ರೈತಾಂದೋಲನಕ್ಕೆ ದಿಗ್ವಿಜಯ; ಬೆಂಗಳೂರಿನಿಂದ ಮೈಸೂರಿಗೆ ಬೈಕ್-ಕಾರ್ ಜಾಥಾ ಹೊರಟ ಜನಶಕ್ತಿ!
ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ದೇಶದ ರೈತರು ಕಳೆದ ಒಂದೂವರೆ ವರ್ಷದಿಂದ ವಿರೋಧಿಸುತ್ತಲೇ ಇದ್ದಾರೆ. ಆದರೆ, ಬೃಹತ್ ಹೋರಾಟದ ಕಣಕ್ಕೆ ಧುಮುಕಿದ್ದು ಮಾತ್ರ ಕಳೆದ ವರ್ಷದ ನವೆಂಬರ್ 26 ರಂದು. ಪಂಜಾಬ್ ಮತ್ತು ಹರಿಯಾಣದ ರೈತರು ಕೇಂದ್ರ ಸರ್ಕಾರದ ಹತ್ತಾರು ಅಡೆತಡೆ ಲಾಠಿಚಾರ್ಚ್, ಅಶ್ರುವಾಯು ದಾಳಿಗಳನ್ನೂ ದಾಟಿ ದೆಹಲಿಯ ಗಡಿಗಳನ್ನು ತಲುಪಿದ್ದು ಇಂದು ಇತಿಹಾಸ. ಒಂದು ವರ್ಷವಾದರೂ ಈ ಹೋರಾಟ ಮುಂದುವರೆಯುತ್ತಲೇ ಇದೆ. ಹೀಗಾಗಿ ಈ ಹೋರಾಟಕ್ಕೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ದೇಶಾದ್ಯಂತ ಹಲವರು ಇಂದು ಈ ಹೋರಾಟವನ್ನು ಬೆಂಬಲಿಸಿ ಹಲವು ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ. ಕರ್ನಾಟಕ ಜನಶಕ್ತಿ ಸಂಘಟನೆಯೂ ಸಹ ಈ ರೈತ ಹೋರಾಟವನ್ನು ಬೆಂಬಲಿಸಿ ಇಂದು ಬೆಂಗಳೂರಿನಿಂದ ಮೈಸೂರಿಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದೆ.
ಕರ್ನಾಟಕ ಜನಶಕ್ತಿಯಿಂದ ಬೈಕ್-ಕಾರ್ ರ್ಯಾಲಿ:
ದೇಶದ ರೈತ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ಜನಶಕ್ತಿ ಸಂಘಟನೆ ಇಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬೆಂಗಳೂರಿನ ಮೌರ್ಯ ವೃತ್ತದ ಬಳಿ ಬೈಕ್ ಮತ್ತು ಕಾರ್ ಜಾಥವನ್ನು ಹಮ್ಮಿಕೊಂಡಿತ್ತು. ಈ ಜಾಥ ಬೆಂಗಳೂರಿನಿಂದ ಹೊರಟು ಮಂಡ್ಯ ತಲುಪಲಿದೆ. ಮಂಡ್ಯಾದಲ್ಲೂ ಅಸಂಖ್ಯಾತ ಹೋರಾಟಗಾರರ ಜೊತೆಯಾಗುವ ಈ ಜಾಥ ನಂತರ ಶ್ರೀರಂಗಪಟ್ಟಣ ತಲುಪಿ ಅಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಹೋರಾಟಗಾರರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ಜನಶಕ್ತಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರೈತಾಂದೋಲನ: ಸರ್ವಾಧಿಕಾರದ ಅಹಂ ಮುರಿದ ಸಮರ ಸತ್ಯಾಗ್ರಹ!
ಮೌರ್ಯ ವೃತ್ತದ ಬಳಿ ಬೈಕ್-ಕಾರ್ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಜನಶಕ್ತಿ ಸಂಘದ ಗೌರವಾಧ್ಯಕ್ಷರಾದ ಗೌರಿ, “ಕೇಂದ್ರ ಸರ್ಕಾರ ಮಾತ್ರವಲ್ಲ ರಾಜ್ಯ ಸರ್ಕಾರವೂ ರೈತ ವಿರೋಧಿ ಮತ್ತು ಜನ ವಿರೋಧಿಯಾದಂತಹ ಹತ್ತಾರು ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಎಲ್ಲಾ ಕಾಯ್ದೆಗಳ ವಿರುದ್ಧ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ರೈತರಿಗೆ ಬೆಂಬಲ ಸೂಚಿಸಿ ನಾವೂ ಸಹ ಹೋರಾಟದ ಕಣಕ್ಕೆ ಧುಮುಕಬೇಕಾದದ್ದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಕರ್ನಾಟಕ ಜನಶಕ್ತಿ ಅದನ್ನೇ ಮಾಡಿದೆ. ಅಲ್ಲದೆ, ಕಳೆದ ಒಂದು ವರ್ಷದಿಂದ ಜನಶಕ್ತಿ ಪ್ರತ ಹಳ್ಳಿ ಹಳ್ಳಿಗೆ ತಲುಪಿ ರೈತ ವಿರೋಧಿ ಕಾಯ್ದೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಲ್ಲಿ ಸಫಲವಾಗಿದೆ” ಎಂದು ತಿಳಿಸಿದರು. ಈ ಜಾಥಾದಲ್ಲಿ ಮಾಜಿ ಸಚಿವೆ-ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ ಸಹ ಭಾಗಿಯಾಗಿದ್ದರು.
ಪ್ರಧಾನಿ ಆಶ್ವಾಸನೆಯ ನಂತರವೂ ಹೋರಾಟವೇಕೆ?
ರೈತ ಹೋರಾಟದ ಕಾವಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಯನ್ನು ಹಿಂಪಡೆಯುವ ಆಶ್ವಾಸನೆ ನೀಡಿದ್ದಾರೆ. ಆದರೆ, ಸಂಸತ್ನಲ್ಲಿ ಅಧೀಕೃತವಾಗ ಶಾಸನಗಳನ್ನು ಹಿಂಪಡೆಯುವ ಮತ್ತು ಕನಿಷ್ಟ ಬೆಂಬಲ ಬೆಲೆ (MSP) ನೀತಿಯನ್ನು ಜಾರಿಗೊಳಿಸುವ ವರೆಗೆ ನಾವು ಹೋರಾಟದ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಇದರ ಬೆನ್ನಿಗೆ ಒಂದು ವರ್ಷ ಪೂರೈಸಿರುವ ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಇಂದು ದೇಶದಾದ್ಯಂತ ಹಲವು ಪ್ರಗತಿಪರ ಹೋರಾಟಗಾರರು ವಿವಿಧ ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ ಎಂಬುದು ಉಲ್ಲೇಖಾರ್ಹ.
ಇದನ್ನೂ ಓದಿ: ರೈತ ಹೋರಾಟಕ್ಕೆ ಒಂದು ವರ್ಷ: ಅನ್ನದಾತರ ಸಂಘರ್ಷದ ಪ್ರಮುಖ ಹೆಜ್ಜೆಗಳು!

