FACT CHECK | ಕೇರಳದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳಿಗೆ ಹಂಚುವ ಹಾಲಿನ ಟಬ್‌ನಲ್ಲಿ ಸ್ನಾನ ಮಾಡಿದ್ದು ನಿಜವೇ?

‘‘ಜಿಹಾದಿಗಳ ಮತ್ತೊಂದು ಕ್ರೂರ ಮುಖ. ಕೇರಳದ ಹಾಲಿನ ಡೈರಿ ಕಾರ್ಖಾನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ನೋಡಿ. ಇದೇ ಹಾಲನ್ನು ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಹಿಂದೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಥೂ ನಿಮ್ಮ ಜನ್ಮಕ್ಕೆ..’’ ಎಂದು ಬರೆದು ಫೇಸ್​ಬುಕ್ ಬಳಕೆದಾರರೊಬ್ಬರು ನವೆಂಬರ್ 10, 2024 ರಂದು ಈ ವೀಡಿಯೊ ಹಂಚಿಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ವ್ಯಕ್ತಿಯೋರ್ವ ಒಂದು ಸಣ್ಣ ಟಬ್​ನಲ್ಲಿ ಮಲಗಿದ್ದು, ಒಂದು ಚೊಂಬಿನೊಂದಿಗೆ ಬಿಳಿ ದ್ರವವನ್ನು ಸ್ಕೂಪ್ ಮಾಡಿ ತಲೆಯ ಮೇಲೆ ಸುರಿಯುತ್ತಾನೆ. ಇದು ಕೇರಳದ ಹಾಲಿನ ಡೈರಿಯಲ್ಲಿ ನಡೆದ ಘಟನೆ ಆಗಿದ್ದು, ಈ ಮುಸ್ಲಿಂ ವ್ಯಕ್ತಿ ಹಾಲಿನಲ್ಲಿ ಸ್ನಾನ ಮಾಡಿ ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ..

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ  ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ನವೆಂಬರ್ 9, 2020 ರಂದು ಈ ಕುರಿತು ಟರ್ಕಿಯ ಸ್ಥಳೀಯ ವೆಬ್​ಸೈಟ್ kosmo  ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.

ವೆಬ್‌ಸೈಟ್ ವರದಿಯ ಪ್ರಕಾರ, ‘‘ಈ ಘಟನೆ ಟರ್ಕಿಯ ಕೊನ್ಯಾ ನಗರದಲ್ಲಿ ನಡೆದಿದೆ. ಕೊನ್ಯಾದಲ್ಲಿನ ಡೈರಿ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಎಮ್ರೆ ಸಾಯರ್ ಅವರನ್ನು ಹಾಲಿನಲ್ಲಿ ಸ್ನಾನ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ನವೆಂಬರ್ 6, 2020 ರಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಂಡ ಪ್ಲಾಂಟ್‌ನ ಇನ್ನೊಬ್ಬ ಕೆಲಸಗಾರ ಉಗುರ್ ತುರ್ಗುಟ್ ಅವರನ್ನು ಸಾಯರ್ ಜೊತೆಗೆ ಬಂಧಿಸಲಾಯಿತು. ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಡೈರಿ ಪ್ಲಾಂಟ್‌ಗೆ ದಂಡ ಕೂಡ ವಿಧಿಸಲಾಗಿದೆ ಮತ್ತು ಅವರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ’’ ಎಂದು ವರದಿಯಲ್ಲಿದೆ.

ಹಾಗೆಯೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ನವೆಂಬರ್ 13, 2020 ರಂದು ಮಾಡಿರುವ ವರದಿ ಲಭ್ಯವಾಗಿದ್ದು, ‘‘ಈ ವೀಡಿಯೊವನ್ನು ಸೆಂಟ್ರಲ್ ಅನಾಟೋಲಿಯನ್ ಪ್ರಾಂತ್ಯದ ಕೊನ್ಯಾದಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡ ನಂತರ ಅದು ವೈರಲ್ ಆಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಎಮ್ರೆ ಸಾಯರ್ ಎಂದು ಗುರುತಿಸಲಾಗಿದೆ ಮತ್ತು ಚಿತ್ರೀಕರಿಸಿದವರನ್ನು ಕೂಡ ಬಂಧಿಸಲಾಗಿದೆ. ಘಟನೆಯ ನಂತರ, ಅಧಿಕಾರಿಗಳು ದಂಡವನ್ನು ವಿಧಿಸಿದ್ದಾರೆ. ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಸ್ಥಾವರವನ್ನು ಮುಚ್ಚಲಾಗಿದೆ’’ ಎಂದು ವರದಿಯಲ್ಲಿದೆ.

ಟರ್ಕಿಯ ಮತ್ತೊಂದು ಸ್ಥಳೀಯ ಸುದ್ದಿ ವಾಹಿನಿ ಟಿಆರ್‌ಟಿ ಹೇಬರ್‌ ಕೂಡ ಈ ಬಗ್ಗೆ ಯೂಟ್ಯೂಬ್​ನಲ್ಲಿ ವೀಡಿಯೊ ಹಂಚಿಕೊಂಡು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದದರೆ, 2020ರಲ್ಲಿ ಟರ್ಕಿಯ ಡೈರಿ ಪ್ಲಾಂಟ್‌ನಲ್ಲಿ ನಡೆದ ಘಟನೆಯ ಹಳೆಯ ವಿಡಿಯೋವನ್ನು ಕೋಮು ಹಿನ್ನಲೆಯಲ್ಲಿ ಕೇರಳದ ಹಾಲಿನ ಡೈರಿ ಕಾರ್ಖಾನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಇತ್ತೀಚೆಗೆ ನಡೆದ ಘಟನೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಂದೂ ದೇವಸ್ಥಾನವನ್ನು ಮಸೀದಿಯನ್ನಾಗಿ ಪರಿವರ್ತಿಸಿಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights