ಒಳಮೀಸಲಾತಿಯ ತತ್ವವಿಲ್ಲದೇ ಮೀಸಲಾತಿಗೆ ಸತ್ವವಿರದು: ಅಧ್ಯಯನ ಬರಹ

ಕಳೆದ ತಿಂಗಳು (27/8/2020) ಸುಪ್ರೀಂಕೋರ್ಟಿನ ಅತ್ಯಂತ ವಿವಾದಾಸ್ಪದ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರ ನೇತೃತದ ಐವರು ನ್ಯಾಯಾಧೀಶರ ಪೀಠವು THE STATE OF PUNJAB & ORS. VS. DAVINDER SINGH & ORS. ( CIVIL APPEAL NO.2317 OF 2011 ) ಪ್ರಕರಣದಲ್ಲಿ 78 ಪುಟಗಳ ತೀರ್ಪನ್ನು ನೀಡಿ, ಪರಿಶಿಷ್ಟ ಜಾತಿಗಳ ಮೀಸಲಾತಿ ಯ ಒಳವರ್ಗೀಕರಣ ಮತ್ತು ಈವರೆಗೆ ಮೀಸಲಾತಿಯಿಂದ ಹೆಚ್ಚಿನ ಲಾಭ ಪಡೆಯದ ಪರಿಶಿಷ್ಟ ಜಾತಿಗಳಿಗೆ ಆದ್ಯತೆಯನ್ನು ಒದಗಿಸುವ ಅಧಿಕಾರವು ರಾಜ್ಯ ಸರ್ಕಾರಗಳಿಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಇದೆ ವಿಷಯದ ಬಗ್ಗೆ 2005ರಲ್ಲಿ ಜಸ್ಟಿಸ್ ಸಂತೋಷ್ ಹೆಗಡೆಯವರ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಪರಿಶಿಷ್ಟ ಜಾತಿಗಳ ಪಟ್ಟಿಯು ಅಸ್ಪೃಶ್ಯತೆಯ ಎಂಬ ಆತ್ಯಂತಿಕ ಹಿಂದುಳಿದಿರುವಿಕೆಯನ್ನು ಆಧರಿಸಿದ ವರ್ಗಿಕರಣವಾದ್ದರಿಂದ ಅದರೊಳಗೆ ಸೇರ್ಪಡೆಯಾಗಿರುವ ಎಲ್ಲಾ ಜಾತಿಗಳು ಏಕರೂಪಿಯಾಗಿ ಸಾಮಾಜಿಕ ತಾರತಮ್ಯಕ್ಕೆ ಗುರಿಯಾಗಿವೆ ಎಂದೂ ಆದ್ದರಿಂದಲೇ ಆ ಪಟ್ಟಿ ಒಮ್ಮೆ ಅಂತಿಮವಾದ ಮೇಲೆ ಪದೇಪದೇ ಹಿಂದುಳಿದಿರುವಿಕೆಯ ಪರೀಕ್ಷೆಯನ್ನು ಮಾಡುವುದಾಗಲಿ ಅಥವಾ ಅದರೊಳಗೆ ಯಾವುದೇ ವರ್ಗಿಕರಣವಾಗಲಿ ಮಾಡುವುದು ಸಲ್ಲದು ಎಂದು ತೀರ್ಪನ್ನು ನೀಡಿತ್ತು.

ಹಾಗಿದ್ದಲ್ಲಿ ಒಳಮೀಸಲಾತಿಯ ಹೋರಾಟಕ್ಕೆ ಅಂತಿಮ ಗೆಲುವು ಸಿಕ್ಕಿತೇ? ಸುಪ್ರೀಂ ಕೋರ್ಟು ಒಳಮೀಸಲಾತಿಯ ಪರವಾಗಿ ತೀರ್ಮಾನ ಕೊಟ್ಟಂತಾಯಿತೇ?

ತೀರ್ಪಿನ ಒಳಹೂರಣ :

– ಜಸ್ಟಿಸ್ ಅರುಣ್ ಕುಮಾರ ಮಿಶ್ರಾ ಅವರ ಪೀಠ ಹಾಗೂ 2005ರಲ್ಲಿ ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ಒಳಮೀಸಲಾತಿಯ ವಿರುದ್ಧ ತೀರ್ಮಾನ ಕೊಟ್ಟ ಜಸ್ಟಿಸ್ ಸಂತೋಷ್ ಹೆಗಡೆ ಯವರ ಪೀಠಗಳೆರಡೂ ಐದು ಸದಸ್ಯರ ಪೀಠವಾಗಿದೆ.

ಐದು ಸದಸ್ಯರ ಪೀಠವೊಂದು ಕೊಟ್ಟ ತೀರ್ಮಾನವನ್ನು ಮತ್ತೊಂದು ಐದು ಸದಸ್ಯರ ಪೀಠವೇ ರದ್ದು ಮಾಡುವಂತಿಲ್ಲ

ಅದನ್ನು ಐದಕ್ಕಿಂತ ಹೆಚ್ಚು ಅಂದರೆ ಏಳು ಸದಸ್ಯರ ಅಥವಾ ಅದಕ್ಕಿಂತೆ ಹೆಚ್ಚಿನ ಸದಸ್ಯರುಳ್ಳ ಸಾಂವಿಧಾನಿಕ ಪೀಠ ತೀರ್ಮಾನಿಸಬೇಕಿರುತ್ತದೆ. ಅದನ್ನೇ ನಿನ್ನೆಯ ತೀರ್ಪಿನಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ :

” 52. We endorse the opinion of a Bench of 3 Judges that E.V. Chinnaiah is required to be revisited by a larger Bench; more so, in view of further development and the amendment of the Constitution, which have taken place.

We cannot revisit E.V. Chinnaiah being Bench of coordinate strength. We request the Hon’ble Chief Justice to place the matters before a Bench comprising of 7 Judges or more as considered appropriate.”

ಹೀಗಾಗಿ ಈ ತೀರ್ಮಾನದಲ್ಲಿ ವ್ಯಕ್ತಪಡಿಸಿರುವ ಯಾವುದೇ ನಿಲುವುಗಳು ಜಾರಿಯಾಗುವ ಆದೇಶಗಳಾಗುವುದಿಲ್ಲ.

ಸಾರಾಂಶದಲ್ಲಿ ಈಗ ಒಳಮೀಸಲಾತಿಯ ವಿಷಯವು ಸುಪ್ರೀಂಕೋರ್ಟಿನ ಏಳು ಸದಸ್ಯರ ಅಥವಾ ಅದಕ್ಕಿಂತ ಹೆಚ್ಚಿನ ಬಲವುಳ್ಳ ವಿಸ್ತೃತ ಪೀಠಕ್ಕೆ ವರ್ಗಾವಣೆಗೊಂಡಿದೆ.

ಇನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಏಳು ಅಥವಾ ಅದಕ್ಕಿಂತ ಹೆಚ್ಚಿನ ಬಲದ ಪೀಠವನ್ನು ರಚಿಸಿ, ಅದು ವಿಚಾರಣೆಯನ್ನು ಕೈಗೊಂಡು ..ಆದರ ತೀರ್ಪು ಬರುವುದು ಯಾವ ರಾಯನ ಕಾಲಕ್ಕೆ ಎಂಬುದು ನಮ್ಮ ನಮ್ಮ ಐತಿಹಾಸಿಕ ಜ್ಞಾನಕ್ಕೆ ಬಿಟ್ಟ ವಿಷಯ!

ಮೀಸಲಾತಿಯೇ ಬೇಡವೆನ್ನುವವರು ಒಳಮೀಸಲಾತಿ ಬೇಕೆನ್ನುತ್ತಿರುವ ಸೋಜಿಗ:

ದಲಿತ ಅಸ್ಮಿತೆ, ಮೀಸಲಾತಿಯ ತಾತ್ವಿಕತೆ ಮತ್ತು ಮೀಸಲಾತಿಯ ಪ್ರಸ್ತುತತೆಗಳೇ ಅಪಾಯದಲ್ಲಿರುವಾಗ ಒಳಮೀಸಲಾತಿಯ ಆಶಯವನ್ನು ಸಮರ್ಥಿಸುವ ಆದರೆ ಜಾರಿಯಾಗದ ಒಂದು ತೀರ್ಪು ಬಂದಿದೆ. ಅದೇ ಸಮಯದಲ್ಲಿ ಕರ್ನಾಟಕದಲ್ಲಿ ಒಳಮೀಸಲಾತಿ ಮತ್ತು ಸದಾಶಿವ ಅಯೋಗದ ವರದಿಯ ಸುತ್ತಾ ಮತ್ತೊಮ್ಮೆ ಅನಾರೊಗ್ಯಕರ ಮತ್ತು ಪೂರ್ವಗ್ರಹ ಪೀಡಿತ ಚರ್ಚೆಯು ಹುಟ್ಟಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ವಾಸ್ತವವಾಗಿ ೨೦೧೨ ರಿಂದ ಬಿಜೆಪಿ, ಕಾಂಗ್ರೆಸ್ ಹಾಗು ಮೈತ್ರಿ ಸರ್ಕಾರಗಳೆಲ್ಲಾ ಸದಾಶಿವ ಆಯೋಗದ ಬಗ್ಗೆ ಕೊಟ್ಟ ಭರವಸೆಗಳನ್ನು ಈಡೇರಿಸದಿರುವುದು ಸಮುದಾಯಗಳಿಗೆ ಮಾಡಿರುವ ಅವಮಾನವೇ ಆಗಿದೆ, ಆದರೆ ಈ ಪಕ್ಷಗಳು ಮಾಡಿದ ನಿಧಾನ ದ್ರೋಹದಿಂದ ಸಮುದಾಯಗಳಲ್ಲಿ ಉಂಟಾಗಿರುವ ಅಸಮಾಧಾನವನ್ನು ಮನುವಾದಿ ಬಿಜೆಪಿ ಪಕ್ಷವು ತಾನು ಮಾಡುತ್ತಿರುವ ಪ್ರತ್ಯಕ್ಷ ದ್ರೋಹಕ್ಕೆ ಕವಚವಾಗಿ ಬಳಸಿಕೊಳ್ಳುತ್ತಿದೆ.

ಜೊತೆಗೆ ಸಾಮಾಜಿಕ ನ್ಯಾಯಪ್ರಜ್ನೆಯ ಫಲಿತವಾದ ಮೀಸಲಾತಿಯ ಫಲಾನುಭವಿಗಳೂ ಸಹ ಒಳಮೀಸಲಾತಿಯ ಪ್ರಶ್ನೆ ಬಂದಾಗ ಅದರ ವಿರುದ್ಧ ಪ್ರತಿಭೆ, ಅರ್ಹತೆಗಳೆಂಬ ಬ್ರಾಹ್ಮಣೀಯ ಕುತರ್ಕವನ್ನೇ ಬಳಸುತ್ತಿರುವುದು ಅತ್ಯಂತ ಆತ್ಮಘಾತುಕವಾಗಿದೆ. ಇಂಥಾ ವಾದಗಳು ಒಳಮೀಸಲಾತಿಯನ್ನು ಮಾತ್ರವಲ್ಲದೆ ಮೀಸಲಾತಿಯ ಸಾಂವಿಧಾನಿಕ ಬುನಾದಿಯನ್ನೇ ನಿರಾಕರಿಸುವ ಮನುವಾದಿ ಚಿಂತನಾ ಕ್ರಮವೆಂಬುದನ್ನು ಅರಿಯದಷ್ಟು ಸಂಕುಚಿತತೆ ಆವರಿಸಿಕೊಂಡಿದೆ. ಹೀಗಾಗಿ ಇಂದು ಒಳಮೀಸಲಾತಿ ವಿಷಯವು ಒಳಜಗಳಗಳಿಗೆ ದಾರಿಮಾಡಿಕೊಡಬಾರದೆಂದರೆ ಒಳಮೀಸಲಾತಿಯನ್ನು ಮತ್ತು ಸದಾಶಿವ ಅಯೋಗದ ವರದಿ ಜಾರಿಯಾಗಲು ಇರುವ ನಿಜವಾದ ಆತಂಕಗಳನ್ನು ಸಾಮಾಜಿಕ ನ್ಯಾಯದ ಒಳಗಣ್ಣಿನಿಂದ ಅರ್ಥಮಾಡಿಕೊಳ್ಳಬೇಕಿದೆ.

ಸದಾಶಿವ ಅಯೋಗದಲ್ಲಿ ಇರುವುದೇನು? ಇಲ್ಲದಿರುವುದೇನು?

ಸದಾಶಿವ ಅಯೋಗವು ೨೦೧೨ರಲ್ಲೇ ವರದಿಯನ್ನು ನೀಡಿತು. ಆದರೆ ಆಗಿನ ಬಿಜೆಪಿ ಸರ್ಕಾರದಿಂದ ಹಿಡಿದು ಆ ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದವರೆಗೆ ಎಲ್ಲಾ ಸರ್ಕಾರಗಳು ಅದನ್ನು ಸದನದಲ್ಲಿ ಮಂಡಿಸಿ, ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡದೆ ಅದರ ಬಗ್ಗೆ ಇಲ್ಲದ ಊಹಾಪೋಹಗಳು, ಆತಂಕಗಳು ಮತ್ತು ಅನೈಕ್ಯತೆಗಳೂ ಹುಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಸದಾಶಿವ ಅಯೋಗವು ಸರ್ಕಾರಕ್ಕೆ ವರದಿ ನೀಡಿದ ನಂತರ ನೀಡಿದ ಪತ್ರಿಕಾ ಹೇಳಿಕೆಯನ್ನು ಬಿಟ್ಟರೆ ಅದರ ಬಗ್ಗೆ ಈವರಗೆ ಯಾವುದೇ ಅಧಿಕೃತ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ೨೦೧೮ರ ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಮತ್ತೊಮ್ಮೆ ಸದಾಶಿವ ಅಯೋಗದ ವರದಿಯನ್ನು ಜಾರಿಗೆ ತರಬೇಕೆ ಬೇಡವೇ ಎಂಬ ವಿವಾದಗಳು ಭುಗಿಲೆದ್ದಾಗ, ಕೆಲವು ಆಸಕ್ತರು ವರದಿಯ ಪೂರ್ಣಪಾಠವನ್ನು ಸಾಮಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದರು. ಆಗ ಮಾತ್ರ ವರದಿಯ ಸಮಗ್ರ ಸ್ವರೂಪ ಸಾಕಷ್ಟು ಜನರ ಗಮನಕ್ಕೆ ಬಂದಿತು.

ಆ ವರದಿಯು ಅಯೋಗದ ಅಧಿಕೃತ ಪತ್ರಿಕಾ ಹೇಳಿಯಲ್ಲಿ ನೀಡಿದ ತರ್ಕ ಮತ್ತು ಅಂತಿಮ ಶಿಪಾರಸ್ಸುಗಳಿಗೆ ಪೂರಕವಾದ ವಿವರಗಳನ್ನೇ ಕೊಡುತ್ತದೆ. ಅಲ್ಲದೆ ಸರ್ಕಾರವು ಕೂಡಾ ಜನರ ನಡುವೆ ಚರ್ಚೆಯಲ್ಲಿದ್ದ ಈ ವರದಿಯ ಅಧಿಕೃತತೆಯನ್ನು ಈವರೆಗೆ ನಿರಾಕರಿಸಿಲ್ಲ. ಹೀಗಾಗಿ ಸರ್ಕಾರವು ಸದಾಶಿವ ಅಯೋಗದ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವತನಕ ಇದನ್ನೇ ಅಧಿಕೃತ ಎಂದು ಭಾವಿಸುವುದರಲ್ಲಿ ಅಪಾಯವೇನಿಲ್ಲ.

Quota on quota: Political debate erupts in Karnataka post SC verdict - The  Federal

ಮೊದಲನೆಯದಾಗಿ ಈ ಸೋರಿದ ಸದಾಶಿವ ಅಯೋಗದ ವರದಿಯು ಯಾವ್ಯಾವ ಶಿಫಾರಾಸ್ಸು ಮಾಡಿದೆ ಮತ್ತು ಮಾಡಿಲ್ಲ ಎಂಬುದನ್ನು ಗಮನಿಸಬೇಕು.

ಸದಾಶಿವ ಅಯೋಗದಲ್ಲಿ ಹೇಳಿರುವುದು ಮತ್ತು ಹೇಳದಿರುವುದು:

1. ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಎಂದು ವರ್ಗೀಕರಣಗೊಂಡಿರುವ (101 ಜಾತಿಗಳಲ್ಲಿ) ಯಾವ ಜಾತಿಗಳನ್ನು ಆ ಪಟ್ಟಿಯಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಏಕೆಂದರೆ ಪರಿಶಿಷ್ಟ ಪಟ್ಟಿಗೆ ಸೇರಿಸುವ ಅಥವಾ ಕಿತ್ತುಹಾಕುವ ಶಾಸನಾತ್ಮಕ ಅಧಿಕಾರ ಇರುವುದು ದೇಶದ ಸಂಸತ್ತಿಗೇ ವಿನಾ ರಾಜ್ಯಗಳ ವಿಧಾನಸಭೆಗಳಿಗೆ ಅಂಥಾ ಅಧಿಕಾರವಿಲ್ಲ. ಹೀಗಾಗಿ ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಷ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಹೊರಗಿಡಲು ಸದಾಶಿವ ಅಯೋಗವು ಸಲಹೆ ಮಾಡಿದೆ ಎಂಬ ಪುಕಾರಿನಲ್ಲಿ ಯಾವುದೇ ಹುರುಳಿಲ್ಲ.

2. ಅಯೋಗವು ಎಸ್ಸಿ ಪಟ್ಟಿಯೊಳಗಿರುವ 101 ಜಾತಿಗಳನ್ನು 4 ವಿಭಾಗಗಳನ್ನಾಗಿ ವಿಂಗಡಿಸಿದೆ. ಅ) ದಲಿತ ಸಮುದಾಯದ ಶೇ.೩೩.೪೭ರಷ್ಟು ಜನಸಂಖ್ಯೆ ಹೊಂದಿರುವ ಮಾದಿಗ (ಎಡಗೈ) ಮತ್ತು ಇತರ ೨೯ ಉಪಜಾತಿಗಳು. ಆ) ದಲಿತ ಸಮುದಾಯದ ಶೇ.೩೨.೦೧ರಷ್ಟು ಜನಸ್ಂಖ್ಯೆ ಇರುವ ಹೊಲೆಯ (ಬಲಗೈ) ಮತ್ತು ಇತರ ೨೪ ಉಪಜಾತಿಗಳು. ಇ) ದಲಿತ ಸಮುದಾಯದ ಶೇ.೪.೬೫ರಷ್ಟಿರುವ ಮತ್ತು ಎಡಗೈ ಅಥವಾ ಬಲಗೈ ವರ್ಗಕ್ಕೆ ಸೇರದ ಅಸ್ಪೃಷ್ಯ ಜಾತಿಗಳು ಮತ್ತು ಈ) ದಲಿತ ಸಮುದಾಯದ ಭಾಗವಾಗಿ ಪರಿಗಣಿಸಲ್ಪಟ್ಟಿರುವ ಶೇ.೨೩.೬೪ರಷ್ಟು ಜನಸಂಖ್ಯೆಯನ್ನು ಹೊಂದಿರುವ (ಲಂಬಾಣಿ, ಭೋವಿ, ಕೊರಮ, ಕೊರಚ…) ಸ್ಪೃಷ್ಯ ಜಾತಿಗಳು.

3) ಅಯೋಗದ ವರದಿಯ ಪ್ರಕಾರ ಸರ್ಕಾರಿ ಯೋಜನೆಗಳ ಫಲಾನುಭವಿಗಳಲ್ಲಿ ಮಾದಿಗರಿಗಿಂತ ಹೊಲೆಯರು ಹೆಚ್ಚಾಗಿದ್ದಾರೆ. ಆದರೆ ಕೆಲವು ನಿರ್ದಿಷ್ಟ ಜಿಲ್ಲೆಗಳಲ್ಲಿ ಇದರಲ್ಲಿ ಸ್ವಲ್ಪ ಏರುಪೇರೂ ಇದೆ. ಹೊಲೆಯ ಮತ್ತು ಮಾದಿಗ ಸಮುದಾಯಗಳಿಗೆ ಸೇರದ ವರ್ಗೀಕರಣ ೩ ರಲ್ಲಿರುವ ಇತರ ಅಸ್ಪೃಷ್ಯ ಜಾತಿಗಳಿಗೆ ಎಲ್ಲರಿಗಿಂತಲೂ ಅತ್ಯಂತ ಕಡಿಮೆ ಸೌಲಭ್ಯಗಳುಮತ್ತು ಪ್ರಾತಿನಿಧ್ಯಗಳು ದಕ್ಕಿವೆ.

4) ಹೀಗಾಗಿ ದಲಿತ ಸಮುದಾಯಕ್ಕೆ ನೀಡಲಾಗಿರುವ ಶೇ.೧೫ರಷ್ಟು ಮೀಸಲಾತಿಯನ್ನು ಮೇಲಿನ ಜನಸಂಖ್ಯಾ ಪ್ರಮಾಣಕ್ಕನುಸಾರವಾಗಿ ವರ್ಗೀಕರಿಸಬೇಕೆಂದು ಸದಾಶಿವ ಅಯೋಗವುಶಿಫಾರಸ್ಸು ಮಾಡಿದೆ.

೫) ಆದರೆ ಸರ್ಕಾರದಲ್ಲಿ ಒಟ್ಟಾರೆ ಲಭ್ಯವಿರುವ ಉದ್ಯೋಗ ಮತ್ತು ಶಿಕ್ಷಣಾವಕಾಶಗಳ ಹೋಲಿಕೆಯಲ್ಲಿ ಹೊಲೆಯರಿಗೆ ಹೆಚ್ಚೆಂದರೆ ಶೇ.೨.೫ರಷ್ಟು ಮತ್ತು ಮಾದಿಗರಿಗೆ ಶೇ.೧.೫ರಷ್ಟು ಮಾತ್ರ ದಕ್ಕಿದೆ. ಇನ್ನು ಉನ್ನತ ಶಿಕ್ಷಣದಲ್ಲಿ ಹೊಲೆಯ ಮತ್ತು ಮಾದಿಗ ಎರಡೂ ಸಮುದಾಯಗಳಿಗೂ ಒಟ್ಟೂ ಸೇರಿ ಅವರ ಜನಸಂಖ್ಯೆಯ ಶೇ.೫ರಷ್ಟು ಮಾತ್ರ ಪ್ರಾತಿನಿಧ್ಯ ಸಿಕ್ಕಿದೆ. ಹೀಗಾಗಿ ಹೊಲೆಯ-ಮಾದಿಗರ ನಡುವಿನ ಅವಕಾಶಗಳಲ್ಲಿ ವ್ಯತ್ಯಾಸಗಳಿದ್ದರೂ ಒಟ್ಟಾಗಿ ನೋಡಿದರೆ ಮೀಸಲಾತಿ ಸೌಲಭ್ಯವು ಆ ಸಮುದಾಯಗಳ ಬಹುದೊಡ್ಡ ಜನಸಂಖ್ಯೆಗೆ ಇನ್ನೂ ತಲುಪೇ ಇಲ್ಲ. ಆದರೂ ಆಗಲೇ ಮೀಸಲಾತಿಯನ್ನು ತೆಗೆದು ಹಾಕಬೇಕೆಂಬ ಹುಯಿಲೆದ್ದಿದೆ.

ಇದು ಮೀಸಲಾತಿಯ ಮಿತಿಗಳನ್ನು ಅದರಲ್ಲೂ ಸರ್ಕಾರಿ ಉದ್ಯೋಗ, ಶಿಕ್ಷಣ ಎಲ್ಲವೂ ಖಾಸಗೀಕರಣವಾಗುತ್ತಿರುವ ಸಂದರ್ಭದಲ್ಲಿ ಮೀಸಲಾತಿಯ ಸೀಮಿತತೆಯನ್ನೂ ಸಹ ವಿವರಿಸುತ್ತದೆ.

ಇವಲ್ಲದೆ ಸದಾಶಿವ ಅಯೋಗವು :

೬) ಒಟ್ಟಾರೆ ಮೀಸಲಾತಿಯನ್ನು ಶೇ.೫೦ಕ್ಕಿಂತ ಹೆಚ್ಚಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸುತ್ತದೆ. ಏಕೆಂದರೆ ಆ ಮಿತಿಯನ್ನು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ನಿಗದಿ ಮಾಡಿದ್ದು ರಾಜ್ಯ ವಿಧಾನ ಸಭೆಗೆ ಅದನ್ನು ತಿದ್ದುವ ಅಧಿಕಾರವಿಲ್ಲ.

(ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ.೫೦ರ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತವೂ, ದೇಶದ ಅರ್ಧಕ್ಕೀಮ್ತ ಹೆಚ್ಚಿನ ವಿಧಾನಸಭೆಗಳ ಸಮ್ಮತಿಯೂ ಸಿಕ್ಕರೆ ಸಾಕು. ಹಾಲಿ ಬಿಜೆಪಿ ಪಕ್ಷಕ್ಕೆ ಇದಕ್ಕೆ ಬೇಕಾದ ಸಂವಿಧಾನಿಕ ಬಲವಿದೆ.)

೭) ಇದರ ಜೊತೆಗೆ ಸದಾಶಿವ ಅಯೋಗವು ಎಸ್ಸಿ ಮೀಸಲಾತಿಯಲ್ಲಿ ಕೆನೆಪದರ ನೀತಿಯನ್ನು ಅನುಸರಿಸಬೇಕೆಂಬ ಅನಗತ್ಯ ಶಿಫಾರಸ್ಸನ್ನೂ ಸಹ ಮಾಡಿದೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಸದಾಶಿವ ಅಯೋಗದ ತಾತ್ಪರ್ಯ ಮತ್ತು ಶಿಫಾರಸ್ಸುಗಳು.

ಒಳಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿಸ್ತರಣೆ

ಅಂಬೇಡ್ಕರ್ ಅವರು ಭಾರತ ಸಮಾಜದಲ್ಲಿರುವ ಜಾತಿ ಪದ್ಧತಿ ಮತ್ತು ಅಸ್ಪೃಷ್ಯತೆಯನ್ನು ಮತ್ತು ಅದು ಉಂಟು ಮಾಡುವ ರಾಜಕೀಯ, ಸಾಮಾಜಿಕ ಪರಿಣಾಮಗಳನ್ನು ವೈಜ್ನಾನಿಕವಾಗಿ ಅಧ್ಯಯನ ಮಾಡಿ ಜಾತಿ ವಿನಾಶದ ಒಂದು ಮಧ್ಯಂತರ ಉಪಕ್ರಮವಾಗಿ ಮೀಸಲಾತಿಯನ್ನು ಶಿಪಾರಸ್ಸು ಮಾಡಿದ್ದರು, ಭಾರತದ ಜಾತಿ ಸಮಾಜ ಶ್ರೇಣೀಕೃತ ಅಸಮಾನತೆಯಿಂದ ಕೂಡಿದ ಸಮಾಜವೆಂದು ವಿವರಿಸಿದ್ದ ಅಂಬೇಡ್ಕರ್ ಅವರು ಮೇಲ್ಚಲನೆ ಪಡೆದ ದಲಿತ ಸಮುದಾಯಗಳೊಳಗೂ ಶ್ರೇಣೀಕೃತ ಅಸಮಾನತೆ ಏರ್ಪಡುವ ಬಗ್ಗೆ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದರು. ಮೀಸಲಾತಿ ಮತ್ತು ಒಳಮೀಸಲಾತಿಗಳೆರಡೂ ಅಂಬೇಡ್ಕರ್ ಅವರ ಈ ಸಾಮಾಜಿಕ ವಿಶ್ಲೇಷಣೆಯ ಸಹಜ ಪರಿಹಾರೋಪಾಯಗಳಾಗಿ ರೂಪುಗೊಳ್ಳುತ್ತವೆ.

ಭಾರತದ ನಾಗರಿಕ ಸಮಾಜದ ಜಾತಿ ಶ್ರೇಣೀಕರಣ ಮತ್ತು ಅಸ್ಪೃಷ್ಯತೆಗಳೆಂಬ ಅನಾಗರಿಕತೆಯಿಂದ ಹೊರಬರುವ ತನಕ ಕೋಟಾ ಪದ್ಧತಿಯಲ್ಲೇ ಪ್ರಾತಿನಿಧ್ಯ ನಿಗದಿಯಾದರೆ ಮಾತ್ರ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ದಕ್ಕಲು ಸಾಧ್ಯ ಎಂಬುದು ಅಂಬೇಡ್ಕರ್ ಅವರ ಖಚಿತ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲೇ ಸಾಮಾಜಿಕ ಪ್ರಾತಿನಿಧ್ಯದ ಆಶಯಗಳ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದಲ್ಲಿ ಮೀಸಲಾತಿಯ ಅವಕಾಶಗಳು ಸೇರ್ಪಡೆಯಾಗಿದೆಯೇ ಹೊರತು ಬಡತನ ನಿವಾರಣೆಯ ಕ್ರಮವಾಗಿಯಲ್ಲ. ಆದ್ದರಿಂದಲೇ ಅದು ಜಾತಿ ನಿರ್ಮೂಲನಾ ಕ್ರಮವೂ ಅಲ್ಲ.

ಅದರಲ್ಲೂ ಅಸೃಷ್ಯತೆಯು ಸಾಮಾಜಿಕ ಹಿಂದುಳಿದಿರುವಿಕೆಯ ಅತ್ಯಂತಿಕ ಪುರಾವೆಯೆಂದು ಸಾಬೀತಾಗಿರುವುದರಿಂದ ಪರಿಶಿಷ್ಟ ಜಾತಿಯ ವರ್ಗೀಕರಣೆಕ್ಕೆ ಅಸ್ಪೃಷ್ಯತೆಯ ಮಾನದಂಡವನ್ನೂ ನಿಗದಿ ಮಾಡಲಾಯಿತು. ಆದರೆ ಅದೇ ಸಮಯದಲ್ಲಿ ಇತರ ಹಿಂದುಳಿದ ಜಾತಿಗಳಿಗೂ ಆಯಾ ಜಾತಿಗಳ ಹಿಂದುಳಿದಿರುವಿಕೆಗಳ ಅನುಗುಣವಾಗಿ ಮೀಸಲತಿ ಇರಬೇಕೆಭುದು ಸಂವಿಧಾನದ ಮತ್ತು ಅಂಭೇಡ್ಕರ್ ಅವರ ಆಶಯವಾಗಿತ್ತು.

ಈ ತಾತ್ವಿಕ ಪ್ರಣಾಳಿಯನ್ನು ಒಪ್ಪಿಕೊಳ್ಳುವುದಾದರೆ ಒಳಮೀಸಲಾತಿಯು ಮೀಸಲಾತಿ ತರ್ಕದ ಸಹಜ ವಿಸ್ತರಣೆಯಾಗಿರುತ್ತದೆ. ಹೀಗಾಗಿ ಮೀಸಲಾತಿಗೆ ಸತ್ವಒದಗಬೇಕೆಂದರೆ ಒಳಮೀಸಲಾತಿಯ ತತ್ವವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಅದು ಮಾತ್ರ ದಲಿತ ಸಮುದಾಯದ ಐಕ್ಯತೆಯನ್ನು ಗಟ್ಟಿಗೊಳಿಸಿ ದಲಿತ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿರುವ ಬ್ರಾಹ್ಮಣೀಯ ಕುತಂತ್ರಗಳನ್ನು ಸೋಲಿಸಲು ಬೇಕಾದ ತಾತ್ವಿಕ ಮತ್ತು ರಾಜಕೀಯ ಹತಾರಗಳನ್ನು ನೀಡುತ್ತದೆ. ಇಲ್ಲದಿದ್ದರೆ ಒಳಕಲಹದಲ್ಲಿ ಅಸಲೀ ಅಪಾಯವನ್ನು ಮರೆಯುವಂತಾಗುತ್ತದೆ.

ಉಷಾ ಮೆಹ್ರ ಸಮಿತಿ ಮತ್ತು ಬಿಜೆಪಿಯ ಮೌನದ್ರೋಹ

ಅಸಲೀ ವಿಷಯವೇನೆಂದರೆ ಒಳಮೀಸಲಾತಿ ಜಾರಿಯಾಗಳು ಕ್ರಮಗಳನ್ನು ತೆಗೆದುಕೊಳ್ಳೌ ಸಾಧ್ಯವಿರುವುದು ಸಂಸತ್ತಿಗೆ ಮಾತ್ರ. ಏಕೆಂದರೆ ಈಗಾಗಲೇ ಅವಿಭಜಿತ ಆಂಧ್ರಪ್ರದೇಶವೂ ತನ್ನ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿದ್ದಾಗ ಸಂತೋಷ್ ಹೆಗಡೆ ನೇತೃತ್ವದ ಐದು ಜನರ ಸಾಂವಿಧಾನಿಕ ನ್ಯಾಯಪೀಠ ಅದನ್ನು ರದ್ದು ಮಾಡಿತ್ತು. ಕಾರಣ ರಾಜ್ಯದ ವಿಧಾನಸಭೆಗಳಿಗೆ ಎಸ್ಸಿ ಮೀಸಲಾತಿಯನ್ನು ಬದಲಿಸುವ ಅಧಿಕಾರವಿಲ್ಲ. ನಮ್ಮ ಸಂವಿಧಾನದ ೩೪೧ (೨)ನೇ ಕಲಮಿನ ಪ್ರಕಾರ ಆ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಹೀಗಾಗಿ ೨೦೦೦ನೇ ಇಸವಿಯಲ್ಲಿ ಆಂಧ್ರ ವಿಧಾನ ಸಭೆಯು ಸರ್ವಸಮ್ಮತಿಯಿಂದ ಒಂದು ಗೊತ್ತುವಳಿಯನ್ನು ಅನುಮೋದಿಸಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತಂದು ಒಳಮೀಸಲಾತಿ ತರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸತ್ತಿಗೆ ಆಗ್ರಹಿಸಿತ್ತು. ಈ ಹಿಂದೆಯೂ ಇದೇ ಬಗೆಯ ಮನವಿಗಳು ಪಂಜಾಬ್ ಇನ್ನಿತರ ರಾಜ್ಯಗಳಿಂದಲೂ ಕೇಂದ್ರ ಸರ್ಕಾರಕ್ಕೆ ಬಂದಿತ್ತು. ಆ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರವು ಜಸ್ತೀಸ್ ಉಷಾ ಮೆಹ್ರ ಸಮಿತಿಯನ್ನು ನೇಮಿಸಿತು. ಆ ಸಮಿತಿಯು ಈ ವಿಷಯದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ೨೦೦೮ರಲ್ಲಿ ವರದಿ ನೀಡಿತು.

usha mehra
usha mehra

ಉಷಾ ಮೆಹ್ರಾ ಸಮಿತಿಯು ಒಳಮೀಸಲಾತಿ ಅತ್ಯಗತ್ಯ. ಎಂದು ಪ್ರತಿಪಾದಿಸಿತಲ್ಲದೆ ಅದನ್ನು ಜಾರಿ ಮಾಡಲು ಸಂವಿಧಾನಕ್ಕೆ ತಿದ್ದುಪಡಿ ತಂದು ೩೪೧ (೩) ನೇ ಕಲಮೊಂದನ್ನು ಸೇರಿಸಬೇಕು ಎಂದು ಶಿಫಾರಸ್ಸು ನೀಡಿದೆ.

ಇದು ಇಲ್ಲಿಯವರೆಗಿನ ಬೆಳವಣಿಗೆ,

ಈ ಮಧ್ಯೆ ಐದು ಜನರ ಸಾಂವಿಧಾನಿಕ ಪೀಠ ವಿಷಯವನ್ನು ಏಳು ಜನರ ಪೀಠಕ್ಕೆ ವರ್ಗಾಯಿಸಿದೆ. ಹಾಲಿ ಆಡಳಿತ ರೂಢ ಪಕ್ಷಗಳ ನಡುವೆ ಇರುವ “ಮೀಸಲಾತಿ ವಿರೋಧಿ ಸಮ್ಮತಿ”ಯನ್ನು ಗಮನಿಸಿದರೆ ಈ ಬೆಳವಣಿಗೆ ಒಳಮೀಸಲಾತಿ ಯ ಬಗೆಗಿನ ನಿಧಾನ ದ್ರೋಹ ಮತ್ತಷ್ಟು ಮುಂದುವರೆವಂತೆಯೇ ಕಾಣುತ್ತಿದೆ. ಒಳಮೀಸಲಾತಿ ಪರವಾದ ಅಭಿಪ್ರಾಯ ಕೊಟ್ಟಿರುವ ಎಲ್ಲಾ ನ್ಯಾಯಾಧೀಶರು ಏಳು ಜನರ ಪೀಠ ರಚನೆಯಾಗಿ ತನ್ನ ತೀರ್ಪು ಕೊಡುವ ವೇಳೆಗೆ ನಿವೃತ್ತರಾಗುವ ಸಂಭವವೇ ಹೆಚ್ಚು . ಈಗಾಗಲೇ ಅರುಣ್ ಕುಮಾರ್ ಮಿಶ್ರಾ ನಿವೃತ್ತರಾಗಿದ್ದಾರೆ. ಹೀಗಾಗಿ ಸಂವಿಧಾನ ಕೊಟ್ಟಿರುವ ರಾಜಮಾರ್ಗ ಸಂವಿಧಾನ ತಿದ್ದುಪಡಿಯ ಮಾರ್ಗಕ್ಕೆ ಒತ್ತಾಯಿಸುವುದು ಸೂಕ್ತ .

ಸಂವಿಧಾನಕ್ಕೆ ತಿದ್ದುಪಡಿಯಾಗಬೇಕೆಂದರೆ ಲೋಕಸಭಯೆಲ್ಲಿ ಮತ್ತು ರಾಜ್ಯಸಭೆಯಲ್ಲಿ ಬಹುಮತದಿಂದ ಅನುಮೋದನೆಗೊಳ್ಳಬೇಕು. ಅಗತ್ಯವಿರುವ ಕಡೆ ದೇಶದ ಅರ್ಧಕ್ಕೂ ಹೆಚ್ಚು ವಿಧಾನಸಭೆಗಳೂ ಅದನ್ನು ಅನುಮೋದಿಸಬೇಕು. ಇಂದು ಬಿಜೆಪಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಹುಮತವಿದೆ. ರಾಜ್ಯಸಭೆಯಲ್ಲಿ ಅದೇ ದೊಡ್ಡ ಪಕ್ಷ ಮಾತ್ರವಲ್ಲದೆ ಬೇಕಿರುವಷ್ಟು ಬಹುಮತವನ್ನು ರೂಢಿಸಿಕೊಳ್ಳಬಹುದಾದ ರಾಜ್ಯಬಲ ಮತ್ತು ಧನಬಲವಿರುವುದನ್ನು ಅದು ಈಗಾಗಲೇ ಸಾಬೀತುಪಡಿಸಿದೆ. ದೇಶದ ೧೭ ರಾಜ್ಯಗಳಲ್ಲಿ ಎನ್‌ಡಿಎ ಸರ್ಕಾರವಿದೆ.

ಹೀಗಾಗಿ ಸಂವಿಧಾನಕ್ಕೆ ೩೪೧ (೩) ಕಲಮು ಸೇರಿಸುವ ತಿದ್ದುಪಡಿಯನ್ನು ಮಾಡುವುದು ಬಿಜೆಪಿಗೆ ಅತ್ಯಂತ ಸುಲಭದ ಕೆಲಸ

ಆದರೆ ಅದು ಮೇಲ್ಜಾತಿಗಳಿಗೆ ಮೀಸಲಾತಿ ಒದಗಿಸುವ ತಿದ್ದುಪಡಿಯನ್ನು ಕ್ಷಣಾರ್ಧದಲ್ಲಿ ತರುತ್ತದೆಯೇ ವಿನಾ ಒಳಮೀಸಲಾತಿ ತಿದ್ದುಪಡಿಯನ್ನಲ್ಲ. ಏಕೆಂದರೆ ಬಿಜೆಪಿ ಪಕ್ಷವು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅಮೂಲಾಗ್ರವಾಗಿ ವಿರೋಧಿಸುತ್ತದೆ. ಏಕೆಂದರೆ ಅದು ಅವರ ಮನುವಾದಿ ಹಿಂದೂರಾಷ್ಟ್ರದ ಪರಿಕಲ್ಪನೆಗೆ ತದ್ವಿರುದ್ಧವಾದ ತಾತ್ವಿಕ ಪ್ರಣಾಳಿಯಾಗಿದೆ. ಆದ್ದರಿಂದಲೇ ಅದು ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಇತರ ನಾಟಕಗಳನ್ನು ಆಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೂ ಸಹ ಒಳಮೀಸಲಾತಿ ವಿಷಯದಲ್ಲಿ ಅದೇ ಧೋರಣೆಯನ್ನು ವ್ಯಕ್ತಪಡಿಸುತ್ತಾ ಬಂದಿವೆ.
ಇದು ವಾಸ್ತವ ಸಂದರ್ಭ.

ಹೀಗಾಗಿ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲಾ ಶಕ್ತಿಗಳು ಈ ಕೆಳಗಿನ ಒತ್ತಾಯಗಳನ್ನು ಪರಿಗಣಿಸಬಹುದೆನಿಸುತ್ತದೆ :

ಅ) ರಾಜ್ಯ ಸರ್ಕಾರವು ಸದಾಶಿವ ಅಯೋಗದ ವರದಿಯನ್ನು ಈ ಕೂಡಲೇ ವಿಧಾನ ಸಭೆಯಲ್ಲಿ ಮಂಡಿಸಿ ಸಾರ್ವಜನಿಕ ಚರ್ಚೆಗೆ ಮುಂದಾಗಬೇಕು. ಹಾಗೂ ಸಂವಿಧಾನದ ೩೪೧ (೩)ನೇ ತಿದ್ದುಪಡಿಗೆ ಸರ್ವಸಮ್ಮತಿಯಿಂಧ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರದ ಮೇಲೆ ಒತ್ತಡ ತರಬೇಕು.

ಆ)ಇಂದಿನ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಈ ವಿಷಯದಲ್ಲಿ ದೊಡ್ಡ ಪಾತ್ರವಿದೆ. ಹೀಗಾಗಿ ಆ ಪಕ್ಷವು ಒಳಮೀಸಲಾತಿಯ ಪರವಾಗಿ ಸ್ಪಷ್ಟ ನಿಲುವನ್ನು ತೆಗೆದುಕೊಂಡು ಸಂವಿಧಾನ ತಿದ್ದುಪಡಿ ಕ್ರಮಗಳಿಗೆ ಸಂಸತ್ತಿನಲ್ಲಿ ಮುಂದಾಗುವಂತೆ ಹಾಗೂ ಕಾಂಗ್ರೆಸ್ ಇನ್ನಿತರ ಪಕ್ಷಗಳು ಇದರ ಬಗ್ಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಗತಿಪರ ಶಕ್ತಿಗಳೆಲ್ಲಾ ಒಗ್ಗಟ್ಟಾಗಿ ಬಲವಾದ ಚಳವಳಿಯನ್ನು ರೂಪಿಸಬೇಕು.

ಇ) ಸದಾಶಿವ ಅಯೋಗದಲ್ಲಿರುವ ಕೆನಪದರ ನೀತಿಯ ಶಿಫಾರಸ್ಸನ್ನು ಕೈಬಿಡಬೇಕು.

ಉ) ಮೀಸಲಾತಿಯ ಮೇಲೆ ಹೇರಲಾಗಿರುವ ಶೇ.೫೦ರ ಮಿತಿಯನ್ನು ತೆಗೆದು ಹಾಕಲೂ ಸಹ ಸಂವಿಧಾನ ತಿದ್ದುಪಡಿ ತರಲು ಒತ್ತಾಯಿಸಬೇಕು.

ಊ) ಖಾಸಗೀಕರಣದಿಂದಾಗಿ ಮೀಸಲಾತಿಯ ಪ್ರಸ್ತುತತೆಯೇ ಇಲ್ಲವಾಗುತ್ತಿದ್ದು ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸುವಂತೆ ಹೋರಾಡುವುದರ ಜೊತೆಗೆ ಖಾಸಗೀಕರಣವನ್ನು ನಿಲ್ಲಿಸುವ ಹೋರಾಟವನ್ನು ಒಗ್ಗಟ್ಟಿನಿಂದ ಕೈಗೆತ್ತುಕೊಳ್ಳಬೇಕು.

ಋ)ಈಗ ಹಾಲಿ ಎಸ್ಸಿ ಪಟ್ಟಿಯಲ್ಲಿರುವ ಸ್ಪೃಷ್ಯ ಸಮುದಾಯಗಳು ಅಸ್ಪೃಷ್ಯತೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ರೀತಿಯಲ್ಲೂ ಹೆಚ್ಚೂ ಕಡಿಮೆ ಸಮಾನವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕ ವಾಗಿ ಹಿಂದುಳಿದಿರುವುದನ್ನು ಗುರುತಿಸಬೇಕು. ಮತ್ತು ಆ ಸಮುದಾಯಗಳ ಸರಿಯಾದ ಪ್ರಾತಿನಿಧ್ಯಕ್ಕೂ ಒಟ್ಟು ಹೋರಾಟಕ್ಕೆ ಮುಂದಾಗಬೇಕು.

ಎ) ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಾಶ ಮಾಡಲು ಮುಂದಾಗಿರುವ ಮನುವಾದಿಗಳ ವಿರುದ್ಧ ಹಾಗೂ ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುತ್ತಿರುವ ಕಾರ್ಪೊರೇಟ್ ಬಂಡವಾಳಿಗ ಶಕ್ತಿಗಳ ವಿರುದ್ಧ ದಮನಿತ ಸಮುದಾಯಗಳ ಒಗ್ಗಟ್ಟು ಮತ್ತು ಹೋರಾಟ ಕಿಂಚಿತ್ತೂ ಸಡಿಲವಾಗದಂತ ತಾತ್ವಿಕ ಮತ್ತು ರಾಜಕೀಯ ಎಚ್ಚರಗಳನ್ನು ಕಾಪಾಡಿಕೊಳ್ಳಬೇಕು.

– ಶಿವಸುಂದರ್


ಇದನ್ನೂ ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು- ಮೇಲ್ಚಲನೆಯೋ ಅಥವಾ ಮೂಲೆಗುಂಪೋ?

Spread the love

Leave a Reply

Your email address will not be published. Required fields are marked *