃಷಿಯನ್ನು ವಿಶೇಷವಾಗಿ ಪಂಜಾಬ್, ಹರ್ಯಾಣ, ಉ.ಪ್ರದೇಶಗಳ ನೀರಾವರಿ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಿತು. ರೈತರು ಸ್ವ ಇಚ್ಚೆಯಿಂದ ಈ ಕೃಷಿ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ರೈತರು ಬೆಳೆದಿದ್ದ ಎಲ್ಲವನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ ಸರ್ಕಾರವೇ ಖರೀದಿಸುವ ಆಶ್ವಾಸನೆಯನ್ನು ನೀಡಿತು. ಹೀಗೆ ಜಾರಿಯಾದ MSP ವ್ಯವಸ್ಥೆಯು ಒಂದು ಪ್ರೋತ್ಸಾಹಕರ ಹಾಗೂ ಆಶ್ವಾಸನೆಯ ರೂಪದ ಸರ್ಕಾರೀ ಕ್ರಮವಾಗಿತ್ತೇ ವಿನಾ ಸರ್ಕಾರಕ್ಕಾಗಲೀ ಅಥವಾ ಮರುಕಟ್ಟೆಗಾಗಲೀ  ಕಡ್ಡಾಯಗೊಳಿಸುವ ಶಾಸನವಾಗಿರಲಿಲ್ಲ.

ಪ್ರಾರಂಭದಲ್ಲಿ ಕೇವಲ ಭತ್ತ, ಮತ್ತು ಗೋಧಿಗೆ ಸೀಮಿತವಾಗಿದ್ದ ಈ ವ್ಯವಸ್ಥೆ ನಿಧಾನವಾಗಿ ರೈತರು ಬೆಳೆಯುವ 23 ಬೆಳಗಳಿಗೆ ವಿಸ್ತರಿಸಿತು, ಪ್ರತಿವರ್ಷ ಕೇಂದ್ರ ಸರ್ಕಾರದಡಿಯಲ್ಲಿರುವ  Commission on Agricultural Costs & Prices (CACP) -ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಆದರೆ ಇದು ಶಾಸನವಲ್ಲವಾದ್ದರಿಂದ ಆ ಬೆಲೆ ಸಿಗಬೇಕೆಂದರೆ ಸರ್ಕಾರೀ ಏಜೆನ್ಸಿಗಳು ಖರೀದಿ ಮಾಡಬೇಕು. ಖಾಸಗಿ ವ್ಯಾಪಾರಿಗಳು ಏನಿಲ್ಲವೆಂದರೂ ಘೋಷಿತ MSP ದರಕ್ಕಿಂತ ಶೇ.15-40 ರಷ್ಟು ಕಡಿಮೆ ಬೆಲೆಯನ್ನು ಮಾತ್ರ ರೈತರಿಗೆ ನೀಡಿ ಖರೀದಿಸುತ್ತಾರೆ ಮತ್ತು  ಅದನ್ನು ದುಪ್ಪಟ್ಟು ಬೆಲೆಗೆ ಮಾರಿಕೊಳ್ಳುತ್ತಾರೆ.

MSP ವ್ಯವಸ್ಥೆಯಲ್ಲಿ ಸರ್ಕಾರವು ಪ್ರಧಾನವಾಗಿ ಪಂಜಾಬ್, ಹರ್ಯಾಣಗಳಲ್ಲಿ ಅಲ್ಲಿನ APMC ಗಳ ಮೂಲಕ ರೈತರು ಬೆಳೆದ ಶೇ. 90 ರಷ್ಟು ಭತ್ತ ಹಾಗೂ ಗೋಧಿಯನ್ನು MSP ಬೆಲೆಯಲ್ಲಿ ಖರೀದಿ ಮಾಡುತ್ತಿತ್ತು. ಹೀಗಾಗಿ APMC ಮತ್ತು  MSP ವ್ಯವಸ್ಥೆಯು ಅಲ್ಲಿನ ಬಹುಪಾಲು ಸಣ್ಣ ಹಾಗೂ ಮಧ್ಯಮ ರೈತಾಪಿಗೂ ಪ್ರಧಾನವಾದ ಜೀವನಾಧಾರವೇ ಆಗಿದೆ.APMC-MSP  ವ್ಯವಸ್ಥೆ ರದ್ದಾದರೆ ಇಡೀ ರೈತಾಪಿ ಬದುಕು ಬೀದಿಪಾಲಾಗುತ್ತದೆ.

2012 ರ ನಂತರ ಆಗಿನ  UPA ಸರ್ಕಾರ ಜಾರಿಗೆ ತಂದ Decentralised Procurement Policy (DPP) ನೀತಿಯನುಸಾರ ಈ ವ್ಯವಸ್ಥೆಯ ಲಾಭ ತೆಲಂಗಾಣ, ಆಂಧ್ರಪ್ರದೇಶ, ಚತ್ತೀಸ್‌ಘಡ ಹಾಗೂ ಒರಿಸ್ಸಾ ದಂತ ರಾಜ್ಯಗಳಿಗೆ ವಿಸ್ತರಿಸಿತು. ಆದರೆ ಈಗಲೂ ಈ ವ್ಯವಸ್ಥೆಯ ಸಂಪೂರ್ಣ ಲಾಭ  ಎಲ್ಲಾ ರಾಜ್ಯಗಳ ರೈತರಿಗೂ ಸರಿಸಮನಾಗಿಯೂ ಒದಗುತ್ತಿಲ್ಲ ಹಾಗೂ ಪ್ರಧಾನವಾಗಿ ಭತ್ತ, ಗೋಧಿ ಹಾಗೂ ಇನ್ನಿತರ ಇಪ್ಪತ್ತು ರೈತೋತ್ಪನ್ನಗಳನ್ನು ಬಿಟ್ಟರೆ ಬಿಟ್ಟರೆ ರೈತ ಬೆಳೆಯುವ ಎಲ್ಲಾ ಬೆಳೆಗಳು MSP ಅಡಿ ಬರುವುದಿಲ್ಲ. MSP ಶಾಸನಬದ್ಧವಲ್ಲವಾದ್ದರಿಂದ  ಖಾಸಗಿ ಮಂಡಿ/ವ್ಯಾಪಾರಿಗಳು MSP ಕೊಡುವುದಿಲ್ಲ. ಆದ್ದರಿಂದ MSP ದರದಲ್ಲಿ ಖರೀದಿಯಾಗದಿದ್ದರೆ ಕೇವಲ MSP ಘೋಷಣೆಯಿಂದ ಯಾವ ಪ್ರಯೋಜನವೂ ಇಲ್ಲ
ಎಲ್ಲಕ್ಕಿಂತ  ಹೆಚ್ಚಾಗಿ  MSP ಲೆಕ್ಕಾಚಾರದಲ್ಲೇ ರೈತರ ಎಲ್ಲಾ ವೆಚ್ಚಗಳನ್ನೂ  ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಆದ್ದರಿಂದ ರೈತರು ಮೂರು ಹೊಸ ಶಾಸನಗಳ ವಾಪಸಾತಿಯ ಜೊತೆಗೆ MSP ಗೆ ಸಂಬಂಧಪಟ್ಟಂತೆ ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದ್ದರು:

1. MSP ಲೆಕ್ಕಾಚಾರ ಮಾಡುವಾಗ ರೈತರು ಖರೀದಿ ಮಾಡುವ ಬೀಜ, ಗೊಬ್ಬರ, ಇನ್ನಿತ್ಯಾದಿ ಹಾಗಿ ಕುಟುಂಬ ಶ್ರಮವನ್ನು ಮಾತ್ರ ಲೆಕ್ಕ ಹಾಕುವ ಪದ್ಧತಿಯನ್ನು ಕೈಬಿಟ್ಟು  ಸ್ವಾಮಿನಾಥನ್ ಸಮಿತಿ ವರದಿಯ ಲೆಕ್ಕಾಚಾರದಂತೆ (C2+50%) ಸಮಗ್ರ ವೆಚ್ಚದ ಮೇಲೆ ಶೇ. 50ರ ಲಾಭ ಸೇರಿಸಿ  MSP ನಿಗದಿ ಮಾಡಬೇಕು.
2. MSP ಯನ್ನು ಶಾಸನಬದ್ಧಗೊಳಿಸಬೇಕು. ಘೋಷಿತ MSP ದರಕ್ಕಿಂತ ಸರ್ಕಾರವಾಗಲೀ, ಖಾಸಗಿ ವ್ಯಾಪಾರಿಗಳಾಗಲೀ ಖರೀದಿ ಮಾಡುವುದನ್ನು ಶಿಕ್ಷಾರ್ಹ ಅಪರಾಧಗೊಳಿಸಬೇಕು. ಆಗ ಮಾತ್ರ ಸರ್ಕಾರ ಘೋಷಿಸುವ MSP ಯಿಂದ ರೈತರಿಗೆ ಏನಾದರೂ ಲಾಭ ದಕ್ಕುತ್ತದೆ.
3. ರೈತರ ಬೆಳೆಯನ್ನು MSP ದರದಲ್ಲಿ ಸರ್ಕಾರವೇ ಖರೀದಿ ಮಾಡಬೇಕು. ಅಥವಾ ಮಾರುಕಟ್ಟೆ ದರವು MSP ದರಕ್ಕಿಂತ ಕಡಿಮೆಯಾದಾಗ ಆ ವ್ಯತ್ಯಾಸವನ್ನದರೂ ಸರ್ಕಾರ ಭರಿಸಬೇಕು.

ಅತ್ಯಂತ ನ್ಯಾಯಯುತವಾಗಿರುವ ಈ ಆಗ್ರಹಗಳ ಬಗ್ಗೆ ಸರ್ಕಾರ ಮತ್ತು ಸರ್ಕಾರೀ ಪಂಡಿತರು ಈ ರೀತಿ MSP ದರದಲ್ಲಿ ಸರ್ಕಾರವೇ ರೈತರಿಂದ ಎಲ್ಲಾ ಬೆಳೆಗಳನ್ನು ಖರೀದಿ ಮಾಡಿದರೆ ದೇಶದ ಆರ್ಥಿಕತೆ ಹಾಳಾಗಿ ಹೋಗುತ್ತದೆ ಎಂದು ಹುಯಿಲೆಬ್ಬಿಸಿದ್ದಾರೆ. ಅವರ ಪ್ರಕಾರ ರೈತರ ಈ ಆಗ್ರಹದಂತೆ ನಡೆದರೆ:

1) ಸರ್ಕಾರಕ್ಕೆ ವಾರ್ಷಿಕ 17 ಲಕ್ಷ ಕೋಟಿ ವೆಚ್ಚವಾಗುತ್ತದೆ. ಇದು ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ಟಿನ ಅರ್ಧದಷ್ಟು. ಹೀಗಾಗಿ ಈ ಆಗ್ರಹ ಈಡೇರಿಸಿದರೆ ದೇಶದ ಅಭಿವೃದ್ಧಿಗೆ ಹಣವೇ ಇಲ್ಲದಂತಾಗುತ್ತದೆ.

2) ಈಗಾಗಲೇ ಏಕಕೃಷಿಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಈಗ ಖಚಿತ ಲಾಭ ಇದೆಯೆಂದಾದ ಮೇಲೆ ಎಲ್ಲಾ ರೈತರು ಹೆಚ್ಚಿನ ನೀರು ಕಬಳಿಕೆ ಮಾಡುವ ಈ ಬೆಳೆಗಳನ್ನೇ ಬೆಳೆಯುತ್ತಾರೆ. ಇದರಿಂದ ಬರಲಿರುವ ದಿನಗಳಲ್ಲಿ ಕೃಷಿಯೇ ಅಸ್ಥಿರವಾಗುತ್ತದೆ ..

ಎಂಬ ಕುಂಟು ಹಾಗು ಉತ್ಪ್ರೇಕ್ಷಿತ ವಾದಗಳನ್ನು ಮುಂದಿಡುತ್ತಿದ್ದಾರೆ.

ಮೊದಲನೆಯದಾಗಿ, ರೈತರು ಬೆಳೆದದ್ದನ್ನೆಲ್ಲಾ ಸರ್ಕಾರ ಖರೀದಿ ಮಾಡಬೇಕಿಲ್ಲ. ಆದರೆ ಈ ದೇಶದ ಶೇ. 80 ರಷ್ಟು  ಜನರ ಹಸಿವನ್ನು ನೀಗಿಸಲು ಕಡಿಮೆ ದರದಲ್ಲಿ ಎಷ್ಟು ಧಾನ್ಯ ಖರೀದಿ ಮಾಡಬೇಕೋ ಅಷ್ಟೆ ಖರೀದಿ ಮಾಡಿದರೂ ಸಾಕಾಗುತ್ತದೆ. ಅದನ್ನು MSP ದರದಲ್ಲಿ ಖರೀದಿ ಮಾಡಿದರೆ ಉಳಿದ ಖರೀದಿಗೆ ಖಾಸಗಿ ಮಾರುಕಟ್ಟೆ ಗೆ ಅದು ಮಾದರಿ ದರವಾಗುತ್ತದೆ. ಹಾಗೂ MSP ಯನ್ನು ಶಾಸನಬದ್ಧಗೊಳಿಸಿದರೆ ಪ್ರಾರಂಭದಲ್ಲಿ ಖಾಸಗಿ ಮಾರುಕಟ್ಟೆ ಖರೀದಿಯನ್ನು ಬಹಿಷ್ಕರಿಸಿದರೂ ಆ ನಂತರ ವಹಿವಾಟನ್ನು ಮುಂದುವರೆಸಲೇ ಬೇಕೆಂದರೆ MSP ದರದ ಖರೀದಿ ಸಹಜವಾಗುತ್ತದೆ. ಅಲ್ಲಿಯವರೆಗೆ ಒಂದೋ ಸರ್ಕಾರ ಖರೀದಿಸಬೇಕು ಅಥವಾ ಮಾರುಕಟ್ಟೆ ಮತ್ತು MSP ದರದ ವ್ಯತ್ಯಾಸವನ್ನು ಸರ್ಕಾರ ರೈತರಿಗೆ ತುಂಬಿಕೊಡಬೇಕು.

ರೈತ ಕಾರ್ಯಕರ್ತರು ಮತ್ತು ಪಂಡಿತರು ಮಾಡಿರುವ ಲೆಕ್ಕಾಚಾರದ ಪ್ರಕಾರ ಇದರಿಂದ ಸರ್ಕಾರದ ಮೇಲೆ ಹೆಚ್ಚೆಂದರೆ 50 ಸಾವಿರ ಕೋಟಿಯಿಂದ ಎರಡು ಲಕ್ಷ ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತದೆ. ಇದನ್ನು ರಾಜ್ಯ  ಹಾಗೂ ಕೇಂದ್ರಗಳೆರಡೂ  ಭರಿಸುವುದಾದರೆ ಅದು ಹೊರೆಯೂ ಆಗುವುದಿಲ್ಲ.

ಆದರೆ ಈ ಹೆಚ್ಚುವರಿ ಎರಡು ಲಕ್ಷ ಕೋಟಿಗಳ ಖಾತರಿಯಿಂದ ಈ ದೇಶದ 80 ಕೋಟಿ ರೈತಾಪಿಗೆ ಖಾತರಿ ಆದಾಯ ಮತ್ತು ಭವಿಶ್ಯ ದಕ್ಕುತ್ತದೆ. ಈ ಎರಡು ಲಕ್ಷ ಕೋಟಿಯೆಂದರೆ ನಮ್ಮ ಜಿಡಿಪಿಯ ಶೇ. 1 ಭಾಗ ಮಾತ್ರ. ಅಥವಾ ಕೇಂದ್ರ ಬಜೆಟ್ಟಿನ ಶೇ. 5 ಭಾಗ ಮಾತ್ರ.

ಇದು ಸರ್ಕಾರಕ್ಕೆ ಹೊರೆಯಾಗುತ್ತದೆಯೇ?

ಇನ್ನು ಭತ್ತ ಹಾಗೂ ಗೋಧಿಗೆ ಮಾತ್ರವಲ್ಲದೆ ಈಗಿರುವಂತೆ ಇತರ 7 ಧಾನ್ಯಗಳಿಗೆ, 5 ದ್ವಿದಳ ಧಾನ್ಯಗಳಿಗೆ, 7 ಎಣ್ಣೆ ಕಾಳುಗಳಿಗೆ ಹಾಗೂ 4 ವಾಣಿಜ್ಯ ಬೆಳಗಳಿಗೂ ಕಡ್ಡಾಯವಾಗಿ ವಿಸ್ತರಿಸಿದರೆ ಸಹಜವಾಗಿ ರೈತ ತನಗೆ ಲಾಭ ತರುವ ಎಲ್ಲಾ ಬೆಳೆಯನ್ನು ಬೆಳೆಯುತ್ತಾರೆಯೇ ಹೊರತು ಭತ್ತ ಗೋಧಿಗೆ ಮಾತ್ರ ಅಂಟಿ ಕೂರುವುದಿಲ್ಲ. ಹೀಗಾಗಿ MSP ಶಾಸನ ಮಾಡುವುದರಿಂದ ಏಕಕೃಷಿಯನ್ನೂ ಉತ್ತೇಜಿಸಿದಂತಾಗುವುದಿಲ್ಲ. ಪರಿಸರವೂ ಹಾಳಾಗುವುದಿಲ್ಲ..

ಆದ್ದರಿಂದ ಇವೆಲ್ಲಾ ರೈತರಿಗೆ MSP ವಂಚಿಸುವ ಕುತಂತ್ರಗಳೇ ಹೊರತು ಮತ್ತೇನಲ್ಲ.

ಹಾಗೆ ನೋಡಿದರೆ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಕೇಂದ್ರದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿದ್ದಾಗ MSP ಯನ್ನು ಶಾಸನಬದ್ಧಗೊಳಿಸಬೇಕೆಂದು ಬಿಜೆಪಿಯೇ ಆಗ್ರಹಿಸಿತ್ತು!!

*MSP ಯನ್ನು ಶಾಸನಬದ್ಧಗೊಳಿಸಿ: ಮುಖ್ಯಮಂತ್ರಿ ಮೋದಿ ಸಮಿತಿ, 2011*

2011 ರಲ್ಲಿ ಯುಪಿಎ ಸರ್ಕಾರ  ಕೃಷಿ ಮಾರುಕಟ್ಟೆ ಸುಧಾರಣೆಯ  ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು, ಹಾಲೀ ಪ್ರಧಾನಿ-ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು.

ಆ  ಮೋದಿ ಸಮಿತಿ 2011ರ ಡಿಸೇಂಬರ್ 1 ರಂದು ತನ್ನ ವರದಿಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತ್ತು.

ಅದು 20 ಪ್ರಮುಖ ಶಿಫಾರಸ್ಸು ಗಳನ್ನು ಒಳಗೊಂಡಿತ್ತು. ಅದರಲ್ಲಿ  APMC ಯ ಯಾಜಮಾನಿಕೆಯನ್ನು ಮುರಿಯಲು ಖಾಸಗಿ ಮಂಡಿಗಳಿಗೆ ಅವಕಾಶ ಕೊಡಬೇಕು, ಕಾಂಟ್ರಾಕ್ಟ್ ಫಾರ್ಮಿಂಗ್ ಗೆ ಅವಕಾಶ ಕೊಡಬೇಕು ಇನ್ನಿತ್ಯಾದಿ ಶಿಪಾರಸ್ಸುಗಳಿದ್ದಿದ್ದೇನೋ ನಿಜ. ಆದರೆ ಅದರ ಜೊತೆಗೆ ಈ ಕೆಳಗಿನ ಪ್ರಮುಖ ಶಿಫಾರಸ್ಸುಗಳನ್ನು ಅದೂ ಮಾಡಿತ್ತು:

” ..  Reduction in farmers marketing risk will improve farm income and thus increase the agriculture production. For the purpose, Government should announce of MSPs well in advance and ensure that no farmer-trader transaction is below MSP”

ಅಂದರೆ:

“ಮಾರುಕಟ್ಟೆಯಲ್ಲಿ ರೈತರು ಎದುರಿಸುವ ರಿಸ್ಕನ್ನು ಕಡಿಮೆ ಮಾಡುವುದರಿಂದ ಕೃಷಿ ಆದಾಯ ಹೆಚ್ಚುವುದಲ್ಲದೆ ಕೃಷಿ ಉತ್ಪಾದನೆಯೂ ಹೆಚ್ಚುತ್ತದೆ. ಇದನ್ನು ಸಾಧಿಸಲು ಸರ್ಕಾರವು ಮುಂಚಿತವಾಗಿಯೇ ಕನಿಷ್ಠ ಬೆಂಬಲ ಬೆಲೆ – MSP- ಯನ್ನು ಘೋಷಿಸಬೇಕು ಮತ್ತು ವ್ಯಾಪಾರಿ-ರೈತರ ನಡುವಿನ ಯಾವುದೇ ವ್ಯವಹಾರವು MSP ಗಿಂತ ಕಡಿಮೆ ಇಲ್ಲದಿರುವುದನ್ನು ಖಾತರಿಗೊಳಿಸಬೇಕು*

b.3- Enforce MSP: Since intermediaries play a vital role in the functioning ofthe market and at times they have advance contract with farmers. In respect of all essential commodities, we should protect farmer’s interests by mandating through statutory provisions that no farmer – trader transaction should be below MSP, wherever prescribed.

ಅಂದರೆ:
“ಕೃಷಿ ಮಾರುಕಟ್ಟೆಯ ವ್ಯವಹಾರಗಳಲ್ಲಿ ಮಧ್ಯವರ್ತಿಗಳು ಕೀಲಕ ಪಾತ್ರ ವಹಿಸುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ರೈತರ ಜೊತೆ ಮುಂಗಡ ಒಪ್ಪಂದವನ್ನೂ ಮಾಡಿಕೊಂಡಿರುತ್ತಾರೆ. ಎಲ್ಲಾ ಅತ್ಯಗತ್ಯ ಸರಕುಗಳ ವಹಿವಾಟುಗಳ ವಿಷಯದಲ್ಲಿ ರೈತಾಪಿ- ಮತ್ತು ವ್ಯಾಪಾರಿಗಳ ನಡುವೆ ನಡೆಯುವ ಯಾವುದೇ ವಹಿವಾಟುಗಳು ಎಂಎಸ್‌ಪಿ- ಕನಿಷ್ಟ ಬೆಂಬಲ ಬೆಲೆ-ಗಿಂತ ಕಡಿಮೆ ದರದಲ್ಲಿ ನಡೆಯದಂತೆ ಮಾಡುವುದನ್ನು ಶಾಸನಾತ್ಮಕವಾಗಿ ಕಡ್ಡಾಯಗೊಳಿಸುವ ಮೂಲಕ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕು”

ಆದರೆ 2014ರಲ್ಲಿ ಮೋದಿಯೇ ಪ್ರಧಾನಿಯಾದ ಮೇಲೆ ಬಿಜೆಪಿ ಸರ್ಕಾರ ಅಂಥಾ ಶಾಸನ ಮಾಡಲು ಮುಂದಾಗುವುದಿರಲಿ ಸರ್ಕಾರವು ಈವರೆಗೆ ರೈತರಿಂದ ಖರೀದಿ ಮಾಡುತ್ತಿದ್ದ ಪ್ರಮಾಣವನ್ನು ಕಡಿಮೆ ಮಾಡಲು ಪ್ರಾರಂಭಿಸಿತು.

ಬದಲಿಗೆ ಸರ್ಕಾರದ ಖರೀದಿಯನ್ನೇ ಕ್ರಮೇಣವಾಗಿ ಕಡಿಮೆ ಮಾಡಲು ಹಾಗೂ ಖಾಸಗೀಕರಿಸಲು ಮುಂದಾಗಿದೆ.

*FCI  ಗೆ ಬಜೆಟ್ ಕಡಿತ-  ರೈತರಿಗೆ MSP  ಹಾಗೂ  ಬಡವರಿಗೆ ಪಡಿತವೂ ಕಡಿತ!*

FCI- ಭಾರತೀಯ ಆಹಾರ ನಿಗಮ – ಮೂಲಕ ಸರ್ಕಾರ ರೈತರ ಸರಕನ್ನು ಖರೀದಿ ಮಾಡಿದರೆ ರೈತರಿಗೆ MSP ದರವೂ , ಬಡವರಿಗೆ ಪಡಿತರವೂ ದೊರೆಯುತ್ತದೆ. ಆದರೆ ರೈತರಿಗೆ ಹಾಗು ಬಡವರಿಗೆ ನೇರವಾಗಿ ದರ ಕಡಿತ ಮಾಡುವುದು ಕಷ್ಟ. ಆದ್ದರಿಂದಲೇ ಕುತಂತ್ರಿ ಸರ್ಕಾರ ಕೃಷಿ ಮಸೂದೆಗಳಲ್ಲೂ ನೇರವಾಗಿ MSP ಯನ್ನಾಗಲಿ ಅಥವಾ ಪಡಿತರವನ್ನಾಗಲೀ ರದ್ದು ಮಾಡುತ್ತೇನೆಂದು ಹೇಳುತ್ತಿಲ್ಲ. ಬದಲಿಗೆ ಮೂಲ FCI ಅನ್ನು  ರದ್ದು ಮಾಡುವ ಅಥವಾ ಖಾಸಗೀಕರಿಸುವ ಯೋಜನೆಗಳನ್ನು ಸದ್ದಿಲ್ಲದಂತೆ ಜಾರಿ ಮಾಡುತ್ತಾ ಬಂದಿದೆ.

ರೈತರಿಂದ MSP ದರದಲ್ಲಿ ಧಾನ್ಯಗಳನ್ನು ಖರೀದಿಸಿ ಅವನ್ನು ರಿಯಾಯತಿ ದರದಲ್ಲಿ ಪಡಿತರ ವ್ಯವಸ್ಥೆಯಲ್ಲಿ     ಈ ದೇಶದ 5 ಲಕ್ಷ ರೇಷನ್ ಅಂಗಡಿಗಳ ಮೂಲಕ 80 ಕೋಟಿ  ಬಡವರಿಗೆ ತಿಂಗಳಿಗೆ ಸರಾಸರಿ 7  ಕೆಜಿ ಧಾನ್ಯಗಳನ್ನು ತಲುಪಿಸಲು FCI ಗೆ 2019-20 ರ ಸಾಲಿನಲ್ಲಿ 2.27 ಲಕ್ಷ  ಕೋಟಿ ರು. ಗಳು ಖರ್ಚಾಗಿತ್ತು. ಆದರೆ ಅದಕ್ಕೆ ಬಜೆಟ್ಟಿಂದ ಒದಗಿಸಿದ್ದು ಕೇವಲ 75,000 ಕೋಟಿ  ರು. ಗಳನ್ನೂ ಮಾತ್ರ..

ಏಕೆಂದರೆ ಭಾರತದ ದೇಶದ ಬಡವರ ಆಹಾರ ಭದ್ರತೆಗೆಂದು ಸಬ್ಸಿಡಿ ಕೊಡಲು WTO ಕೊಟ್ಟಿದ ಗಡುವು 2017 ಕ್ಕೆ ಮುಕ್ತಾಯವಾಗಿದೆ. ಅಲ್ಲದೆ, FCI ಅನ್ನು ಮುಚ್ಚಿ ಹಾಕಿ ಧಾನ್ಯ ಮಾರಾಟದಲ್ಲಿ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಕೊಡಬೇಕೆಂಬ ಒತ್ತಡವು ಆದಾನಿ-ಅಂಬಾನಿ ಹಾಗು ಅವರ ವಿದೇಶಿ ಪಾಲುದಾರರ ದೈತ್ಯ ಧಾನ್ಯ ಸಗಟುದಾರರಿಂದ ಹೆಚ್ಚಾಗಿದೆ.

ಹೀಗಾಗಿ APMC-MSP-FCI ಇವುಗಳು ಒಂದನ್ನೊಂದು ಅವಲಂಬಿಸಿರುವ ಅವಿನಾಭಾವಿ ವ್ಯವಸ್ಥೆಯಾಗಿದೆ.

APMC ಮತ್ತು FCI ಗಳಿಲ್ಲದೇ MSP ಯು ರೈತರಿಗೆ ಸಿಗುವುದಿಲ್ಲ. ಏಕೆಂದರೆ ಈಗಿರುವ ವ್ಯವಸ್ಥೆಯಲ್ಲಿ ಸರ್ಕಾರವನ್ನು ಬಿಟ್ಟರೆ ಯಾವುದೇ ಖಾಸಗಿ ಮಂಡಿಗಳು ರೈತರಿಗೆ MSP ಕೊಡುತ್ತಿಲ್ಲ. ಇತ್ತಿಚಿನ ಅಧ್ಯಯನದ ಪ್ರಕಾರವೇ ಕಳೆದ  ವರ್ಷದ ಎರಡು ತಿಂಗಳಲ್ಲೇ ದೇಶದ 20,000 ನೊಂದಾಯಿತ ಕೃಷಿ ಮಾರುಕಟ್ತೆಗಳ ಶೇ. 90 ರಷ್ಟು ಖಾಸಗಿ ಖರೀದಿಗಳಲ್ಲಿ ಸರ್ಕಾರ ಸೂಚಿಸಿರುವ ಬೆಂಬಲ ಬೆಲೆ ನೀಡಲಾಗಿಲ್ಲ. ಇದರಿಂದಾಗಿ ಹೋದವರ್ಷ ಕೇವಲ ಎರಡು ತಿಂಗಳಲ್ಲಿ ಖರೀದಿಯಲ್ಲೇ ಈ ದೇಶದ ರೈತಾಪಿಗೆ 2000 ಕೋಟಿ. ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. ಅದರಲ್ಲಿ ಕರ್ನಾಟಕದ ಮೆಕ್ಕೆ ಜೋಳದ ಬೆಳೆಗಾರರಿಗೆ ಅಂದಾಜು 330 ಕೋಟಿ ನಷ್ಟ ಸಂಭವಿಸಿದೆ.

ಸಾರಾಂಶ ಸ್ಪಷ್ಟ. ಸರ್ಕಾರ ಖರೀದಿ ಮಾಡದಿದ್ದರೆ ಅಥವಾ ಖಾಸಗಿ ವ್ಯಾಪಾರಿಗಳು ಕಡ್ಡಾಯವಾಗಿ MSP ಪಾವತಿಸಬೇಕೆಂಬ ಶಾಸನವನ್ನು ಮಾಡದೇ ರೈತರಿಗೆ MSP ದಕ್ಕುವುದಿಲ್ಲ. ರೈತರಿಗೆ ಪಡಿತರ ದಕ್ಕುವುದಿಲ್ಲ.

ಆದ್ದರಿಂದ ರೈತ ಚಳವಳಿ MSP ಯನ್ನು ಕಾಯಿದೀಕರಿಸುವ ಆಗ್ರಹದ ಜೊತೆಜೊತೆಗೆ ಪಡಿತರವನ್ನು ಉಚಿತ ಹಾಗೂ ಸಾರ್ವತ್ರೀಕರಿಸುವ ಆಗ್ರಹವನ್ನು ಅಷ್ಟೆ ಗಟ್ಟಿಯಾಗಿ ಆಗ್ರಹಿಸಬೇಕಿದೆ. ಏಕೆಂದರೆ ಅವೆರಡು ಆಗ್ರಹಗಳ ನಡುವೆ ಎಷ್ಟು ಅವಿನಾಭಾವ ಸಂಬಂಧವಿದೆಯೋ ರೈತ ಹಾಗೂ ನಗರ-ಗ್ರಾಮೀಣ ಬಡ ಸಮುದಾಯಗಳ ನಡುವೆಯೂ ಅಷ್ಟೆ ಅವಿನಾಭಾವ ಸಂಬಂಧವಿದೆ.

MSP ಯನ್ನು ಶಾಸನಬದ್ಧಗೊಳಿಸಿ ಬೆಲೆ ಖಾತರಿ ಮಾಡುವುದು ಮಾರುಕಟ್ಟೆ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿ ದೇಶದ ಅಭಿವೃಧಿಗೆ ಬೇಕಾದ ಖಾಸಗಿ ಬಂಡವಾಳ ಬರದಂತೆ ಆಗುತ್ತದೆ ಎಂಬುದು ಸರ್ಕಾರದ ಹಾಗೂ ಸರ್ಕಾರೀ ಪಂಡಿತರ ಮತ್ತೊಂದು ವಾದ.

ಹಾಗೆ ನೋಡಿದರೆ 2006ರಿಂದ ಬಿಹಾರದಲ್ಲಿAPMC ಯನ್ನು ರದ್ದುಗೊಳಿಸಲಾಗಿದೆ. ಆದರೆ ಅಲ್ಲಿ ಯಾವ ಖಾಸಗಿ ಮಾರುಕಟ್ಟೆಯೂ ಮಂಡಿ ತೆರೆದಿಲ್ಲ. ಅಲ್ಲಿನ ರೈತರಿಗೆ MSP  ಯು ಸಿಗುತ್ತಿಲ್ಲ, ಅದಕ್ಕಿಂತ ಹೆಚ್ಚಿನ ದರವೂ ಸಿಗುತ್ತಿಲ್ಲ. ಬಿಹಾರದ ರೈತರು ದೂರದ ಪಂಜಾಬಿಗೆ ಹೋಗಿ ಅಲ್ಲಿನ APMC ಗಳಲ್ಲಿ ಮಾರಿ ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರವು ಖಾಸಗಿ ಬಂಡವಾಳ ಹೂಡಿಕೆಯಾಗಬೇಕು ಎಂಬ ನೆಪದಲ್ಲಿ ಬೃಹತ್ ಕಾರ್ಪೊರೇಟ್ ಉದ್ದಿಮೆಗಳಿಗೆ ಅವರ ಹೂಡಿಕೆಯ ಮೇಲೆ ಲಾಭಯನ್ನು ಖಚಿತಗೊಳಿಸುವ ನೀತಿಯನ್ನು ಅನುಸರಿಸುತ್ತಿಲ್ಲವೇ?

*ಆದಾನಿಗೆ ಲಾಭ ಖಾತರಿ ದೇಶಸೇವೆ- ರೈತರಿಗೆ MSP ಖಾತರಿ ದೇಶದ್ರೋಹ!*

2019-20ರ ಬಜೆಟ್ಟಿನಲ್ಲೇ ಮೋದಿ ಸರ್ಕಾರ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳಿಗೆ ತಾನು ಕೊಟ್ಟಿದ್ದ ಲಾಭದ ಖಾತರಿಯಲ್ಲಿ ಆದ ವ್ಯತ್ಯಾಸವನ್ನು ಪೂರೈಸಲು 3,87,727 ಕೋಟಿ ರೂ. ಗಳನ್ನು ಒದಗಿಸಿತ್ತು. ಆಸಕ್ತರು ಹೆಚ್ಚಿನ ವಿವರಗಳಿಗೆ ಸರ್ಕಾರದ ಈ ಬಜೆಟ್ ಡಾಕ್ಯುಮೆಂಟನ್ನು ಓದಬಹುದು.
(https://www.indiabudget.gov.in/doc/rec/annex93.pdf )

ಅಷ್ಟು ಮಾತ್ರವಲ್ಲ. ಅಗತ್ಯ ವಸ್ತುಗಳ ಕಾಯಿದೆಗೆ ತಿದ್ದುಪಡಿಗಳು ಖಚಿತವಾಗುತ್ತಿದ್ದಂತೆ ಮೋದಿ ಮಿತ್ರ ಆದಾನಿ 700 ಕೋಟಿ ರೂ. . ವೆಚ್ಚದಲ್ಲಿ 12 ಲಕ್ಷ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸಿಡುವ ಉಗ್ರಾಣಗಳನ್ನು ನಿರ್ಮಿಸಿಕೊಂಡ. ಆದರೆ ಇದರಿಂದ ಆತನಿಗೇನು ಲಾಭ?

2015ರ ಒಪ್ಪಂದದ ಪ್ರಕಾರ ಭಾರತೀಯ ಆಹಾರ ನಿಗಮವು ಒಂದು ಕ್ವಿಂಟಾಲ್ ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳಲು ಒಂದು ತಿಂಗಳಿಗೆ 100  ರೂ. ಬಾಡಿಗೆಯನ್ನು ಆದಾನಿಗೆ ನೀಡುತ್ತದೆ. ಹಾಗೂ ಈ ಒಪ್ಪಂದವು 30  ವರ್ಷಗಳ ಕಾಲ ಖಾಯಂ ಆಗಿರುವುದಲ್ಲದೆ ಪ್ರತಿವರ್ಷ ಬಾಡಿಗೆ ದರವನ್ನು ಹಣದುಬ್ಬರಕ್ಕೆ ತಕ್ಕಂತೆ ಪರಿಷ್ಕರಿಸಲಾಗುವುದು. ತಿಂಗಳಿಗೆ ಒಂದು ಕ್ವಿಂಟಾಲಿಗೆ 100 ರೂ. ಬಾಡಿಗೆಯಂತೆ 10 ಲಕ್ಷ ಟನ್ನಿಗೆ ಒಂದು ವರ್ಷಕ್ಕೆ ಆದಾನಿ ಕಂಪನಿಗೆ ಸರ್ಕಾರವು ತೆರಲಿರುವ ಬಾಡಿಗೆ ಎಷ್ಟು?

120 ಕೋಟಿ!.

ಅಂದರೆ ಕೇವಲ ಆರು ವರ್ಷಗಳಲ್ಲಿ ಈ ಸೈಲೋಗಳನ್ನು ಕಟ್ಟಲು ಆದ 700 ಕೋಟಿಯನ್ನು ಆದಾನಿ ಕಂಪನಿ ವಾಪಸ್ ಪಡೆದುಕೊಂಡಿರುತ್ತದೆ. ಆದರೆ ಕಾಂಟ್ರಾಕ್ಟ್ 30  ವರ್ಷಗಳದ್ದು. ಹೀಗಾಗಿ ಉಳಿದ 23 ವರ್ಷ ಲಾಭ! ಇಂಥಾ ಲಾಭ ಯಾವ ಖಾಸಗಿ ವ್ಯವಹಾರಗಳಲ್ಲಿ ಇರಲು ಸಾಧ್ಯ??

ಹೀಗಾಗಿಯೇ, ಆದಾನಿಯವರ 2019-20ರ ವಾರ್ಷಿಕ ವಹಿವಾಟು ವರದಿಯ ಪ್ರಕಾರ ಒಟ್ಟಾರೆ ಆದಾನಿ ಸಾಮ್ರಾಜ್ಯದ ಗಳಿಕೆಯು ಶೇ.27ರ ದರದಲ್ಲಿ ಬೆಳೆದರೆ, ಅಗ್ರಿ ಲಾಜಿಸ್ಟಿಕ್ಸ್ ಮೂಲದ ಲಾಭದ ದರವು ಶೇ.60ರ ದರದಲಿ ಬೆಳೆದಿದೆ.

ಅದೇ ವರದಿಯಲ್ಲಿ ಆದಾನಿ ಕಂಪನಿಯು :

“AALL has long term (20-30 year) guaranteed offtake contracts on use or pay basis with 70%+ EBITDA margins. AALL targets to double infrastructure capacity in the next 3 years and tap the new 12.5 MMT infrastructure market as well”
(ಅಂದರೆ- ಆದಾನಿ ಅಗ್ರಿ ಲಾಜಿಸ್ಟಿಕ್ಸ್ ಕಂಪನಿಗೆ ಸರ್ಕಾರದಿಂದ 20-30 ವರ್ಷಗಳ ಖಾತರಿಯಾದ ಒಪ್ಪಂದವಿದೆ. ಇದು ಶೇ. 70ರಷ್ಟು ಲಾಭವನ್ನು ಗಳಿಸಿಕೊಡಲಿದೆ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ತನ್ನ ಸಾಮರ್ಥ್ಯವನ್ನು 1.25 ಕೋಟಿ ಟನ್ನಿಗಳಿಗೆ ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಹೊಂದಿದೆ)..ಎಂದು ಹೇಳಿಕೊಂಡಿದೆ.
((https://www.adaniports.com/-/media/Project/Ports/Investor/corporate-governance/Corporate-Announcement/other-intimation–1/24523022019Intimation-of-proposal-for-acquisition.pdf?la=en)

ರೈತರಿಗೆ MSP ಬೆಲೆಯನ್ನು ಖಾತರಿಗೊಳಿಸಲು ನಿರಾಕರಿಸುವ ಮೋದಿ ಸರ್ಕಾರ ಆದಾನಿ ಕಂಪನಿಗೆ ಒಂದಲ್ಲ ಎರಡಲ್ಲ 30 ವರ್ಷಗಳ ಕಾಲ ಶೇ. 70 ರಷ್ಟು ಲಾಭವನ್ನು ಖಾತರಿಗೊಳಿಸಿದೆ. ಮಿತ್ರಋಣ ತೀರಿಸುತ್ತಿದೆ.

ಆದರೆ ದೇಶಕ್ಕೆ ದ್ರೋಹಬಗೆಯುತ್ತಿಲ್ಲವೇ?

ರೈತರಿಗೆ MSP ಬೆಲೆಯನ್ನು ಖಾತರಿ ಮಾಡುವ ನೀತಿ ಶಾಸನವಾದರೆ ಮುಕ್ತ ಮಾರುಕಟ್ಟೆ ಅಸ್ತವ್ಯಸ್ತವಾಗುತ್ತದೆ ಅನ್ನುವ ಸರ್ಕಾರ ಮತ್ತವರ ಪಂಡಿತರು, ಆದಾನಿಗೆ ಹಾಗೊ ಅದರಂತ ನೂರು ಉದ್ದಿಮೆಗಳಿಗೆ ಲಾಭ ಖಾತರಿ ಮಾಡುವ ನೀತಿಗಳನ್ನು ಮಾತ್ರ ಮುಕ್ತ ಮಾರುಕಟ್ಟೆ ಆರ್ಥಿಕತೆಗೆ ಅಡ್ಡಿ ಎಂದೇಕೆ ವಾದಿಸುವುದಿಲ್ಲ?

*ವಿದ್ಯುತ್ ಮಸೂದೆ-2021-
ರೈತಬದುಕನ್ನು ಕತ್ತಲಿಗೆ ದೂಡುವ ನೀಲನಕ್ಷೆ*

ರೈತರನ್ನು ಹಾಗೂ ಈ ದೇಶದ ಎಲ್ಲಾ ಬಡ ಮಧ್ಯಮವರ್ಗದವರನ್ನು ಮತ್ತಷ್ಟು ಹಿಂಡಿಹಿಪ್ಪೆ ಮಾಡಿ ಕಾರ್ಪೊರೇಟ್ ಧಣಿಗಳ ಋಣ ಸಂದಾಯ ಮಾಡಲು ಮೋದಿ ಸರ್ಕಾರ ಜಾರಿಗೆ ತರುತ್ತಿರುವ ಮತ್ತೊಂದು ನೀತಿ ಹೊಸ ವಿದ್ಯುತ್ ಸುಧಾರಣ ಮಸೂದೆ.

ಈ ಮಸೂದೆಯ ಉದ್ದೇಶವೇ ವಿದ್ಯುತ್ ವಿತರಣಾ ಕ್ಷೇತ್ರವನ್ನು ಖಾಸಗೀಕರಿಸುವುದು. ಆದರೆ ಲಾಭದ ಉದ್ದೆಶದಿಂದ ಉದ್ಯಮದಲ್ಲಿರುವ ಹಾಗೂ ಹೆಚ್ಚು ಲಾಭವಿರುವ ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆ ಮಾಡುವ ಕಾರ್ಪೊರೇಟ್ ಕಂಪನಿಗಳು ಈಗಾಗಲೇ ನಷ್ಟದಲ್ಲಿರುವ ವಿದ್ಯುತ್ ವಿತರಣಾ ಕ್ಷೇತ್ರಕ್ಕೇಕೆ ಬರುತ್ತಾರೆ? ಆದ್ದರಿಂದಲೇ ಈ ಮಸೂದೆಯು ವಿದ್ಯುತ್ ವಿತರಣೆಯನ್ನು ಲಾಭದಾಯಕ ಮಾಡುವ ಹಲವಾರು ಪ್ರಸ್ತಾಪಗಳನ್ನು ಹೊಂದಿದೆ.

*ಕ್ರಾಸ್ ಸಬ್ಸಿಡಿ ರದ್ದು-ಒಂದೇ ದೇಶ, ಒಂದೇ ಬೆಲೆ!*

ಅದರಲ್ಲಿ ಮೊಟ್ಟ ಮೊದಲನೆಯದು ಬಡವರಿಗೆ, ರೈತರಿಗೆ ಕೊಡುತ್ತಿದ್ದ ಸಬ್ಸಿಡಿ ದರದ ವಿದ್ಯುತ್ತನ್ನು ರದ್ದುಮಾಡಿ ಎಲ್ಲರಿಗೂ ಒಂದೇ ದರವನ್ನು ನಿಗದಿ ಮಾಡುವುದು. ಕಾರ್ಪೊರೇಟ್ ಕಂಪನಿಗಳ ಪ್ರಕಾರ ವಿತರಣಾ ಕಂಪನಿಗಳು ನಷ್ಟವನ್ನೆದುರಿಸಲು ಕಾರಣ ಗ್ರಾಹಕರು ವಿದ್ಯುತ್ ಉತ್ಪಾದನೆ ಹಗೂ ವಿತರಣೆಗೆ ಎಷ್ಟು ವೆಚ್ಚವಾಗುವುದ್ದೋ ಅಷ್ಟು ಬೆಲೆಯನ್ನು ಕಟ್ಟದಿರುವುದು. ಆದ್ದರಿಂದ ವಿದ್ಯುತ್ ಬೆಲೆಯಲ್ಲಿ ರಿಯಾಯತಿ ಇರದೆ ಬಡವ-ಶ್ರೀಮಂತರೆನ್ನದೆ ಎಲ್ಲಾ ಗ್ರಾಹಕರು ಎಷ್ಟು ವೆಚ್ಚವಾಗುವುದೋ ಅಷ್ಟು ಬೆಲೆಯನ್ನು ಕಟ್ಟಬೇಕು.
ಈ ಮಾರುಕಟ್ಟೆ ತತ್ವವನ್ನು ಮೋದಿ ಸರ್ಕಾರ ಚಾಚೂ ತಪ್ಪದೆ ಒಪ್ಪಿಕೊಂಡಿದೆ.

ಹೊಸ ಮಸೂದೆಯ 12 (ii) ಅಂಶ ಹೀಗೆ ಹೇಳುತ್ತದೆ:

“Provided also that such surcharge and cross subsidies shall be progressively reduced by the State Commission in the manner as may be provided in the Tariff Policy”
ಎಂಬ ಕಲಮನ್ನು ಅಡಕ ಮಾಡಲಾಗಿದೆ. ಹಾಗೂ ಹೊಸ ಖಾಸಗೀ ವಿತರಣಾ ಕಂಪನಿಗಳಿಗೆ ಸರ್ಕಾರ ಈವರೆಗೆ ನೀಡುತ್ತಾ ಬಂದ ಎಲ್ಲಾ ಬಗೆಯ ಕ್ರಾಸ್ ಸಬ್ಸಿಡಿಗಳನ್ನು ವೇಗವಾಗಿ ಕಡಿತಗೊಳಿಸಲಾಗುವುದು ಎಂಬ ಭರವಸೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ 2016 ರಲ್ಲಿ ಜಾರಿ ಮಾಡಿದ್ದ ಹೊಸ ವಿದ್ಯುತ್ ಶುಲ್ಕ ನೀತಿಗೂ ತಿದ್ದುಪಡಿ ತರುವ ಭರವಸೆಯನ್ನು ಅಡಕಗೊಳಿಸಲಾಗಿದೆ.

ಅದರೆ ಒಂದೊಮ್ಮೆ ಈ ಮಸೂದೆ ಕಾಯಿದೆಯಾದರೆ ಸರ್ಕಾರೀ ಒಡೆತನದಲ್ಲಿರುವ ವಿತರಣಾ ಕಂಪನಿಗಳಬದಲಿಗೆ ಖಾಸಗಿ ವಿತರಣಾ ಕಂಪನಿಗಳಿಂದ ಅವರು ನಿಗದಿಪಡಿಸಿದ ಶುಲ್ಕವನ್ನು ತೆತ್ತು ರೈತರು ಮತ್ತು ಬಡವರು ವಿದುತ್ತನ್ನು ಖರೀದಿ ಮಾಡಬೇಕಿರುತ್ತದೆ. ಸಬ್ಸೀಡಿ ಇಲ್ಲದಿರುವುದರಿಂದ ಹಾಗೂ ಎಲ್ಲರಿಗೂ ಒಂದೇ ದರವಾದ್ದರಿಂದ ಅದು ಈಗಿರುವುದಕ್ಕಿಂತ ಸಹಜವಾಗಿಯೇ ಎರಡು-ಮೂರುಪಟ್ಟು ಹೆಚ್ಚಿರುತ್ತದೆ.

*ನೇರ ನಗದು ವರ್ಗಾವಣೆಯೆಂಬ ಬಳಸು ಮೋಸ*

ಆದರೆ ಆ ಮಸೂದೆಯಲ್ಲಿ ರಾಜ್ಯ ಸರ್ಕಾರಗಳು ಬೇಕಿದ್ದರೆ ಆ ನಂತರ ಕೆಲವು ನಿರ್ದಿಷ್ಟ ವರ್ಗಗಳ ಗ್ರಾಹಕರುಗಳ ಅಕೌಂಟಿಗೆ ಸಬ್ಸಿಡಿ ಹಣವನ್ನು ತುಂಬಬಹುದು ಎಂಬ ಅವಕಾಶವನ್ನು ನೀಡಿದೆ. ಆದರೆ ಗ್ಯಾಸ್ ಮತ್ತು ಗೊಬ್ಬರದ ವಿಷಯಗಳಲ್ಲಿ ಅದರಲ್ಲೂ ವಿಶೆಷವಾಗಿ ಅಡುಗೆ ಅನಿಲದ ವಿಷಯದಲ್ಲಿ ಈ ನೇರೆ ನಗದು ವರ್ಗಾವಣೆ ಎಂಬುದು ಹೇಗೆ ಜನರನ್ನು ಮೋಸ ಮಾಡುವ ತಂತ್ರವಾಗಿದೆ ಎಂಬುದನ್ನು ಈ ದೇಶದ ಜನ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ಪ್ರಾರಂಭದ ಒಂದೆರಡು ವರ್ಷ ಬಡವರ ಮತ್ತು ರೈತರ ಅಕೌಂಟಿನಲ್ಲಿ ವಿದ್ಯುತ್ ಸಬ್ಸಿಡಿ ಹಣ ಬಂದರೂ ನಂತರದಲ್ಲಿ ಖಾಸಗಿ ಕಂಪನಿಗಳು ನಿಗದಿಪಡಿಸಿದಷ್ಟು ಶುಲ್ಕವನ್ನು ತೆರಲೇಬೇಕಾದ ವ್ಯವಸ್ಥೆ  ಜಾರಿಗೆ ಬರಲಿದೆ.

*ಪ್ರೀ ಪೇಯ್ಡ್ ಮೀಟರ್ ಎಂಬ ರಾಷ್ಟ್ರೀಯ ಕುತಂತ್ರ*

ಎಲ್ಲಕ್ಕಿಂತ ಹೆಚ್ಚಾಗಿ ಖಾಸಗಿ ವಿತರಣ ಕಂಪನಿಗಳಿಗಿದ್ದ ದೊಡ್ಡ ತಕರಾರು ಗ್ರಾಹಕ ವರ್ಗಗಳು ಶುಲ್ಕವನ್ನು ಪಾವತಿ ಮಾಡುವುದು ವಿದ್ಯುತ್ತಿನ ಸಬರಾಜನ್ನು ಮಾಡಿದ ತಿಂಗಳ ನಂತರ. ಆದರೆ ಆ ವರ್ಗಗಳು ತಿಂಗಳ ನಂತರ ಶುಲ್ಕ ಪಾವತಿ ಮಾಡದಿದ್ದರೆ? ಅದರಿಂದ ತಮ್ಮ ಇಡೀ ವ್ಯವಹಾರ ಯೋಜನೆಯೇ ತಳಕೆಳಗಾಗುವುದರಿಂದ ಈ ಖಾಸಗೀ ಕಂಪನಿಗಳು ಪ್ರೀ ಪೇಯ್ಡ್ ಮೀಟರಿಂಗ್ ಯೋಜನೆಯನ್ನು ಮುಂದಿಟ್ಟಿವೆ. ಸರ್ಕಾರ ಇದನ್ನು ಕೂಡ ಚಾಚೂ ತಪ್ಪದೆ ಒಪ್ಪಿಕೊಂಡಿದೆ.

ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರಿಂಗ್ ಯೋಜನೆಯೆಂದರೆ ಪ್ರೀ ಪೀಯ್ಡ್ ಮೊಬೈಲ್ ರೀ ಚಾರ್ಜ್ ಇದ್ದಂತೆ. ಬಳಸುವ ಮುನ್ನವೇ ದುಡ್ಡು ಕಟ್ಟಬೇಕು. ಎಷ್ಟು ದುಡ್ಡು ಕಟ್ಟಲಾಗಿದೆಯೋ ಅಷ್ಟರವರೆಗೆ ಸೇವೆ ಲಭ್ಯ. ಆ ನಂತರ ಮತ್ತೆ ದುಡ್ಡು ತುಂಬುವವರೆಗೆ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಕಟ್! ಹಾಗೆಯೇ ವಿದ್ಯುತ್ ಕ್ಷೇತ್ರದಲ್ಲೂ ಇನ್ನು ಮುಂದೆ  ಗ್ರಾಹಕರು ವಿದ್ಯುತ್ತನ್ನು ಬಳಸುವ ಮುಂಚೆಯೇ ಅದರ ಶುಲ್ಕವನ್ನು ತಮ್ಮ ಬ್ಯಾಂಕ್ ಅಕೌಂಟಿನಲ್ಲಿ ತುಂಬಿರಬೇಕು. ಅಥವಾ ಗ್ರಾಹಕರ ಅಕೌಂಟಿನಲ್ಲಿ ಎಷ್ಟು ಹಣವಿದೆಯೋ ಅಷ್ಟರವರೆಗೆ ವಿದ್ಯುತ್ ಸರಬರಜಾಗುತ್ತದೆ. ಹಣ ಮುಗಿದೊಡನೆ ವಿದ್ಯುತ್ ನಿಲ್ಲುತ್ತದೆ. ಇದರಿಂದ ಖಾಸಗಿ ವಿತರಕರ ಲಾಭ ಖಾತರಿಯಾಗುತ್ತದೆ. ಆದರೆ ಬಡ-ರೈತಾಪಿಯ ಬದುಕು??

ಆದರೂ ಮೋದಿ ಸರ್ಕಾರ 2019ರಿಂದಲೇ ಸದ್ದಿಲ್ಲದೆ ಪ್ರೀ ಪೀಯ್ದ್ ಮೀಟರಿಂಗ್ ಯೋಜನೆಗೆ ಸನ್ನಾಹ ಪ್ರಾರಂಭಿಸಿದೆ. ಹಾಗೆ ನೋಡಿದರೆ ವಿದ್ಯುತ್ ಕೇಂದ್ರ ಮತ್ತು ರಾಜ್ಯ ಎರಡಕ್ಕು ಸಂಬಂಧಿಸಿದ ಸಮವರ್ತಿ ಪಟ್ಟಿಯಲ್ಲಿದೆ. ಆದರೆ ರಾಜ್ಯಗಳ ಸಮ್ಮತಿಯನ್ನೂ ಪಡೆಯದೆ ಹಾಗೂ ಯಾವುದೇ ಶಾಸನಗಳ ಬೆಂಬಲವೂ ಇಲ್ಲದಂತೆ ಮೋದಿ ಸರ್ಕಾರ 2019ರಿಂದಲೇ ಒಂದು ರಾಷ್ಟೀಯ ಸ್ಮಾರ್ಟ್ ಮೀಟರಿಂಗ್ ಕಾರ್ಯಕ್ರಮ ಪ್ರಾರಂಭಿಸಿದೆ. 2020ರ ಬಜೆಟ್ಟಿನಲ್ಲೂ ಸಹ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ದೇಶದ 22 ಕೋಟಿ ವಿದ್ಯುತ್ ಮೀಟರ್‌ಗಳನ್ನು ಹಂತಹಂತವಾಗಿ ಸ್ಮಾರ್ಟ್ ಮತ್ತು ಪ್ರೀ ಪೀಯ್ಡ್ ಮೀಟರ್ ಆಗಿ ಬದಲಾಯಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

ಕೇಂದ್ರದ ಶಕ್ತಿ ಸಚಿವಾಲಯದ ಪೋರ್ಟಲ್ ನಲ್ಲಿ ದೇಶದಲ್ಲಿ ಈ ಸ್ಮಾರ್ಟ್ ಮೀಟರಿಂಗ್ ಯಾವ ಗತಿಯಲ್ಲಿ ನಡೆಯುತ್ತಿದೆ ಎಂಬುದರ ಮೇಲೆ ನಿಗಾ ಇಡೂತ್ತಾ ತ್ವರಿತಗೊಳಿಸಲು ನ್ಯಾಷನಲ್ ಸ್ಮಾರ್ಟ್ ಗ್ರಿಡ್ ಮಿಷನ್ ಎಂಬ ಉಪ ಇಲಾಖೆಯನ್ನೇ ತೆರೆಯಲಾಗಿದೆ. ಅದರ ಡ್ಯಾಷ್ ಬೋರ್ಡ್ ಹೇಳುವಂತೆ 1.11 ಕೋಟಿ ಸ್ಮಾರ್ಟ್ ಮೀಟರ್ಗಳ ಸ್ಯಾಂಕ್ಷನ್ ಆಗಿದ್ದು 22 ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಅದರಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಅಳವಡಿಸಲಾಗಿರುವ 22 ಸಾವಿರ ಸ್ಮಾರ್ಟ್ ಮೀಟರ್ಗಳು ಸೇರಿಕೊಂಡಿವೆ.

ಇದಲ್ಲದೆ ಉತ್ತರದ ಹಲವಾರು ರಾಜ್ಯಗಳಲ್ಲಿ ಈಗಾಗಲೇ 2.5  ಲಕ್ಷ ಪ್ರೀ ಪೇಯ್ಡ್ ಮೀಟರ್ಗಳನ್ನು ಹಾಕಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳನ್ನು ಈ ವೆಬ್ಸೈಟಿನಲ್ಲಿ ನೋಡಬಹುದು:

https://www.nsgm.gov.in/en/state-wise-map
ಹೀಗಾಗಿ ಈ ಮಸೂದೆ ಈ ಅಧಿವೇಶನದಲ್ಲಿ ಪಾಸಾಗದಿದ್ದರೂ ಪ್ರೀ ಪೀಯ್ದ್ ಮೀಟರಿಂಗ್ ಅರ್ಥಾತ್ ಜನರನ್ನು ಕತ್ತಲಿಂದ ಕಗ್ಗತ್ತಲಿಗೆ ದೂಡುವ ಕಾರ್ಯಕ್ರಮ ಮುಂದುವರೆಯುವ ಎಲ್ಲಾ ಸಾಧ್ಯತೆಗಳಿದೆ.

*ಕಾರ್ಪೊರೇಟ್ ಗಳಿಗೆ  ಬೆಳಕೆಂದರೆ ದೇಶಕ್ಕೆ  ಕತ್ತಲೇ*

ಹಾಗೆ ನೋಡಿದರೆ ಖಾಸಗಿ ವಿತರಕರು ಈಗಾಗಲೇ ಮಾರ್ಕೆಟ್‌ನಲ್ಲಿದ್ದಾರೆ. ದೇಶದ ಶೇ. 10 ರಷ್ಟು ವಿತರಣೆ ಖಾಸಗಿ ಸುಫರ್ದಿಯಲ್ಲಿದೆ. ಆದರೆ ಅದು ಮುಂಬೈ, ದೆಹಲಿ, ರಾಜಸ್ಥಾನ್ ಗಳ ಲಾಭ ಖಾತರಿ ನಗರಗಳಲ್ಲಿ ಮಾತ್ರ. ಅವರಿಗೆ ಒರಿಸ್ಸಾ ಹಾಗೂ ಬಿಹಾರಗಳ ನಗರಗಳ ವಿತರಣೆಯ ಅವಕಾಶಗಳಿದ್ದರೂ ಅದನ್ನು ಆಯ್ದುಕೊಳ್ಳಲಿಲ್ಲ. ಕಾರಣ ಅದು ಲಾಭದಾಯಕವಲ್ಲ. ಹೀಗಾಗಿ ನಾಳೆ ಸರ್ಕಾರೀ ವಿತರಣಾ ಕಂಪನಿಗಳನ್ನು ಸರ್ಕಾರಗಳೇ ಕೊಂದು ಹಾಕಿ ಕೇವಲ ಖಾಸಗಿಗಳೇ ಉಳಿದರೆ ಗ್ರಾಮೀಣ ಪ್ರದೇಶಗಳಿಗೆ ಮತ್ತು ಬಡಮಧ್ಯಮ ವಸತಿ ಪ್ರದೇಶಗಳಿಗೆ ಹಾಗೂ ಅವರ ಉದ್ದಿಮೆಗಳಿಗೆ ವಿದ್ಯುತ್ ಸಿಗುವ ಖಾತರಿಯೇನು?

ಜೊತೆಗೆ ಸುಮಾರು 25 ಲಕ್ಷದಷ್ಟು ಉದ್ಯೋಗಿಗಳಿರುವ  ವಿದ್ಯುತ್ ವಿತರಣಾ ಕ್ಷೇತ್ರ ಖಾಸಗಿಯಾದರೆ ಅರ್ಧಕ್ಕರ್ಧ ಉದ್ಯೋಗಿಗಳು ಬೀದಿಪಾಲಾಗಲಿದ್ದಾರೆ.

ಆದ್ದರಿಂದ ಶತಾಯ ಗತಾಯ ಈ ದೇಶದ ಎಲ್ಲಾ ಜನರು ವಿದ್ಯುತ್ ಕ್ಷೇತ್ರದ ಈ ದೇಶದ್ರೋಹೀ ಜನದ್ರೋಹೀ ಖಾಸಗೀಕರಣವಾಗದಂತೆ ಸದಾ ಎಚ್ಚರದಿಂದಿರಬೇಕಿದೆ.

ಆದ್ದರಿಂದ ದೆಹಲಿಯಲ್ಲಿ ರೈತರು ಮೂರು ರೈತ ವಿರೋಧಿ ಕಾಯಿದೆಗಳನ್ನು ಮೋದಿ ಸರ್ಕಾರ ಹಿಂತೆಗೆದುಕೊಂಡ ಮೇಲೂ MSP ಯನ್ನು ಕಾಯಿದೆ ಮಾಡಲು ಹಾಗೂ ವಿದ್ಯುತ್ ಮಸೂದೆಯನ್ನು ಹಿಂತೆಗೆದುಕೊಳ್ಳಲು ಮುಂದುವರೆಸಿರುವ ಹೋರಾಟಕ್ಕೆ ಇಡೀ ದೇಶದ ಜನ ಒಕ್ಕೊರಲಿಂದ ಸಾಥ್ ಕೊಡಬೇಕಿದೆ.

– ಶಿವಸುಂದರ್

ಕೃಪೆ: ವಾರ್ತಾಭಾರತಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights