ಶಾಲೆಯ ದಲಿತ ಅಡುಗೆ ಮಹಿಳೆ ವಜಾ: ಮಧ್ಯಾಹ್ನದ ಊಟ ನಿರಾಕರಿಸಿದ ದಲಿತ ವಿದ್ಯಾರ್ಥಿಗಳು!
ಪರಿಶಿಷ್ಟ ಜಾತಿಗೆ ಸೇರಿದ ಅಡುಗೆಯವರನ್ನು ವಜಾಗೊಳಿಸಲಾಗಿದ್ದು, ನಂತರ ದಲಿತ ವಿದ್ಯಾರ್ಥಿಗಳು ಮೇಲ್ಜಾತಿ ಮಹಿಳೆ ಬೇಯಿಸಿದ ಮಧ್ಯಾಹ್ನದ ಊಟವನ್ನು ತಿನ್ನಲು ನಿರಾಕರಿಸಿರುವ ಘಟನೆ ಉತ್ತರಖಂಡದ ಚಂಪಾವತ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ನಂತರ, ಎರಡೂ ಸಮುದಾಯದ ಸದಸ್ಯರು ಒಮ್ಮತಕ್ಕೆ ಬಂದ ಬಳಿಕ ಸಮಸ್ಯೆ ಬಗೆಹರಿದಿದೆ ಎಂದು ಜಿಲ್ಲಾಡಳಿತ ಭಾನುವಾರ ತಿಳಿಸಿದೆ.
“ಸೋಮವಾರದಿಂದ ದಲಿತ ವಿದ್ಯಾರ್ಥಿಗಳು ಹೊಸದಾಗಿ ನೇಮಕವಾಗಿರುವ ಮಹಿಳೆ ತಯಾರಿಸಿದ ಆಹಾರವನ್ನು ತಿನ್ನುವುದನ್ನು ಪುನರಾರಂಭಿಸುತ್ತಾರೆ ಎಂದು ನಾನು ಭಾವಿಸಿದ್ದೇನೆ” ಎಂದು ಚಂಪಾವತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿನೀತ್ ತೋಮರ್ ಹೇಳಿದ್ದಾರೆ.
ಸುಖಿ ಡಂಗ್‌ನ ಸರ್ಕಾರಿ ಶಾಲೆಯಲ್ಲಿ 6 ರಿಂದ 8ನೇ ತರಗತಿಗಳಲ್ಲಿ ಓದುತ್ತಿರುವ ಮೇಲ್ಜಾತಿ ಸಮುದಾಯಗಳ 43 ಮಕ್ಕಳು ದಲಿತ ಮಹಿಳೆ ಬೇಯಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದರು. ನಂತರ ದಲಿತ ಅಡುಗೆಯವರನ್ನು ವಜಾಗೊಳಿಸಲಾಗಿತ್ತು.
ಆದಾಗ್ಯೂ, ಅವರ ನೇಮಕಾತಿಯಲ್ಲಿನ ಕಾರ್ಯವಿಧಾನದ ಲೋಪದಿಂದಾಗಿಯೇ ಅವರನ್ನು ಪದಚ್ಯುತಗೊಳಿಸಲಾಗಿತ್ತು ಎಂದು ಚಂಪಾವತ್ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳೀದ್ದಾರೆ.
ಆಕೆಯ ಬದಲಿಗೆ ಮೇಲ್ಜಾತಿ ಮಹಿಳೆಯೊಬ್ಬರು ನೇಮಿಸಲಾಗಿತ್ತು.
ಇದಕ್ಕೆ ಪ್ರತೀಕಾರವಾಗಿ ಶಾಲೆಯ 23 ದಲಿತ ವಿದ್ಯಾರ್ಥಿಗಳು ಹೊಸ ಅಡುಗೆಯವರು ತಯಾರಿಸಿದ ಮಧ್ಯಾಹ್ನದ ಊಟವನ್ನು ಸೇವಿಸಲು ನಿರಾಕರಿಸಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಒಂದು ವಾರದಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ತೋಮರ್ ಹೇಳಿದ್ದಾರೆ.
ದಲಿತ ಅಡುಗೆಯವರನ್ನು ಹೊರಹಾಕಿದ ಸುದ್ದಿ ವರದಿಯಾದ ನಂತರ, ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರದೀಪ್ ತಮ್ತಾ ಅವರು ಮಹಿಳೆಯ ಸಾಂವಿಧಾನಿಕ ಹಕ್ಕುಗಳನ್ನು ಪುನಃಸ್ಥಾಪಿಸಲು ತಮ್ಮ ಪಕ್ಷವು ಹೋರಾಟವನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದಾರೆ.
ದಲಿತ ಮಹಿಳೆಯನ್ನು ಪುನಃ ನೇಮಕ ಮಾಡದಿದ್ದರೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಘೇರಾವ್ ಮಾಡುವುದಾಗಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಸೆಲೆಬ್ರಿಟಿಗಳನ್ನು ಕರೆತರುವ ಜವಾಬ್ದಾರಿ ಸಾಧು ಕೋಕಿಲಾಗೆ!

