ರೈಲಿನಲ್ಲಿ ಊರಿಗೆ ಕಳಿಸುವುದಾಗಿ ಹಣ ಪಡೆದು ವಂಚಿಸಿದ ಬಿಜೆಪಿ ಮುಖಂಡ; ಕಾರ್ಮಿಕರಿಂದ ಹಲ್ಲೆ

ರೈಲಿನಲ್ಲಿ ಊರುಗಳಿಗೆ ಕಳಿಸುವುದಾಗಿ ವಲಸೆ ಕಾರ್ಮಿಕರಿಂದ ಮೂರುಪಟ್ಟು ಪ್ರಯಾಣ ದರ ಪಡೆದು ವಂಚಿಸಿದ ಬಿಜೆಪಿ ಮುಖಂಡನ ಮೇಲೆ ವಲಸೆ ಕಾರ್ಮಿಕರು ಹಲ್ಲೆ ನಡೆಸಿರುವ ಘಟನೆ ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯ ಮೊರಾ ಗ್ರಾಮದಲ್ಲಿ ನಡೆದಿದೆ.

ಬಿಜೆಪಿ ಮುಖಂಡನ ವಂಚನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಲಸೆ ಕಾರ್ಮಿಕರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾಕರರನ್ನು ಚದುರಿಸಿದ್ದಾರೆ.

ಬಿಜೆಪಿ ಮುಖಂಡ ರಾಜೇಶ್ ವರ್ಮಾ ವಲಸೆ ಕಾರ್ಮಿಕರನ್ನು ಅವರ ತವರು ಜಾರ್ಖಾಂಡ್ ಗೆ ಕಳಿಸಲು 100 ಕಾರ್ಮಿಕರಿಂದ ಪ್ರಯಾಣ ದರದ ಮೂರುಪಟ್ಟು ಹಣ ಪಡೆದಿದ್ದ ಎನ್ನಲಾಗಿದೆ. ಸೂರತ್ ನಿಂದ ಜಾರ್ಖಂಡ್ ಗೆ ಪ್ರತಿ ಪ್ರಯಾಣಿಕನಿಗೆ 750 ರೂ ದರ ಇದ್ದರೂ ಮೂರುಪಟ್ಟ ಹಣ ಪಡೆದಿದ್ದ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ರಾಜೇಶ್ ವರ್ಮಾನ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮೇ 8ರ ಶುಕ್ರವಾರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವರ್ಮಾ ಗಾಯಗೊಂಡಿರುವ ದೃಶ್ಯಗಳು ಕಂಡುಬಂದಿವೆ.

ಜಾರ್ಖಂಡ್ ಗೆ ಹೋಗಲು 100 ಜನರಿಂದ ಒಟ್ಟು 1.40 ಲಕ್ಷ ರೂಪಾಯಿ ವಸೂಲಿ ಮಾಡಿದ್ದನೆಂದು ಹೇಳಲಾಗಿದೆ. ಈ ಸಂಬಂಧ ಶನಿವಾರ ಬೆಳಗ್ಗೆ 40 ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಪಿಟಿಐ ವರದಿ ಮಾಡಿದೆ.

ಸೂರತ್ ಜಿಲ್ಲೆಯ ಹಜಿರಾ ನಗರದ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದು ಈ ವೇಳೆ ಪೊಲೀಸ್ ವಾಹನಗಳ ಮೇಲೆ ಕಲ್ಲುತೂರಾಟ ನಡೆದಿದೆ ಎಂದು ವರದಿಗಳು ತಿಳಿಸಿವೆ. ಜಿಲ್ಲಾಡಳಿತವೇ ಪ್ರಯಾಣ ವ್ಯವಸ್ಥೆ ಮಾಡಬೇಕು ಎಂದು ಉತ್ತರಪ್ರದೇಶ, ಬಿಹಾರ, ಒಡಿಶಾ ಮತ್ತು ಇತರೆ ರಾಜ್ಯಗಳ ಕಾರ್ಮಿಕರು ಒತ್ತಾಯಿಸಿದ್ದಾರೆ.

ವಲಸೆ ಕಾರ್ಮಿಕರು ಹಜಿರಾ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು. ಇವರೆಲ್ಲರೂ ಮೊರಾ ಗ್ರಾಮದಲ್ಲಿ ನೆಲೆಸಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಪೊಲೀಸರು ಮತ್ತು ವಲಸೆ ಕಾರ್ಮಿಕರ ನಡುವೆ ಘರ್ಷಣೆ ನಡೆದಿದೆ. ತಮ್ಮ ಊರುಗಳಿಗೆ ಹಿಂದಿರುಗಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಸೂರತ್ ನ ಇಂಡಸ್ಟ್ರಿಯಲ್ ಹಬ್ ನಲ್ಲಿ ವಾರದಿಂದಲೂ ಪ್ರತಿಭಟನೆಗಳು ನಡೆಯುತ್ತಲೇ ಇದ್ದು ಕಾರ್ಮಿಕರನ್ನು ಅವರ ಗ್ರಾಮಗಳಿಗೆ ತಲುಪಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights