FACT CHECK | RSS ಕುರಿತು ನಟ ಪ್ರಕಾಶ ರಾಜ್ ವಿವಾದಾತ್ಮಕ ಹೇಳಿಕೆ ನಿಜವೆಷ್ಟು ಸುಳ್ಳೆಷ್ಟು?
ಕಳೆದ ಅನೇಕ ವರ್ಷಗಳಿಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳುತ್ತಿರುವ ನಟ ಪ್ರಕಾಶ್ ರಾಜ್ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಆಗಾಗ ತಮ್ಮ ಮೊನಚಾದ ಮೂತುಗಳಿಂದ ತಿವಿಯುತ್ತಿರುತ್ತಾರೆ. ಹೀಗಾಗಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ಬೆಂಗಲಿಗರ ಕೆಂಗಣ್ಣಿಗೆ ಗುರಿಯಾಗಿರುವುದುಂಟು. ಈಗ ಬಲಪಂಥೀಯ ಸಂಘಟನೆ RSS ಬಗ್ಗೆ ಹೇಳಿಕೆ ನೀಡಿದ್ದಾರೆಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.
“ಇಂಡೋನೇಷ್ಯಾದಲ್ಲಿ ಶೇ.90ರಷ್ಟು ಮುಸ್ಲಿಮರು ಮತ್ತು ಶೇ.2ರಷ್ಟು ಹಿಂದೂಗಳಿದ್ದಾರೆ. ಆ ದೇಶದಲ್ಲಿ 11,000 ದೇವಾಲಯಗಳಿವೆ. ಆದರೆ, ಅಲ್ಲಿ ಯಾವುದೇ ಗಲಭೆಗಳು ನಡೆದಿರುವ ಬಗ್ಗೆ ಕೇಳಿಲ್ಲ. ಏಕೆಂದರೆ ಅಲ್ಲಿ ಆರ್‌ಎಸ್‌ಎಸ್ ಇಲ್ಲ” ಎಂದು ನಟ ಪ್ರಕಾಶ್ ರಾಜ್ ಹೇಳಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ಒಂದು ವೈರಲ್ ಆಗಿದೆ. ಹಾಗಿದ್ದರೆ ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆ ರೀತಿಯ ಹೇಳಿಕೆ ಕೊಟ್ಟಿರುವ ಕುರಿತು ಯಾವುದೇ ಮಾಧ್ಯಮ ವರದಿಗಳು ನಮಗೆ ಲಭ್ಯವಾಗಿಲ್ಲ.
‘ಇಂಡೋನೇಷ್ಯಾ-ಆರ್‌ಎಸ್‌ಎಸ್’ ಬಗ್ಗೆ ಪ್ರಕಾಶ್ ರಾಜ್ ಹೇಳಿಕೆಗೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ಪ್ರಕಾಶ್ ರಾಜ್ ಅವರು ಅಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸೂಚಿಸುವ ಯಾವುದೇ ವರದಿ ಲಭ್ಯವಾಗಿಲ್ಲ.
If it’s you @MeghUpdates .. or Who ever has created this.. own it up. THIS IS NOT MY STATEMENT don’t put your statements in my name #justasking https://t.co/uD9e3agRxm
— Prakash Raj (@prakashraaj) August 26, 2024
ಆಗಸ್ಟ್ 26ರಂದು ವೈರಲ್ ಪೋಸ್ಟರ್ ಕುರಿತು ಎಕ್ಸ್‌ನಲ್ಲಿ ಪೋಸ್‌ವೊಂದನ್ನು ಹಾಕಿದ್ದ ಪ್ರಕಾಶ್ ರಾಜ್, “Megh Updates’ನೀವು ಅಥವಾ ಇನ್ಯಾರೋ, ಯಾರು ಇದನ್ನು ಸೃಷ್ಟಿಸಿದ್ದೀರೋ ನೀವೆ ಅದರ ಹೊಣೆ ಹೊತ್ತುಕೊಳ್ಳಿ. ಇದು ನನ್ನ ಹೇಳಿಕೆಯಲ್ಲ. ನಿಮ್ಮ ಹೇಳಿಕೆಗೆ ನನ್ನ ಹೆಸರು ಹಾಕಬೇಡಿ” ಎಂದು ಬರೆದುಕೊಂಡಿದ್ದರು.
ಪ್ರಕಾಶ್ ರಾಜ್ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ‘Megh Updates’ಒಂದು ಬಲಪಂಥೀಯ ಎಕ್ಸ್ ಖಾತೆಯಾಗಿದ್ದು, ಸದಾ ಸುಳ್ಳು ಮತ್ತು ಕೋಮುದ್ವೇಷ ಹರಡುವ ಸುದ್ದಿಗಳನ್ನು ಹರಡುತ್ತಿರುತ್ತವೆ. ಈ ಖಾತೆಯ ಹಲವು ಸುಳ್ಳು ಮತ್ತು ಕೋಮುವೈಷಮ್ಯದ ಪೋಸ್ಟ್‌ಗಳ ಕುರಿತು ಏನ್‌ಸುದ್ದಿ.ಕಾಂ ಹಲವು ಬಾರಿ ಫ್ಯಾಕ್ಟ್‌ಚೆಕ್ ಸುದ್ದಿಗಳನ್ನು ಪ್ರಕಟಿಸಿದೆ.
ಆಗಸ್ಟ್ 28ರಂದು ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದ ಪ್ರಕಾಶ್ ರಾಜ್, “ಕೆಲ ಸಾಮಾಜಿಕ ಮಾಧ್ಯಮ ಖಾತೆಗಳು ಇತ್ತೀಚೆಗೆ ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡಿರುವುದಕ್ಕೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಈ ದ್ವೇಷ ರಾಜಕಾರಣ ಮತ್ತು ವಾಟ್ಸಪ್ ಮತಾಂಧತೆ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಅಥವಾ ಸತ್ಯ ಮಾತನಾಡುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಾಶ್ ರಾಜ್ ಹೆಸರಿನಲ್ಲಿ ವೈರಲ್ ಆಗಿರುವ ಹೇಳಿಕೆ, ಅವರದ್ದಲ್ಲ. ಅದು ಯಾರೋ ಸೃಷ್ಟಿಸಿದ್ದ ಸುಳ್ಳು ಸಂದೇಶ ಎಂಬುವುದನ್ನು ಸ್ವತಃ ಪ್ರಕಾಶ್ ರಾಜ್ ಅವರೇ ಸ್ಪಷ್ಟಪಡಿಸಿದ್ದಾರೆ ಮತ್ತು ದೂರು ದಾಖಲಿಸಿರುವುದಾಗಿಯೂ ತಿಳಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಮತ್ತ್ಯಾರಿಗೂ ಅವಕಾಶವಿಲ್ಲ ಎಂಬುದು ನಿಜವೇ