FACT CHECK | ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಪುಂಡರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು ಎಂಬ ವಿಡಿಯೋದ ಅಸಲೀಯತ್ತೇನು?

ಹಸುವಿನ ಬಾಲ ಕತ್ತರಿಸಿದ ಮುಸ್ಲಿಂ ಪುಂಡರನ್ನು ಪೊಲೀಸ್‌ ಠಾಣೆಯಲ್ಲಿ ಥಳಿಸುತ್ತಿರುವ ದೃಶ್ಯ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. 32 ಸೆಕಂಡ್​ಗಳ ಈ ವೀಡಿಯೊದಲ್ಲಿ, ಖಾಕಿ ಸಮವಸ್ತ್ರವನ್ನು ಧರಿಸಿದ್ದ ಇಬ್ಬರು ಪೊಲೀಸರು ಕೆಲವು ಯುವಕರನ್ನು ಅಮಾನುಷವಾಗಿ ಥಳಿಸುತ್ತಿದ್ದಾರೆ. ಈ ಮುಸ್ಲಿಂ ಯುವಕರು ಹಸುವಿನ ಬಾಲ ಕತ್ತರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅನೇಕರು ಹಂಚಿಕೊಂಡಿದ್ದಾರೆ.

ಇದಕ್ಕೆ “ರಾಜಸ್ಥಾನದ ಭಿಲ್ವಾರಾದಲ್ಲಿ 25 ಆಗಸ್ಟ್ 24 ರಂದು ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಸಮುದಾಯದ 8 ದಾರಿತಪ್ಪಿದ ಯುವಕರಿಗೆ ರಾಜಸ್ಥಾನ ಪೊಲೀಸರು ಆತಿಥ್ಯವನ್ನು ನೀಡಿದರು.” ಎಂಬ ಹೇಳಿಕೆಯೊಂದಿಗೆ ಮಲ್ಲಿಕಾರ್ಜುನ  ಎಂಬ ಎಕ್ಸ್ ಬಳಕೆದಾರರು 31 ಆಗಸ್ಟ್ , 2024 ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದೇ ವಿಡಿಯೋನ್ನು सत्ता की पटरी ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರಾಜಸ್ಥಾನದ ಭಿಲ್ವಾರಾದಲ್ಲಿ, ಆಗಸ್ಟ್ 25, 2024 ರಂದು, ರಾಜಸ್ಥಾನ ಪೊಲೀಸರು ಹಸುವಿನ ಬಾಲವನ್ನು ಕತ್ತರಿಸಿ ದೇವಾಲಯದ ಬಾಗಿಲಿಗೆ ಎಸೆದ ‘ಶಾಂತಿದತ’ ಸಮುದಾಯದ 8 ಜಿಹಾದಿ ಯುವಕರಿಗೆ ವಿಶೇಷ ‘ಆತಿಥ್ಯ’ವನ್ನು ನೀಡಿದರು. ಈ ಚಿಕಿತ್ಸೆ ಸರಿಯಾಗಿತ್ತು ಅಲ್ಲವೇ?” ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಕ್ಯಾಪ್ಷನ್​ನೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  25 ಜುಲೈ 2022ರಂದು ಎನ್​ಡಿಟಿವಿಯಲ್ಲಿ ಅಪ್‌ಲೋಡ್ ಮಾಡಲಾದ ಅದೇ ವಿಡಿಯೋ ಲಭ್ಯವಾಗಿದೆ.

ಎನ್​ಡಿಟಿವಿಯ ವರದಿಯ ಪ್ರಕಾರ, ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಹೇಳಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಎಂಟು ಮಂದಿಯನ್ನು ಕಸ್ಟಡಿಯಲ್ಲಿ ಪೊಲೀಸರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ವೀಡಿಯೊಕ್ಕೆ ಸಂಬಂಧಿಸಿದ ಶೀರ್ಷಿಕೆ ಹೀಗಿದೆ: “ಕಳೆದ ತಿಂಗಳು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ಪ್ರತಿಭಟನೆಯ ನಂತರ ವೈರಲ್ ವೀಡಿಯೊದಲ್ಲಿರುವ ಪೋಲಿಸರು ಕಸ್ಟಡಿಯಲ್ಲಿದ್ದ ಎಂಟು ಮಂದಿಯನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಪೊಲೀಸರು ಹೇಳಿದ ನಂತರ ಮತ್ತು ಸ್ಥಳೀಯ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದ ನಂತರ, ಅವರು ನಿನ್ನೆ ಜೈಲಿನಿಂದ ಹೊರಬಂದಿದ್ದಾರೆ.’’ ಎಂದು ಬರೆಯಲಾಗಿದೆ.

ಇದೇ ವೀಡಿಯೊದ ಸ್ಕ್ರೀನ್‌ಶಾಟ್ 21 ಜೂನ್, 2022 ರಂದು ಇಂಡಿಯಾ ಟುಡೇ ಪ್ರಕಟಿಸಿರುವ ಸುದ್ದಿಯಲ್ಲೂ ಕಂಡುಬಂದಿದೆ. ‘ಯುಪಿಯಲ್ಲಿ ನೂಪುರ್ ಶರ್ಮಾ ಅವರ ಪ್ರವಾದಿ ಹೇಳಿಕೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ವಿರುದ್ಧ ಪೊಲೀಸ್ ದೌರ್ಜನ್ಯ ಮತ್ತು ಅಮಾನವೀಯ ವರ್ತನೆಯ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಎಸ್‌ಎಸ್‌ಪಿ ಸಹರಾನ್‌ಪುರದಿಂದ ಪ್ರತಿಕ್ರಿಯೆ ಕೇಳಿದೆ’ ಎಂದು ವರದಿಯಲ್ಲಿದೆ.

ಟೈಮ್ಸ್ ನೌ ನ್ಯೂಸ್ ಕೂಡ ಜೂನ್ 17, 2022 ರಂದು ಈ ಘಟನೆಯ ಬಗ್ಗೆ ವರದಿ ಮಾಡಿದೆ. “ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್‌ ಶರ್ಮಾ ಅವರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಹಿಂಸಾಚಾರ ಭುಗಿಲೆದ್ದ ನಂತರ ಜೂನ್ 10 ರಂದು ಸಹರಾನ್‌ಪುರದ ಪೊಲೀಸರು ಲಾಕಪ್‌ನಲ್ಲಿ ಪ್ರತಿಭಟನಾಕಾರರನ್ನು ಥಳಿಸಿದ ವೈರಲ್ ವೀಡಿಯೊದ ಕುರಿತು ತನಿಖೆಗೆ ಆದೇಶಿಸಲಾಗಿದೆ” ಎಂದು ವರದಿ ಹೇಳಿದೆ.

ಹಸುವಿನ ಬಾಲ ಕತ್ತರಿಸಿದ ಆರೋಪಿ ಅರೆಸ್ಟ್:
Image

ಹಸುವಿನ ಬಾಲ ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಘಟನೆ ಆಗಸ್ಟ್ 25, 2024 ರಂದು ಭಿಲ್ವಾರದಲ್ಲಿ ನಡೆದಿರುವುದು ನಿಜ. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊಕ್ಕೆ ಮತ್ತು ಶೀರ್ಷಿಕೆಗು ಯಾವುದೇ ಸಂಬಂಧವಿಲ್ಲ. ‘ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರ ಹನುಮಾನ್ ದೇಗುಲ ಸಂಕೀರ್ಣದಲ್ಲಿ ಹಸುವಿನ ಬಾಲವನ್ನು ಕತ್ತರಿಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಹುಸೇನ್ ಕಾಲೋನಿ ಶಾಸ್ತ್ರಿ ನಗರದ ನಿವಾಸಿ ನಿಸಾರ್ ಮೊಹಮ್ಮದ್ ಅವರ ಮಗ ಬಬ್ಲು ಶಾ(40 ವರ್ಷ) ಅವರನ್ನು ಬಂಧಿಸಿದ್ದಾರೆ’ ಎಂದು ಎಬಿಪಿ ಲೈವ್  29 ಆಗಸ್ಟ್ , 2024 ರಂದು ವರದಿ ಮಾಡಿದೆ.

Bhilwara cow tail cutting tail outside Hanuman Temple case update main accused arrested ann भीलवाड़ा में गोवंश पर बवाल मामले में पुलिस को कामयाबी, एक आरोपी को किया गिरफ्तार

ಭಿಲ್ವಾರಾದಲ್ಲಿ ಹಸುವಿನ ಬಾಲವನ್ನು ಕತ್ತರಿಸಿ ಗಲಭೆ ಹರಡಲು ಸಂಚು ರೂಪಿಸಿದ್ದ ನಿಶಾರ್ ಖಾನ್ ಪುತ್ರ ಬಬ್ಲು ಶಾನನ್ನು ಭಜನ್‌ಲಾಲ್ ಸರ್ಕಾರದ ಪೊಲೀಸರು ಬಂಧಿಸಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋ (2022) ಹಳೆಯದು ಮತ್ತು ಇದು ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ. ಹಸುವಿನ ಬಾಲವನ್ನು ಕತ್ತರಿಸಿ ದೇವಸ್ಥಾನದ ಬಾಗಿಲಿಗೆ ಎಸೆದ ಮುಸ್ಲಿಂ ಸಮುದಾಯದ 8 ಯುವಕರಿಗೆ ರಾಜಸ್ಥಾನ ಪೊಲೀಸರು ಥಳಿಸಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಸುಳ್ಳಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ



ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights