ಫ್ಯಾಕ್ಟ್‌ಚೆಕ್: ಆಶೀರ್ವಾದ್ ಆಟಾದ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಸುಳ್ಳು ವಿಡಿಯೋ ಹಂಚಿಕೆ

ಮೊಬೈಲ್ ವಾಟ್ಸಾಪ್ ಗ್ರೂಪ್‌ಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಆಶೀರ್ವಾದ್’ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಪ್ರತಿಪಾದಿಸಲಾಗಿದೆ. ಆಶೀರ್ವಾದ್ ಆಟಾದ ಗೋಧಿಹಿಟ್ಟನ್ನು ಹದಕ್ಕೆ ಕಲಸಿ ನೀರಿನಲ್ಲಿ ತೊಳೆದಾಗ ಕೊನೆಯಲ್ಲಿ ಅಂಟಿನ ಪದಾರ್ಥ ಲಭ್ಯವಾಗುತ್ತದೆ ಇದನ್ನೆ ಪ್ಲಾಸ್ಟಿಕ್ ಅಂಶ ಎಂದು ಹೇಳುವ ವಿಡಿಯೋಗಳು ಪ್ರಸಾರವಾಗುತ್ತಿವೆ.

ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂಗೆ ಸಂದೇಶಗಳ ಮೂಲಕ ಈ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ವಿನಂತಿಸಿದ್ದಾರೆ. ಹಾಗಿದ್ದರೆ ಅನ್ನಪೂರ್ಣ ಅಥವಾ ಆಶೀರ್ವಾದ್ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವನ್ನು ಬೆರೆಸಲಾಗುತ್ತಿದೆಯೇ ಎಂದು ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಗೋಧಿಹಿಟ್ಟನ್ನು ಹದಕ್ಕೆ ಕಲಸಿ ನೀರಿನಲ್ಲಿ ತೊಳೆದಾಗ ಕೊನೆಯಲ್ಲಿ ಅಂಟಿನ ಪದಾರ್ಥ ಲಭ್ಯವಾಗುತ್ತದೆ. ಅದು ಚೂಯಿಂಗ್‌ಗಮ್‌ನಂತೆಯೇ ಗೋಚರವಾಗುತ್ತದೆ. ಇದೇ ಪ್ಲಾಸ್ಟಿಕ್ ಅಂಶ. ಇದು ಆರೋಗ್ಯಕ್ಕೆ ಮಾರಕ ಎಂದು ತೋರಿಸಲಾಗಿದೆ.

ವಾಸ್ತವವಾಗಿ ಅಂಟಿನಂತೆ ಕಂಡುಬರುವ ಅಂಶ ಎಲ್ಲಾ ವಿಧದ ಗೋಧಿ ಹಿಟ್ಟಿನಲ್ಲು ಇರುತ್ತದೆ ಇದನ್ನು ಗ್ಲುಟೆನ್ ಎಂದು ಕರೆಯುತ್ತಾರೆ. ಗ್ಲುಟನ್  (ಅಂಟು) ಗೋಧಿ ಹಿಟ್ಟಿನಲ್ಲಿ ಕಂಡುಬರುವ ಪ್ರೋಟೀನ್ ಅಂಶ ಎಂದು ಆಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ. ‘ಇದು ಅವೈಜ್ಞಾನಿಕ ತಪ್ಪು ಕಲ್ಪನೆಯಾಗಿದ್ದು, ಎಲ್ಲಾ ವಿಧದ ಗೋಧಿಯಲ್ಲಿ ಶೇ.8-10ರಷ್ಟು ಅಂಟಿನ ಅಂಶವಿರುತ್ತದೆ. ಅದನ್ನೇ ತಪ್ಪಾಗಿ ಪ್ಲಾಸ್ಟಿಕ್ ಎಂದು ಬಿಂಬಿಸಲಾಗಿದೆ’ ಎಂದು ಆಹಾರ ತಜ್ಞ ಉದಯ್ ಅನ್ನಾಪುರ್ ಹೇಳಿದ್ದಾರೆ ಎಂದು ಬೂಮ್ ವರದಿ ಮಾಡಿದೆ.

ಅಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ‘ನಾರಿನಂಶಕ್ಕೆ ಕಾರಣವಾಗುವ ಗ್ಲುಟೆನಿನ್, ಗ್ಲ್ಯಾಡಿನ್ಗಳೆಂಬ ಎರಡು ವಿಧದ ಪ್ರೊಟೀನ್‌ಗಳನ್ನು ಗೋಧಿಯು ಒಳಗೊಂಡಿದ್ದು, ಇವು ಆರೋಗ್ಯಕ್ಕೆ ಹಾನಿಕಾರಕವಲ್ಲ’ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಹಲವು ವರ್ಷಗಳಿಂದ ಇಂತಹ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಹಲವು ತಜ್ಞರು ಇದು ಸುಳ್ಳು ಮತ್ತು ತಪ್ಪು ಸಂದೇಶದ ವಿಡಿಯೋ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಆಶೀರ್ವಾದ್ ಗೋಧಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶವಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ತಪ್ಪುದಾರಿಗೆಳೆಯುವಂತಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಟರ್ಕಿ ಭೂಕಂಪದ ಅವಶೇಷಗಳ ನಡುವೆ ನಾಯಿಯೊಂದು ತನ್ನ ಮಾಲೀಕನನ್ನು ಹುಡುಕುತ್ತಿರುವ ಫೋಟೊದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights