ಎರಡನೇ ವಿವಾಹವಾದ ಮಹಿಳೆಗೆ ಉಗುಳನ್ನು ನೆಕ್ಕುವ ಶಿಕ್ಷೆ ನೀಡಿದ ಜಾತಿ ಪಂಚಾಯತ್‌; ಎಫ್‌ಐಆರ್‌ ದಾಖಲು!

ವಿಚ್ಛೇದನದ ನಂತರ ಎರಡನೇ ವಿವಾಹವಾಗಿದ್ದ 35 ವರ್ಷದ ಮಹಿಳೆಗೆ ಶಿಕ್ಷೆಯಾಗಿ ಉಗುಳನ್ನು ನೆಕ್ಕುವಂತೆ ಆಕೆಯ ಸಮುದಾಯದ ಜಾತಿ ಪಂಚಾಯತ್‌ ಒತ್ತಾಯಿಸಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಅಲ್ಲದೆ, ಆಕೆಗೆ ಒಂದು ಲಕ್ಷ ರೂ ದಂಡವನ್ನೂ ಕಟ್ಟುವಂತೆ ಜಾತಿ ಪಂಚಾಯಿತಿಯು ಆದೇಶ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಜಾತಿ ಪಂಚಾಯತಿಯ ಶಿಕ್ಷೆಯನ್ನು ಧಿಕ್ಕರಿಸಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಜಾತಿ ಪಂಚಾಯಿತಿಯ ಹತ್ತು ಸದಸ್ಯರ ವಿರುದ್ದ  ಮಹಾರಾಷ್ಟ್ರದ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2016 ರ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ದೂರಿನ ಪ್ರಕಾರ, ಏಪ್ರಿಲ್ 9 ರಂದು ಅಕೋಲಾದ ವಾಡ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯು ಎರಡನೇ ವಿವಾಹವಾಗಿದ್ದರು. ಆಕೆಯ ಎರಡನೇ ವಿವಾಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಜಾತಿ ಪಂಚಾಯಿತಿಯನ್ನು ಕರೆಯಲಾಗಿತ್ತು. ಸಂತ್ರಸ್ತೆ ‘ನಾಥ್ ಜೋಗಿ’ ಸಮುದಾಯಕ್ಕೆ ಸೇರಿದವಳಾಗಿದ್ದು, ಆ ಸಮುದಾಯದ ಜಾತಿ ಪಂಚಾಯತ್ ಆಕೆಯ ಎರಡನೇ ಮದುವೆಯನ್ನು ವಿರೋಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆಕೆಯ ಮೊದಲ ಮದುವೆ 2011ರಲ್ಲಿ ನಡೆದಿತ್ತು. 2015 ರಲ್ಲಿ ಮೊದಲ ಗಂಡನಿಂದ ವಿಚ್ಛೇದನ ಪಡೆದ ನಂತರ ಸಂತ್ರಸ್ತೆ 2019 ರಲ್ಲಿ ಎರಡನೇ ಬಾರಿಗೆ ವಿವಾಹವಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಜಾತಿ ಪಂಚಾಯತ್ ಸಭೆಯ ತೀರ್ಪಿನ ಪ್ರಕಾರ, ಜಾತಿ ಪಂಚಾಯಿತಿಯ ಸದಸ್ಯರು ಬಾಳೆ ಎಲೆಗಳ ಮೇಲೆ ಉಗುಳುವುದು ಮತ್ತು ಸಂತ್ರಸ್ತೆ ಅದನ್ನು ನೆಕ್ಕಬೇಕು. ಅಲ್ಲದೆ, ಒಂದು ಲಕ್ಷ ರೂ ದಂಡವನ್ನು ಪಾವತಿಸಬೇಕು ಎಂದು ಮಹಿಳೆಗೆ ಒತ್ತಾಯಿಸಲಾಗಿದೆ.

ಪಂಚಾಯತ್ ಈ ಶಿಕ್ಷೆಯನ್ನು ಈಡೇರಿಸಿದ ನಂತರ, ತನ್ನ ಸಮುದಾಯಕ್ಕೆ “ಹಿಂತಿರುಗಬಹುದು” ಎಂದು ಸಂತ್ರಸ್ತೆಗೆ ತಿಳಿಸಲಾಗಿತ್ತು. ಆದರೆ, ಸಂತ್ರಸ್ತೆ ಜಾತಿ ಪಂಚಾಯತ್‌ನ  ನಿರ್ಧಾರವನ್ನು ಧಿಕ್ಕರಿಸಿದ್ದರು.

ಇದನ್ನೂ ಓದಿ: ರಸಗೊಬ್ಬರ ಬೆಲೆ ಹೆಚ್ಚಳ: ಶೇ.70 ರಷ್ಟು ರೈತರ ಭೂಮಿ ಕಸಿದುಕೊಳ್ಳುವ ಸರ್ಕಾರದ ಹುನ್ನಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights