ಕನ್ನಡದಲ್ಲಿ ಟ್ವೀಟ್‌ ಮಾಡಿದ ಮೋದಿ: ನೆರೆ ಪರಿಹಾರವಾಗುತ್ತಾ? ಡೀಟೇಲ್ಸ್‌

ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಮಲೆನಾಡು ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಈಗಾಗಲೇ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಬೆಳೆ, ಆಸ್ತಿ ನಷ್ಟವಾಗಿದ್ದು, ಇನ್ನೂ ಪ್ರವಾಹದ ಆತಂಕ ಎದುರಾಗಿದೆ. ಕಳೆದ ವರ್ಷವೂ ಎಂದೂ ಕಂಡರಿಯದ ಮಟ್ಟದಲ್ಲಿ ಪ್ರವಾಹ ಎದುರಾಗಿ ಸಾಕಷ್ಟು ಹಾನಿ ಉಂಟಾಗಿತ್ತು. ಇದಕ್ಕೆ  ಕೇಂದ್ರ ಸರ್ಕಾರ ಇನ್ನೂ ನ್ಯಾಯಯುತ ಪರಿಹಾರ ಬಿಡುಗಡೆ ಮಾಡಿಲ್ಲ. ಈ ಮಧ್ಯೆ ಈ ವರ್ಷವೂ ರಾಜ್ಯದಲ್ಲಿ ಪ್ರವಾಹ ಅಪ್ಪಳಿಸಿದೆ. ಅದರಲ್ಲೂ ದಕ್ಷಿಣ ಭಾರತವಂತೂ ತೀವ್ರ ಸಂಕಷ್ಟಕ್ಕೆ ಎದುರಾಗಿದೆ.

ಈ ಸಂದರ್ಭದಲ್ಲಾದರೂ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿಯವರು ಕಣ್ತೆರೆದು ನೋಡುತ್ತಾರೆಯೇ ಎನ್ನುವ ಸಂಶಯ ಮೂಡುತ್ತಿದೆ. ಏಕೆಂದರೆ ಈಗಾಗಲೇ 2 ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್‌ ತಿಂಗಳಿನಿಂದಲೂ ಪರಿಹಾರಕ್ಕೆಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ ಕೈಚಾಚುತ್ತಿದೆ.

ಇದುವರೆಗೂ ಮಾನ್ಯ ನರೇಂದ್ರ ಮೋದಿಯವರು ಕರ್ನಾಟಕದ ಪರಿಸ್ಥಿತಿಯ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ ಅ. 16 ರಂದು ಕನ್ನಡದಲ್ಲಿ ಟ್ವೀಟ್ ಮಾಡಿರುವ ಮೋದಿ ಈ ಸಂಕಷ್ಟ ಸಂದರ್ಭದಲ್ಲಿ ನಾವು ಕರ್ನಾಟಕದ ಜನತೆಯೊಟ್ಟಿಗೆ ನಿಲ್ಲುತ್ತೇವೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಕಳೆದ ಬಾರಿಯ ಪರಿಹಾರವನ್ನೇ ಬಿಡುಗಡೆ ಮಾಡದ ಪ್ರಧಾನಿ, ಈ ಬಾರಿ ಯಾವ ರೀತಿಯಲ್ಲಿ ಜೊತೆಗಿರುತ್ತಾರೋ ಗೊತ್ತಿಲ್ಲ!

ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕಿಂತಲೂ ಮೊದಲಿನಿಂದಲೇ ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟದ ಪರಿಸ್ಥಿತಿ ಮೋದಿಯವರಿಗೆ ಕಂಡಂತಿಲ್ಲ. ಹಾಗಾಗಿಯೇ, ಅ. 14 ರಂದು ತೆಲುಗಿನಲ್ಲಿ ಆ ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಸಹಾಯಹಸ್ತ ಚಾಚುತ್ತೇವೆ ಎಂದು ಟ್ವೀಟ್ ಮಾಡಿರುವ ಮೋದಿಯವರ ನಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಕೊನೆಗೂ ಅ. 16ರಂದು, ‘ಹೋಗಲಿ ಪಾಪ’ ಎನ್ನುವಂತೆ ಯಾರದೋ ಒತ್ತಡಕ್ಕೆ ಮಣಿದು ಟ್ವೀಟ್ ಒಂದನ್ನು ಮಾಡಿ, “ಕರ್ನಾಟಕದ ವಿವಿಧ ಭಾಗಗಳಲ್ಲಿ ಸುರಿದ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಬಗ್ಗೆ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದೇನೆ. ಪ್ರವಾಹದಿಂದ ಬಾಧಿತರಾದ ಕರ್ನಾಟಕದ ಸಹೋದರಿ ಮತ್ತು ಸಹೋದರರೊಂದಿಗೆ ನಾವು ಜೊತೆಯಾಗಿ ನಿಲ್ಲುತ್ತೇವೆ. ಪ್ರಗತಿಯಲ್ಲಿರುವ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಕೇಂದ್ರದ ಎಲ್ಲ ಅಗತ್ಯ ನೆರವಿನ ಬೆಂಬಲದ ಭರವಸೆ ನೀಡಲಾಗಿದೆ” ಎಂದು ಬರೆದು ಕೈತೊಳೆದುಕೊಂಡಿದ್ದಾರೆ!

ಆಯಾ ರಾಜ್ಯಗಳಿಗೆ ಅದರದ್ದೇ ಭಾಷೆಯಲ್ಲಿ ಟ್ವೀಟ್ ಮಾಡಿರುವ ಮೋದಿ ಪರಿಹಾರ ಬಿಡುಗಡೆ ಮಾಡುತ್ತಾರೋ? ಇಲ್ಲವೋ? ಎಂಬುದು ತರ್ಕಕ್ಕೆ ನಿಲುಕದ ವಿಷಯವಾಗಿದೆ.

ಇನ್ನು, 2020ರ ಆಗಸ್ಟ್‌ ತಿಂಗಳಲ್ಲಿ ಉಂಟಾದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ‘ಪ್ರವಾಹಪೀಡಿತ ತಾಲೂಕುಗಳು’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.


ಇದನ್ನೂ ಓದಿ: ಸಚಿವೆಯನ್ನು ಐಟಂ ಎಂದು ಕರೆದ ಮಾಜಿ ಸಿಎಂ: ಬಿಜೆಪಿಗರಿಂದ ತರಾಟೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಕನ್ನಡದಲ್ಲಿ ಟ್ವೀಟ್‌ ಮಾಡಿದ ಮೋದಿ: ನೆರೆ ಪರಿಹಾರವಾಗುತ್ತಾ? ಡೀಟೇಲ್ಸ್‌

  • October 19, 2020 at 5:42 pm
    Permalink

    Supr

    Reply

Leave a Reply

Your email address will not be published.

Verified by MonsterInsights