Fact Check: ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಉತ್ಪಾದನೆ? ಸತ್ಯವೇನು?

ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಹಾಳೆಗಳನ್ನು ಯಂತ್ರಗಳ ಮೂಲಕ ಧಾನ್ಯಗಳ ಆಕಾರದಲ್ಲಿ ಪರಿವರ್ತಿಸುವುದು ಈ ವೀಡಿಯೊದಲ್ಲಿ ಕಾಣುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಅಲ್ಲಿ ನಿಜಕ್ಕೂ ಏನು ಮಾಡುತ್ತಿದ್ದಾರೆ ಎಂದು ನೋಡೋಣ.

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿಕೊಂಡು ರಿವರ್ಸ್‌ ಇಮೇಜ್‌ ಹುಡುಕಾಟ ನಡೆಸಿದಾಗ, ಚೀನಾದ ಸುದ್ದಿ ವೆಬ್‌ಸೈಟ್ ‘Xinhuanet.com’ ಪ್ರಕಟಿಸಿದ ಲೇಖನದಲ್ಲಿ ಕೂಡಾ ಇದೇ ರೀತಿಯ ಚಿತ್ರಗಳು ಕಂಡುಬಂದಿದೆ. ಪ್ಲಾಸ್ಟಿಕ್ ಅಕ್ಕಿ ತಯಾರಿಸಲಾಗುತ್ತಿದೆ ಎಂಬ ಸುದ್ದಿಯೊಂದಿಗೆ ಈ ವೀಡಿಯೊ 2011 ರಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ ಎಂದು ವರದಿಯಾಗಿದೆ. ‘Xinhuanet.com’ ಇದನ್ನು ಪ್ಲಾಸ್ಟಿಕ್ ಉತ್ಪಾದನಾ ಕಂಪನಿಯಲ್ಲಿ ಪ್ಲಾಸ್ಟಿಕ್ ಗ್ರ್ಯಾನ್ಯುಲೇಷನ್ ಪ್ರಕ್ರಿಯೆಯ ದೃಶ್ಯಗಳು ಎಂದು ವರದಿ ಮಾಡಿದೆ.

ಲೇಖನದಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಹಲವಾರು ಪ್ಲಾಸ್ಟಿಕ್ ಉತ್ಪಾದನಾ ಕಂಪನಿಗಳು ಪ್ಲಾಸ್ಟಿಕ್ ಪೆಲೆಟೈಜರ್ ಯಂತ್ರಗಳನ್ನು ಬಳಸಿಕೊಂಡು ಈ ಮರು-ಬಳಕೆಯ ಪ್ಲಾಸ್ಟಿಕ್ ಉಂಡೆಗಳನ್ನು ಉತ್ಪಾದಿಸುತ್ತವೆ. ಈ ಅರೆ-ಸಿದ್ಧಪಡಿಸಿದ ಕಚ್ಚಾ ಪ್ಲಾಸ್ಟಿಕ್ ಕಣಗಳನ್ನು ಸಾಮಾನ್ಯವಾಗಿ ಸಂಗ್ರಹಣೆ ಮತ್ತು ಸಾಗಣೆಯ ಸಮಯದಲ್ಲಿ ವಸ್ತುಗಳನ್ನು ಒಡೆಯದೇ ಇರಲು ಅಥವಾ ಮುರಿಯದೇ ಇರಲು ಕುಶನ್ ಮಾಡಲು ಬಳಸಲಾಗುತ್ತದೆ. ಪ್ಲಾಸ್ಟಿಕ್ ಉತ್ಪಾದನಾ ಕಂಪನಿಯಲ್ಲಿ ಪ್ಲಾಸ್ಟಿಕ್ ಕಣಗಳ ಉತ್ಪಾದನೆ ಮಾಡುತ್ತಿರುವ ಇದೇ ರೀತಿಯ ವೀಡಿಯೊವನ್ನು ಇಲ್ಲಿ ನೋಡಬಹುದು.

ಅಲ್ಲದೆ, ಇನ್ನೊಬ್ಬ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವೀಡಿಯೊದ ಸ್ಪಷ್ಟ ಆವೃತ್ತಿಯನ್ನು ನಾವು ಗಮನಿಸಿದ್ದೇವೆ. ಇದರಲ್ಲಿ ಪ್ಲಾಸ್ಟಿಕ್ ಕಣಗಳನು ತುಂಬಿಸಿರುವ ಬ್ಯಾಗ್ ಮೇಲೆ ಬರೆದಿರುವ ‘ಇವಿಎ’ ಅನ್ನು ನಾವು ನೋಡಿದ್ದೇವೆ. ಎಥಿಲೀನ್ ವಿನೈಲ್ ಅಸಿಟೇಟ್ (ಇವಿಎ) ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಈ ಪ್ಲಾಸ್ಟಿಕ್‌ ಕಣಗಳನ್ನು ತಯಾರಿಸಲಾಗುತ್ತದೆ. ಇದೇ ರೀತಿಯ ಬ್ಯಾಗ್ ವಿವಿಧ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಕಂಡುಬಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಬ್ಯಾಗ್‌ನಲ್ಲಿ, ನಾವು ‘ಹನ್ವಾ ಟೋಟಲ್ ಪೆಟ್ರೋಕೆಮಿಕಲ್ ಕಂಪನಿ ಲಿಮಿಟೆಡ್’ ಲೋಗೋವನ್ನು ಕೂಡಾ ನೋಡಬಹುದು. ಹನ್ವಾ ಟೋಟಲ್‌ ಪೆಟ್ರೋಕೆಮಿಕಲ್ ಕಂ. ಲಿಮಿಟೆಡ್ ದಕ್ಷಿಣ ಕೊರಿಯಾ ಮೂಲದ ರಾಸಾಯನಿಕ ಕಂಪನಿಯಾಗಿದೆ. ಹನ್ವಾ ಟೋಟಲ್ ಪೆಟ್ರೋಕೆಮಿಕಲ್ ಕಂ. ಲಿಮಿಟೆಡ್‌ನಲ್ಲಿ EVA ಪ್ಲಾಸ್ಟಿಕ್ ಗ್ರ್ಯಾನ್ಯೂಲ್ ಉತ್ಪಾದನೆಯ ವಿವರಗಳನ್ನು ಇಲ್ಲಿ ನೋಡಬಹುದು.

2016 ರಲ್ಲಿ ನೈಜೀರಿಯಾ ಕಸ್ಟಮ್ಸ್ ಅಧಿಕಾರಿಗಳು 25 ಕೆಜಿಯ 102 ಅಕ್ಕಿ ಚೀಲಗಳನ್ನು “ಪ್ಲಾಸ್ಟಿಕ್ ಅಕ್ಕಿ” ತುಂಬಿದ್ದಾರೆ ಎಂದು ಆರೋಪಿಸಿ ವಶಪಡಿಸಿಕೊಂಡಿದ್ದರು. ನಂತರ, ನೈಜೀರಿಯಾ ಸರ್ಕಾರವು ವಶಪಡಿಸಿಕೊಂಡ ಅಕ್ಕಿ ಚೀಲಗಳಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಹೊಂದಿಲ್ಲ ಎಂದು ಅಧಿಕೃತವಾಗಿ ಘೋಷಿಸಿತು. ಹಲವಾರು ಸುದ್ದಿ ವೆಬ್‌ಸೈಟ್‌ಗಳು ‘ಪ್ಲಾಸ್ಟಿಕ್ ಅಕ್ಕಿ’ ಪರಿಕಲ್ಪನೆಯು ಸುಳ್ಳು ಎಂದು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಪ್ಲಾಸ್ಟಿಕ್ ಕಣಗಳ ಉತ್ಪಾದನಾ ಪ್ರಕ್ರಿಯೆಯನ್ನು ತೋರಿಸುತ್ತದೆಯೇ ಹೊರತು ಪ್ಲಾಸ್ಟಿಕ್ ಅಕ್ಕಿ ಅಲ್ಲ ಎಂದು ತೀರ್ಮಾನಿಸಬಹುದು.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸಹ ತನ್ನ ಸುಳ್ಳು ಬಸ್ಟರ್ಸ್‌ ವಿಭಾಗದಲ್ಲಿ ಪ್ಲಾಸ್ಟಿಕ್ ಅಕ್ಕಿ ತಯಾರಿಕೆ ಪ್ರತಿಪಾದನೆಯನ್ನು ತಳ್ಳಿಹಾಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ಲಾಸ್ಟಿಕ್ ಕಣಗಳ ಉತ್ಪಾದನಾ ಪ್ರಕ್ರಿಯೆಯ ವೀಡಿಯೊವನ್ನು ಅಕ್ಕಿ ಗಿರಣಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆಯ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Fact Check: ಯುವಕನೊಬ್ಬ ಗೆಳೆಯರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳವ ವೇಳೆ ಸಾವನ್ನಪ್ಪಿದ ಘಟನೆ ನಿಜವಾಗಿ ನಡೆದಿಲ್ಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights