ಕೊರೊನಾದಿಂದ ದೇಶದ ಆರ್ಥಿಕತೆಯೇ ಹಳ್ಳ ಹಿಡಿದರೂ ಅದಾನಿ ಆಸ್ತಿ ಹೆಚ್ಚಾಗಿದ್ದು ಹೇಗೆ ಗೊತ್ತೇ?

ಗೌತಮ್ ಅದಾನಿ ಬಿಕ್ಕಟ್ಟಿನಿಂದ ಬದುಕುಳಿಯುವ ಜಾಣ್ಮೆ ಹೊಂದಿದ್ದಾರೆ. ಎರಡು ದಶಕಗಳ ಹಿಂದೆ ಅವರನ್ನು ಹಣಕ್ಕಾಗಿ ಅಪಹರಣ ಮಾಡಲಾಗಿತ್ತು ಮತ್ತು 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದ 2008 ರ 26/11 ಎಂದೇ ಕುಖ್ಯಾತಿ ಪಡೆದ ಮುಂಬೈ ದಾಳಿಯಲ್ಲಿ ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌‌ನ ಒತ್ತೆಯಾಳುಗಳಲ್ಲಿ ಅವರೊಬ್ಬರಾಗಿದ್ದರು.

ವ್ಯವಹಾರದಲ್ಲಿ ಅಡೆತಡೆಗಳನ್ನು ನಿವಾರಿಸುವ ಅವರ ಸಾಮರ್ಥ್ಯ, ನರೇಂದ್ರ ಮೋದಿಯಂತಹ ರಾಜಕರಾರಣಿಗಳ ಸಖ್ಯ ಅವರನ್ನು ಭಾರತದ ಅತ್ಯಂತ ಶ್ರೀಮಂತರಲ್ಲೊಬ್ಬರನ್ನಾಗಿ ಮಾಡಿದೆ. ಕೊರೊನಾ ಸಾಂಕ್ರಾಮಿಕ ಈ ವರ್ಷ ಭಾರತವನ್ನು ಅಭೂತಪೂರ್ವ ಆರ್ಥಿಕ ಹಿಂಜರಿತದಲ್ಲಿ ಮುಳುಗಿಸಿದರೆ, ಅದಾನಿ ಕಂಪೆನಿ ಮಾತ್ರ ಬೆಳೆಯುತ್ತಲೇ ಇದೆ. ಅವರ ಕಂಪೆನಿಯು ಜಾಗತಿಕ ಪಾಲುದಾರರನ್ನು ಹಾಗೂ ಹೂಡಿಕೆಗಳನ್ನು ಪಡೆಯುವುದರೊಂದಿಗೆ ಹೊಸ ಕ್ಷೇತ್ರಗಳಿಗೂ ತನ್ನ ಕೈ ಚಾಚಿದೆ.

ಗಣಿಗಾರಿಕೆ, ಅನಿಲ ಮತ್ತು ಬಂದರುಗಳು ಸೇರಿದಂತೆ ಅವರ ಉದ್ಯಮ ಘಟಕಗಳ ಹೆಚ್ಚಿನ ಸಂಸ್ಥೆಗಳ ಷೇರುಗಳು ಹೆಚ್ಚಾಗಿದೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಈ ವರ್ಷ ಆರು ಪಟ್ಟು ಹೆಚ್ಚಾಗಿದೆ. ಯಾಕೆಂದರೆ ಇದು 6 ಬಿಲಿಯನ್ ಅಮೇರಿಕನ್ ಡಾಲರ್‌‌ ಸೌರಶಕ್ತಿ ಒಪ್ಪಂದವನ್ನು ಪಡೆದುಕೊಂಡಿದೆ. ಇದು 2025 ರ ವೇಳೆಗೆ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ತಯಾರಕನಾಗುವ ಕಂಪನಿಯ ಗುರಿಯತ್ತ ಮತ್ತೊಂದು ಹೆಜ್ಜೆಯಾಗಿದೆ.

“ಅದಾನಿ ಷೇರುಗಳ ವಿಷಯಕ್ಕೆ ಬಂದಾಗ ಮಾರುಕಟ್ಟೆಯು ’ಫೋಮೋ ಸಿಂಡ್ರೋಮ್(ಕಳೆದು ಹೋಗುವ ಭಯ)’ ಅನ್ನು ಹೊಂದಿದೆ. ಅದಾನಿಯ ವ್ಯವಹಾರಗಳಿಗೆ ಪ್ರಸ್ತುತ ಕೇಂದ್ರ ಸರ್ಕಾರ ಪೂರ್ತಿ ಸಹಕಾರ ನೀಡುತ್ತಿದೆ ಮಾತ್ರವಲ್ಲದೆ, ಅವರಿಬ್ಬರ ನೀತಿಗಳು  ಹೊಂದಿಕೆಯಾಗಿವೆ. ಆದ್ದರಿಂದ ಅದಾನಿಗೆ ಕನಿಷ್ಠ ಐದರಿಂದ ಆರು ವರ್ಷಗಳವರೆಗೆ ಮುಂದಿನ ಹಾದಿ ಸುಗಮವಾಗಿರುತ್ತದೆ” ಎಂದು ಹೂಡಿಕೆ-ನಿರ್ವಹಣಾ ಸಂಸ್ಥೆ ಐಐಎಫ್ಎಲ್ ಸೆಕ್ಯುರಿಟೀಸ್ ಲಿಮಿಟೆಡ್‌ನ ನಿರ್ದೇಶಕ ಸಂಜೀವ್ ಭಾಸಿನ್ ಹೇಳುತ್ತಾರೆ.

ಇದನ್ನೂ ಓದಿ: ಬಾಯ್ಕಾಟ್ ಅಂಬಾನಿ: ಏರ್‌ಟೆಲ್‌, ವೊಡಾಫೋನ್‌ ವಿರುದ್ಧ ದೂರು ನೀಡಿದ ಜಿಯೋ!

32.4 ಶತಕೋಟಿ ಡಾಲರ್‌ ಮೌಲ್ಯದ ಸಂಪತ್ತಿನೊಂದಿಗೆ, ಅದಾನಿಯು ಮುಖೇಶ್ ಅಂಬಾನಿಯ ನಂತರ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಈ ವರ್ಷ ಅದಾನಿ ಸ್ಟಾಕ್‌‌ನ ನಿವ್ವಳ ಮೌಲ್ಯ 21.1 ಬಿಲಿಯನ್ ಡಾಲರ್‌ ಹೆಚ್ಚಾಗುತ್ತದೆ. ಇದು ಅಂಬಾನಿ ಗಳಿಸುವ ಲಾಭಕ್ಕಿಂತಲೂ ಹೆಚ್ಚಾಗುತ್ತದೆ. ಈ ವರದಿಯ ಬಗ್ಗೆ ಅದಾನಿ ಗ್ರೂಪ್ ಪ್ರತಿನಿಧಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

1980 ರ ದಶಕದ ಆರಂಭದಲ್ಲಿ ಕಾಲೇಜಿನಿಂದ ಹೊರಬಂದ ಅದಾನಿಯು ಮುಂಬೈನ ವಜ್ರ ಉದ್ಯಮದಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಿದರು. 1988 ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ ಸ್ಥಾಪಿಸುವ ಮೊದಲು ತನ್ನ ಸಹೋದರನ ಪ್ಲಾಸ್ಟಿಕ್ ವ್ಯವಹಾರವನ್ನು ನಡೆಸಲು ಸಹಾಯ ಮಾಡಲು ತನ್ನ ಸ್ವಂತ ರಾಜ್ಯವಾದ ಗುಜರಾತ್‌ಗೆ ಹಿಂದಿರುಗಿದರು. ಇದಾಗಿ ಒಂದು ದಶಕದ ನಂತರ, ಅವರು ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ ಮುಂಡ್ರಾ ಬಂದರನ್ನು ನಿರ್ವಹಿಸಲು ಪ್ರಾರಂಭಿಸಿದರು, ಅಂತಿಮವಾಗಿ ಭಾರತದ ಅತಿದೊಡ್ಡ ಖಾಸಗಿ ವಲಯದ ಬಂದರನ್ನಾಗಿ ಅದನ್ನು ನಿರ್ಮಿಸಿದರು.

ಅಷ್ಟೇ ಅಲ್ಲದೆ ಅದಾನಿಯ ಗ್ರೂಪ್, ರಾಷ್ಟ್ರದ ಅತಿದೊಡ್ಡ ಖಾಸಗಿ ವಿದ್ಯುತ್ ಉತ್ಪಾದಕ ಮತ್ತು ಕಲ್ಲಿದ್ದಲು ಗಣಿಗಾರಿಕೆಯ ಮುಖ್ಯ ಸ್ಥಾನದಲ್ಲಿ ನಿಂತಿತು ಮತ್ತು ಇದನ್ನು ವಿದೇಶದಲ್ಲಿಯು ವಿಸ್ತರಿಸಿದೆ. ಆಸ್ಟ್ರೇಲಿಯಾದಲ್ಲಿ ಅದಾನಿಯು ಕಾರ್ಮೈಕಲ್ ಥರ್ಮಲ್ ಕಲ್ಲಿದ್ದಲು ಗಣಿಗಾರಿಕೆಗೆ ಕಳೆದ ವರ್ಷ ಅನುಮೋದನೆ ಪಡೆದಿದ್ದಾರೆ. ಇದರ ವಿರುದ್ದ ಪರಿಸರ ಹೋರಾಟಗಾರರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಾಯ್ಕಾಟ್ ಅಂಬಾನಿ-ಅದಾನಿ; ಕಾರ್ಪೊರೇಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವುದೇಕೆ ಸುವರ್ಣ ನ್ಯೂಸ್‌?

ಇತರ ಉದ್ಯಮಿಗಳಂತೆ, ಅದಾನಿ ಪದೇ ಪದೇ ಹೊಸ ಕೈಗಾರಿಕೆಗಳನ್ನು ಆರಿಸಿಕೊಂಡವರು. ಅದರಲ್ಲೂ ಸರ್ಕಾರವು ಅಭಿವೃದ್ಧಿ ಪಡಿಸಲು ಮುಂದಾಗಿರುವ ಮತ್ತು ಕಡಿಮೆ ಸ್ಪರ್ಧೆ ಇರುವಲ್ಲಿ…, ಈಗಲೂ ಕೂಡಾ ಅದಾನಿಯು “ರಾಷ್ಟ್ರ ನಿರ್ಮಾಣ” ವನ್ನು ತನ್ನ ಕಾರ್ಯತಂತ್ರದ ಪ್ರಮುಖ ವಿಷಯವಾಗಿದೆ ಎಂದು ಉಲ್ಲೇಖಿಸುತ್ತಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಅದಾನಿ ಅಂಬಾನಿಗಾಗಿಯೇ ನರೇಂದ್ರ ಮೋದಿಯವರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿರುವ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ವತಃ ಗುಜರಾತಿ ಆಗಿರುವ ಪ್ರಧಾನಿ ಮೋದಿ ಅಧಿಕಾರ ಗಳಿಸಿದಂತೆಯೇ ಅದಾನಿ ಕೂಡಾ ಎತ್ತರಕ್ಕೆ ಏರುತ್ತಲೆ ಹೋದರು. ಅದಾನಿಯು ಮುಂಡ್ರಾ ಬಂದರಿನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅದರಲ್ಲಿ ಕೈಗಾರಿಕಾ ವಲಯವನ್ನು ನಿರ್ಮಿಸಿದರು. ಅದಾನಿ ಸುಮಾರು ಎರಡು ದಶಕಗಳಿಂದ ರಾಜಕಾರಣಿಗಳ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ.

ಅದಾನಿಯ ಕ್ಷಿಪ್ರ ಬೆಳವಣಿಗೆಯು 2015 ರ ಆಸುಪಾಸಿನಲ್ಲಿ ಪ್ರಾರಂಭವಾಯಿತು. ಸ್ಥಳೀಯವಾಗಿ ರಕ್ಷಣಾ ಸಾಧನಗಳ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವುದಾಗಿ ಮೋದಿ ಪ್ರತಿಜ್ಞೆ ಮಾಡಿದಾಗ, ರಕ್ಷಣಾ ಕ್ಷೇತ್ರದ ಗುತ್ತಿಗೆದಾರರೊಂದಿಗೆ ಸಹಭಾಗಿತ್ವ ಮಾಡಿ ಮಿಲಿಟರಿ ಸಾಧನಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸಿದರು. ಇದಾಗಿ ಮೂರು ವರ್ಷಗಳ ನಂತರ ಖಾಸಗಿ ಅನಿಲ ಪೂರೈಕೆಯಲ್ಲಿ ಭಾರತದ ಅತಿದೊಡ್ಡ ಚಿಲ್ಲರೆ ವ್ಯಾಪಾರಿಗಳನ್ನಾಗಿ ಮಾಡಿತು. 2019 ರಲ್ಲಿ ಅವರು ವಿಮಾನ ನಿಲ್ದಾಣಗಳತ್ತ ಗಮನಹರಿಸಲು ಪ್ರಾರಂಭಿಸಿದರು, ಮತ್ತು ಈಗ ಡೇಟಾ ಸಂಗ್ರಹಣೆ ಮತ್ತು ಹಣಕಾಸು ಸೇವೆಗಳು ಸೇರಿದಂತೆ ಹಲವು ಕ್ಷೇತ್ರಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ, ಅಂಬಾನಿ, ಅದಾನಿ ಪ್ರತಿಮೆಗಳನ್ನು ಸುಟ್ಟು ರೈತರಿಂದ ದಸರಾ ಆಚರಣೆ!

“ಪ್ರಧಾನಿ ಮೋದಿಯ ನೀತಿಗಳು ಅವರ ಗುಜರಾತ್ ದಿನಗಳಿಂದಲೂ ವ್ಯಾಪಾರಿ ಗುಂಪುಗಳಿಗೆ ಸಹಾಯ ಮಾಡಿವೆ ಮತ್ತು ಅದಾನಿ ಗ್ರೂಪ್‌ನಂತಹ ಸಂಘಟನೆಗಳ ತ್ವರಿತ ಬೆಳವಣಿಗೆಗೆ ಇದು ಕಾರಣವಾಗಿದೆ. ಕಾರ್ಪೊರೇಟ್ ಕಾರ್ಯತಂತ್ರಗಳನ್ನು ಸರ್ಕಾರದ ಆದ್ಯತೆಗಳನ್ನಾಗಿ ಮಾಡುವುದು ಭಾರತದಲ್ಲಿ ವ್ಯವಹಾರ ಮಾಡುವ ವಿಧಾನವಾಗಿದೆ” ಎಂದು ಅಹಮದಾಬಾದ್‌ನ ಅಭಿವೃದ್ಧಿ ಪರ್ಯಾಯ ಕೇಂದ್ರದ ನಿರ್ದೇಶಕ ಇಂದಿರಾ ಹಿರ್ವೇ ಹೇಳುತ್ತಾರೆ.

ಇತ್ತ ಅದಾನಿ ತನ್ನ ತಾಯ್ನಾಡಿನಲ್ಲಿ ಸರ್ಕಾರದಿಂದ ಅತ್ಯಧಿಕ ಬೆಂಬಲ ಪಡೆಯುತ್ತಿರುವಾಗ, ಅತ್ತ ಆಸ್ಟ್ರೇಲಿಯಾದಲ್ಲಿ ವಿರೋಧ ಮತ್ತು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿ ಚಳುವಳಿ ಹೆಚ್ಚಾಗುತ್ತಿದ್ದಂತೆ ಸಾಲದಾತರು ವಿವಾದಾತ್ಮಕ ಕಾರ್ಮೈಕಲ್ ಕಲ್ಲಿದ್ದಲು ಯೋಜನೆಯಿಂದ ದೂರ ಸರಿದರು. ಈ ಚಳುವಳಿಯು 2019 ರ ಸಂಸತ್ತಿನ ಮತದಾನದಲ್ಲಿ ಚುನಾವಣಾ ವಿಷಯವಾಗಿ ಕೂಡಾ ಮಾರ್ಪಟ್ಟಿತು.

ಅಂತರರಾಷ್ಟ್ರೀಯ ಹೂಡಿಕೆದಾರರು ಮತ್ತು ಜಾಗತಿಕ ಇಂಧನದ ದೊಡ್ಡ ಕಂಪೆನಿಗಳು ತಮ್ಮ ಬಂಡವಾಳವನ್ನು ವಿಸ್ತರಿಸಲು ಮತ್ತು ಲಾಭದಾಯಕ ಭಾರತೀಯ ಮಾರುಕಟ್ಟೆಯ ಒಂದು ಭಾಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಇದಕ್ಕಾಗಿ ಅದಾನಿ ಗ್ರೂಪ್ ಅವರಿಗೆ ಆಕರ್ಷಕವಾಗಿ ಕಾಣುತ್ತದೆ. ಫ್ರಾನ್ಸ್‌ನ ಇಂಧನ ದೈತ್ಯ ಟೋಟಲ್ ಎಸ್‌ಎ ಈಗಾಗಲೇ ಅದಾನಿ ಗ್ರೀನ್ ಮತ್ತು ವಿತರಕ ಅದಾನಿ ಗ್ಯಾಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡಿದೆ.

ಮಾಹಿತಿ ಕೃಪೆ: ದಿ ಪ್ರಿಂಟ್


ಇದನ್ನೂ ಓದಿ: ಬಾಯ್ಕಾಟ್ ಅಂಬಾನಿ: ಏರ್‌ಟೆಲ್‌, ವೊಡಾಫೋನ್‌ ವಿರುದ್ಧ ದೂರು ನೀಡಿದ ಜಿಯೋ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights