FACT CHECK | ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಮತ್ತ್ಯಾರಿಗೂ ಅವಕಾಶವಿಲ್ಲ ಎಂಬುದು ನಿಜವೇ
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಹಾಸ್ಟೆಲ್ಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಿದೆ ಎಂಬ ಹೇಳಿಕೆಯೊಂದಿಗೆ ಮಹೇಶ್ ಜೈನ್ ಎಂಬ ಸಾಮಾಜಿಕ ಮಾಧ್ಯಮಗಳ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
26 ಆಗಸ್ಟ್ , 2024 ರಂದು ವೆರಿಫೈಡ್ ಎಕ್ಸ್ ಹ್ಯಾಂಡಲ್ ಹಂಚಿಕೊಂಡ ಪೋಸ್ಟ್‌ನಲ್ಲಿ (ಆರ್ಕೈವ್) 7 ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದ್ದು ಅದರಲ್ಲಿ “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಮತ್ತು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ 314 ಸರ್ಕಾರಿ ಹಾಸ್ಟೆಲ್ಗಳಿವೆ, ಆದರೆ ಕರ್ನಾಟಕ ಸರ್ಕಾರವು ಎಲ್ಲಾ ಹಾಸ್ಟೆಲ್ಗಳನ್ನು ಮುಸ್ಲಿಂ ಮಕ್ಕಳಿಗೆ ಕಾಯ್ದಿರಿಸಿದೆ. … ಕೇಳಿ, ಜೈನ ವಿದ್ಯಾರ್ಥಿಗಳ ನೋವು ಮತ್ತು ಕಾಂಗ್ರೆಸ್ ನ ಈ ಮುಸ್ಲಿಂ ಪರ ನೀತಿಯನ್ನು ನೀವು ಅರ್ಥಮಾಡಿಕೊಂಡಿದ್ದರೆ, ಅದನ್ನು ಸಾಧ್ಯವಾದಷ್ಟು ಜನರಿಗೆ ತಿಳಿಸಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಈ ವೀಡಿಯೋದಲ್ಲಿ, ತನ್ನನ್ನು ಮಹೇಶ್ ಜೈನ್ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯು ಜೈನ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಜೈನ ಸಮಾಜದ ಗುರುಗಳಿಗೆ ಮನವಿ ಮಾಡುತ್ತಾರೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಇಲಾಖೆ ನಡೆಸುತ್ತಿರುವ 314 ಸರ್ಕಾರಿ ಅಲ್ಪಸಂಖ್ಯಾತ ಹಾಸ್ಟೆಲ್ ಗಳಲ್ಲಿ ಒಂದೂ ಜೈನ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿಲ್ಲ. ಎಲ್ಲ 314 ಹಾಸ್ಟೆಲ್ ಗಳನ್ನು ಮುಸ್ಲಿಂ ಮಕ್ಕಳಿಗೆ ಮೀಸಲಿಡಲಾಗಿದೆ. ’ ಎಂದು ಹೇಳುತ್ತಾರೆ.
ಆಗಸ್ಟ್ 27, 2024 ರಂದು, ಮತ್ತೊಂದು ಎಕ್ಸ್ ವೆರಿಫೈಡ್ ಹ್ಯಾಂಡಲ್ ನಿಂದ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ (ಆರ್ಕೈವ್ ಮಾಡಲಾಗಿದೆ) ಇದರಲ್ಲಿ “ಕರ್ನಾಟಕದ ಜೈನ ವಿದ್ಯಾರ್ಥಿ ಮಹೇಶ್ ಜೈನ್ ತನ್ನ ದುಃಖವನ್ನು ಹೇಗೆ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನೋಡಿ… ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಕರ್ನಾಟಕದಲ್ಲಿ 314 ಸರ್ಕಾರಿ ಅಲ್ಪಸಂಖ್ಯಾತ ಹಾಸ್ಟೆಲ್ ಗಳಿವೆ, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು, ಪಾರ್ಸಿಗಳು, ಯಹೂದಿಗಳು ಎಲ್ಲರೂ ಅಲ್ಪಸಂಖ್ಯಾತರು, ಆದರೆ ಕರ್ನಾಟಕ ಸರ್ಕಾರವು ಎಲ್ಲಾ ಅಲ್ಪಸಂಖ್ಯಾತ ಹಾಸ್ಟೆಲ್ ಗಳನ್ನು ಮುಸ್ಲಿಂ ಮಕ್ಕಳಿಗೆ ಮಾತ್ರ ಕಾಯ್ದಿರಿಸಿದೆ. ಯಾವುದೇ ಜೈನ ಸಿಖ್, ಕ್ರಿಶ್ಚಿಯನ್ ಅಥವಾ ಯಹೂದಿ ವಿದ್ಯಾರ್ಥಿ ಈ ಅಲ್ಪಸಂಖ್ಯಾತ ಹಾಸ್ಟೆಲ್ ಗಳಿಗೆ ಹೋಗಲು ಅರ್ಜಿ ಸಲ್ಲಿಸಿದರೆ, ಕರ್ನಾಟಕ ಅಲ್ಪಸಂಖ್ಯಾತ ಇಲಾಖೆ ಅದನ್ನು ರದ್ದುಗೊಳಿಸುತ್ತದೆ.. ನಾನು ಮತ್ತೆ ಹೇಳುತ್ತೇನೆ, ಹಿಂದೂಗಳು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು, ಈ ಕಾಂಗ್ರೆಸ್ ನಿಮ್ಮದಲ್ಲ, ಈ ಕಾಂಗ್ರೆಸ್ ಅವರದು ಮಾತ್ರ.” ಎಂದಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ಸರ್ಕಾರಿ ಅಲ್ಪಸಂಖ್ಯಾತ ಹಾಸ್ಟೆಲ್‌ಗಳನ್ನು ಮುಸ್ಲಿಂ ಸಮುದಾಯಕ್ಕೆ ಮಾತ್ರವೇ ಮೀಸಲಿರಿಸಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಅಂತಹ ಯಾವುದೇ ಆದೇಶವೂ ಕಂಡುಬಂದಿಲ್ಲ. ಮತ್ತು ಅದಕ್ಕೆ ಸಂಬಂಧಿಸಿದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಲಭ್ಯವಾಗಿಲ್ಲ.
ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು 314 ಸರ್ಕಾರಿ ಹಾಸ್ಟೆಲ್ಗಳನ್ನು ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವುಗಳ ಪಟ್ಟಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ, 1994 ರ ಸೆಕ್ಷನ್ 2 (ಡಿ) ಅಡಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮತ್ತು ಜೊರಾಸ್ಟ್ರಿಯನ್ (ಪಾರ್ಸಿ) ಸಮುದಾಯಗಳನ್ನು ಕರ್ನಾಟಕ ಸರ್ಕಾರವು “ಅಲ್ಪಸಂಖ್ಯಾತ ಸಮುದಾಯಗಳು” ಎಂದು ಘೋಷಿಸಿದೆ. ಈ ಎಲ್ಲಾ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆಯಲು ಅರ್ಹರು ಎಂದು ಇದು ಸ್ಪಷ್ಟಪಡಿಸುತ್ತದೆ.
ಅರ್ಜಿ ನಮೂನೆಯನ್ನು ಕರ್ನಾಟಕ ಸರ್ಕಾರದ ರಾಜ್ಯ ಹಾಸ್ಟೆಲ್ ಪೋರ್ಟಲ್‌ನ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಬಳಕೆದಾರ ಕೈಪಿಡಿಯಲ್ಲಿ ಅರ್ಜಿದಾರರಿಗೆ ವಿವರಿಸಲಾಗಿದೆ. ಬಳಕೆದಾರ ಕೈಪಿಡಿಯ 15 ನೇ ಪುಟದಲ್ಲಿ, ಧರ್ಮದ ಅಡಿಯಲ್ಲಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಮುಂತಾದ ವಿವಿಧ ಆಯ್ಕೆಗಳನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಈ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ನ್ಯೂಸ್‌ಚೆಕ್ಕರ್ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದ್ದು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ಮಹಮೂದ್ ಎಸ್ ಅವರೊಂದಿಗೆ ಮಾತನಾಡಿದ್ದು, ವೈರಲ್ ಪೋಸ್ಟ್‌ನ ಹೇಳಿಕೆಯನ್ನು ತಳ್ಳಿಹಾಕಿದ್ದು, ಇದೊಂದು ದಾರಿತಪ್ಪಿಸುವ ಸಂದೇಶವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಂದುವರೆದು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ಮಹಮೂದ್ ಎಸ್ ನ್ಯೂಸ್‌ಚೆಕ್ಕರ್ ಗೆ ಪ್ರತಿಕ್ರಯಿಸಿದ್ದು, ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು 314 ಸರ್ಕಾರಿ ಹಾಸ್ಟೆಲ್ಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಲು ನಿರ್ಧರಿಸಿದೆ ಎಂಬ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ.
ತನಿಖೆಯ ಸಮಯದಲ್ಲಿ, ನಾವು ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿರುವ ಜಯನಗರದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಶ್ರೀ ಕೃಷ್ಣ ಎಂ.ಆರ್ ಅವರೊಂದಿಗೆ ಮಾತನಾಡಿದ್ದೇವೆ. ಅವರೂ ಸರ್ಕಾರಿ ಹಾಸ್ಟೆಲ್ಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿವೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ ಮತ್ತು ಅವರ ಹಾಸ್ಟೆಲ್ ನಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜೈನ ಸಮುದಾಯದ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದಾರೆ ಎಂದು ಅವರು ಹೇಳಿದರು. ಇದಕ್ಕೆ ಕಾರಣ ಕೇಳಿದಾಗ, ಜೈನ ಸಮುದಾಯದ ಮಕ್ಕಳಿಂದ ಅರ್ಜಿಗಳನ್ನು ಸ್ವೀಕರಿಸದ ಕಾರಣ, ಜೈನ ಸಮುದಾಯದ ಮಕ್ಕಳಿಗೆ ಮೀಸಲಿಟ್ಟ 4-5 ಸೀಟುಗಳು ತಮ್ಮ ಹಾಸ್ಟೆಲ್ ನಲ್ಲಿ ಖಾಲಿ ಇವೆ ಎಂದು ಅವರು ತಿಳಿಸಿದ್ದಾರೆ ಎಂದು ನ್ಯೂಸ್‌ಚೆಕ್ಕರ್ ವರದಿ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಂಟನಕುಂಟೆಯ ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ರಾಧಾಮಣಿ ಅವರೂ ಪ್ರತಿಕ್ರಯೆ ನೀಡಿದ್ದು, ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಜೈನ ಸಮುದಾಯದ ಯಾವುದೇ ವಿದ್ಯಾರ್ಥಿಯಿಂದ ಅರ್ಜಿಯನ್ನು ಸ್ವೀಕರಿಸದ ಕಾರಣ ತಮ್ಮ ಹಾಸ್ಟೆಲ್ನಲ್ಲಿ ಜೈನ ವಿದ್ಯಾರ್ಥಿಗಳಿಗೆ ಕಾಯ್ದಿರಿಸಿದ ಸೀಟುಗಳು ಖಾಲಿ ಇವೆ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ಹೇಳುವುದಾದರೆ, ಎಲ್ಲ ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ ಎಂಬ ಹೇಳಿಕೆ ಸುಳ್ಳು. ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ಕ್ರಿಶ್ಚಿಯನ್ ಮತ್ತು ಜೈನ ಸಮುದಾಯಗಳ ವಿದ್ಯಾರ್ಥಿಗಳು ದಾಖಲಾಗಬಹುದು. ಹಾಗಾಗಿ ಪೋಸ್ಟ್‌ಮಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
NEWS CHECKER
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿ ಹಿಂದೂ ದೇವರ ಚಿತ್ರಗಳನ್ನು ಬಳಸದೆ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂಬುದು ನಿಜವೇ?