Fact check: ರಾಹುಲ್ ಗಾಂಧಿ ನಾನು ಲಂಡನ್ ನಲ್ಲಿ ನೆಲೆಸುತ್ತೇನೆಂದು ಹೇಳಿದ್ದಾರೆ ಎಂಬುದು ನಿಜವಲ್ಲ
ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ನೆಲೆಸುವುದಾಗಿ ಮತ್ತು ಹಿಂದೂಸ್ತಾನಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸಾರ್ವಜನಿಕ ಸಭೆಯೊಂದರಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ

ಈ ಪೋಸ್ಟನ್ನು ಬಹಳಷ್ಟು ಜನರು ಫೇಸ್ಬುಕ್‌ನಲ್ಲಿ ಹಂಚಿಕೊಂಡಿರುವುದನ್ನು ಇಲ್ಲಿ ನೋಡಬಹುದು.
ಈ ಕುರಿತು ಹುಡುಕಿದಾಗ ಈ ವಿಡಿಯೋ ರಾಹುಲ್ ಗಾಂಧಿಯವರು 2019 ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಮಾಡಿದ ಭಾಷಣ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿಯವರ ಸುದೀರ್ಘ ಭಾಷಣದಿಂದ ಆಯ್ದ ಭಾಗವಾಗಿದೆ ಎಂದು ತಿಳಿದುಬಂದಿದೆ. ಅದರ ಸಂಪೂರ್ಣ ವೀಡಿಯೊವನ್ನು ಇಲ್ಲಿ ನೋಡಬಹುದು.

ವೀಡಿಯೊದಲ್ಲಿ ಹಣಕಾಸು ವಂಚನೆಯ ಆರೋಪದ ಮೇಲೆ ದೇಶದಿಂದ ಪಲಾಯನ ಮಾಡಿದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ವೀಡಿಯೊದ 15:10 ಕ್ಕೆ, ರಾಹುಲ್ ಗಾಂಧಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯನ್ನು ಉಲ್ಲೇಖಿಸಲು ಪ್ರಾರಂಭಿಸುತ್ತಾರೆ ಮತ್ತು ವಿಡಿಯೋದ 15:19 ರ ವೇಳೆ, ‘ಏನೂ ಆಗುವುದಿಲ್ಲ, ನಾನು ಲಂಡನ್‌ಗೆ ಹೋಗುತ್ತೇನೆ, ನನ್ನ ಮಕ್ಕಳು ಅಮೆರಿಕಕ್ಕೆ ಹೋಗಿ ಓದುತ್ತಾರೆ, ನನಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿ ಹೇಳುವುದನ್ನು ನಾವು ಕೇಳಬಹುದು. 15:34ರ ವೇಳೆ ರಾಹುಲ್ ಗಾಂಧಿ ‘ನನ್ನ ಬಳಿ ಸಾವಿರಾರು ಕೋಟಿ ರೂಪಾಯಿ ಇದೆ, ಯಾವಾಗ ಬೇಕಾದರೂ ಹೋಗುತ್ತೇನೆ’ ಎಂದು ಮೆಹುಲ್ ಚೋಕ್ಸಿ ಹೇಳಿದ್ದನ್ನು ಉಲ್ಲೇಖಿಸಿ ಹೇಳುತ್ತಾರೆ.
ರಾಹುಲ್ ಗಾಂಧಿಯವರ ಈ ವೈರಲ್ ವಿಡಿಯೋದಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರ ಹೆಸರು ಹೇಳುವುದನ್ನು ಎಡಿಟ್ ಮಾಡಿ ವಿಡಿಯೋ ತಯಾರಿಸಲಾಗಿದೆ. ರಾಹುಲ್ ಗಾಂಧಿಯವರ ಲಾತೂರ್ ಭಾಷಣದ ಸುದ್ದಿ ವರದಿಗಳನ್ನು ಇಲ್ಲಿ ಓದಬಹುದಾಗಿದೆ. ವೈರಲ್ ಆದ ವೀಡಿಯೊ ಎಡಿಟ್ ಮಾಡಲಾಗಿದೆ ಎಂಬುದು ಇದರಿಂದ ಸಾಬೀತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿಯವರ ಹಳೆಯ ಭಾಷಣದ ವೀಡಿಯೊವನ್ನು ಎಡಿಟ್ ಮಾಡಿ ಅವರು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಕುರಿತು ಹೇಳುವುದನ್ನು ಕಟ್ ಮಾಡಿ, ತಾನು ಲಂಡನ್‌ನಲ್ಲಿ ನೆಲೆಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿರಿ: Fact check: ಲಾರಿ ಹತ್ತಿಸಿ ಮೋದಿಯವರನ್ನು ಕೊಲ್ಲಲು ಕಾಂಗ್ರೆಸ್ ಸಂಚು ರೂಪಿಸಿತ್ತು ಎಂಬುದು ಸುಳ್ಳು ಸುದ್ದಿ

