FACT CHECK | ದೋಣಿ ದುರಂತದ ವೈರಲ್ ವಿಡಿಯೋ ಗೋವಾಗೆ ಸಂಬಂಧಿಸಿದ್ದಲ್ಲ! ಮತ್ತೆಲ್ಲಿಯದ್ದು?

ಸಾಮರ್ಥ್ಯ‌ ಮೀರಿ ಜನರನ್ನು (ಓವರ್‌  ಲೋಡ್) ತುಂಬಿದ್ದ ಪರಿಣಾಮ ಸಮುದ್ರ ಮಾರ್ಗದಲ್ಲಿ ಚಲಿಸುತ್ತಿದ್ದ ದೋಣಿಯೊಂದು  ನೀರಿನಲ್ಲಿ ಮುಳುಗಿ 23 ಜನ ಸಾವನಪ್ಪಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಗೋವಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಓವರ್‌ಲೋಡ್ ಮಾಡಿದ ಸ್ಟೀಮರ್ ಬೋಟ್ ಅಪಘಾತಕ್ಕೀಡಾಗಿದ್ದು, 64 ಜನರು ನಾಪತ್ತೆಯಾಗಿದ್ದಾರೆ ಮತ್ತು 23 ಮೃತದೇಹಗಳು ಪತ್ತೆ ಆಗಿವೆ ಎಂದು ಹೇಳಲಾಗಿದೆ. ದೋಣಿಯಲ್ಲಿ ಅನೇಕ ಜನರು ಇರುವುದನ್ನು ಕಾಣಬಹುದು, ದೋಣಿ ನೀರಿನಲ್ಲಿ ಮುಳುಗಿದಾಗ ಅನೇಕರು ಪ್ರಾಣ ಉಳಿಸಿಕೊಳ್ಳಲು ಈಜುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಅಕ್ಟೋಬರ್ 6, 2024 ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘‘ಇಂದು ಗೋವಾ ಅಪಘಾತದಲ್ಲಿ 23 ಮೃತದೇಹಗಳು 40 ಜನರನ್ನು ರಕ್ಷಿಸಲಾಗಿದೆ ಮತ್ತು 64 ಮಂದಿ ನಾಪತ್ತೆಯಾಗಿದ್ದಾರೆ. ಓವರ್ ಲೋಡ್ ಮಾಡುವಲ್ಲಿ ಬೋಟ್ ಮಾಲೀಕರ ದುರಾಸೆ, ಪ್ರಯಾಣಿಕರಿಗೂ ಅತಿಯಾದ ಆತ್ಮವಿಶ್ವಾಸ, ತುಂಬಾ ದುಃಖದ ದುರಂತ,’’ ಎಂದು ಬರೆದುಕೊಂಡಿದ್ದಾರೆ.

#Africaಬೋಟ್_ಅಪಘಾತದಲ್ಲಿ 23 ಮೃತದೇಹಗಳು 40 ಜನರನ್ನು ರಕ್ಷಿಸಲಾಗಿದೆ. ಮತ್ತು 64 ಮಂದಿ ನಾಪತ್ತೆಯಾಗಿದ್ದಾರೆ. ಓವರ್ ಲೋಡ್ ಮಾಡುವಲ್ಲಿ ಬೋಟ್ ಮಾಲೀಕರ ದುರಾಸೆ, ಪ್ರಯಾಣಿಕರಿಗೂ ಅತಿಯಾದ ಆತ್ಮವಿಶ್ವಾಸ, ತುಂಬಾ ದೋಡ್ಡ ದುರಂತ. ಈ ಘಟನೆ ಎಲ್ಲಿ ನಡೆದಿದೆ ಅಂತ ತಿಳಿದು ಬರಬೇಕಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಅಶ್ವವೇಗ ಎಂಬ ಸುದ್ದಿಮಾಧ್ಯಮ ವೈರಲ್ ವೀಡಿಯೋವನ್ನು ಹಂಚಿಕೊಂಡು “Tourists of Goa || ದೈವೈಕ್ಯರಾದ ಗೋವಾ ಪ್ರವಾಸಿಗರು ||AshwaveegaNews24x7” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.

ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಮೂಲಕ ಸರ್ಚ್ ಮಾಡಿದಾಗ, ಗೋವಾದಲ್ಲಿ ದೋಣಿ ಅಪಘಾತಕ್ಕೆ ಸಂಬಂಧಿಸಿದ ಯಾವುದೇ ಇತ್ತೀಚಿನ ಸುದ್ದಿಗಳಾಗಲಿ ವರದಿಗಳಾಗಲಿ ಲಭ್ಯವಾಗಿಲ್ಲ.

ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ಬೇರ್ಪಡಿಸಿ ಗೂಗಲ್ ಲೆನ್ಸ್‌ ಮೂಲಕ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಿಸಿದ ಟ್ವೀಟ್ ಲಭ್ಯವಾಗಿದೆ.Millennial ಹೆಸರಿನ ಎಕ್ಸ್ ಖಾತೆಯು ಇದೇ ವೈರಲ್ ವಿಡಿಯೋದ ಮತ್ತೊಂದು ಆ್ಯಂಗಲ್ ಅನ್ನು ಅಕ್ಟೋಬರ್ 3, 2024 ರಂದು ಹಂಚಿಕೊಂಡಿದೆ. ‘‘DR ಕಾಂಗೋದ ಗೋಮಾ/ಬುಕಾವು ದಾರಿಯಲ್ಲಿ ದೋಣಿಯೊಂದು ಮಗುಚಿ ಬಿದ್ದಿದೆ. ಗೋಮಾ ನಗರದ ಶವಾಗಾರದಲ್ಲಿ ಹಲವು ಶವಗಳನ್ನು ಇರಿಸಲಾಗಿದೆ. ದೇವರು ಪ್ರಯಾಣಿಕರನ್ನು ರಕ್ಷಿಸಲಿ’’ ಎಂದು ಬರೆದುಕೊಂಡಿದ್ದಾರೆ.

ಕಾಂಗೋಗೆ ಸಂಬಂಧಿಸಿದ ಸುದ್ದಿಗಾಗಿ ಕೀವರ್ಡ್‌ ಮೂಲಕ ಸರ್ಚ್ ಮಾಡಿದಾಗ, Reuters ಎಂಬ ಸುದ್ದಿ ಸಂಸ್ಥೆ ವೈರಲ್ ವಿಡಿಯೋಗೆ ಸಂಬಂಧಿಸಿದ ಸುದ್ದಿಯನ್ನು ಪ್ರಕಟಿಸಿದೆ. ಅಕ್ಟೋಬರ್ 2 ರಂದು ಪ್ರಕಟವಾದ ಈ ಸುದ್ದಿಯಲ್ಲಿ, ‘ಕಾಂಗೋದ ಕಿವು ಸರೋವರದಲ್ಲಿ ದೋಣಿ ಮುಳುಗಿ 78 ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಉಲ್ಲೇಖಿಸಿದ್ದಾರೆ. ಪ್ರಾಂತೀಯ ಗವರ್ನರ್ ಪ್ರಕಾರ, ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಕಿವು ಸರೋವರದಲ್ಲಿ ಗುರುವಾರ 278 ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿದಾಗ ಕನಿಷ್ಠ 78 ಜನರು ಮುಳುಗಿದ್ದಾರೆ’ ಎಂದು ನೀಡಿರುವ ಮಾಹಿತಿ ಇದರಲ್ಲಿದೆ.

ಕಾಂಗೋದಲ್ಲಿ ದೋಣಿ ಮುಳುಗಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಕ್ಟೋಬರ್ 4 ರಂದು ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.

ಗೋವಾ ಪೊಲೀಸರಿಂದ ಟ್ವೀಟ್‌ :

ಗೋವಾ ಪೊಲೀಸರು ಕೂಡ ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದು. ‘ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ದೋಣಿ ಮುಳುಗುವ ವಿಡಿಯೋ ಗೋವಾದ್ದು ಎಂದು ಹೇಳಲಾಗುತ್ತಿದೆ. ಆದರೆ, ಇದು ಸುಳ್ಳು ಸದ್ದಿ. ಈ ವಿಡಿಯೋ ಆಫ್ರಿಕಾದ ಕಾಂಗೋದ ಗೋಮಾದಿಂದ ಬಂದಿದೆ. ಖಚಿತ ಮಾಹಿತಿ ಇಲ್ಲದೆ ವಿಡಿಯೋವನ್ನು ಹಂಚಿಕೊಳ್ಳಬೇಡಿ’ ಎಂದು ಗೋವಾ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಫ್ರಿಕಾದ ಕಾಂಗೋದ ಗೋಮಾದಲ್ಲಿ ದೋಣಿ ಮಗುಚಿ 78 ಜನ ಸಾವನಪ್ಪಿದ ಘಟನೆಯನ್ನು ಗೋವಾದಲ್ಲಿ ನಡೆದಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
d

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights