FACT CHECK | ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಬೆಂಕಿ ದುರಂತ ಎಂದು 2024ರ ಹಳೆಯ ವಿಡಿಯೋ ಹಂಚಿಕೆ

ಪಹಲ್ಗಾಮ್​ ಘಟನೆ ನಂತರ ಪಾಕಿಸ್ತಾನದ ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಿಕಂಡು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಟ್ಟಡದ ಒಳಗಡೆ ಹೊಗೆ ಹರಡಿಕೊಂಡಿದ್ದು, ಹೊರಗೆ ದೊಡ್ಡ ದೊಡ್ಡ ಲಗೇಜ್ ಹಿಡಿದುಕೊಂಡು ಸಾಕಷ್ಟು ಮಂದಿ ನಿಂತಿರುವುದನ್ನು ಕಾಣಬಹುದು. ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಏಪ್ರಿಲ್ 26, 2025 ರಂದು ಟಿವಿ ವಿಕ್ರಮ ಮತ್ತು ಪೋಸ್ಟ್‌ಕಾರ್ಡ್ ರೂವಾರಿ ಮಹೇಶ್ ವಿಕ್ರಮ್ ಹೆಗ್ಡೆ ತಮ್ಮ ಫೇಸ್​ಬುಕ್ ನಲ್ಲಿ  ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನ ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ. ಎಲ್ಲಾ ವಿಮಾನ ಹಾರಾಟ ಸ್ಥಗಿತ. ಆಟ ಶುರುವಾಗಿದೆ.. ಆಟ ಮುಗಿಯೋ ಹೊತ್ತಿಗೆ ಪಾಕಿಸ್ತಾನದ ಕಥೆನೂ ಮುಗಿದಿರುತ್ತೆ’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಕನ್ನಡದ ಪ್ರಸಿದ್ಧ ಸುದ್ದಿ ಮಾಧ್ಯಮ ಪಬ್ಲಿಕ್ ಟಿವಿ ಕೂಡ ಏಪ್ರಿಲ್ 26, 2025 ರಂದು ‘‘ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ- ರನ್‌ವೇ ಬಂದ್‌, ವಿಮಾನಗಳ ಹಾರಾಟ ಸ್ಥಗಿತ’’ ಎಂದು ವೈರಲ್ ಆಗುತ್ತಿರುವ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಮುಖ್ಯವಾಹಿನಿ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್‌ ಇಂಎಜಸ್‌ನಲ್ಲಿ ಸರ್ಚ್ ಮಾಡಿದಾಗ,  OsintTV ಎಂಬಎಕ್ಸ್ ಖಾತೆಯಲ್ಲಿ ಮೇ 9, 2024 ರಂದು ಇದೇ ವೈರಲ್ ವೀಡಿಯೊದ ಪೂರ್ಣ ಆವೃತ್ತಿ ಲಭ್ಯವಾಗಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಲಾಹೋರ್ ಅಲ್ಲಾಮಾ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ವಲಸೆ ವ್ಯವಸ್ಥೆಯೇ ನಾಶವಾಗಿದೆ. ಹೊಗೆಯನ್ನು ತೆರವುಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಲಾಹೋರ್‌ಗೆ ಒಳಬರುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ದೇಶಾದ್ಯಂತ ಪರ್ಯಾಯ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು. ಲಾಹೋರ್‌ಗೆ ತೆರಳುತ್ತಿದ್ದ ಶ್ರೀಲಂಕಾದ ಏರ್‌ಲೈನ್ಸ್ ವಿಮಾನವನ್ನು ಮಧ್ಯದಲ್ಲೇ ಹಿಂದಕ್ಕೆ ತಿರುಗಿಸಲಾಯಿತು. ದುಬೈನಿಂದ ಲಾಹೋರ್‌ಗೆ ತೆರಳುತ್ತಿದ್ದ ಎರಡು ವಿಮಾನಗಳನ್ನು ಇಸ್ಲಾಮಾಬಾದ್‌ಗೆ ಕಳುಹಿಸಲಾಯಿತು’’ ಎಂದು ಹೇಳಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ಮೇ 9 ಮತ್ತು 10 ರಂದು ಅನೇಕ ಮಾಧ್ಯಮಗಳು ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್​ನೊಂದಿಗೆ ಈ ಘಟನೆಯ ಕುರಿತು ಸುದ್ದಿ ಮಾಡಿವುದು ಸಿಕ್ಕಿದೆ. ಮೇ 9, 2024 ರಂದು ಸಿಎನ್​ಎನ್​ನ್ಯೂಸ್ 18 ತನ್ನ ಯೂಟ್ಯೂವ್ ಚಾನೆಲ್​ನಲ್ಲಿ ವೀಡಿಯೊ ಸುದ್ದಿ ಪ್ರಕಟಿಸಿದ್ದು, ‘‘ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು ಮತ್ತು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ವಲಸೆ ಕೌಂಟರ್‌ನ ಸೀಲಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರಿಂದಾಗಿ ವಿಮಾನ ನಿಲ್ದಾಣದ ಕಟ್ಟಡದಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು’’ ಎಂದು ಹೇಳಲಾಗಿದೆ.

ಇಂಡಿಯಾ ಟುಡೆ ಕೂಡ ವೈರಲ್ ವೀಡಿಯೊಕ್ಕೆ ಹೋಲು ಸ್ಕ್ರೀನ್ ಶಾಟ್​ನೊಂದಿಗೆ ಮೇ 9, 2024 ರಂದು ಸುದ್ದಿ ಪ್ರಕಟಿಸಿದ್ದು, ‘‘ಲಾಹೋರ್​ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವ್ಯವಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ವಲಸೆ ಕೌಂಟರ್‌ನ ಸೀಲಿಂಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ಬೆಳಿಗ್ಗೆ 5.23 ಕ್ಕೆ ನಡೆದಿದ್ದು, ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತು’’ ಎಂದು ಬರೆಯಲಾಗಿದೆ.

ವೈರಲ್ ವೀಡಿಯೊಕ್ಕೆ ಹೋಲುವ ದೃಶ್ಯದೊಂದಿಗೆ ಮೇ 10, 2024 ರಂದು ಪಾಕ್ ಸ್ಥಳೀಯ ಮಾಧ್ಯಮ ಕೂಡ ಇದೇ ವರದಿಯನ್ನು ಮಾಡಿವುದನ್ನು ಇಲ್ಲಿ, ಇಲ್ಲಿ ನೋಡಬಹುದು. ಇನ್ನು ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ ಎಂದು ಯಾವುದೇ ಸ್ಥಳೀಯ ಮಾಧ್ಯಮವು ವರದಿ ಮಾಡಿಲ್ಲ. ಹೀಗಾಗಿ ಈ ಸುದ್ದಿ ಹಳೆಯದಾಗಿದ್ದು, ಇತ್ತೀಚಿನದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2024ರಲ್ಲಿ ಪಾಕಿಸ್ತಾನದ ಲಾಹೋರ್ ಅಲ್ಲಾಮಾ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದನ್ನು, ಪಹಲ್ಗಾಮ್‌ನ ದಾಳಿಯ ನಂತರ ಪಾಕಿಸ್ತಾನದಲ್ಲಿ ಭಾರೀ ಬೇಳವಣಿಗೆಳು ನಡೆಯುತ್ತಿವೆ ಎಂದು ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಕೃಪೆ : ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವೀಸಾ ರದ್ದು ಮಾಡಿದ್ದಕ್ಕೆ ರಾತ್ರೋ ರಾತ್ರಿ ಭಾರತದಿಂದ ಓಡಿ ಹೋಗುತ್ತಿರವ ಪಾಕಿಸ್ತಾನಿ ಪ್ರಜೆಗಳು ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights