FACT CHECK | ವಿಧಾನ ಪರಿಷತ್‌ಗೆ ಎಲ್.ಕೆ. ಅತೀಕ್ ನಿರ್ದೇಶನ ಎಂದು ಸುಳ್ಳು ಪೋಸ್ಟ್ ಹಂಚಿಕೆ
1991 ರ ಬ್ಯಾಚ್ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು ಜನವರಿ 31 ರಂದು ನಿವೃತ್ತರಾದ ನಂತರ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಬೆಂಗಳೂರು ಬಿಸಿನೆಸ್ ಕಾರಿಡಾರ್‌ನ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಹೇಳಾಗುತ್ತಿದೆ. ಈ ಮಧ್ಯೆ ಎಲ್.ಕೆ. ಅತೀಕ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂಬ ಸುದ್ದಿಯೊಂದು ವೈರಲ್ ಆಗಿದೆ.

” BIG BREAKING NEWS ನಿವೃತ್ತ IAS ಅಧಿಕಾರಿ L.K. ಅತೀಕ್ ವಿಧಾನ ಪರಿಷತ್ತಿಗೆ ನಾಮಕರಣ, ರಾಜ್ಯಪಾಲರಿಗೆ ಶಫಾರಸ್ಸು” ಎಂದು ಉಲ್ಲೇಖಿಸಿ Btv ಕನ್ನಡ ಸುದ್ದಿ ವಾಹಿನಿಯೊಂದು ಪೋಸ್ಟರ್ ಅನ್ನು ಹಂಚಿಕೊಂಡಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಹಾಗಿದ್ದರೆ ನಿವೃತ್ತ IAS ಅಧಿಕಾರಿ L.K. ಅತೀಕ್‌ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ನಿವೃತ್ತ IAS ಅಧಿಕಾರಿ L.K. ಅತೀಕ್‌ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು Btv ಕನ್ನಡ ಸುದ್ದಿ ವಾಹಿನಿ ಹೆಸರಿನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ರ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಈ ಕುರಿತು ಯಾವುದೇ ಮಾಧ್ಯಮಗಳು ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿಲ್ಲ. ಈ ಸುದ್ದಿ ಅಧಿಕೃತವಾಗಿದಿದ್ದರೆ ಇತರೆ ಎಲ್ಲಾ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದರೆ ಯಾವ ಮಾಧ್ಯಮಗಳಲ್ಲಿಯೂ ಈ ವರದಿ ಲಭ್ಯವಿಲ್ಲ,

ಮತ್ತಷ್ಟು ಮಾಹಿತಿಗಾಗಿ L.K ಅತೀಕ್ ಅವರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಪರಿಶೀಲನೆ ನಡೆಸಿದಾಗ, ಎಲ್.ಕೆ ಅತೀಕ್ ಅವರ ಅಧಿಕೃತ ಎಕ್ಸ್ ( ಈ ಹಿಂದಿನ ಟ್ವಿಟರ್ ) ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಲಭ್ಯವಾಗಿದೆ. ಅದರಲ್ಲಿ ಅವರು “ಬಿಟಿವಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ. ಇದು ನಿಜವಲ್ಲ. ಅವರು ಇಂತಹ ದುಷ್ಕೃತ್ಯದಿಂದ ದೂರವಿರುತ್ತಾರೆ ಎಂದು ನಾನು ಭಾವಿಸುತ್ತೇನೆ.” ಎಂದು ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಈ ಮೂಲಕ ಬಿಟಿವಿ ಸುಳ್ಳು ಸುದ್ದಿಯ ಪೋಸ್ಟರ್ ಅನ್ನು ಹಂಚಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.
BTV is running fake news. It is not true. I hope they will desist from this mischief. @btvnewslive pic.twitter.com/XYaTt4n0VQ
— ಎಲ್ ಕೆ ಅತೀಕ್ L K Atheeq (@lkatheeq) June 5, 2025
ಒಟ್ಟಾರೆಯಾಗಿ ಹೇಳುವುದಾದರೆ, ನಿವೃತ್ತ IAS ಅಧಿಕಾರಿ L.K. ಅತೀಕ್ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂಬ Btv ಕನ್ನಡ ಸುದ್ದಿ ವಾಹಿನಿ ಹೆಸರಿನ ಪೋಸ್ಟ್‌ರ್ ದಾರಿತಪ್ಪಿಸುವಂತಿದೆ. ಇದನ್ನು ಸ್ವತಃ L.K. ಅತೀಕ್ ತಮ್ಮ ಎಕ್ಸ್ ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್fನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಾಕಿಸ್ತಾನ ಸೇನೆಯ ಮೇಲೆ ಬಲೂಚಿಸ್ತಾನ ಸೇನೆ ದಾಳಿ ನಡೆಸಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

