FACT CHECK | ಭಾರತೀಯ ಮೂಲದ ಜಗದೀಪ್ ಸಿಂಗ್ ಒಂದು ದಿನಕ್ಕೆ 48 ಕೋಟಿ ಸಂಬಳ ಪಡೆಯುತ್ತಾರೆ ಎಂಬುದು ನಿಜವೇ?
ಭಾರತೀಯ ಮೂಲದ ಈ ವ್ಯಕ್ತಿ ವಾರ್ಷಿಕ ಬರೋಬ್ಬರಿ 17,500 ಕೋಟಿ ರೂ.ಗಳ ಆದಾಯದೊಂದಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ ಎಂಬ ಸುದ್ದಿಯೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅಂದರೆ ದಿನಕ್ಕೆ 48 ಕೋಟಿ ರೂ. ಆದಾಯ ಗಳಿಸುತ್ತಾರೆ ಎಂದು ವರದಿಯಾಗಿತ್ತು. ಮಾಧ್ಯಮ ವರದಿಗಳು ಭಾರಿ ವೈರಲ್ ಆದ ನಂತರ ಅಂತಿಮವಾಗಿ ಗೂಗಲ್ನಲ್ಲಿ ಟಾಪ್ ಟ್ರೆಂಡ್ ಕೂಡ ಆಯಿತು.

1 ದಿನಕ್ಕೆ 48 ಕೋಟಿ ಸಂಬಳ ಪಡೆಯುವ ವಿಶ್ವದ ಏಕೈಕ ವ್ಯಕ್ತಿ ಜಗದೀಪ್ ಸಿಂಗ್’ ಎಂದು Sri tv Karnataka ಎನ್ನುವ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದೆ. ಇದರ ಜೊತೆಗೆ ಅವರ ಚಿತ್ರವನ್ನೂ ಹಾಕಲಾಗಿದ್ದು, “1 ದಿನಕ್ಕೆ 48 ಕೋಟಿ ಸಂಬಳ ವರ್ಷಕ್ಕೆ 17,500 ಕೋಟಿ ಸಂಬಳ ಪಡೆಯುವ ವಿಶ್ವದ ಏಕೈಕ ವ್ಯಕ್ತಿ ಇವರು ಭಾರತದ ಜಗದೀಪ್ ಸಿಂಗ್,” ಎಂದು ಇದರಲ್ಲಿ ಬರೆಯಲಾಗಿದೆ. ಇದಲ್ಲದೆ ಹಲವು ಮಾಧ್ಯಮ ಸಂಸ್ಥೆಗಳೂ ಈ ಬಗ್ಗೆ ವರದಿ ಮಾಡಿವೆ. ಈ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಕಾಣಬಹುದು. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ‘ಕ್ವಾಂಟಮ್ಸ್ಕೇಪ್ ವೆಬ್ಸೈಟ್‘ ನಲ್ಲಿ ಪ್ರಕಟಗೊಂಡ ಮಾಹಿತಿಯೊಂದು ಲಭ್ಯವಾಗಿದೆ. ಇಲ್ಲಿ ಲಭ್ಯವಾದ ಮಾಹಿತಿ ಪ್ರಕಾರ, ಜಗದೀಪ್ ಸಿಂಗ್ ಸದ್ಯ ಕಂಪನಿಯ ಸಿಇಒ ಅಲ್ಲ. ಸದ್ಯ ಕಂಪನಿಯ ಸಿಇಒ ಮತ್ತು ಅಧ್ಯಕ್ಷ ಡಾ. ಶಿವ ಶಿವರಾಮ್ ಆಗಿದ್ದಾರೆ.
ವೆಬ್ಸೈಟ್ನಲ್ಲೇ ನೀಡಿರುವ ಮಾಹಿತಿ ಪ್ರಕಾರ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವ ಜಗದೀಪ್ ಸಿಂಗ್ ಫೆಬ್ರವರಿ 14, 2024ರಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವರ ಸ್ಥಾನಕ್ಕೆ ಡಾ. ಶಿವ ಶಿವರಾಮ್ ನೇಮಕಗೊಂಡಿದ್ದಾರೆ. ಕಂಪನಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಗದೀಪ್ ಸಿಂಗ್ ಮುಂದುವರಿಯಲಿದ್ದಾರೆ ಎಂದು ಇದರಲ್ಲಿ ಹೇಳಲಾಗಿದೆ.
ಆದರೆ, ಅವರ ಸಂಬಳ ಎಷ್ಟಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ. ಇದಕ್ಕಾಗಿ ‘Jagdeep singh annual salary’ ಎಂಬ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಇದಕ್ಕೆ ಸಂಬಂಧಿತ ಹಲವು ಸುದ್ದಿ, ವರದಿಗಳು ಲಭ್ಯವಾಗಿವೆ.

ಈ ವೇಳೆ ಬ್ಲೂಂಬರ್ಗ್ನ ವರದಿ ಕಾಣಿಸಿಕೊಂಡಿತು. ಇದರ ಪ್ರಕಾರ, 2021ರಲ್ಲಿ ಕ್ವಾಂಟಮ್ಸ್ಕೇಪ್ ಕಾರ್ಪ್ನ ಷೇರುದಾರರು ಸಿಇಒಗೆ ಬಿಲಿಯನ್ ಡಾಲರ್ ಮೊತ್ತದ ವೇತನ ಪ್ಯಾಕೇಜ್ಗೆ ಅನುಮೋದನೆ ನೀಡಿದ್ದರು. ಒಪ್ಪಂದದ ಪ್ರಕಾರ ಕಂಪನಿಯು ವಿವಿಧ ಮೈಲಿಗಲ್ಲುಗಳನ್ನು ಪೂರೈಸಿದರೆ ಸಿಇಒ 2.3 ಬಿಲಿಯನ್ ಡಾಲರ್ ಷೇರಿನ ಆಯ್ಕೆಗಳನ್ನು ಪಡೆಯಬಹುದಾಗಿತ್ತು. ಹಾಗಾಗಿ ಜಗದೀಪ್ ಸಿಂಗ್ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಯಲ್ಲ ಎಂಬುದು ಸತ್ಯ, ಅವರ ವೇತನಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಅಥವಾ ಆಧಾರಗಳಿಲ್ಲಎಂದು ‘ಇಟಿ ನೌ‘ ಹೇಳಿದೆ.
ಈ ಬಗ್ಗೆ ‘ಇಟಿ ನೌ‘ ಕೂಡ ವರದಿ ಮಾಡಿದೆ. ಇದರಲ್ಲಿ ಷೇರು ವಿನಿಮಯ ಕೇಂದ್ರಕ್ಕೆ ಕಂಪನಿ ಸಲ್ಲಿಸಿದ ವರದಿಗಳನ್ನು ಲಗತ್ತಿಸಲಾಗಿದೆ. ಇದರಲ್ಲಿ ಅವರು ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ ಇನ್ನು ಮುಂದೆ ಯಾವುದೇ ಪರಿಹಾರವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಲಾಗಿದೆ. ಜಗದೀಪ್ ಸಿಂಗ್ ಆಡಳಿತ ಮಂಡಳಿಯ ತಮ್ಮ ಜವಾಬ್ದಾರಿಗೆ ಯಾವುದೇ ವೇತನ ಪಡೆಯುತ್ತಿಲ್ಲ ಎಂದೂ ಇದರಲ್ಲಿ ಸೇರಿಸಲಾಗಿದೆ.
ವಿವರವಾಗಿ ಪರಿಶೀಲನೆ ನಡೆಸಿದ ಬಳಿಕ ಸಿಇಒ ಸ್ಥಾನದಿಂದ ಕೆಳಗಿಳಿದ ಜಗದೀಪ್ ಸಿಂಗ್ ಅವರು 2.3 ಬಿಲಿಯನ್ ಡಾಲರ್ ಪ್ಯಾಕೇಜ್ ಪಡೆದುಕೊಂಡಿಲ್ಲ ಎಂದು ದೃಢಪಟ್ಟಿದೆ. ಜೊತೆಗೆ ಈಗ ಅವರಿಗೆ ಯಾವುದೇ ವೇತನ ಇಲ್ಲ ಎಂದೂ ತಿಳಿದು ಬಂದಿದೆ. ಈ ಮೂಲಕ ಜಗದೀಪ್ ಸಿಂಗ್ ವಿಶ್ವದಲ್ಲೇ ಅತಿ ಹೆಚ್ಚು ವೇತನ ಪಡೆಯುವ, ದಿನಕ್ಕೆ 48 ಕೋಟಿ ರೂ. ಸಂಬಳ ಸ್ವೀಕರಿಸುವ ಸಿಇಒ ಎಂಬ ವಾದ ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತೀಯ ಮೂಲದ ವ್ಯಕ್ತಿ ಜಗದೀಪ್ ಸಿಂಗ್ ಒಂದು ದಿನಕ್ಕೆ ರೂ 48 ಕೋಟಿ, ವಾರ್ಷಿಕ ಬರೋಬ್ಬರಿ 17,500 ಕೋಟಿ ರೂ.ಗಳ ವೇತನ ಪಡೆಯುತ್ತಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಸುದ್ದಿ ತಪ್ಪಾಗಿದೆ ಎಂದು ETNow.inತಿಳಿಸಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಮನೆಗಳಿಗೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆ ಎಂದು ತಪ್ಪಾಗಿ ಹಂಚಿಕೆ

