FACT CHECK | ಪವನ್ ಕಲ್ಯಾಣ್ ವಿರುದ್ದದ ಪ್ರತಿಭಟನೆಯ ಹಳೆಯ ವಿಡಿಯೋವನ್ನು ತಿರುಪತಿ ಲಾಡು ಗಲಾಟೆಗೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೆ
ಸಾಮಾಜಿಕ ಜಾಲತಾಣದಲ್ಲಿ “ತಿರುಮಲ ತಿರುಪತಿ ದೇವಸ್ಥಾನದ ಲಡ್ಡುಗಳ ವಿವಾದಕ್ಕೆ ಸಂಬಂಧಿಸಿದಂತೆ ಜನಸೇನ ಪಕ್ಷದ ನಾಯಕ ಪವನ್ ಕಲ್ಯಾಣ್ ವಿರುದ್ದ ಪ್ರತಿಭಟನೆ ಮಾಡಲಾಗಿದೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಪವನ್ ಕಲ್ಯಾಣ್ ಚಿತ್ರರವಿರುವ ಬ್ಯಾನರ್ ಹಿಡಿದು ಅದಕ್ಕೆ ಚಪ್ಪಲಿಯಲ್ಲಿ ಹೊಡೆದು ಜನ ಪ್ರತಿಭಟಿಸಿದ್ದಾರೆ. ಇದು ಡಿಸಿಎಂ ಪವನ್ ಕಲ್ಯಾಣ್ಗೆ ಒಂದು ಪಾಠವಾಗಬೇಕಿದೆ. ದೇವರ ವಿಚಾರದಲ್ಲಿ ರಾಜಕಾರಣ ಮಾಡುವ ಇಂತಹ ರಾಜಕಾರಣಿಗಳಿಗೆ ಮುಂದೆ ಜನ ಇದೇ ರೀತಿ ಮಾಡಲಿದ್ದಾರೆ” ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವಿಡಿಯೋ ಕುರಿತು ಹಲವರು ನಟ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಆಕ್ರೋಶವನ್ನು ವ್ಯಕಪಡಿಸಿದರೆ ಇನ್ನೂ ಕೆಲವರು ಪವನ್ ಕಲ್ಯಾಣ್ಗೆ ಬೆಂಬಲವನ್ನು ಸೂಚಿಸಿ ಈ ಪ್ರತಿಭಟನೆಯ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹೀಗಾಗಿ ವೈರಲ್ ವಿಡಿಯೋ ಎರಡು ರೀತಿಯ ಆಯಾಮದಲ್ಲಿ ಅಭಿಪ್ರಾಯ ವ್ಯಕ್ತವಾಗುವಂತೆ ಮಾಡಿದೆ. ಇನ್ನೂ ಕೆಲವರು ಪವನ್ ಕಲ್ಯಾಣ್ ವಿರುದ್ಧ ಈ ರೀತಿಯ ಪ್ರತಿಭಟನೆ ಆಂಧ್ರದಲ್ಲಿ ನಡೆದೇ ಇಲ್ಲ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ.
ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 10 ಜುಲೈ 2023ರಂದು ವೈಎಸ್ ಜಗನ್ ಟ್ರೆಂಡ್ಸ್ ಎಂಬ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾದ ಪೋಸ್ಟ್ವೊಂದು ಲಭ್ಯವಾಗಿದೆ. ಇದರಲ್ಲಿನ ವಿಡಿಯೋಗೂ ವೈರಲ್ ವಿಡಿಯೋಗೂ ಹೊಲಿಕೆ ಇರುವುದು ಕಂಡು ಬಂದಿದೆ. ಹಾಗಾಗಿ ವೈರಲ್ ವಿಡಿಯೋ 1 ವರ್ಷ ಹಳೆಯದು ಎಂಬುದು ಸ್ಪಷ್ಟವಾಗಿದೆ.
ಈ ಬಗ್ಗೆ ಮತಷ್ಟು ಮಾಹಿತಿ ಪಡೆಯಲು ವಿವಿಧ ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 10 ಜುಲೈ 2023 ರಂದು Gulte.Com ಎಂಬ ಸುದ್ದಿ ತಾಣದಲ್ಲಿ ಪ್ರಕಟವಾದ ವರದಿಯೊಂದು ಲರ್ಭಯವಾಗಿದೆ. ಇದರ ಪ್ರಕಾರ ನಟ ಪವನ್ ಕಲ್ಯಾಣ್ ತಮ್ಮ ರಾಜ್ಉದಲ್ಲಿ ಮಾನವ ಕಳ್ಳಸಾಗಣೆ ವ್ಯಾಪಕವಾಗಿದೆ ಎಂದು ಆರೋಪಿಸಿದ್ದರು, ಜೊತೆಗೆ ವೈಸಿಪಿ ಸರ್ಕಾರ ತಂದಿರುವ ಸ್ವಯಂಸೇವಕ ವ್ಯವಸ್ಥೆಯೇ ಮಾನವ ಕಳ್ಳಸಾಗಣೆಗೆ ಪ್ರಮುಖ ಕಾರಣ ಎಂದು ಟೀಕಿಸಿದ್ದರು. ಇದು ಆಂದ್ರ ಪ್ರದೇಶದಲ್ಲಿ ಬಹುದೊಡ್ಡ ವಿವಾದವನ್ನು ಸೃಷ್ಟಿಸಿತ್ತು, ಹೀಗಾಗಿ ಪವನ್ ಕಲ್ಯಾಣ್ ರಾಜ್ಯದ ಸ್ವಯಂ ಸೇವಕರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಆಂಧ್ರದಾದ್ಯಂತ ಪ್ರತಿಭಟನೆಯನ್ನು ನಡೆಸಲಾಯಿತು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಪವನ್ ಕಲ್ಯಾಣ್ ಅವರ ವಿರುದ್ಧ ಬ್ಯಾನರ್ ಹಿಡಿದು, ಅದಕ್ಕೆ ಚಪ್ಪಲಿಯಲ್ಲಿ ಹೊಡೆಯಲಾಗಿದೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಒಂದು ವರ್ಷ ಹಳೆಯದಾಗಿದ್ದು ಅದನ್ನು ಈಗ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACRT CHECK | ಪ್ರವಾದಿ ಮುಹಮ್ಮದ್ರನ್ನು ನಿಂದಿಸಿದ್ದನ್ನು ವಿರೋದಿಸಿದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು

