ಫ್ಯಾಕ್ಟ್‌ಚೆಕ್: ಹಿಂದೂ ದೇವತೆ ಸರಸ್ವತಿ ಭಾವಚಿತ್ರವನ್ನು ಒದ್ದ ವ್ಯಕ್ತಿ ಮುಸಲ್ಮಾನನಲ್ಲ? ಹಾಗಿದ್ದರೆ ಮತ್ಯಾರು

ವ್ಯಕ್ತಿಯೊಬ್ಬ ಹಿಂದೂ ವಿದ್ಯಾ ದೇವತೆ ಸರಸ್ವತಿಯ ಭಾವಚಿತ್ರವನ್ನು ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಹಲವು ಸಾಮಾಜಿಕ ಮಾಧ್ಯಮದ ಬಳೆದಾರರು ವಿಡಿಯೊದಲ್ಲಿರುವ ವ್ಯಕ್ತಿ ಮುಸ್ಲಿಂ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ನಮ್ಮ ದೇವರು ಸರಸ್ವತಿಯನ್ನು ಕಾಲಿನಿಂದ ಒದ್ದ ಈ ಜಿಹಾದಿಯನ್ನು ಸುಮ್ಮನೇ ಬಿಡಬಾರದು.. ತಮ್ಮ ಧರ್ಮದ ಬಗ್ಗೆ ಮಾತಾಡಿದರೆ “ಸರ್ ತನ್ ಸೇ ಜುದಾ” ಮಾಡುವ ಭಯಉತ್ಪಾದಕರು.. ಆ ದೇವರೇ ಇವನ ಕಾಲನ್ನು ತನ್ ಸೇ ಜುದಾ ಮಾಡುತ್ತಾರೆ.. ಎಂಬ ಹೇಳಿಕಯೊಂದಿಗೆ ಶುಭ ಎಂಬುವವರು ಟ್ವಿಟರ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://twitter.com/KaramudiMuttu/status/1610225953636241408

ಇದೇ ವಿಡಿಯೋವನ್ನು ಮುತ್ತು ಕರಮುಡಿ ಎಂಬುವವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ದೇವತೆಗೆ ಅವಮಾನ ಮಾಡಿದ ಜಿಹಾದಿ ಎಂದು ವ್ಯಕ್ತಿಯನ್ನು ನಿಂದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ಯೋಗಿಜೀ ಅಭಿಮಾನಿ ಬಳಗ ಎಂಬ ಬಲಪಂಥೀಯ ಫೇಸ್‌ಬುಕ್ ಪೇಜ್‌ನಲ್ಲೂ ಇದೇ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಹಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ವಿಡಿಯೋವನ್ನು ಮುಸ್ಲಿಂ ವ್ಯಕ್ತಿಯಿಂದ ಸರಸ್ವತಿ ತಾಯಿಯ ಫೋಟೋಗೆ ಅವಮಾನ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ವೈರಲ್ ವಿಡಿಯೊದಲ್ಲಿ ಫೋಟೊವನ್ನು ಕಾಲಿನಿಂದ ಒದ್ದದ್ದು ಮುಸ್ಲಿಂ ವ್ಯಕ್ತಿಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಸರಸ್ವತಿ ದೇವರ ಫೋಟೋವನ್ನು ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವ ವ್ಯಕ್ತಿ ಮುಸ್ಲಿಂ ಸಮುದಾಯದವನೇ? ಈ ಘಟನೆ ಎಲ್ಲಿ ನಡೆದಿದೆ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೊ ಗುಜರಾತಿನದ್ದು ಮತ್ತು ವಿಡಿಯೊದಲ್ಲಿರುವ ವ್ಯಕ್ತಿ ಮುಸ್ಲಿಮನಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಡಿಯೊ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಎಬಿಪಿ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ, ವೀಡಿಯೊದಲ್ಲಿರುವ ವ್ಯಕ್ತಿ ಯೋಗೇಶ್ ರಾಥ್ವಾ, ಗುಜರಾತ್‌ನ ಜಿಲ್ಲೆಯ ಛೋಟೌಡೆಪುರದ ನಸ್ವಾಡಿಯಲ್ಲಿರುವ ಗೆಲೆಸರ್ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ. ಈ ಘಟನೆಯು ಡಿಸೆಂಬರ್ 28, 2022 ರಂದು ನಡೆದಿದ್ದು, ಮದ್ಯದ ಅಮಲಿನಲ್ಲಿ ರಥ್ವಾ ಅವರು ಸರಸ್ವತಿಯ ಭಾವಚಿತ್ರಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಫೋಟೊವನ್ನು ಎಸೆದು ತುಳಿದಿದ್ದಾರೆ ಎಂದು ವರದಿ ಆಗಿದೆ.ಕೆಲ ದಿನಗಳ ನಂತರ ಇದರ ವಿಡಿಯೋ ವೈರಲ್ ಆಗಿತ್ತು. ಶಾಲೆಯ ಆಡಳಿತಾಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ರಥ್ವಾ ಅವರನ್ನು ಬಂಧಿಸಿದ್ದಾರೆ.

Zee 24 Kalaak ನ ಮತ್ತೊಂದು ವರದಿಯು ಘಟನೆಯನ್ನು ಉಲ್ಲೇಖಿಸುತ್ತ ಆರೋಪಿಯನ್ನು ಯೋಗೇಶ್ ರಾಥ್ವಾ ಎಂದು ಹೆಸರಿಸಿದೆ.  ಎಲ್ಲಾ ವರದಿಗಳು ಆರೋಪಿಯ ಪೂರ್ಣ ಹೆಸರನ್ನು ಯೋಗೇಶ್ ರಾಥ್ವಾ ಎಂದು ಉಲ್ಲೇಖಿಸಿರುವುದರಿಂದ, ಅವನು ಮುಸ್ಲಿಂ ಅಲ್ಲ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕೋಮು ಆಯಾಮ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಗುಜರಾತ್‌ನ ಛೋಟೌಡೆಪುರದ ನಸ್ವಾಡಿಯಲ್ಲಿರುವ ಗೆಲೆಸರ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಅತಿಥಿ ಶಿಕ್ಷಕ ಯೋಗೇಶ್ ರಾಥ್ವಾ ಎಂಬುವವರು ಪಾನಮತ್ತರಾಗಿ ಶಾಲೆಯ ಸರಸ್ವತಿಯ ಭಾವಚಿತ್ರಕ್ಕೆ ಅವಮಾನ ಮಾಡಿದ ಪ್ರಸಂಗ ನಡೆದಿದೆ. ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದು ಶಿಕ್ಷಕ ಹಿಂದೂ ಸಮುದಾಯಕ್ಕೆ ಸೇರಿದ್ದಾರೆ ಎಂದು ಹೇಳಲಾಗಿದೆ. ಆದರೆ ಸೋಶಿಯಲ್ ಮೀಡಿಯಾ ಬಳಕೆದಾರರು ವ್ಯಕ್ತಿಯನ್ನು ಮುಸ್ಲಿಂ ಸಮುದಾಯಕ್ಕ ಸೇರಿದ್ದಾನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಕೋಮು ಆಯಾಮವನ್ನು ನೀಡಿ ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತಾಯಿಯ ಚಿತಾಭಸ್ಮವನ್ನು ನದಿಯಲ್ಲಿ ಬಿಡಲು ಮೋದಿ ತಮ್ಮೊಂದಿಗೆ ಛಾಯಾಗ್ರಾಹಕನನ್ನು ಕರೆದುಕೊಂಡು ಹೋಗಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights