FACT CHECK | ಅಂಬೇಡ್ಕರ್ ಕುರಿತಾದ ಹೇಳಿಕೆಗಳಿಂದ BJP ಎದುರಿಸುತ್ತಿರುವ ಮುಜುಗರವನ್ನು ತಪ್ಪಿಸಿಕೊಳ್ಳಲು ಮತ್ತೊಮ್ಮೆ ಸುಳ್ಳು ಹೇಳಿದ ಸಂಘವರಿವಾರ
ಆರ್ಎಸ್ಎಸ್ ದಲಿತ ವಿರೋಧಿ ನಿಲುವನ್ನು ಹೊಂದಿದೆ ಎನ್ನುವ ಆರೋಪಗಳ ನಡುವೆಯೇ ‘85 ವರ್ಷಗಳ ಹಿಂದೆ ಅಂದರೆ 1940ರಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮಹಾರಾಷ್ಟ್ರದ ಆರ್ಎಸ್ಎಸ್ನ ಶಾಖಾ ಕಚೇರಿಗೆ ಭೇಟಿ ನೀಡಿದ್ದರು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಧ್ಯಮ ವಿಭಾಗ ಹೇಳಿದೆ. ಆರ್ಎಸ್ಎಸ್ನ ಸಂವಹನ ವಿಭಾಗವಾದ ವಿಶ್ವ ಸಂವಾದ ಕೇಂದ್ರದ ವಿದರ್ಭ ಪ್ರಾಂತ ಈ ಬಗ್ಗೆ ಹೇಳಿಕೊಂಡಿದೆ. ಈ ಸುದ್ದಿಯನ್ನು ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳು ವರದಿ ಮಾಡಿವೆ.

‘ಆರ್ಎಸ್ಎಸ್ ದಲಿತ ವಿರೋಧಿ ಎನ್ನುವ ಆರೋಪವಿದೆ. ಡಾ.ಅಂಬೇಡ್ಕರ್ ಮತ್ತು ಆರ್ಎಸ್ಎಸ್ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆದರೆ ಅಂಬೇಡ್ಕರ್ ಅವರು ಸತಾರಾ ಜಿಲ್ಲೆಯ ಕರಾಡ್ನಲ್ಲಿ ಆರ್ಎಸ್ಎಸ್ ಶಾಖಾಗೆ 1940 ಜ.2ರಂದು ಭೇಟಿ ನೀಡಿದ್ದರು. ಅಲ್ಲಿ ಅವರು ಸಂಘದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ್ದರು. ನಮ್ಮ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಂಘವನ್ನು ಬಾಂಧವ್ಯದಿಂದ ನೋಡುತ್ತೇನೆ’ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದು 1940ರಲ್ಲಿ ‘ಮರಾಠಿ’ ಪತ್ರಿಕೆ ಪ್ರಕಟಿಸಿರುವ ವರದಿಯನ್ನೂ ಅದು ಉಲ್ಲೇಖಿಸಿದೆ.

ಹಾಗಿದ್ದರೆ, ಆರ್.ಎಸ್.ಎಸ್ನ ಸಂವಹನ ವಿಭಾಗ ‘ವಿಶ್ವ ಸಂವಾದ ಕೇಂದ್ರ’ದ ವಿದರ್ಭ ಪ್ರಾಂತ್ಯ ಗುರುವಾರ ಹೊರಡಿಸಿದ ಟಿಪ್ಪಣಿಯಲ್ಲಿ ಮಾಡಲಾಗಿರುವ ಉಲ್ಲೇಖ ನಿಜವೇ? ಅಂಬೇಡ್ಕರ್ ನಿಜವಾಗಿಯೂ ಆರ್.ಎಸ್.ಎಸ್ ಶಾಖೆಗೆ ಭೇಟಿ ನೀಡಿ ಭಾಷಣ ಮಾಡಿದ್ದರು ಎಂಬುದು ನಿಜವೇ ಎಂದು ಪರಿಶೀಲಿಸೋಣ.
ಆರ್.ಎಸ್.ಎಸ್. ಶಾಖೆಗೆ ಡಾ. ಬಾಬಾ ಸಾಹೇಬ್ ಆಂಬೇಡ್ಕರ್ ಭೇಟಿ ನೀಡಿಲ್ಲ :
ಡಾ. ಬಿ. ಆರ್ ಅಂಬೇಡ್ಕರ್ ಅವರು ಆರ್ಎಸ್ಎಸ್ ಶಿಬಿರದಲ್ಲಿ ಭಾಗವಹಿಸಿದ ಕುರಿತು ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಿಲ್ಲ. ಡಾ. ಅಂಬೇಡ್ಕರ್ರವರು ಬದುಕಿದ ಸಂದರ್ಭದಲ್ಲೇ ಅವರಿಂದ ಮಾಹಿತಿ ಪಡೆದು ಜೀವನ ಚರಿತ್ರೆ ರಚಿಸಿದ ಧನಂಜಯ್ ಕೀರ್ರವರ ಪುಸ್ತಕ “ಡಾ. ಬಾಬಾಸಾಹೇಬ್ ಅಂಬೇಡ್ಕರ್” ಪುಸ್ತಕದಲ್ಲಿ ಎಲ್ಲಿಯೂ ಇದರ ಉಲ್ಲೇಖವಿಲ್ಲ. ಇನ್ನು ಅಂಬೇಡ್ಕರ್ವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು ರವರು ಬರೆದಿರುವ “Reminiscences and remembrances of Dr. B.R. Ambedkar” ಪುಸ್ತಕದಲ್ಲಿಯೂ ಸಹ ಅಂಬೇಡ್ಕರು RSS ಶಾಖೆಗೆ ಭೇಟಿ ನೀಡಿದ ಉಲ್ಲೇಖವಿಲ್ಲ ಎಂದು ಕನ್ನಡ ಫ್ಯಾಕ್ಟ್ಚೆಕ್ ತಂಡ ವರದಿ ಪ್ರಕಟಿಸಿದೆ.

ಈಗಾಗಲೇ ಅಂಬೇಡ್ಕರ್ರವರ ಜೀವಿತಾವದಿಯಲ್ಲಿ ಮಾಡಿದ ಭಾಷಣಗಳು ಮತ್ತು ಅವರ ಬರವಣಿಗೆಗಳನ್ನೆಲ್ಲಾ ಸಂಗ್ರಹಿಸಿದ “ಅಂಬೇಡ್ಕರ್ ಭಾಷಣ ಮತ್ತು ಬರಹಗಳು” ಸರಣಿಯಲ್ಲಿಯೂ ಸಹ ಇದರ ವಿವರಗಳಿಲ್ಲ. ಆದರೆ ದಿ ಪ್ರಿಂಟ್ ವೆಬ್ಸೈಟ್ನಲ್ಲಿ ರಾಜಿವ್ ತುಲಿ ಎಂಬ RSS ಕಾರ್ಯಕರ್ತ ಬರೆದ ಲೇಖನದಲ್ಲಿ ಅಂಬೇಡ್ಕರ್ರವರು RSS ಶಾಖೆಗೆ ಭೇಟಿ ನೀಡಿದ್ದರು ಎಂದಿದ್ದಾರೆ. ಆದರೆ ಅವರು ಅದಕ್ಕೆ ಯಾವುದೇ ಆಧಾರ ಒದಗಿಸಿಲ್ಲ. ಮುಂದುವರೆದು ದತ್ತೋಪಂಥ ತೇಂಗಡಿ ಎಂಬ ಆರ್ಎಸ್ಎಸ್ ವ್ಯಕ್ತಿ 1954ರ ಭಂಡಾರ ಉಪ ಚುನಾವಣೆಯಲ್ಲಿ ಅಂಬೇಡ್ಕರ್ರವರು ಚುನಾವಣಾ ಏಜೆಂಟ್ ಆಗಿದ್ದರು ಎಂದು ರಾಜೀವ್ ತುಲಿ ಬರೆದಿದ್ದಾರೆ. ಅವರು ಆ ಲೇಖನದಲ್ಲಿ ರಾಜಬಾಹು ಖೋಬ್ರಗಡೆ ಎಂಬುವವರನ್ನು ಉಲ್ಲೇಖಿಸಿದ್ದಾರೆ.
ಡಾ. ಅಂಬೇಡ್ಕರ್ರವರು ತಮ್ಮ ಪ್ರಬುದ್ಧ ಭಾರತದಲ್ಲಿ ವಿ .ಡಿ ಸಾವರ್ಕರ್ರವರನ್ನು ಟೀಕಿಸಿ ಲೇಖನ ಬರೆದಿದ್ದರು. ಅವರು ಆರ್.ಎಸ್.ಎಸ್ ವಿಚಾರಕ್ಕೆ ವಿರುದ್ಧವಾಗಿದ್ದರು. ಅವರು ತಮ್ಮ Scheduled Castes Federation ಪಕ್ಷದ ಪ್ರಣಾಳಿಕೆಯಲ್ಲಿ ಹಿಂದೂ ಮಹಾಸಭಾ ಅಥವಾ ಆರ್ ಎಸ್ ಎಸ್ ನಂತಹ ಪ್ರತಿಗಾಮಿ ಗುಂಪುಗಳೊಂದಿಗೆ ಯಾವುದೇ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತಿಲ್ಲ ಎಂದು ಸೂಚಿಸಿದ್ದರು. (ಸಂಪುಟ 17, ಪುಟ 359) ಅಲ್ಲದೇ ಆರ್ ಎಸ್ ಎಸ್ ಒಂದು ಅಪಾಯಕಾರಿ ಸಂಘಟನೆ ಎಂದಿದ್ದರು (ಇಂಗ್ಲಿಷ್ ಸಂಪುಟ 15, ಪುಟ 560). ಹಾಗಾಗಿ ಅವರು ಶಾಖೆಗೆ ಹೋಗಿದ್ದರು ಎಂಬುದು ಸಂಪೂರ್ಣ ಸುಳ್ಳಾಗಿದೆ.
1935ರ ಹೊತ್ತಿಗೆ ಡಾ. ಬಿ.ಆರ್ ಅಂಬೇಡ್ಕರ್ ರವರು ಹಿಂದು ಧರ್ಮದ ಜಾತಿಪದ್ದತಿ, RSS ಮತ್ತು ಹಿಂದು ಮಹಾಸಭಾದ ಕಟುವಿಮರ್ಶಕರಾಗಿದ್ದರು. ತಮ್ಮ ಮೂಕ ನಾಯಕ, ಬಹಿಷ್ಕೃತ ಭಾರತ ಮತ್ತು ಪ್ರಬುದ್ಧ ಭಾರತದಲ್ಲಿ ಹಿಂದು ಧರ್ಮದಲ್ಲಿ ಆಚರಿಸಲ್ಪಡುತ್ತಿರುವ ಅನಿಷ್ಟ ಪದ್ದತಿಗಳ, ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣವಾದದ ವಿರುದ್ದ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಘೋಷಿಸಿದ್ದ ಅಂಬೇಡ್ಕರ್ರವರು ಕೊನೆಗೆ ಹಿಂದು ಧರ್ಮ ತೊರೆದು ಬೌದ್ದ ಧರ್ಮವನ್ನು ಅನುಸರಿಸಿದರು. ಆದ್ದರಿಂದ ಆರ್ಎಸ್ಎಸ್ ಕೃಪಾಪೋಷಿತ ಸುದ್ದಿ ಮಾಧ್ಯಮಗಳು ವರದಿ ಮಾಡಿರುವಂತೆ ಅಂಬೇಡ್ಕರ್ರವರು ಆರ್ಎಸ್ಎಸ್ ಕೆಲಸ-ಕಾರ್ಯಗಳನ್ನು ಶ್ಲಾಘಿಸಿದ್ದರು, ಶಾಖೆಗೆ ಭೇಟಿ ನೀಡಿದ್ದರು, ಹಿಂದುರಾಷ್ಟ್ರಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು ಎಂಬುದು ಸುಳ್ಳು.
‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ಸುಟ್ಟ ಬಾಬಾ ಸಾಹೇಬ್ ಅಂಬೇಡ್ಕರ್
ಡಾ. ಬಾಬಾ ಸಾಹೇಬ್ ಆಂಬೇಡ್ಕರ್ ಇಂದು ಎಲ್ಲರಿಗೂ ಬೇಕಾಗಿದ್ದಾರೆ. ಒಂದು ಕಾಲದಲ್ಲಿ ಸಾರ್ವಜನಿಕ ಕೆರೆಯ ನೀರನ್ನು ಬಳಕೆ ಮಾಡಲು ಒಂದು ಆಂದೋಲನವನ್ನೆ ಮಾಡಬೇಕಾಗಿ ಬಂದದ್ದು ಈ ಕಾಲದ ವರ್ಣಾಶ್ರಮ ಮತ್ತು ಜಾತಿ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ತಮಗೆ ಇದ್ದ ಹಕ್ಕನ್ನು ಪಡೆಯುವುದಕ್ಕಾಗಿಯೇ ಅಂಬೇಡ್ಕರ್ ಚೌಡಾರ್ ಕೆರೆ ನೀರನ್ನು ಸಾರ್ವಜನಿಕವಾಗಿ ಕುಡಿಯುವ ಚಳುವಳಿಯನ್ನು ಆಯೋಜಿಸಿದರು. ಆದರೆ ಅಸ್ಪೃಶ್ಯರು ಮುಟ್ಟಿದ್ದಕ್ಕಾಗಿ ಕೆರೆಯೆ ಮಲಿನವಾಯಿತೆಂದು ಗೋಳಾಡಿದ ಮೇಲ್ಜಾತಿಯ ಜನ ಹಸುವಿನ ಸಗಣಿ, ಗಂಜಲ, ಹಾಲು, ತುಪ್ಪ, ಮೊಸರನ್ನು ಸುರಿದು ವೇದಗಳನ್ನು ಪಠಿಸುತ್ತಾ ಕೆರೆಯ ‘ಶುದ್ದೀಕರಣ’ ಮಾಡಿದರು. ದಲಿತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರೆ ವಿದ್ಯಾವಂತ, ಪ್ರಗತಿಪರ ಹಿಂದೂಗಳು ಅವರ ಜೊತೆಗೂಡಿ ಹೋರಾಟ ಮಾಡಬಹುದು ಹಿಂದೂ ಧರ್ಮ ಸುಧಾರಣೆಗೆ ಇದು ಕೂಡ ನೆರವಾಗಬಹುದು ಎಂಬ ಅಂಬೇಡ್ಕರ್ ನಿರೀಕ್ಷೆ ಸುಳ್ಳಾಯಿತು. ಮಹಾಡ್, ಚೌಡಾರ್ ಸತ್ಯಾಗ್ರಹಗಳಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಹಿಂಸಾತ್ಮಕವಾದ ದಾಳಿಗಳನ್ನು ಮೇಲ್ಜಾತಿಗಳು ಮಾಡಿದವು.

ಇದಾದ ಒಂಬತ್ತು ತಿಂಗಳ ನಂತರ ಚೌಡಾರ್ ಸತ್ಯಾಗ್ರಹವನ್ನು ಅಂಬೇಡ್ಕರ್ ಆಯೋಜಿಸಿದರು. ಆಗ ಮತ್ತೆ ಮೇಲ್ಜಾತಿಯ ಹಿಂದೂಗಳು ಚೌಡಾರ್ ಕೆರೆ ಸಾರ್ವಜನಿಕ ಆಸ್ತಿಯಲ್ಲ ಖಾಸಗಿ ಸ್ವತ್ತು ಎಂದು ಕೋರ್ಟಿಗೆ ಹೋದರು. ಸತ್ಯಾಗ್ರಹ ತಡೆಯಲು ಪ್ರಯತ್ನ ಮಾಡಿದರು. ಇಷ್ಟೆಲ್ಲ ಪ್ರತಿಕೂಲ ಸನ್ನಿವೇಶಗಳ ನಡುವೆಯೂ ಸತ್ಯಾಗ್ರಹ ನಡೆಸಿದ ಅಂಬೇಡ್ಕರ್ ಡಿಸೆಂಬರ್ 25, 1927 ರಂದು ಹಿಂದೂ ಧರ್ಮದ ಆಧಾರವಾಗಿರುವ, ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಸೈದ್ದಾಂತಿಕ ಗ್ರಂಥವಾಗಿರುವ ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ಸುಟ್ಟು ಹಿಂದೂ ಧರ್ಮದ ಕರ್ಮಠತನ, ಅಸಮಾನತೆಯ ವಿರುದ್ಧ ಸಮರ ಸಾರಿದರು.
ಪತ್ರಿಕೆಗಳಲ್ಲಿ ಈ ಹೇಳಿಕೆ ಬರಲು ಕಾರಣವೇನು ಗೊತ್ತೆ?
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು 85 ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ‘ಶಾಖೆಗೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ (ಸುಳ್ಳ) ಪ್ರತಿಕಾ ಹೇಳಿಕೆ ನೀಡಲು ಕಾರಣ ಏನು ಎಂದು ನೋಡೋಣ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಕುರಿತು ಲಗುವಾಗಿ ಮಾತನಾಡಿದ್ದನ್ನು ಖಂಡಿಸಿ ದೇಶದೆಲ್ಲಡೆ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಇದರಿಂದ ಸಂಘ ಪರಿವಾರ ಮತ್ತು ಬಿಜೆಪಿಗೆ ಮುಖಭಂಗ ಅನುಭವಿಸಿತ್ತು. ಅದೇ ಸಂದರ್ಭದಲ್ಲಿ ಡಿಸೆಂಬರ್ 25 ಡಾ ಬಾಬಾ ಸಾಹೇಬ್ ಅಂಬೇಡ್ಕರ್ ‘ಮನುಸ್ಮೃತಿ’ಯನ್ನು ಸುಟ್ಟ ದಿನವನ್ನು ದೇಶದೆಲ್ಲೆಡೆ ಆಚರಿಸಲಾಗಿತ್ತು. ಈ ಎಲ್ಲಾ ಬೆಳವಣೆಗಗಳಿಂದ ಸಂಘಪರಿವಾರ ಮತ್ತು ಬಿಜೆಪಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ವಿರೋಧಿ ಎಂಬ ಭಾವನೆ ಜನರಲ್ಲಿ ಬೇರೂರುವಂತೆ ಮಾಡಬಹುದು ಎಂಬ ಭಯದಿಂದ (ಆರ್ಎಸ್ಎಸ್ ಶಾಖಾಗೆ 1940 ಜ.2ರಂದು ಅಂಬೇಡ್ಕರ್ ಭೇಟಿ ನೀಡಿದ್ದರು) ಹಳೆಯ ಸುಳ್ಳನ್ನೆ ಮತ್ತೆ ಪುನರುಚ್ಚರಿಸಿದೆ. ಒಂದೇ ಸುಳ್ಳನ್ನು 10 ಸಲ ಹೇಳಿ ಇದೇ ಸತ್ಯ ಎಂದು ನಂಬಿಸುವ ಕೆಲಸಕ್ಕೆ ಕೈ ಹಾಕಿದೆ ಸಂಘಪರಿವಾರ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಾಹುಲ್ ಗಾಂಧಿಯನ್ನು ಹೊಗಳಿದ್ರಾ ಗಡ್ಕರಿ?

