ಫ್ಯಾಕ್ಟ್‌ಚೆಕ್: ಗುಜರಾತಿಗಳನ್ನು ಮುಗಿಸಿ ಬಿಡುತ್ತೇನೆ ಎಂದು ಕೇಜ್ರಿವಾಲ್ ಧಮ್ಕಿ ಹಾಕಿಲ್ಲ

ತಾಕತ್ತಿದ್ರೆ.. ಧಮ್ ಇದ್ರೆ..  ನಿಲ್ಲಿಸಿ ನೋಡೋಣ ಅಂತ ಮೊನ್ನೆ ಮೊನ್ನೆಯಷ್ಟೆ ನಮ್ಮ ಮುಖ್ಯಮಂತ್ರಿಗಳು ದೊಡ್ಡಬಳ್ಳಾಪರದಲ್ಲಿ ನಡೆದ  ಜನಸ್ಪಂದನ  ಕಾರ್ಯಕ್ರಮದಲ್ಲಿ ಘರ್ಜಿಸಿದ್ದ ವಿಡಿಯೊ ಸಖತ್ ವೈರಲ್ ಆಗಿತ್ತು. ಈಗ ಅದೇ ಟ್ರೆಂಡ್ ಮುಂದುವರೆದಂತೆ ಕಾಣುತ್ತಿದ್ದು, ಬೊಮ್ಮಾಯಿ ರೀತಿಯಲ್ಲೆ ಕೇಜ್ರಿವಾಲ್ ಆವಾಜ್ ಹಾಕಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

AAP  ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮುಂಬರುವ ಗುಜರಾತ್‌ನ ಅಸೆಂಬ್ಲಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ, ಹಾಗಾಗಿ ಗುಜರಾತ್ ಗೆ ಪದೇ ಪದೇ ಭೇಟಿ ನೀಡುತ್ತಿರುವ ಕೇಜ್ರಿವಾಲ್ ಮೇಲೆ ಆರೋಪವೊಂದು ಕೇಳಿ ಬಂದಿದ್ದು, ಗುಜರಾತಿನ ಜನರಿಗೆ ಧಮ್ಕಿ ಹಾಕಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಲಾಗಿದೆ.

‘ಗುಜರಾತಿನ ಜನರೇ ಕೇಳಿಸಿಕೊಳ್ಳಿ. ನನ್ನ ವಿರುದ್ಧ ಪ್ರತಿಭಟನೆ ನಡೆಸಿದರೆ, ನಿಮ್ಮನ್ನು ಮುಗಿಸಿಬಿಡುತ್ತೇನೆ. ನೀವು ಏನು ಮಾಡುತ್ತೀರೋ ಮಾಡಿ, ನೋಡೇಬಿಡೋಣ’ ಎಂದು ಅರವಿಂದ ಕೇಜ್ರಿವಾಲ್‌  ಹೇಳಿದ್ದಾರೆ ಎಂದು ಹಲವರು ವಿಡಿಯೋ ಹಂಚಿಕೊಂಡಿದ್ದಾರೆ.

ಗುಜರಾತಿನ ನನ್ನ ಮಿತ್ರರೇ ಕೇಳಿಸಿಕೊಳ್ಳಿ , ಅರವಿಂದ ಕೇಜ್ರಿವಾಲನ ಮಾತನ್ನ.. ಎಂದು ಟ್ವೀಟ್‌ನಲ್ಲಿ ವಿಡಿಯೊ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಕೇಜ್ರಿವಾಲ್‌ ಅವರು ಗುಜರಾತಿನ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. AAP ಗುಜರಾತ್‌ ಚುನಾವಣೆಯಲ್ಲಿ ಗೆಲ್ಲುವ ಮೊದಲೇ ಈ ರೀತಿ ಬೆದರಿಕೆ ಹಾಕುತ್ತಿದೆ. ಇನ್ನು ಗೆದ್ದ ಮೇಲೆ ಹೇಗೆ ವರ್ತಿಸಬಹುದೋ? ಇಂತಹವರನ್ನು ಗುಜರಾತಿನ ಜನರು ಸ್ವೀಕರಿಸುತ್ತಾರೋ ಇಲ್ಲವೋ ನೋಡೋಣ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಗುಜರಾತ್‌ ಬಿಜೆಪಿಯ ಹಲವು ನಾಯಕರೂ ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅರವಿಂದ್ ಕೇಜ್ರಿವಾಲ್ ತಮ್ಮ ಚುವಾವಣಾ ಭಾಷಣದ ವೇಳೆ ನಿಜವಾಗಿಯೂ ಬೆದರಿಕೆಯ ಮಾತನ್ನು ಹೇಳಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅರವಿಂದ ಕೇಜ್ರಿವಾಲ್ ಅವರ ವೈರಲ್ ವಿಡಿಯೋವನ್ನು ಪರಿಶೀಲಿಸಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, 18 ಅಕ್ಟೋಬರ್ 2016ರಲ್ಲಿ ಸೂರತ್‌ನಲ್ಲಿ ನಡೆದಿದ್ದ AAP ಕಾರ್ಯಕ್ರಮ ಒಂದರಲ್ಲಿ ಕೇಜ್ರಿವಾಲ್ ಮಾತನಾಡಿದ ವಿಡಿಯೋವೊಂದು ಲಭ್ಯವಾಗಿದೆ.

ಕೇಜ್ರಿವಾಲ್ ಮಾತನಾಡಿದ್ದು ಅಮಿಶಾ ಕುರಿತು :

2016 ರಲ್ಲಿ ಸೂರತ್‌ನಲ್ಲಿ ನಡೆದಿದ್ದ ಎಎಪಿ ಕಾರ್ಯಕ್ರಮ ಒಂದರಲ್ಲಿ ಕೇಜ್ರಿವಾಲ್ ಮಾತನಾಡಿದ್ದರು. ಆಗ ಅವರು, ‘ಅಮಿತ್ ಶಾ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ಬೆದರಿಕೆ ಹಾಕುತ್ತಾರೆ. ಗುಜರಾತಿನ ಜನರೇ ಕೇಳಿಸಿಕೊಳ್ಳಿ. ನನ್ನ ವಿರುದ್ಧ ಪ್ರತಿಭಟನೆ ನಡಸಿದರೆ, ನಿಮ್ಮನ್ನು ಮುಗಿಸಿಬಿಡುತ್ತೇನೆ. ನೀವು ಏನು ಮಾಡುತ್ತೀರೋ ಮಾಡಿ, ನೋಡೇಬಿಡೋಣ ಎಂದು ಅಮಿತ್ ಶಾ ಹೇಳುತ್ತಾರೆ’ ಎಂದು ಕೇಜ್ರಿವಾಲ್‌ ಹೇಳಿದ್ದರು.

‘ಅಮಿತ್ ಶಾ’ ಕುರಿತು ಹೇಳಿದ್ದ ಮಾತುಗಳನ್ನು ಎಡಿಟ್ ಮಾಡುವ ಮೂಲಕ ಗುಜರಾತಿನ ಜನರೇ ಕೇಳಿಸಿಕೊಳ್ಳಿ. ನನ್ನ ವಿರುದ್ಧ ಪ್ರತಿಭಟನೆ ನಡಸಿದರೆ, ನಿಮ್ಮನ್ನು ಮುಗಿಸಿಬಿಡುತ್ತೇನೆ. ನೀವು ಏನು ಮಾಡುತ್ತೀರೋ ಮಾಡಿ, ನೋಡೇಬಿಡೋಣ’ ಎಂಬ ಮಾತುಗಳಷ್ಟೇ ಇರುವ ವಿಡಿಯೊವನ್ನು ರಚಿಸಿ ಎಲ್ಲಡೆ ಹಂಚಿಕೊಳ್ಳಲಾಗಿದೆ. ಇದೇ ವಿಡಿಯೊವನ್ನು ಫ್ಯಾಕ್ಟ್‌ಚೆಕ್ ಮಾಡಿರುವ  ‘ದಿ ಲಾಜಿಕಲ್ ಇಂಡಿಯಾ’ ಈ ಸುದ್ದಿ ಸುಳ್ಳು ಎಂದು ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾರೆ, 18 ಅಕ್ಟೋಬರ್ 2016ರಲ್ಲಿ ಸೂರತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಭಾಷಣದ ವೇಳೆ ‘ಅಮಿತ್ ಶಾ’ ಮಾತುಗಳನ್ನು ಉಲ್ಲೇಖಿಸಿ ಹೇಳಿರುವುದನ್ನು, ಗುಜರಾತ್ ಜನರನ್ನು ಮುಗಿಸಿ ಬಿಡುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ ಎಂದು ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ದಿ ಲಾಜಿಕಲ್ ಇಂಡಿಯಾ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಭಿಕ್ಷೆ ಬೇಡುತ್ತಿದ್ದ ಸಾಧುಗಳನ್ನು, ಮಕ್ಕಳ ಕಿಡ್ನಿ ಕಳ್ಳರು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights