ರಾಜಸ್ಥಾನ: ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಬಿಟಿಪಿ ಪಕ್ಷ!
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೆ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿರುವ ಭಾರತೀಯ ಟ್ರೈಬಲ್ ಪಾರ್ಟಿ(ಬಿಟಿಪಿ) ಪಕ್ಷವು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ.
ಇತ್ತೀಚೆಗೆ ನಡೆದ ರಾಜಸ್ಥಾನದ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತಮಗೆ ಸಹಾಯ-ಸಹಾಕಾರ ನೀಡಲಿಲ್ಲ. ಇದರಿಂದ ತಮ್ಮ ಅನ್ಯಾಯವಾಗಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಬಿಟಿಪಿ ಮುಖ್ಯಸ್ಥ ಛೋಟುಭಾಯ್ ವಾಸವಾ ಟ್ವೀಟ್ ಮಾಡಿದ್ದಾರೆ.
ಆದಿವಾಸಿಗಳ ಅಭಿವೃದ್ದಿಯ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಮೋಸ ಮಾಡುತ್ತವೆ. ಕಾಂಗ್ರೆಸ್ ಸರ್ಕಾರ ಉರುಳುವ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡುವುದಾಗಿ ನಿರ್ಧರಿ, ನಮ್ಮ ಪಕ್ಷ ತಪ್ಪು ನಿರ್ಧಾರ ಮಾಡಿತು. ನಾವು ಕಾಂಗ್ರೆಸ್ ಜೊತೆಗೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ದ ಅಸಮಾಧಾನಗೊಂಡು ಬಂಡಾಯವೆದ್ದಿದ್ದರು. ಈ ಸಂದರ್ಭವನ್ನು ಬಳಿಸಿಕೊಂಡು ಬಿಜೆಪಿ ಅವಿಶ್ವಾಸ ಮತ ನಿರ್ಣಯಕ್ಕೆ ಮುಂದಾಗಿತ್ತು. ಆಗ ಬಿಟಿಪಿ ಪಕ್ಷವು ಗೆಹ್ಲೋಟ್ ಸರ್ಕಾರಕ್ಕೆ ಬೆಂಬಲ ನೀಡಿ, ಸರ್ಕಾರ ವಿಶ್ವಾಸಮತವನ್ನು ಗೆಲ್ಲಲು ಸಹಾಕಾರ ನೀಡಿತ್ತು. ಆದರೆ, ಈಗ ಕಾಂಗ್ರೆಸ್ ಮೇಲೆ ಸಿಟ್ಟಾಗಿರುವ ಬಿಟಿಪಿ ನಾಯಕರು ತಮ್ಮ ಬೆಂಬಲವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಬಿಟಿಪಿ ಪಕ್ಷದ ಇಬ್ಬರು ಶಾಸಕರಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಬಿಜೆಪಿ; ಕಾಂಗ್ರೆಸ್ಗೆ ನಿರಾಸೆ!

