FACT CHECK | ಗುಂಡಿ ಬಿದ್ದ ರಸ್ತೆಗಳನ್ನು ಲಾಂಗ್‌ಜಂಪ್ ಮೂಲಕ ಅಳತೆ ಮಾಡುವ ಯಮ-ಚಿತ್ರಗುಪ್ತರ ಅಣಕು ಪ್ರದರ್ಶನ ಬೆಂಗಳೂರಿನದ್ದಲ್ಲ
ಬೆಂಗಳೂರು ನಗರದ ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆ? ಎಂಬುದು ವಾಹನ ಸವಾರರಿಗೆ ಗೊತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಂಡಿಲ್ಲ. ಜನರ ಮನವಿ ಬಿಡಿ, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ಟ್ವೀಟ್ ಮಾಡಿ ರಸ್ತೆಗುಂಡಿಯನ್ನು ಮುಚ್ಚಿ ಎಂದು ಇತ್ತೀಚೆಗೆ ಮನವಿ ಮಾಡಿದ್ದು, ಚರ್ಚೆಗೆ ಕಾರಣವಾಗಿತ್ತು.
Does this feel nice #Bengaluru? #potholes #Death #accidents #infra #RoadSafety pic.twitter.com/yOyNhCw723
— Anil Budur Lulla (@anil_lulla) August 28, 2024
ಈಗ ಬೆಂಗಳೂರಿನಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸದೆ ವಾಹನ ಸವಾರರಿಗೆ ದಿನ ನಿತ್ಯ ತೊಂದರೆ ಅನುಭವಿಸುವಂತಾಗಿದ್ದು ಇದನ್ನು ಸರ್ಕಾರದ ಗಮನಕ್ಕೆ ತರಲು ವಿನೂತನವಾಗಿ ಯಮ ಮತ್ತು ಚಿತ್ರಗುಪ್ತರಂತೆ ವೇಷ ಧರಿಸಿ ವ್ಯಂಗ್ಯಭರಿತ ಲಾಂಗ್‌ಜಂಪ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯಗಳು ಬೆಂಗಳೂರಿನದ್ದು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ದೃಶ್ಯಗಳು ಬೆಂಗಳೂರಿನಲ್ಲಿ ನಡೆದ ಘಟನೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇದು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಯಮಚಿತ್ರಗುಪ್ತರ ವೇಷಧರಿಸಿ ರಸ್ತೆ ಗುಂಡಿ ಬಗ್ಗೆ ಮಾಡಿದ ವ್ಯಂಗ್ಯದ ವಿಡಿಯೋ ಎಂದು ತಿಳಿದುಬಂದಿದೆ.
28 ಆಗಸ್ಟ್ 2024ರಂದು ದೈಜಿವರ್ಲ್ಡ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಮಲ್ಪೆ ಆದಿ ಉಡುಪಿ ರಸ್ತೆ ಅವ್ಯವಸ್ಥೆ ಕುರಿತಾಗಿ ಕಲಾವಿದರಾದ ಅಜಯ್ ಕುರ್ಕಾಲು ಅವರ ತಂಡ ವಿನೂತ ಪ್ರದರ್ಶನ ನಡೆಸಿತು ಎಂದಿದೆ.
ಗುಂಡಿ ಬಿದ್ದಿದ್ದ ರಸ್ತೆಗಳ ಅಳತೆ ಮಾಡಿದ ಯಮ ಶೀರ್ಷಿಕೆಯಡಿಯಲ್ಲಿ ವಿಜಯವಾಣಿ ಯುಟ್ಯೂಬ್ ಚಾನೆಲ್ ಆಗಸ್ಟ್ 28 2024ರಂದು ವೀಡಿಯೋ ಪ್ರಕಟಿಸಿದ್ದು, ವಿಟ್ಲಪಿಂಡಿ ಉತ್ಸವ ನಿಮಿತ್ತ ಕಲಾವಿದರು ರಸ್ತೆಗುಂಡಿ ಬಗ್ಗೆ ವ್ಯಂಗ್ಯವಾಗಿ ಈ ವೇಷಧರಿಸಿ ತೋರಿಸಿದ್ದರ ಕುರಿತ ವಿವರ ಇದೆ.
28 ಆಗಸ್ಟ್ , 2024ರ ಸಂಜೆವಾಣಿ ವರದಿ ಪ್ರಕಾರ, ಸಂಪೂರ್ಣ ಹೊಂಡಮಯವಾದ ಆದಿಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆಯನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮ ಧರ್ಮ, ಚಿತ್ರ ಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕರ ಗಮನ ಸೆಳೆದರು. ಪ್ರೇತಾತ್ಮದ ವೇಷ ಧರಿಸಿದ ಇಬ್ಬರು ಹೊಂಡಗಳ ಮೇಲಿಂದ ಜಿಗಿದರೆ, ಬಳಿಕ ಯಮ ಧರ್ಮ ಹಾಗೂ ಚಿತ್ರಗುಪ್ತ ಅವರ ಜಿಗಿತದ ಅಳತೆಯನ್ನು ಮಾಪನ ದಲ್ಲಿ ಅಳೆದರು. ಈ ಮೂಲಕ ಈ ಹೊಂಡಗಳು ಬಹಳ ಅಪಾಯಕಾರಿ ಎಂಬುದಾಗಿ ಬಿಂಬಿಸಿದರು ಎಂದು ವರದಿಯಾಗಿದೆ.
ಇದೇ ರೀತಿಯ ವರದಿಗಳನ್ನು ಮಾಡಿದ ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೆಳುವುದಾದರೆ, ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮ ಧರ್ಮ, ಚಿತ್ರ ಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ಗುಂಡಿಬಿದ್ದ ರಸ್ತೆಗಳನ್ನು ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕ ಗಮನ ಸೆಳೆದ ದೃಶ್ಯಗಳನ್ನು ಬೆಂಗಳೂರಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | RSS ಕುರಿತು ನಟ ಪ್ರಕಾಶ ರಾಜ್ ವಿವಾದಾತ್ಮಕ ಹೇಳಿಕೆ ನಿಜವೆಷ್ಟು ಸುಳ್ಳೆಷ್ಟು?