FACT CHECK | ಪುಷ್ಪ-2 ಚಿತ್ರ ವೀಕ್ಷಿಸಿದ್ರಾ ಪ್ರಧಾನಿ ಮೋದಿ?

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಜೆಪಿ ನಡ್ಡಾ ಮತ್ತು ಇತರ ಹಲವು ಸಚಿವರು ಕಾಣಿಸಿಕೊಂಡ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕೆಲವು ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ-2 ಚಿತ್ರ ವೀಕ್ಷಿಸಲು ಹೋಗಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದನ್ನು ಫೇಸ್‌ಬುಕ್ ಬಳಕೆದಾರರು ಹಂಚಿಕೊಳ್ಳಿದ್ದಾರೆ. ಈ ವಿಡಿಯೋಕ್ಕೆ ‘‘ಅಲ್ಲು ಅರ್ಜುನ್ ಅವರ ಮೆಗಾ ಫಿಲ್ಮ್ ಪುಷ್ಪ 2 ವೀಕ್ಷಿಸಲು ಮೋದಿ ಜಿ ಚಿತ್ರಮಂದಿರಕ್ಕೆ ಬಂದರು, ಮೋದಿ ಅವರು ಪುಷ್ಪ 2 ವೀಕ್ಷಿಸಿದರು. ಬಾಲಿವುಡ್ ಜನರೇ, ಅಲ್ಲು ಅರ್ಜುನ್ ಅವರಿಂದ ಏನಾದರೂ ಕಲಿಯಿರಿ’’ ಎಂದು ಶೀರ್ಷಿಕೆ ನೀಡಲಾಗಿದೆ. ಹಾಗಿದ್ದರೆ ನಿಜವಾಗಿಯೂ ಪ್ರಧಾನಿ ಮೋದಿ ಮತ್ತು ಇತರೆ ಸಚಿವರು ಪುಷ್ಪ 2 ಚಿತ್ರ ವೀಕ್ಷಿಸಿದ್ದಾರೆಯೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕೀವರ್ಡ್‌ಗಳೊಂದಿಗೆ ಗೂಗಲ್​ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ. ಬಳಿಕ ಫೋಟೋವನ್ನು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ ನ್ಯೂಸ್‌18 ಕನ್ನಡ ನರೇಂದ್ರ ಮೋದಿ ಹಾಗೂ ಇತರೆ ಸಚಿವರು ಕುಳಿತಿರುವ ಅದೇ ವೈರಲ್ ಫೋಟೋದೊಂದಿಗೆ 2 ಡಿಸೆಂಬರ್ 2024 ರಂದು ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.

ಇದು ‘ದಿ ಸಬರಮತಿ ರಿಪೋರ್ಟ್’ ಸಿನಿಮಾ ಪ್ರದರ್ಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಚಿವರೊಂದಿಗೆ ಚಿತ್ರ ವೀಕ್ಷಿಸಿದಾಗ ತೆಗೆದ ಫೋಟೋ ಎಂದು ಉಲ್ಲೇಖಿಸಲಾಗಿದೆ.

ನ್ಯೂಸ್‌18 ಕನ್ನಡ ಡಿಸೆಂಬರ್ 3ರಂದು ಸುದ್ದಿಯನ್ನು ಪ್ರಕಟಿಸಿದೆ. ಈ ಸುದ್ದಿಯ ಪ್ರಕಾರ, ದಿ ಸಬರಮತಿ ರಿಪೋರ್ಟ್ ಸಿನಿಮಾ ವೀಕ್ಷಿಸಿದ ನಂತರ ಪ್ರಧಾನಿ ನರೇಂದ್ರ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಕ್ರೀನಿಂಗ್‌ನಿಂದ ಫೋಟೋಗಳನ್ನು ಹಂಚಿಕೊಂಡು, ಸಿನಿಮಾ ಬಗ್ಗೆ ವಿಮರ್ಶೆಯನ್ನು ಬರೆದಿದ್ದಾರೆ. ವಿಕ್ರಾಂತ್ ಮಾಸ್ಸೆ ಅವರು ಸಿನಿಮಾದಿಂದ ನಿವೃತ್ತಿ ಘೋಷಿಸಿದ ದಿನವೇ ಪ್ರಧಾನಿ ಮೋದಿಯವರ ವಿಶೇಷ ಪ್ರದರ್ಶನದಲ್ಲಿ ಚಿತ್ರ ವೀಕ್ಷಿಸಿದ್ದಾರೆ ಎಂದು ವರದಿ ಮಾಡಿದೆ.

ದಿ ನ್ಯೂಸ್‌ ಮಿನಿಟ್ ಪ್ರಕಟಿಸಿದ ಸುದ್ದಿಯೊಂದು ಲಭ್ಯವಾಗಿದ್ದು, ಬಾಲಿವುಡ್​ ನಟ ವಿಕ್ರಾಂತ್ ಮಾಸಿ ಪ್ರಮುಖ ಪಾತ್ರ ಮಾಡಿರುವ ‘ದಿ ಸಾಬರಮತಿ ರಿಪೋರ್ಟ್​’ ಸಿನಿಮಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ. ಇಂದು (ಡಿಸೆಂಬರ್​ 2) ಸಂಸತ್ ಭವನದ ಬಾಲಯೋಗಿ ಸಭಾಂಗಣದಲ್ಲಿ ಅವರು ಸಿನಿಮಾ ನೋಡಿದರು. ಅವರ ಜೊತೆ ಅನೇಕ ಸಚಿವರು, ಸಂಸದರು ಹಾಗೂ ಚಿತ್ರತಂಡದವರು ಕೂಡ ಭಾಗಿ ಆಗಿದ್ದರು. ಸಿನಿಮಾ ವೀಕ್ಷಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಅವರು ದಿ ಸಾಬರಮತಿ ರಿಪೋರ್ಟ್ ಚಿತ್ರತಂಡಕ್ಕೆ ಭೇಷ್​ ಎಂದಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ. ಈ ಸುದ್ದಿಯನ್ನು ನೀವು ಇಲ್ಲಿ ಓದಬಹುದು.

ಈ ಸ್ಕ್ರೀನಿಂಗ್‌ನ ಚಿತ್ರಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 2, 2024 ರಂದು ಮಾಡಿದ ಪೋಸ್ಟ್‌ನಲ್ಲಿ, ಇದನ್ನು ‘ದಿ ಸಬರಮತಿ ರಿಪೋರ್ಟ್’ ಚಿತ್ರದ ಪ್ರದರ್ಶನ ಎಂದು ವಿವರಿಸಲಾಗಿದೆ.

‘ದಿ ಸಬರಮತಿ ರಿಪೋರ್ಟ್’ ಸಿನಿಮಾದ ನಾಯಕ ನಟ ವಿಕ್ರಾಂತ್ ಮಾಸ್ಸೆ ಅವರು ಕೂಡ 2 ಡಿಸೆಂಬರ್ 2024 ರಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ಸ್ಕ್ರೀನಿಂಗ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿ ಅವರು ಪುಷ್ಪ-2 ಚಿತ್ರ ವೀಕ್ಷಿಸಲು ಹೋಗಿದ್ದಾರೆ ಎಂಬ ಪೋಸ್ಟ್ ನಕಲಿ ಎಂಬುದು ಸ್ಪಷ್ಟವಾಗಿದೆ. ದಿ ಸಬರಮತಿ ರಿಪೋರ್ಟ್ ಚಿತ್ರ ಪ್ರದರ್ಶನದ ವೇಳೆ ಮೋದಿ ಅವರು ಇತರ ನಾಯಕರು ಮತ್ತು ಸಂಸದರೊಂದಿಗೆ ಸಿನಿಮಾ ವೀಕ್ಷಿಸುತ್ತಿರುವ ಫೋಟೊವನ್ನು ಪುಷ್ಪ-2 ಚಿತ್ರ ವೀಕ್ಷಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದಲ್ಲಿ ಮಸೀದಿಗೆ ಬೆಂಕಿ ಹಾಕಲಾಗಿದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights