FACT CHECK | ಲಾರೆನ್ಸ್ ಬಿಷ್ಣೋಯ್ ಹತ್ಯೆಗೆ ಬಹುಮಾನ ಘೋಷಿಸಿದ ರಾಜ್ ಶೇಖಾವತ್‌ಗೆ ಥಳಿಸಲಾಗಿದೆ ಎಂದು ಹಳೆಯ ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ನಂತರ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ಹತ್ಯೆ ಮಾಡಿದರೆ ಬಹುಮಾನ  ನೀಡಲಾಗುವುದು ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಬಿಷ್ಣೋಯ್ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ್ದರಿಂದ ಕೋಪಗೊಂಡ ಜನರು ಕರ್ಣಿ ಸೇನಾ ಅಧ್ಯಕ್ಷ ರಾಜ್ ಶೇಖಾವತ್ ಅವರನ್ನು ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಕೆಲವರು ರಾಜ್ ಶೇಖಾವತ್ ಅವರನ್ನು ಬಲವಂತವಾಗಿ ಕಾರಿಗೆ ಹತ್ತಿಸಲು ಯತ್ನಿಸುತ್ತಿದ್ದಾರೆ.

ಅಕ್ಟೋಬರ್ 22, 2024 ರಂದು ಅರ್ಜುನ್ ಎಂಬ ಫೇಸ್​ಬುಕ್ ಬಳಕೆದಾರರೊಬ್ಬರು  ಈ ವೀಡಿಯೊವನ್ನು ಹಂಚಿಕೊಂಡು, ‘‘ವಿಷ್ಣೋಯ್ ನ ಎನ್ ಕೌಂಟರ್ ಮಾಡೋಕೆ ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರದ ನೂರ ಹನ್ನೊಂದು ರೂ. ಘೋಷಿಸಿದವನಿಗೆ ಯಾರೋ ಹೊಡದಿದ್ದಾರೆ,’’ ಎಂದು ಬರೆದುಕೊಂಡಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 9, 2024 ರಂದು ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ. ಬಿಜೆಪಿ ಕೇಂದ್ರ ಕಚೇರಿಗೆ ತೆರಳುತ್ತಿದ್ದ ಕರ್ಣಿ ಸೇನಾ ನಾಯಕ ರಾಜ್ ಶೇಖಾವತ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ನಾಯಕ ಪರಶೋತ್ತಮ್ ರೂಪಾಲಾ ಅವರು ರಜಪೂತರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಶೇಖಾವತ್ ಅವರು ಪ್ರತಿಭಟನೆ ನಡೆಸಿದ್ದರು.

ಅಸಲಿಗೆ ಇದು 2024 ರ ಏಪ್ರಿಲ್‌ನ ವೀಡಿಯೊ ಆಗಿದ್ದು, ಗುಜರಾತ್‌ನ ಬಿಜೆಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ರಾಜ್ ಶೇಖಾವತ್ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡ ಘಟನೆ ಇದಾಗಿದೆ.

 

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ, Hindustan Times ಏಪ್ರಿಲ್ 9, 2024 ರಂದು ಈ ವೈರಲ್ ವಿಡಿಯೋದಲ್ವಲಿರುವ ಫೋಟೋದೊಂದಿಗೆ ಪ್ರಕಟಿಸಿರುವ ಸುದ್ದಿಯೊಂದು ಲಭ್ಯವಾಗಿದೆ. ಈ ಮಾಹಿತಿಯ ಪ್ರಕಾರ, ‘‘ಏಪ್ರಿಲ್ 9 2024 ರಂದು, ರಾಜ್ ಶೇಖಾವತ್ ಗಾಂಧಿನಗರದ ಬಿಜೆಪಿ ಪ್ರಧಾನ ಕಚೇರಿಯನ್ನು ಸುತ್ತುವರಿಯಲು ಹೊರಟಿದ್ದರು. ಆದರೆ, ಶೇಖಾವತ್ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಲುಪಿದ ತಕ್ಷಣ, ಗುಜರಾತ್ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು,’’ ಎಂದು ಬರೆಯಲಾಗಿದೆ.

ವಾಸ್ತವವಾಗಿ, ಈ ಇಡೀ ವಿವಾದವು ಆ ಸಮಯದಲ್ಲಿ ಕೇಂದ್ರ ಸಚಿವರಾಗಿದ್ದ ಪರಶೋತ್ತಮ್ ರೂಪಾಲಾ ಅವರ ಹೇಳಿಕೆಯ ನಂತರ ಪ್ರಾರಂಭವಾಯಿತು. ಬ್ರಿಟಿಷರು ನಮ್ಮನ್ನು ಆಳುತ್ತಿದ್ದಾಗ ಅಂದಿನ ಮಹಾರಾಜರು ವಿದೇಶಿ ದೊರೆಗಳ ಮುಂದೆ ಮಂಡಿಯೂರಿ ನಮಸ್ಕರಿಸಿ ತಮ್ಮ ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿದರು ಎಂದು ಮಾರ್ಚ್ 22 ರಂದು ನಡೆದ ಸಭೆಯಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿ ರಜಪೂತ ಸಮುದಾಯವು ರೂಪಾಲಾ ಅವರ ಲೋಕಸಭಾ ಟಿಕೆಟ್ ಹಿಂಪಡೆಯಬೇಕು ಎಂದು ಬಿಜೆಪಿ ಸರ್ಕಾರವನ್ನು ಒತ್ತಾಯಿಸಿತ್ತು. ವಿವಾದದ ನಂತರ, ರೂಪಾಲಾ ಅವರ ಹೇಳಿಕೆಗೆ ಕ್ಷಮೆಯಾಚಿಸಿದರು, ಆದರೆ ಪ್ರತಿಭಟನೆಗಳು ನಿಲ್ಲಲಿಲ್ಲ.

ಈ ಹೇಳಿಕೆಯಿಂದ ಕೋಪಗೊಂಡ ರಜಪೂತ ಸಮುದಾಯದ ಮಹಿಳೆಯರು ಜೌಹರ್ (ಆತ್ಮಹತ್ಯೆ) ಮಾಡಿಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 9 ರಂದು ಬಿಜೆಪಿ ಕೇಂದ್ರ ಕಚೇರಿಗೆ ಘೇರಾವ್ ಹಾಕುವಂತೆ ರಾಜ್ ಶೇಖಾವತ್ ಕರೆ ನೀಡಿದ್ದರು. ಇದಕ್ಕೆಂದು ಶೇಖಾವತ್ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಲುಪಿದ ತಕ್ಷಣ, ಗುಜರಾತ್ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಾಗ ನಡೆದ ಘಟನೆ ಇದಾಗಿದೆ.

ಇನ್ನು ಟಿವಿ9 ಗುಜರಾತಿ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ಏಪ್ರಿಲ್ 9 ರಂದು ಅಪ್‌ಲೋಡ್ ಲಭ್ಯವಾಗಿದೆ. ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಸಿಂಗ್ ಶೇಖಾವತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 6ತಿಂಗಳ ಹಳೆಯ ಘಟನೆಯ ವಿಡಿಯೋವನ್ನು, ಬಿಷ್ಣೋಯ್ ಎನ್‌ಕೌಂಟರ್‌ಗೆ ಬಹುಮಾನ ಘೋಷಿಸಿದ್ದರಿಂದ ಕೋಪಗೊಂಡ ಜನರು ಕರ್ಣಿ ಸೇನಾ ಅಧ್ಯಕ್ಷ ರಾಜ್ ಶೇಖಾವತ್ ಅವರನ್ನು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಚರಂಡಿ ನೀರನ್ನು ಬಳಸಿ ಬಿರಿಯಾನಿ ತಯಾರಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights