ಫ್ಯಾಕ್ಟ್‌ಚೆಕ್: ಟರ್ಕಿಗೆ ನೆರವು ನೀಡಲು ತೆರಳುತ್ತಿದ್ದ ಭಾರತದ ವಿಮಾನಗಳನ್ನು ಪಾಕಿಸ್ತಾನ ತಡೆಹಿಡಿದೆ ಎಂಬುದು ನಿಜವೇ?

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಅವಶೇಷಗಳಡಿಯಲ್ಲಿ ಬದುಕುಳಿದ ಸಂತ್ರಸ್ತರಿಗಾಗಿ ಶೋಧ ಮುಂದುವರಿದಿದೆ. ಭಯಾನಕ ಅವಘಡದಲ್ಲಿ ಇದುವರೆಗೆ 5,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ಪ್ರಭಾವಿತವಾಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದ್ದಾರೆ. ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರು 3 ತಿಂಗಳ ತುರ್ತು ಪರಿಸ್ಥಿತಿ  ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದಾರೆ.

Image

ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾ  ದೇಶಗಳಿಗೆ ಅನೇಕ ದೇಶಗಳು ಸಹಾಯಹಸ್ತ ಚಾಚಿವೆ. ಭಾರತ ಕೂಡ ವಿವಿಧ ರಕ್ಷಣಾ ಸಾಮಗ್ರಿಗಳನ್ನು ಟರ್ಕಿಗೆ ಕಳುಹಿಸಿಕೊಟ್ಟಿದೆ.

Image

ಆದರೆ ಟರ್ಕಿಗೆ ಹೋಗುತ್ತಿದ್ದ ಭಾರತೀಯ ವಿಮಾನಗಳನ್ನು ಪಾಕಿಸ್ತಾನ ತಡೆದಿವೆ ಎನ್ನುವಂತಹ ಸುದ್ದಿಗಳು ನಿನ್ನೆ ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಟರ್ಕಿಗೆ ಅದರ ಮಿತ್ರದೇಶವೇ ಅಡ್ಡಿಪಡಿಸುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಟರ್ಕಿಗೆ ಹೋಗುತ್ತಿದ್ದ ಭಾರತೀಯ ವಿಮಾನಗಳನ್ನು ಪಾಕಿಸ್ತಾನ ತಡೆದಿವೆ ಎನ್ನುವ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಮುಖ್ಯ ವಾಹಿನಿಗಳಲ್ಲಿ ಪ್ರಸಾರವಾದಂತೆ ಭಾರತದಿಂದ ರಕ್ಷಣಾ ನೆರವು ಸಾಮಗ್ರಿಗಳನ್ನು ಟರ್ಕಿಯ ಭೂಕಂಪ ಪೀಡಿತ ಪ್ರದೇಶಗಳಿಗೆ ಕೊಂಡೊಯ್ಯುವಾಗ ಪಾಕಿಸ್ತಾನ ತಡೆದಿವೆಯೇ ಎಂದು ಪರಿಶೀಲಿಸಿದಾಗ ಅಂತಹ ಯಾವುದೇ ಅಧಿಕೃತ ಸುದ್ದಿ ವರದಿಯಾಗಿಲ್ಲ. ವಾಸ್ತವವಾಗಿ ಪಾಕಿಸ್ತಾನದಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ಅನುಮತಿ ಇಲ್ಲದ ಕಾರಣಕ್ಕೆ ಬೇರೆ ಮಾರ್ಗಗಳ ಮೂಲಕ ಭಾರತೀಯ ಮಿಲಿಟರಿ ಸರಕು ಸಾಗಣೆ ವಿಮಾನಗಳು ಟರ್ಕಿಗೆ ಹೋದವು ಎನ್ನಲಾಗಿದೆ.

ಪಾಕಿಸ್ತಾನದ ಮೂಲಕ ಹಾದು ಹೋದರೆ ಟರ್ಕಿಯನ್ನು ಬೇಗ ತಲುಪಬಹುದು. ಆದರೆ ಭಾರತದ ವಿಮಾನಗಳು ಟರ್ಕಿಯ ಅಂಕಾರ ನಗರಕ್ಕೆ ಹೋಗಲು ವಾಯು ಪ್ರದೇಶ ಬಳಕೆಗೆ ಪಾಕಿಸ್ತಾನದ ಅನುಮತಿಯನ್ನು ಭಾರತ ಕೇಳಿಯೂ ಇಲ್ಲ. ಪಾಕಿಸ್ತಾನದೊಂದಿಗಿನ ಸಂಬಂಧ ಉತ್ತಮವಾಗಿಲ್ಲದ ಕಾರಣ, ಭಾರತ ಸಾಮಾನ್ಯವಾಗಿ ಬಳಸುವ ಮಾರ್ಗದ ಮೂಲಕ ಅಫ್ಘಾನಿಸ್ತಾನ, ಇರಾನ್ ಇತ್ಯಾದಿ ದೇಶಗಳಿಗೆ ಹೋಗುತ್ತದೆ. ನಿನ್ನೆಯೂ ಅದೇ ಆಗಿದ್ದು ಎಂದು, ವಾಯುಪಡೆ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಇದನ್ನು ಖಚಿತಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಭಾರತದಿಂದ ಈವರೆಗೆ ನಾಲ್ಕು ವಿಮಾನಗಳನ್ನು ಕಳುಹಿಸಿಕೊಡಲಾಗಿದೆ. ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಸರಕು ಸಾಗಣೆ ವಿಮಾನಗಳ ಪರಿಹಾರ ಸಾಮಗ್ರಿಗಳು, ತಜ್ಞರ ತಂಡ, ಶ್ವಾನ ದಳ ಇತ್ಯಾದಿ ನೆರವನ್ನು ಕಳುಹಿಸಿಕೊಡಲಾಗಿದೆ. ಸಿರಿಯಾಗೂ ಭಾರತದಿಂದ ನೆರವು ಹೋಗುತ್ತಿದೆ. ಸಿ-130ಜೆ ವಿಮಾನವು ಆರು ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತು ಸಿರಿಯಾಗೆ ತೆರಳಿದೆ ಎಂಬ ಮಾಹಿತಿ ಲಭ್ಯವಿದೆ. ಹಾಗಾಗಿ ಟರ್ಕಿಗೆ ತೆರಳುತ್ತಿದ್ದ ಭಾರತದ ವಿಮಾನಗಳನ್ನು ಪಾಕಿಸ್ತಾನ ತಡೆದಿದೆ ಎಂದು ಮಾಧ್ಯಮಗಳು ಮಾಡಿದ ವರದಿಗಳು ತಪ್ಪಾಗಿವೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಬ್ಬಿಣ ಮತ್ತು ಇಟ್ಟಿಗೆ ಕದಿಯಲು ಪಾಕ್‌ನ ಜನರು ಮಸೀದಿಯನ್ನು ಒಡೆದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights