ಕಾಬೂಲ್‌ ಮಕ್ಕಳ ಆಸ್ಪತ್ರೆಗೆ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ ಭಾರತ; 50,000 ಟನ್ ಗೋಧಿ ಕಳಿಸಲು ಚಿಂತನೆ!

ಕಳೆದ ಆಗಸ್ಟ್‌ನಲ್ಲಿ ಕಾಬೂಲ್ಅನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ, ಭಾರತವು ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವನ್ನು ನೀಡಲು ಮುಂದಾಗಿದೆ ಮಕ್ಕಳ ರಕ್ಷಣೆಗಾಗಿ ಮಕ್ಕಳ ಆಸ್ಪತ್ರೆಗಳಿಗೆ 1.6 ಟನ್ ತುರ್ತು ಜೀವ ಉಳಿಸುವ ಔಷಧಿಗಳನ್ನು ಕಳುಹಿಸಿದೆ.

ಶುಕ್ರವಾರ ಕಾಬೂಲ್‌ನಿಂದ ದೆಹಲಿಗೆ 10 ಭಾರತೀಯರು ಮತ್ತು 94 ಆಫ್ಘನ್ನರನ್ನು ಕರೆತಂದಿದ್ದ ರಿಟರ್ನ್ ವಿಮಾನದಲ್ಲಿ ಈ ಔಷಧಿಗಳನ್ನು ಕಳುಹಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನವು 50,000 ಮೆಟ್ರಿಕ್ ಟನ್ ಗೋಧಿಯನ್ನು ಪಾಕಿಸ್ತಾನದ ರಸ್ತೆ ಮೂಲಕ ಆಫ್ಘಾನಿಸ್ತಾನಕ್ಕೆ ಕಳುಹಿಸಲು ಚಿಂತನೆ ನಡೆಸುತ್ತಿದ್ದವು. ಈ ನಡುವೆಯೇ ಅಫ್ಘಾನ್‌ ವಿಮಾನ ಭಾರತಕ್ಕೆ ಬಂದಿದ್ದರಿಂದಾಗಿ ಆ ವಿಮಾನದಲ್ಲೇ ಔಷಧಿಯನ್ನು ರವಾನಿಸಿದೆ.

ಕಾಬೂಲ್‌ನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಪ್ರತಿನಿಧಿಗಳಿಗೆ ಔಷಧಿಗಳನ್ನು ಹಸ್ತಾಂತರಿಸಲಾಗುವುದು ಮತ್ತು ಕಾಬೂಲ್‌ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಅವುಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.

ಆಫ್ಘನ್ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಸೇರಿದಂತೆ ಭಾರತೀಯರು ಮತ್ತು 94 ಆಫ್ಘನ್ನರನ್ನು ವಿಶೇಷ ವಿಮಾನವು ಕಾಬೂಲ್‌ನಿಂದ ನವದೆಹಲಿಗೆ ಶುಕ್ರವಾರ ಕರೆತಂದಿತು.

ಇದನ್ನೂ ಓದಿ: ಜೂಮ್‌ ಸಭೆ ನಡೆದದ್ದು ಮೂರೇ ನಿಮಿಷ: ಒಂದೇ ಕಂಪನಿಯ 900 ಉದ್ಯೋಗಿಗಳ ವಜಾ!

ಇಲ್ಲಿಯವರೆಗೆ, ಅಫ್ಘಾನಿಸ್ತಾನದಿಂದ ಒಟ್ಟು 669 ಜನರನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 448 ಭಾರತೀಯರು ಮತ್ತು 206 ಆಫ್ಘನ್ನರು. ಈ ಪೈಕಿ, ಆಫ್ಘನ್ ಹಿಂದೂ/ಸಿಖ್ ಅಲ್ಪಸಂಖ್ಯಾತ ಸಮುದಾಯದ ಜನರು ಸೇರಿದ್ದಾರೆ.

ಭೂ ಮಾರ್ಗದ ಮೂಲಕ ಅಫ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಸಾಗಿಸಲು ಯೋಜಿಸಲಾಗಿದೆ. ಇದಕ್ಕಾಗಿ, ಪಾಕಿಸ್ತಾನದ ರಸ್ತೆಯ ಮೂಲಕ 5,000 ಟ್ರಕ್‌ಗಳು ಹೋಗಬೇಕಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಘಾ-ಅಟ್ಟಾರಿ ಗಡಿಯಲ್ಲಿರುವ ಝೀರೋ ಪಾಯಿಂಟ್‌ನಲ್ಲಿ ಭಾರತೀಯ ಟ್ರಕ್‌ಗಳಿಂದ ಗೋಧಿಯನ್ನು ಇಳಿಸಿ, ಅವುಗಳನ್ನು ಅಫ್ಘಾನ್ ಟ್ರಕ್‌ಗಳಿಗೆ ಲೋಡ್ ಮಾಡಬೇಕಾಗುತ್ತದೆ ಎಂದು ಲಾಜಿಸ್ಟಿಕ್ಸ್ ಸೂಚಿಸುತ್ತದೆ.

“ಪಾಕಿಸ್ತಾನದ ಮೂಲಕ ಭಾರತವು ನೀಡುವ ಗೋಧಿಯನ್ನು ಸಾಗಿಸಲು “ಅಫಘಾನ್ ಸಹೋದರರ” ಮನವಿಯನ್ನು “ಅನುಕೂಲಕರವಾಗಿ ಪರಿಗಣಿಸುತ್ತೇವೆ” ಎಂದು ಕಳೆದ ತಿಂಗಳು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ತಾಲಿಬಾನ್ ನಿಯೋಗಕ್ಕೆ ತಿಳಿಸಿದ್ದಾರೆ.

ತಾಲಿಬಾನ್‌ನ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕೆ ಸಚಿವರು ಹಾಗೂ ನಿಯೋಗದ ಹಿರಿಯ ಸದಸ್ಯರೊಂದಿಗೆ ಬಂದಿದ್ದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರಿಗೆ ಇಮ್ರಾನ್ ಖಾನ್ ಇದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ನಾಲ್ವರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮೆರೆದ ದುಷ್ಕರ್ಮಿಗಳು; ಐವರ ಬಂಧನ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights