ಫ್ಯಾಕ್ಟ್‌ಚೆಕ್: ಇದು 2023ರ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಎಂಬುದು ನಿಜವೇ?

ಮುಂಬರುವ 2023ರ ಕರ್ನಾಟಕ ವಿಧಾನಸಭೆಯ ಚುನಾವಣಾ ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣಾ ವೇಳಾ ಪಟ್ಟಿಯೊಂದನ್ನು ಹಂಚಿಕೊಳ್ಳಲಾಗಿದೆ. ಇದರ ಪ್ರಕಾರ ಮಾರ್ಚ್ 27ರಿಂದ ನೀತಿ ಸಂಹಿತಿ ಜಾರಿಗೆ ಬರಲಿದ್ದು , ಏಪ್ರಿಲ್ 17, ಚುನಾವಣಾ ಅಧಿಸೂಚನೆ ಪ್ರಕಟಗೊಳ್ಳುತ್ತದೆ, ಏಪ್ರಿಲ್ 26, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು,  ಏಪ್ರಿಲ್ 27 ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ, ಮೇ12 ಕ್ಕೆ ಮತದಾನ ನಡೆದು, ಮೇ 15ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂಬೆಲ್ಲ ಅಂಶಗಳನ್ನು ದಿನಾಂಕ ಸಹಿತ ಪೋಸ್ಟ್‌ರ್‌ನಲ್ಲಿ ಸೇರಿಸಲಾಗಿದೆ.

ಈ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 2023ರ ವಿಧಾನ ಸಭಾ ಚುನಾವಣಾ ವೇಳಾಪಟ್ಟಿ ನಿಜವೇ ಎಂಬುದನ್ನು ಪರಿಶೀಲಿಸುವಂತೆ ಸಾಮಾಜಿಕ ಮಾಧ್ಯಮದ ಬಳಕೆದಾರರು ಏನ್‌ಸುದ್ದಿ.ಕಾಂ ಗೆ ಸಂದೇಶಗಳ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಪ್ರಕಟಿಸಲಾದ ಚುನಾವಣಾ ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಘೋಷಿಸಿದ 2023 ರ ವಿಧಾನಸಭಾ ಚುನಾವಣೆಯ ನಿಜವಾದ ವೇಳಾ ಪಟ್ಟಿಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ 2023ರ ಚುನಾವಣಾ ವೇಳಾ ಪಟ್ಟಿ ನಿಜವೇ ಎಂದು ಪರಿಶೀಲಿಸಿದಾಗ, ಇದು ನಕಲಿ ವೇಳಾ ಪಟ್ಟಿ ಎಂದು ತಿಳಿದು ಬಂದಿದೆ. ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಈ ಹಿಂದಿನ 2018ರ ಹಳೆಯ ವೇಳಾಪಟ್ಟಿಯ ಫೋಟೊವನ್ನೆ ಎಡಿಟ್ ಮಾಡಲಾಗಿದೆ. ಈ ಫೋಟೊದಲ್ಲಿ 2018 ಇರುವ ಕಡೆ 2023 ಎಂದು (ಎಡಿಟ್) ತಿದ್ದಲಾಗಿದೆ. ಆ ಎಡಿಟ್ ಮಾಡಿದ ಫೋಟೊವನ್ನೇ ಎಲ್ಲೆಡೆ ಶೇರ್ ಮಾಡಲಾಗುತ್ತಿದ್ದು, ಅದನ್ನೆ ಪ್ರಸಕ್ತ ಸಾಲಿನ ವಿಧಾನಸಭೆಯ ಚುನಾವಣೆಯ ವೇಳಾಪಟ್ಟಿ ಎಂದು ಹರಿಯಬಿಡಲಾಗಿದೆ.

2018ರ ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿಯನ್ನೆ ಎಡಿಟ್ ಮಾಡುವ ಮೂಲಕ 2023ರ ವೇಳಾಪಟ್ಟಿ ಎಂದು ಹಂಚಿಕೊಳ್ಳಲಾಗಿದೆ. ಅದರಲ್ಲಿ ವಿಧಾನಸೌಧದ ಚಿತ್ರ ಸಹಿತ ನೀತಿ ಸಂಹಿತೆ ಜಾರಿ , ಚುನಾವಣಾ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ನಾಮಪತ್ರಗಳ ಪರಿಶೀಲನೆ, ಮತದಾನ, ಮತ ಎಣಿಕೆ ಎಂಬೆಲ್ಲ ಅಂಶಗಳನ್ನು ದಿನಾಂಕ ಸಹಿತ ಸೇರಿಸಲಾಗಿದೆ. ಆದರೆ ಇದು ಐದು ವರ್ಷಗಳ ಹಿಂದಿನ (2018ರ) ಚುನಾವಣೆಯ ವೇಳಾಪಟ್ಟಿ ಎಂಬುದು ಖಚಿತವಾಗಿದೆ.  ಇದನ್ನೆ 2023ರ ವೇಳಾಪಟ್ಟಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕರ್ನಾಟಕ ಸೇರಿದಂತೆ 2023 ರಲ್ಲಿ ಮೇ ಆಸುಪಾಸಿಗೆ ಒಟ್ಟು ಒಂಬತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಭಾರತೀಯ ಚುನಾವಣೆ ಆಯೋಗ, ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ರಾಜ್ಯ ಚುನಾವಣೆ ಆಯೋಗವು ಸಿದ್ಧತೆಗಳಲ್ಲಿ ತೊಡಗಿವೆ. ಕರ್ನಾಟಕದ 2022-23 ರ ಬಜೆಟ್‌ ನಂತರ ಚುನಾವಣಾ ವೇಳಾ ಪಟ್ಟಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಕರ್ನಾಟಕ ವಿಧಾನಸಭೆ 2023ರ ಚುನಾವಣೆ ಬಗ್ಗೆ ಆಯೋಗ ಇನ್ನು ಅಧಿಕೃತ ವೇಳಾಪಟ್ಟಿ ಘೋಷಿಸಿಲ್ಲ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟ್‌ 2018ರದ್ದಾಗಿದ್ದು ನಕಲಿ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪತ್ರಕರ್ತ ಸಿದ್ದಿಕ್ ಕಪ್ಪನ್ ಹೆಸರಿನಲ್ಲಿ ಹರಿದಾಡುತ್ತಿವೆ ನಕಲಿ ಟ್ವೀಟ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights