FACT CHECK | ವಿದ್ಯಾರ್ಥಿನಿಗೆ ಯುವಕನಿಂದ ಕಿರುಕುಳ ಎಂದು ಸ್ಕ್ರಿಪ್ಟ್‌ ಮಾಡಲಾದ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ, ಶಾಲಾ ವಿದ್ಯಾರ್ಥಿಯೊಬ್ಬಳು ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಹೋಗುವಾಗ, ಆಕೆಯ ಹಿಂಬದಿಯಿಂದ ಬಂದ ಬೈಕ್‌ ಸವಾರನೊಬ್ಬ ವಿದ್ಯಾರ್ಥಿನಿಯನ್ನು ಮುಂದಕ್ಕೆ ತೆರಳದಂತೆ ತನ್ನ ಬೈಕಿನಲ್ಲೇ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ. ಈತನನ್ನು ಜನ ಸಾಮಾನ್ಯರು ತಡೆದು ವಿಚಾರಿಸಿದಾಗ ನನ್ನ ತಂದೆ ಅಧ್ಯಕ್ಷರು, ನಾನು ಯಾವ ಹುಡುಗಿಯನ್ನು ಬೇಕಾದರೂ ಕೀಟಲೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದು ಇಂದಿನ ದೆಹಲಿಯ ದುಸ್ಥಿತಿ” ಎಂದು ವಿಡಿಯೋವೊಂದನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.

 

ವೈರಲ್‌ ವಿಡಿಯೋ ನೋಡಿದ ಹಲವು ಮಂದಿ ಇದು ನಿಜವಾದ ಘಟನೆ ಎಂದು ಭಾವಿಸಿ ವಿವಿಧ ರೀತಿಯಾದ ಟಿಪ್ಪಣಿಗಳನ್ನು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಪೋಸ್ಟ್‌ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಾಕಷ್ಟು ಮಂದಿಗೆ ದೆಹಲಿಯಲ್ಲಿ ಹಗಲಿನ ವೇಳೆಯಲ್ಲಿ ಕೂಡ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಮೂಡುತ್ತಿದೆ. ಇನ್ನೂ ಕೆಲವರು ಈ ವೈರಲ್‌ ವಿಡಿಯೋ ನಿಜವೋ ಸುಳ್ಳೋ ಎಂಬುದನ್ನು ಪರಿಶೀಲನೆ ನಡೆಸದೆ ರಾಜಕೀವಾಗಿ ಕೂಡ ಈ ವಿಡಿಯೋವನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಅಭಿಪ್ರಾಯಗಳೊಂದಿಗೆ ಹಂಚಿಕೆಯಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

 

ಫ್ಯಾಕ್ಟ್‌ಚೆಕ್‌ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಲು  ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 4 ಜೂನ್‌ 2024ರಂದು Aman Beniwal ಎಂಬ ಯುಟ್ಯೂಬ್‌ ಚಾನಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದು ಲಭ್ಯವಾಗಿದೆ. ಮೂಲ ವಿಡಿಯೋವಿನ 7 ಸೆಕೆಂಡ್ ಅವದಿಯಲ್ಲಿ ಡಿಸ್‌ಕ್ಲೈಮರ್‌ ನಲ್ಲಿ  “ವಿಡಿಯೋವನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ” ಎಂಬ ಉಲ್ಲೇಖವಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಇನ್ನು ಈ ಯುಟ್ಯುಬ್‌ ಚಾನಲ್‌ ಅನ್ನು ಅಮನ್ ಬೇನಿವಾಲ್ ಎಂಬುವವರು ನಡೆಸುತ್ತಿದ್ದು, ಇದರಲ್ಲಿ ವೈರಲ್‌ ವಿಡಿಯೋದಂತೆಯೇ ಹಲವು ನಾಟಕೀಯ ವಿಡಿಯೋಗಳು ಕಂಡು ಬಂದಿವೆ. ಇದರಲ್ಲಿ ಹಲವು ವಿಡಿಯೋಗಳು ಜಾಗೃತಿ ಮೂಡಿಸುವ ಉದ್ದೇಶದಿಂದ ರಚನೆ ಮಾಡಿದ್ದರೆ, ಇನ್ನೂ ಕೆಲವು ವಿಡಿಯೋಗಳನ್ನು  ಮನೋರಂಜನೆಯ ಉದ್ದೇಶಗಳಿಗಾಗಿ ಮಾಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ದೆಹಲಿಯಲ್ಲಿ ಯುವಕನೊಬ್ಬ ವಿದ್ಯಾರ್ಥಿನಿಯನ್ನು ಬೈಕಿನಲ್ಲಿ ಅಡ್ಡಗಟ್ಟಿದ್ದಾನೆ ದೌರ್ಜನ್ಯ ಎಸಗಿದ್ದಾನೆ  ಎಂದು ಸ್ಕ್ರಿಪ್ಟ್‌ ಮಾಡಲಾದ ವಿಡಿಯೋ ಆಗಿದ್ದು. ಇದನ್ನು ಮನರಂಜನಾ ಉದ್ದೇಶಗಳಿಗಾಗಿ ರೂಪಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights