ಫ್ಯಾಕ್ಟ್‌ಚೆಕ್ : ಚಿನ್ನದ ಮಳೆ ಸುರಿದಿದೆ ಎಂಬುದೇ ಶುದ್ದ ಸುಳ್ಳು
‘ಮಳೆ’ ಎಂದರೆ ಸಾಕು ಬೆಂಗಳೂರಿನ ಜನ ಬೆಚ್ಚಿ ಬೀಳುತ್ತಾರೆ. ಸಾಕಪ್ಪಾ.. ಸಾಕು ಈ ಮಳೆ ಕಾಟ ಎನ್ನುವಂತಾಗಿದೆ ಬೆಂಗಳೂರು ಜನರ ಪರಿಸ್ಥಿತಿ. ಮಳೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿರುವ ಬೆಂಗಳೂರಿನ ನಿವಾಸಿಗಳು, “ಬೇಡ ಬೇಡ ಮಳೆರಾಯ ಬರಲೇ ಬೇಡ ಮಳೆರಾಯ” ಎಂದು ಹಾಡುವಂತಾಗಿದೆ. ಈ ವರ್ಷ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ಅವಾಂತರ ಒಂದಾ ಎರಡಾ..! ಅಬ್ಬಬ್ಬಾ.
ಇಷ್ಟೆಲ್ಲ ಸಂಕಷ್ಟ ಅನುಭವಿಸಿದ ಬೆಂಗಳೂರಿನ ಜನ ಖುಷಿ ಪಡುವಂತಹ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಬೆಂಗಳೂರಿನ ಹಲವು ಜಾಗಗಳಲ್ಲಿ ಚಿನ್ನದ ಮಳೆ ಸುರಿದಿದೆ ಎನ್ನುವ ವಿಡಿಯೋ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ. ” ಆನೇಕಲ್, ಸರ್ಜಾಪುರ , ಬಾಗಲೂರು ಮುಂತಾದ ಕಡೆಗಳಲ್ಲಿ ಚಿನ್ನದ ಮಳೆ ಸುರಿದಿದೆ ಎಂದು ಹೇಳಲಾಗಿದ್ದು, ಚಿನ್ನದ ನಾಣ್ಯದಂತಿರುವ ವಸ್ತುಗಳನ್ನು ಹೆಕ್ಕಲು ಜನರು ಮುಗಿ ಬೀಳುತ್ತಿದ್ದಾರೆ ಎಂದು ವಿಡಿಯೋ ಕ್ಲಿಪ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಚಿನ್ನದ ಮಳೆ ಸುರಿಯುತ್ತಿದೆ ಎಂಬ ಸುದ್ದಿ ನಿಜವೇ ಎಂದು ತಿಳಿಸುವಂತೆ ನಮ್ಮ ಏನ್‌ಸುದ್ದಿ.ಕಾಂನ ವಾಟ್ಸಾಪ್‌ಗೂ ವಿನಂತಿಗಳು ಬಂದಿದ್ದು, ಈ ವಿಡಿಯೋ ದೃಶ್ಯಾವಳಿಗಳ ಹಿಂದಿರುವ ಕರಾಮತ್ತೇನು? ನಿಜವಾಗಿಯೂ ಚಿನ್ನದ ಮಳೆ ಸುರಿಯಲು ಸಾಧ್ಯವೆ ಎಂಬ ಪ್ರಶ್ನೆಗಳನ್ನು ಮುಂದಿಡುತ್ತಾ ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೊಣ.
ಫ್ಯಾಕ್ಟ್‌ಚೆಕ್ :
ಚಿನ್ನದ ಮಳೆಯ ವಿಡಿಯೊ ಇತ್ತೀಚಿನದಲ್ಲ 2020 ರದ್ದು :
ವಾಸ್ತವಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿನ್ನದ ಮಳೆ ಎಂಬ ವಿಡಿಯೋ ಕ್ಲಿಪ್‌ನಲ್ಲಿರುವ ಸುದ್ದಿ ಸುಳ್ಳು. 2020 ಅಕ್ಟೋಬರ್ ತಿಂಗಳಿನಲ್ಲಿ ಅಂದರೆ 2 ವರ್ಷದ ಹಿಂದೆ ಈ ಘಟನೆ ನಡೆದಿತ್ತು.
2020 ಅಕ್ಟೋಬರ್ ಸುಮಾರು 2 ವರ್ಷಗಳ ಹಿಂದೆ ಹೀಗೆ ಮಳೆಗಾಲದ ಸಮಯ ಆನೇಕಲ್ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಹೆಚ್ಚು ಮಳೆಯಾಗಿತ್ತು. ಆ ಸಮಯದಲ್ಲಿ ಬಾಗಲೂರು ಮತ್ತು ಹೊಸೂರು ಹೆದ್ದಾರಿ ಅಕ್ಕಪಕ್ಕದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಈ ವಿಷಯ ಎಲ್ಲಡೆ ಹಬ್ಬಿ ಸುತ್ತಮುತ್ತಲಿನ ಜನ ದೌಡಾಯಿಸಿ ಚಿನ್ನದ ನಾಣ್ಯದಂತಿದ್ದ ವಸ್ತುಗಳನ್ನು ಆರಿಸಿಕೊಂಡಿದ್ದರು, ಉರ್ದು ಭಾಷೆಯಲ್ಲಿ ಮುದ್ರಿತವಾದ ನೂರಾರು ನಾಣ್ಯಗಳು ಸ್ಥಳೀಯರಿಗೆ ದೊರೆತಿದ್ದವು. ಅದನ್ನು ಎಲ್ಲರೂ ಚಿನ್ನವೆಂದೇ ನಂಬಿದ್ದರು.
ಸಿಕ್ಕಿದ್ದು ನಕಲಿ ಚಿನ್ನದ ನಾಣ್ಯಗಳು :
ಚಿನ್ನದ ಮಳೆ ಸುರಿದು ನಾಣ್ಯಗಳು ದೊರಕಿವೆ ಎನ್ನುವ ಸುದ್ದಿ ಮಾಧ್ಯಮಗಳ ಮೂಲಕ ಹೆಚ್ಚು ಸದ್ದು ಮಾಡಿತ್ತು ತಕ್ಷಣ ಎಚ್ಚೆತ್ತ ಧರ್ಮಪುರಿ ಜಿಲ್ಲಾಡಳಿತ, ಪತ್ತೆಯಾಗಿದ್ದ ನಾಣ್ಯಗಳ ನೈಜತೆಯನ್ನು ಪರಿಶೀಲಿಸಲು ಜಿಲ್ಲಾ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿತ್ತು ಜೊತೆಗೆ ಸ್ಥಳೀಯ ಬಾಗಲೂರು ಪೊಲೀಸರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪತ್ತೆಯಾದ ನಾಣ್ಯಗಳನ್ನು ಸ್ಥಳೀಯ ಅಕ್ಕಸಾಲಿಗರ ಬಳಿ ಪರಿಶೀಲನೆಗೆ ಒಳಪಡಿಸಿದ್ದರು. ಅದನ್ನು ಪರೀಕ್ಷಿಸಿದಾಗ ಚಿನ್ನದ ನಾಣ್ಯಗಳು ನಕಲಿ ಎಂದು ತಿಳಿದುಬಂದಿತ್ತು.
ವಂಚನೆಯ ಭಾಗ
ಆಂಧ್ರ ಪ್ರದೇಶ ಗಡಿ ಮತ್ತು ತಮಿಳುನಾಡು ಗಡಿಯಲ್ಲಿ ನಕಲಿ ಚಿನ್ನ ಮಾರಾಟ ಧಂಗೆಕೋರರು ಸಕ್ರಿಯವಾಗಿದ್ದಾರೆ. ಅವರು ಜನಸಾಮಾನ್ಯರನ್ನು ವಂಚಿಸಲು ಇಂತಹ ಚಿನ್ನದ ಬಣ್ಣ ಲೇಪಿತ ನಾಣ್ಯಗಳನ್ನು ತೋರಿಸಿ ವಂಚಿಸುತ್ತಾರೆ. ತಮಗೆ ನಿಧಿ ರೂಪದಲ್ಲಿ ಚಿನ್ನದ ನಾಣ್ಯಗಳು ದೊರೆತಿವೆ ಎಂದು ವಂಚಿಸಿರುವ ಪ್ರಕರಣಗಳು ಸಹ ಸಾಕಷ್ಟು ನಡೆದಿದ್ದು, ಇದು ಅದರ ಭಾಗವಾಗಿರಬಹುದು. ಹಾಗಾಗಿ ಚಿನ್ನದ ನಾಣ್ಯ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಾಗಲೂರು ಪೊಲೀಸರು ತಿಳಿಸಿದ್ದರು ಎಂದು ನ್ಯೂಸ್ 18 ಕನ್ನಡ ವರದಿ ಮಾಡಿತ್ತು.
ಚಿನ್ನದ ಮಳೆ ಸುರಿಯುವುದುಂಟೆ? ಇದನ್ನು ನಂಬುವ ಜನ ಇರುವುದರಿಂದಲೇ ಸಾಕಷ್ಟು ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕೂಡ ಇರದ ಭಾಗವಾಗಿದೆ.ಅಲ್ಲದೆ 2020ರಲ್ಲಿ ಎರಡು ವರ್ಷದ ಹಿಂದೆ ನಡೆದ ಅದೂ ನಕಲಿ ಚಿನ್ನದ ಮಳೆಯ ಸುದ್ದಿಯನ್ನು, ಪ್ರಸ್ತುತ ಮಳೆಯಾಗುತ್ತಿರುವ ಸಂದರ್ಭದಲ್ಲಿ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನಲ್ಲಿ ಚಿನ್ನದ ಮಳೆ ಸುರಿದಿದೆ ಎಂಬುದು ಶುದ್ದ ಸುಳ್ಳು, ಇಂತಹ ಯಾವುದೇ ಘಟನೆ ಇತ್ತೀಚೆಗೆ ನಡೆದಿಲ್ಲ. ಅಲ್ಲದೆ 2020ರಲ್ಲಿ ನಡೆದ ಘಟನೆಯೂ ನಕಲಿ ಚಿನ್ನದ ಮಳೆ. ಆಗಾಗಿ ಇಂತಹ ವಿಡಿಯೊಗಳನ್ನು ನಂಬಬೇಡಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ವ್ಯಕ್ತಿಯ ಮೃತ ದೇಹವನ್ನು ಎಳೆದೊಯ್ಯುತ್ತಿರುವ ಮೊಸಳೆಯ ವಿಡಿಯೊ ಬಿಹಾರದ್ದಲ್ಲ